ರೈತಗಜಲ್
ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾ
ಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ
ನೇಗಿಲು ಕಾಯಕವಿಲ್ಲದೆ ಕುಳಿತಿದೆ ಸುಣ್ಣವಿರದ ಗೋಡೆಯನ್ನು ಅಂಟಿಕೊಂಡು
ರೈತನ ಹೊಲ ಉಳುವ ಜೋಡೆತ್ತನ್ನಾದರೂ ಬದುಕಿಸಬಾರದೆ ಮಳೆರಾಯಾ
ಅಟ್ಟ ಬಿಟ್ಟು ಹಸಿದ ಹೊಟ್ಟೆ ಸೇರಿವೆ ಬೀಜಕ್ಕಿಟ್ಟ ಕಾಳೆಂಬುದನ್ನೂ ಮರೆತು
ಗುಟ್ಟಾಗುಳಿಯದ ಸಾಲಕ್ಕಾದರೂ ಬಡ್ಡಿಯಾಗಬಾರದೆ ಮಳೆರಾಯಾ
ಮಣ್ಣ ಮಕ್ಕಳೆಲ್ಲ ನೊಂದು ಬೆಂದು ಕಣ್ಣೀರು ಹಾಕುತ್ತಿಹರು
ನಿನ್ನಿರುವಿಕೆಯ ಸಣ್ಣ ಸುಳಿವೊಂದು ತೋರಬಾರದೆ ಮಳೆರಾಯಾ
ಬವಣೆಗೆಲ್ಲ ಪ್ರೀತಿಯುಣಿಸಿ ಧರೆಯೊಡಲಿಗೆ ವರವಾಗಿ ಬಾ
ಸಕಲಕ್ಕಾಧಾರವೇ ಜಲವೆನ್ನುವ ‘ಸರೋಜ’ಳ ಮನವಿ ಸ್ವೀಕರಿಸಬಾರದೆ ಮಳೆರಾಯಾ
***************************************
ಸರೋಜಾ ಶ್ರೀಕಾಂತ ಅಮಾತಿ
ವಾಹ್…ಚೆಂದಿದೆ… ಅಭಿನಂದನೆಗಳು
ಧನ್ಯವಾದಗಳು ಸರ್