ದಾರಾವಾಹಿ

ಅಧ್ಯಾಯ: 14

Handpainted Men Figure Picture Modern Abstract Wall Art Home Decor High  Quality Oil Paintings Colorful Wall Fashion Portrait|pictures modern| abstract wall artpainting color - AliExpress

ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ ಮರಳಿ ಕಥೆ ಮುಂದುವರೆಸಿದ.

‘ಇಲ್ಲ ಗುರೂಜಿ, ಅದು ಇನ್ನೇನು ತಿವಿದೇ ಬಿಟ್ಟಿತು ಎಂಬಷ್ಟರಲ್ಲಿ ಆ ಕಾಡು ಜನರ ತಂಡದ ಸಪೂರ ಓಟೆಯಂತಿದ್ದ ಯುವಕನೊಬ್ಬ ಎಲ್ಲಿದ್ದನೋ ರಪ್ಪನೆ ಧಾವಿಸಿ ಬಂದು ಹಂದಿಯೆದುರು ನೆಗೆದು ನಿಂತುಬಿಟ್ಟ! ಅವನ ಕೈಯಲ್ಲೊಂದು ದೊಣ್ಣೆಯಿತ್ತು. ಆ ಹುಡುಗನನ್ನು ಕಂಡ ಹಂದಿಯು ಯಮದರ್ಶನವಾದಂತೆ ಬೆಚ್ಚಿ ಬಿದ್ದದ್ದು, ಅವನನ್ನೇ ಹಿಡಿದು ತಿವಿಯುವುದನ್ನು ಬಿಟ್ಟು ಸರಕ್ಕನೆ ಹಿಂದಿರುಗಿ ಕರ್ಕಶವಾಗಿ ಘೀಳಿಡುತ್ತ ಉಳಿದ ಹಂದಿಗಳತ್ತ ಧಾವಿಸಿ ಹೋಗಿ ತಾನೂ ಬಲೆಗೆ ಬಿದ್ದುಬಿಟ್ಟಿತು! ಆಗ ನಮಗೆಲ್ಲ ಹೋದ ಜೀವ ಬಂದಂತಾಯಿತು ನೋಡಿ. ನಂತರ ನಾನು ಹೇಗೋ ಕಷ್ಟಪಟ್ಟು ಆ ದಪ್ಪ ಮರದಿಂದ ಇಳಿದೆ. ಅಷ್ಟರಲ್ಲಿ ತುಂಬಾ ದೂರ ಓಡಿ ಹೋಗಿದ್ದ ಪುರಂದರಣ್ಣನೂ ಕುಂಟುತ್ತ ತೇಕುತ್ತ ಹಿಂದಿರುಗಿದರು. ಆದರೆ ಪಾಪ ಅವರು ಮರ ಹತ್ತಲು ಪ್ರಯತ್ನಿಸಿದ್ದ ರಭಸಕ್ಕೆ ಅವರ ಹೊಟ್ಟೆಯ ಒಂದೆರಡು ಕಡೆ ಚರ್ಮವೇ ಕಿತ್ತು ಹೋಗಿ ರಕ್ತ ಸುರಿಯುತ್ತಿತ್ತು.

  ರಫೀಕ್ ಮಾತ್ರ ಎಲ್ಲಿದ್ದನೋ? ಸುಮಾರು ಹೊತ್ತಿನ ಮೇಲೆ ಅಷ್ಟು ದೂರದಿಂದ ಅವನ ತಲೆ ಕಾಣಿಸಿತು. ಹೆದರಿ ಕಂಗಾಲಾಗಿದ್ದ ಅವನು ತನ್ನ ಸುತ್ತಮುತ್ತ ಬಹಳ ಜಾಗ್ರತೆಯಿಂದ ದಿಟ್ಟಿಸುತ್ತ, ಹಂದಿಗಳೆಲ್ಲ ಬಲೆಗೆ ಬಿದ್ದಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಬೆಲ್ಚಪ್ಪನಂತೆ ಬಂದು ನಮ್ಮ ಹತ್ತಿರ ನಿಂತುಕೊಂಡ. ಆದರೆ ಇಷ್ಟೆಲ್ಲ ನಡೆಯುವಾಗ ಅಲ್ಲಿ ಇನ್ನೊಂದು ಗಮ್ಮತ್ತೂ ನಡೆಯುತ್ತಿತ್ತು ಗುರೂಜೀ! ಏನು ಗೊತ್ತುಂಟಾ, ಆ ಮುದುಕ ಕಾಡು ಮನುಷ್ಯನಿದ್ದನಲ್ಲ ಅವನು ಮತ್ತು ಅವನ ಸಂಗಡಿಗರೆಲ್ಲ ಸೇರಿ ಸುಮಾರು ದೂರದಲ್ಲಿ ನಿಂತುಕೊಂಡು ನಮ್ಮ ಬೊಬ್ಬೆ ಮತ್ತು ಪ್ರಾಣಸಂಕಟದ ಒದ್ದಾಟವನ್ನೆಲ್ಲ ನೋಡುತ್ತ ಬಿದ್ದು ಬಿದ್ದು ನಗುತ್ತಿದ್ದರು ಕಳ್ಳ ಬಡ್ಡಿಮಕ್ಕಳು! ಆ ಹೊತ್ತು ನನಗವರ ಮೇಲೆ ಬಂದ ಸಿಟ್ಟು ಅಷ್ಟಿಷ್ಟಲ್ಲ ನೋಡಿ! ರಪ್ಪನೆ ಮುದುಕನನ್ನು ಕರೆದು, ‘ನೀನೆಂಥದು ಮಾರಾಯಾ… ಆ ಮೃಗಗಳನ್ನು ಓಡಿಸಿಕೊಂಡು ಬರುವ ಮೊದಲು ನಮಗೆ ಸೂಚನೆ ಕೊಡುವುದಲ್ಲವಾ…? ಅವುಗಳಿಂದ ನಮ್ಮನ್ನು ಕೊಲ್ಲಿಸಬೇಕೆಂದಿದ್ದಿಯಾ ಹೇಗೇ…?’ ಎಂದು ಜೋರಾಗಿ ಗದರಿಸಿ ಬಿಟ್ಟೆ. ಅದಕ್ಕಾತ ‘ಹ್ಹೆಹ್ಹೆಹ್ಹೆ, ಇಲ್ಲಿಲ್ಲ ಧಣೇರಾ, ನಮ್ ಬೇಟೆಯಾಗ ಅಂಥದ್ದೆಲ್ಲಾ ನಡೆಯಾಕಿಲ್ರೀ. ನೀವೆಲ್ಲ ಸುಖಾಸುಮ್ಮನೆ ಹೆದರಿ ಎಗರಾಡಿಬಿಟ್ಟಿರಷ್ಟೇ!’ ಎಂದು ಇನ್ನಷ್ಟು ನಗುತ್ತ ಹೇಳಿದ. ಇಂಥ ಕೆಲಸದಲ್ಲಿ ಪಳಗಿದ್ದ ಅವರೆಲ್ಲ ಬೇಕೆಂದೇ ನಮ್ಮನ್ನು ಹೆದರಿಸಿ ಮಜಾ ತೆಗೆದುಕೊಳ್ಳುತ್ತಿದ್ದರು ಅಂತ ನಮಗೆ ಆಮೇಲೆ ಅರ್ಥವಾಗಿ ಮುದುಕನನ್ನು ಹಿಡಿದು ಎರಡು ಬಾರಿಸುವ ಅಂತ ತೋರಿತು. ಆದರೂ ಸುಮ್ಮನಾದೆ’ ಎಂದ ಶಂಕರ ಆ ಘಟನೆಯನ್ನು ನೆನೆದು ಜೋರಾಗಿ ನಗತೊಡಗಿದ. ಏಕನಾಥರಿಗೂ ನಗು ಉಕ್ಕಿ ಬಂತು. ಅತ್ತ ದಾರಂದದೆಡೆಯಲ್ಲಿ ದೇವಕಿಯೂ ನಗುತ್ತಿದ್ದಳು. ಆದರೆ ಅವಳನ್ನು ಗಮನಿಸದ ಏಕನಾಥರು, ‘ಲೇ, ಇವಳೇ…ಎರಡು ಕಪ್ಪು ಕಾಫಿ ಮಾಡಿಕೊಂಡು ಬಾರೇ… ಹಾಗೇ ತಿನ್ನಲೇನಾದರೂ ತಾ…!’ ಎಂದು ಗಟ್ಟಿ ಸ್ವರದಲ್ಲಿ ಕೂಗಿದಾಗ ಅವಳು ಬೆಚ್ಚಿಬಿದ್ದು, ‘ಆಯ್ತೂರೀ…!’ ಎಂದು ಒಳಗೆ ಓಡಿದಳು. ಗುರೂಜಿಯ ಪತ್ನಿ ಹೊರಟು ಹೋದುದನ್ನು ಕಂಡ ಶಂಕರನಿಗೆ ಮುಂದಿನ ಕಥೆ ಹೇಳುವ ಹುರುಪು ಸ್ವಲ್ಪ ತಗ್ಗಿತು. ಆದರೂ ಮುಂದುವರೆಸಿದ.

‘ಅಲ್ಲಾ ಗುರೂಜಿ, ಆ ಕಾಡು ಜನರು ಎಂಥ ಭಯಂಕರ ಮನುಷ್ಯರು ಅಂತೀರೀ! ಸುಮಾರು ಹದಿನೆಂಟು ಇಪ್ಪತ್ತರ ವಯಸ್ಸಿನ ಮೂವರು ಹುಡುಗರು, ಬಲೆಗೆ ಬಿದ್ದು ಆಕಾಶ ಸಿಡಿಯುವಂತೆ ಹೂಳಿಡುತ್ತಿದ್ದ ಆ ಮೃಗಗಳತ್ತ ಹೆಬ್ಬುಲಿಗಳಂತೆ ನೆಗೆದರು. ಯಾವ ಮಾಯಕದಿಂದಲೋ ಅವುಗಳ ಹಿಂಗಾಲುಗಳನ್ನು ಸಟಕ್ಕನೆ ಹಿಡಿದು ಮೇಲೆತ್ತಿ ಅದೇ ವೇಗದಲ್ಲಿ ನೆಲಕ್ಕೆ ಕೆಡಹಿ ಬಿಗಿಯಾಗಿ ತುಳಿದು ಹಿಡಿದುಕೊಂಡು ಕ್ಷಣದಲ್ಲಿ ಅವುಗಳ ಹೆಡೆಮುರಿ ಕಟ್ಟಿದರು. ಅವು ಕಚ್ಚದಂತೆ ಮೂತಿಗೂ ಹಗ್ಗ ಬಿಗಿದರು! ಅದನ್ನೆಲ್ಲ ನೋಡುತ್ತಿದ್ದ ಆ ಮುದುಕ ಅವರಿಗೇನೋ ಸಂಜ್ಞೆ ಮಾಡಿದ. ಆದರೆ ಅಷ್ಟರಲ್ಲಿ ನಮಗೆ ಮತ್ತೊಂದು ಮಂಡೆಬಿಸಿ ಎದುರಾಯಿತು ನೋಡಿ!’ ಎಂದು ಶಂಕರ ಕೆಲವುಕ್ಷಣ ಮಾತು ನಿಲ್ಲಿಸಿದ.

‘ಹೌದಾ…ಮತ್ತೇನಾಯಿತು ಮಾರಾಯಾ, ಮತ್ತೆ ಅಲ್ಲಿಗೆ ಕಾಡುಕೋಣಗಳೇನಾದರೂ ನುಗ್ಗಿದವಾ ಹೇಗೆ?’ ಎಂದು ಗುರೂಜಿ ಮರಳಿ ಹಾಸ್ಯ ಮಾಡಿದರು.

‘ಅಯ್ಯೋ, ಅದಲ್ಲ ಗುರೂಜಿ. ಸುಮಾರು ದೂರದಲ್ಲಿ ಯಾವನೋ ಒಬ್ಬ ಯುವಕ ನಿಂತುಕೊಂಡು ನಮ್ಮ ಕೆಲಸದ ಫೋಟೋಗಳನ್ನು ತೆಗೆಯುತ್ತಿದ್ದ! ನಮ್ಮ ತಂಡದ ಹುಡುಗ ಅದನ್ನು ನೋಡಿದವನು ಪುರಂದರಣ್ಣನಿಗೆ ತಿಳಿಸಿದ. ಅವರಿಗೆ ಆತಂಕವಾಯ್ತು. ಯಾಕೆಂದರೆ ಈಗ ಕಾಡುಪ್ರಾಣಿಗಳನ್ನು ಹಿಡಿಯುವುದು ದೊಡ್ಡ ಅಪರಾಧವಂತಲ್ಲ? ಅವನನ್ನು ಹೇಗೆ ತಡೆಯುವುದೆಂದು ತೋಚದೆ, ಎಲ್ಲರೂ ಕೈಗೆ ಸಿಕ್ಕಿದ ಬಡಿಗೆಗಳನ್ನೆತ್ತಿಕೊಂಡು ಅವನತ್ತ ಓಡಿದೆವು. ಆದರೆ ಅವನು ಭಯಂಕರ ಆಸಾಮಿ ಗುರೂಜಿ. ನಾವು ಅಷ್ಟು ಜನ ಅವನ ಮೇಲೆ ನುಗ್ಗಿ ಹೋದರೂ ಅವನು ಸ್ವಲ್ಪವೂ ಹೆದರದೆ, ನಾವೆಲ್ಲ ಓಡಿ ಬರುವುದನ್ನೂ ಚಕಚಕಾಂತ ಫೋಟೋ ತೆಗೆಯುತ್ತಲೇ ಇದ್ದ. ಹಾಗಾಗಿ ಅವನನ್ನು ಹೆದರಿಸಬೇಕೆಂದಿದ್ದ ಪುರಂದರಣ್ಣನೇ ಅಳುಕಿದರು. ಆದರೆ ನಾವೆಲ್ಲ ಅವರ ಸುತ್ತ ಇದ್ದುದನ್ನು ಕಂಡು ಧೈರ್ಯ ತಂದುಕೊಂಡವರು, ‘ಹೇ, ಹೇ… ಯಾರು ಮಾರಾಯಾ ನೀನು? ಫೋಟೋ ಗೀಟೋ ತೆಗೀಬಾರ್ದು. ಹೋಗ್ ಹೋಗ್!’ ಎಂದು ಗದರಿಸಿದರು. ಅವನು ಆಗಲೂ ನಮ್ಮನ್ನು ಕ್ಯಾರೇ ಅನ್ನದೆ ದಿಟ್ಟಿಸಿದವನು, ‘ನೋಡೀ, ನಾನೊಬ್ಬ ಪ್ರೆಸ್ ರಿಪೋರ್ಟರ್. ಆ ಪ್ರಾಣಿಗಳನ್ನು ಯಾಕೆ ಹಿಡಿಯುತ್ತಿದ್ದೀರಿ? ವನ್ಯಜೀವಿಗಳನ್ನು ಬೇಟೆಯಾಡೋದು ಆಫೆನ್ಸ್ ಅಂತ ಗೊತ್ತಿಲ್ವಾ ನಿಮ್ಗೇ? ಈಗಲೇ ಅವುಗಳನ್ನು ರಿಲೀಸ್ ಮಾಡಿ. ಇಲ್ಲದಿದ್ದರೆ ಎಲ್ಲರ ಮೇಲೆ ಕೇಸು ಹಾಕಬೇಕಾಗುತ್ತದೆ ಹುಷಾರ್!’ ಎಂದು ನಮಗೇ ಧಮಕಿ ಹಾಕುವುದಾ…? ಅವ ಪೇಪರಿನವನೆಂದ ಕೂಡಲೇ ಪುರಂದರಣ್ಣ ಸಮಾ ತಣ್ಣಗಾದರು. ಆದರೂ ತಪ್ಪಿಸಿಕೊಳ್ಳುವ ಉಪಾಯ ಅವರ ನಾಲಿಗೆಯ ತುದಿಯಲ್ಲೇ ಇತ್ತು ನೋಡಿ, ‘ನೀವು ಯಾರಾದರೂ ನಮಗೇನ್ರೀ? ಆ ಹಂದಿಗಳು ನಮ್ಮ ಬೇಸಾಯವನ್ನೆಲ್ಲ ತಿಂದು ಲಗಾಡಿ ತೆಗಿತಾ ಇರ್ತಾವೆ. ಅದಕ್ಕೆ ಕೆಲವನ್ನು ಹಿಡಿದು ಬೇರೆ ಕಾಡಿಗೆ ಬಿಡುತ್ತೇವೆ ಅಂತ ಅರಣ್ಯ ಇಲಾಖೆಯ ಪರ್ಮೀಷನ್ ತೆಗೆದುಕೊಂಡೇ ಹಿಡಿಸುತ್ತಿರುವುದು!’ ಎಂದು ತಾವೂ ರೂಬಾಬಿನಿಂದ ಉತ್ತರಿಸಿದರು.

‘ಹೌದಾ! ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆಯಾ? ಹಾಗಾದರೆ ಅವರೆಲ್ಲಿ? ಒಬ್ಬರಾದರೂ ಇರಬೇಕಿತ್ತಲ್ಲಾ? ಅಥವಾ ಅವರ ಅನುಮತಿ ಪತ್ರವಾದರೂ ನಿಮ್ಮಲ್ಲಿರಬೇಕು, ಎಲ್ಲಿದೆ ತೋರಿಸಿ…?’ ಎಂದು ಅವನೂ ಜೋರಿನಿಂದ ಪ್ರಶ್ನಿಸಿದ.

    ಆಗ ಪುರಂದರಣ್ಣನ ದಮ್ಮು ಖಾಲಿಯಾಯ್ತು. ‘ಅದೂ, ಏನಾಯ್ತೆಂದರೇ…?’ ಎಂದು ಬ್ಬೆ…ಬ್ಬೆ…ಬ್ಬೇ…! ಅಂದವರು ತಕ್ಷಣ ಸಂಭಾಳಿಸಿಕೊಂಡು, ‘ಅದು ಹಾಗಲ್ಲ ಇವ್ರೇ, ಇಲ್ಲಿನ ಕೆಲಸ ಮುಗಿದ ನಂತರ ಆ ಹಂದಿಗಳನ್ನು ಕೊಂಡೊಯ್ದು ಇಲಾಖೆಗೆ ಒಪ್ಪಿಸುತ್ತೇವೆ. ನಿಮಗೆ ನಂಬಿಕೆಯಿಲ್ಲದಿದ್ದರೆ ಒಂದು ನಂಬರ್ ಕೊಡುತ್ತೇನೆ. ಫೋನ್ ಮಾಡಿ ತಿಳಿದುಕೊಳ್ಳಿ. ನಮ್ಮ ಹಿರಿಯರ ಕಾಲದಿಂದಲೂ ನಾವು ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿರುವವರು ಮಾರಾಯ್ರೇ! ಆದರೇನು ಮಾಡುವುದು? ಈಗೀಗ ಈ ದರಿದ್ರ ಪ್ರಾಣಿಗಳು ಒಂದು ಮುಡಿ ಭತ್ತ ಬೆಳೆಯಲೂ ಬಿಡುತ್ತಿಲ್ಲ. ಹೀಗಾದರೆ ನಮ್ಮಂಥ ಬಡ ರೈತರು ಬದುಕುವುದಾದರೂ ಹೇಗೆ ಹೇಳಿ? ಜನರ ಕಷ್ಟಸುಖಗಳನ್ನು ತಿಳಿದು ವ್ಯವಹರಿಸುವ, ಸಹಾಯ ಮಾಡುವ ನಿಮ್ಮಂಥವರೇ ನಮಗೆ ತೊಂದರೆ ಕೊಟ್ಟರೆ ಹೇಗೆ…?’ ಎಂದು ಅವನೊಡನೆ ದೈನ್ಯದಿಂದ ಮಾತಾಡಿದರು. ಆದರೆ ಅವನು ಅದಕ್ಕೆ ಉತ್ತರಿಸಲಿಲ್ಲ. ಹಾಗಾಗಿ ಅವರೂ ಮತ್ತೇನೂ ಮಾತಾಡದೆ ಹಿಂದಿರುಗಿದಾಗ ನಾವೂ ಅವರನ್ನು ಹಿಂಬಾಲಿಸಬೇಕಾಯ್ತು.

   ಒಂದು ವೇಳೆ ಪುರಂದರಣ್ಣ ಆವಾಗ, ‘ಏಯ್, ಏನ್ ನೋಡ್ತಿದ್ದೀರಾ? ಆ ಮಗನನ್ನು ಹಿಡ್ಕೊಂಡು ನಾಲ್ಕು ಬಡಿಯಿರನಾ…!’ ಅಂತ ಒಂದೇ ಒಂದು ಮಾತು ಅನ್ನುತ್ತಿದ್ದರು ಅಂತಿಟ್ಟುಕೊಳ್ಳಿ ಗುರೂಜೀ, ಆ ಬಡ್ಡೀಮಗನ ಕ್ಯಾಮರಾವನ್ನಲ್ಲೇ ಕಲ್ಲಿಗೆ ಬಡಿದು ಪುಡಿ ಮಾಡಿ ಅವನಿಗೆ ನಾಲ್ಕು ಒದ್ದು ಓಡಿಸಲು ನಮ್ಮ ಕಾಡು ಹುಡುಗರೆಲ್ಲ ತುದಿಗಾಲಿನಲ್ಲಿ ನಿಂತಿದ್ದರು ಗೊತ್ತುಂಟಾ! ಆದರೆ ನಮ್ಮವರೇ ಠುಸ್ಸಾದ ಮೇಲೆ ಏನು ಮಾಡುವುದು ಹೇಳಿ? ಅವನೂ ಮತ್ತೇನೂ ಹೇಳದೆ ಹೊರಟು ಹೋದ. ಅಷ್ಟಾದ ನಂತರ ಇನ್ನೊಂದು ಸಮಸ್ಯೆಯಾಯ್ತು. ಸ್ವಲ್ಪಹೊತ್ತಿನಲ್ಲಿ ಪುರಂದರಣ್ಣನ ಪರಿಚಯದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಒಬ್ಬ ಕರೆ ಮಾಡಿದವನು, ‘ನಿಮ್ಮ ಮೇಲೆ ಪೇಪರ್ ರಿಪೋರ್ಟರ್ ಒಬ್ಬ ನಮ್ಮ ಹೈಯರ್ ಆಫೀಸರ್‍ಗೆ ಕಂಪ್ಲೇಂಟ್ ಮಾಡಿದ್ದಾನೆ. ಹಾಗಾಗಿ ನಾವು ಯಾವ ಕ್ಷಣದಲ್ಲಾದರೂ ಸ್ಪಾಟಿಗೆ ಬರಬಹುದು. ಆದಷ್ಟು ಬೇಗ ಹಂದಿಗಳನ್ನು ಅಲ್ಲಿಂದ ಸಾಗಿಸಿಬಿಟ್ಟು ಬೇಟೆಯಾಡಿದ ಯಾವ ಗುರುತೂ ಸಿಗದಂತೆ ನೋಡಿಕೊಳ್ಳಿ!’ ಅಂತ ಸೂಚನೆ ಕೊಟ್ಟ. ಅಷ್ಟು ತಿಳಿದ ನಾವೆಲ್ಲ ಕಂಗಾಲಾಗಿ ಕೆಲಸವನ್ನು ನಿಲ್ಲಿಸಿದೆವು. ಆ ಬುಡಕಟ್ಟಿನ ಜನರು ಕೂಡಲೇ ಹಂದಿಗಳನ್ನೂ, ಬೇಟೆಯ ಸಾಮಾನುಗಳನ್ನೂ ಹೊತ್ತುಕೊಂಡು ಹೊರಟರು. ನಾವೂ ಅವರನ್ನು ಹಿಂಬಾಲಿಸಿದೆವು. ಆದರೆ ಪುರಂದರಣ್ಣನಿಗೆ ಆ ಪೇಪರಿನವನ ಮೇಲೆ ವಿಪರೀತ ಸಿಟ್ಟು ಬಂತು. ‘ಆ ಬಡ್ಡೀಮಗನ ಸೊಕ್ಕು ಮುರಿಯಲೇಬೇಕು!’ ಎಂದು ಕುದಿದರು. ಆದರೆ ಅದಕ್ಕಿಂತ ಮೊದಲು ಅವನ ಪೂರ್ವಾಪರ ವಿಚಾರಿಸಲು ತಮ್ಮ ಅಳಿಯ ರವಿಪ್ರಕಾಶನಿಗೆ ಫೋನ್ ಮಾಡಿದರು. ರವಿಪ್ರಕಾಶನಿಂದ ಅವನು ಈಶ್ವರಪುರದ ಸ್ಥಳೀಯ ಪತ್ರಿಕೆಯೊಂದರ ಮುಖ್ಯ ವರದಿಗಾರನಲ್ಲದೇ ಬೆಂಗಳೂರಿನ ಪ್ರಸಿದ್ಧ ಪ್ರಾಣಿ ದಯಾ ಸಂಸ್ಥೆಯೊಂದರ ಸದಸ್ಯನೂ ಆಗಿದ್ದಾನೆ ಎಂಬ ಸಂಗತಿ ತಿಳಿಯಿತು.

   ಪ್ರಾಣಿ ದಯಾ ಸಂಘ ಎಂದ ಕೂಡಲೇ ನನಗೂ ಹೆದರಿಕೆಯಾಯ್ತು ಗುರೂಜಿ! ಅವರು ಹಾಕುವ ಕೇಸು ಯಾರಿಗೆ ಬೇಕು ಮಾರಾಯ್ರೇ. ಜೀವನಪರ್ಯಂತ ಬಂಜರವಾಗುತ್ತದೆ! ಹಾಗೇನಾದರೂ ಆದರೆ ನನ್ನ ಅಷ್ಟು ದೊಡ್ಡ ಜಮೀನಿನ ಕೆಲಸ ನಿಂತು, ನಾನು ಅಲಕ್ಕ ಲಗಾಡಿ ಹೋಗುವುದಂತು ಗ್ಯಾರಂಟಿ!’ ಎಂದು ಶಂಕರ ಸೋಲೆಪ್ಪಿಕೊಂಡ. ಅದಕ್ಕೆ ಏಕನಾಥರೂ, ‘ಹೌದು ಹೌದು ಮಾರಾಯಾ. ಯಾರ ತಂಟೆಯಾದರೂ ಬೇಕು. ಈ ಪ್ರಾಣಿ ದಯಾ ಸಂಘ ಮತ್ತು ಅರಣ್ಯ ಇಲಾಖೆಯವರ ಸಹವಾಸವಲ್ಲ. ವಿಶ್ವ ಪರಿಸರ ಸಂಸ್ಥೆಯೂ ಈಚೆಗೆ ಪರಿಸರ ಸಂರಕ್ಷಣಾ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ಆರಂಭಿಸಿರುವುದು ಪೇಪರಿನಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯೂ ಬಹಳ ಬಿಗುಗೊಂಡಿದೆ!’ ಎಂದು ಶಂಕರನ ಭಯವನ್ನು ತಾವೂ ಸಮರ್ಥಿಸಿಕೊಂಡರು. ಶಂಕರ ಮತ್ತೆ ಮಾತು ಮುಂದುವರೆಸಿದ.

‘ಹೌದಂತೆ ಗುರೂಜಿ, ಪುರಂದರಣ್ಣನೂ ಅದಕ್ಕೇ ಸುಮ್ಮನಾದರು. ಆದರೆ ಅವರು ಆ ಸಮಸ್ಯೆಯನ್ನು ಎಂಥ ಉಪಾಯದಿಂದ ನಿವಾರಿಸಿಕೊಂಡರು ಗೊತ್ತುಂಟಾ?’ ಎಂದು ಶಂಕರ ತಾವೊಂದು ಅದ್ಭುತ ಸಾಧಿಸಿದಂತೆ ನಗುತ್ತ ಅಂದ.

‘ಅಂಥದ್ದೇನು ಮಾಡಿದರು ಮಾರಾಯಾ..!’

‘ಪುರಂದರಣ್ಣ ಕೂಡಲೇ ರಫೀಕನೊಡನೆ ಒಂದಿಷ್ಟು ‘ಸಮ್‍ಥಿಂಗ್’ ಅನ್ನು ಅರಣ್ಯ ಇಲಾಖೆಗೆ ಕಳುಹಿಸಿಕೊಟ್ಟು ಅವರ ಬಾಯಿ ಮುಚ್ಚಿಸಿದರು. ಅದರ ಬೆನ್ನಿಗೆ ಆ ಪತ್ರಕರ್ತನ ಹತ್ತಿರದ ಗೆಳೆಯನೊಬ್ಬನನ್ನೂ ಹಿಡಿದರು. ಅವನು ಇವರ ಅಳಿಯನ ದೋಸ್ತಿಯಂತೆ. ಅವನ ಹತ್ತಿರ, ‘ತಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ, ಅರಣ್ಯ ಇಲಾಖೆಗೆ ನೀಡಿರುವ ದೂರನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ನಮ್ಮ ಪರವಾಗಿ ನೀನೇ ಅವನೊಡನೆ ವಿನಂತಿಸಿಕೊಂಡು ಅವನನ್ನು ಒಪ್ಪಿಸಬೇಕು ಮಾರಾಯಾ!’ ಎಂದು ಅವನ ಮಂಡೆ ಗಿರ್ಮಿಟ್ ಆಗುವಂತೆ ಮಾತಾಡಿ ಬೇಡಿಕೊಂಡರು. ಅವನು ಪುರಂದರಣ್ಣನಿಗೆ ಭಾರಿ ಮರ್ಯಾದೆ ಕೊಡುವವನು. ಆದ್ದರಿಂದ ಅವರ ಮಾತಿಗೆ ಕಟ್ಟುಬಿದ್ದು ಹೇಗೋ ಪತ್ರಕರ್ತನ ಮನವೊಲಿಸಿ ಕೇಸು ವಾಪಾಸ್ ಪಡೆಯುವಂತೆ ಮಾಡಿದ. ಇಲ್ಲದಿದ್ದರೆ ನನ್ನ ಜಾಗಕ್ಕೆ ಇಷ್ಟೊತ್ತಿಗೆ ದೊಡ್ಡ ‘ಸ್ಟೇ’ ಬಿದ್ದು ನಾನು ಊರುಬಿಟ್ಟೇ ಓಡಿ ಹೋಗಬೇಕಿತ್ತೋ ಏನೋ. ಅಷ್ಟೊಂದು ದೊಡ್ಡ ಮೊತ್ತವನ್ನು ಆ ಜಾಗಕ್ಕೆ ಸುರಿದಿದ್ದೇನೆ ಗುರೂಜಿ!’ ಎಂದು ಶಂಕರ ತನ್ನ ಅರ್ಧ ಕಥೆಯನ್ನು ಮುಗಿಸಿದ.

‘ಹೌದು ಮಾರಾಯಾ. ನಿನ್ನ ಪುರಂದರಣ್ಣ ಅಂಥ ಉಪಾಯ ಮಾಡದಿದ್ದರೆ ನೀನು ಮಾತ್ರ ಅಲ್ಲ ಅವರೂ ಲಗಾಡಿ ಹೋಗುತ್ತಿದ್ದರು!’ ಎಂದು ಏಕನಾಥರೂ ಆತಂಕ ತೋರಿಸುತ್ತ ಅಂದರು. 

   ‘ಹೌದು ಗುರೂಜಿ. ಆದರೂ ದೇವರ ದಯೆಯಿಂದ ಬಚಾವಾದೆವು ಬಿಡಿ. ನೀವು ಇನ್ನು ಮುಂದಿನ ಕಥೆ ಕೇಳಬೇಕು. ಯಾಕೆಂದರೆ ಈ ಇಡೀ ಕಥೆ ನಿಮಗೆ ತಿಳಿದ ಮೇಲೆಯೇ ನಮ್ಮ ವ್ಯವಹಾರ ಸಲೀಸಾಗುವುದು!’ ಎಂದು ಶಂಕರ ನಗುತ್ತ ಅಂದ. ಈಗ ಗುರೂಜಿಯವರ ಬುದ್ಧಿವಂತಿಕೆ ಚುರುಕಾಯಿತು. ಆದರೂ ಅಮಾಯಕರಂತೆ, ‘ಆಯ್ತು ಮಾರಾಯಾ, ವ್ಯವಹಾರಕ್ಕೆ ಸಂಬಂಧಿಸಿದ್ದೆಂದ ಮೇಲೆ ಪೂರ್ಣವಾಗಿ ಕೇಳಲೇಬೇಕು. ಹೇಳು, ಹೇಳು!’ ಎಂದು ಅವನನ್ನು ಹುರಿದುಂಬಿಸಿದರು.

‘ನಾವು ಹಂದಿಗಳನ್ನು ಹಿಡಿದ ನಾಲ್ಕು ದಿವಸದ ನಂತರ ಆ ಪತ್ರಕರ್ತನ ಗಲಾಟೆ ಮುಗಿಯಿತು. ಆದರೆ ಹಂದಿ ಹಿಡಿದ ದಿನದ ಕಥೆ ಹಾಗೆಯೇ ಬಾಕಿಯಿದೆ. ಅದನ್ನೂ ಹೇಳುತ್ತೇನೆ ಕೇಳಿ. ಆ ಬುಡಕಟ್ಟಿನ ಮೂವರು ಯುವಕರು ಕೈಕಾಲು ಮತ್ತು ಮುಸುಡಿ ಕಟ್ಟಿದ ಮೂರು ಹಂದಿಗಳನ್ನು ಅಕ್ಕಿಯ ಮುಡಿಗಳಂತೆ ಎತ್ತಿ ಹೆಗಲಿಗೇರಿಸಿ ತಮ್ಮ ಬಿಡಾರದತ್ತ ಹೊತ್ತುಕೊಂಡು ಹೋಗುತ್ತಿದ್ದುದನ್ನು ನೋಡುತ್ತಿದ್ದ ನಮಗೆಲ್ಲಾ ಅವರ ಕೆಲಸದ ಬುದ್ಧಿವಂತಿಕೆಯನ್ನೂ ಅದಕ್ಕೆ ತಕ್ಕಂಥ ಅವರ ಸಾಹಸವನ್ನೂ ನೆನೆದು ಆಶ್ಚರ್ಯದಿಂದ ಮಂಡೆ ಹಾಳಾಗಿಬಿಟ್ಟಿತು ಗುರೂಜಿ! ಅವರ ತಂಡವು ನನ್ನ ಜಾಗದ ಮೂಲೆಯೊಂದರಲ್ಲಿ ಗುಡಿಸಲು ಕಟ್ಟಿಕೊಂಡು ಬೀಡುಬಿಟ್ಟಿತ್ತು. ಆ ಹಂದಿಗಳನ್ನು ಅವರು ಅಲ್ಲಿಗೆ ಕೊಂಡೊಯ್ದು ಅಂಗಳದಲ್ಲಿ ಕೆಡಹಿದರು. ಅದನ್ನು ಗಮನಿಸಿದ ಅವರ ಕೆಲವು ಹೆಂಗಸರು ಕೂಡಲೇ ಹರಿತವಾದ ಕತ್ತಿ ಮತ್ತು ಚಾಕುವನ್ನು ತಂದು ಯುವಕರಿಗೆ ಕೊಟ್ಟರು. ಯಬ್ಬಾ! ದೇವರೇ…! ಆ ಹುಡುಗರು ಎಂಥವರು ಗುರೂಜೀ…? ನಾವು ನೋಡನೋಡುತ್ತಿದ್ದಂತೆಯೇ ಆ ಹಂದಿಗಳ ಕೊರಳನ್ನು ಹೇಗೆ ಸೀಳಿದರೆಂದರೆ ಕಣ್ಣಲ್ಲಿ ರಕ್ತವೇ ಇಲ್ಲದಂತೆ ಮೂರೂ ಹಂದಿಗಳನ್ನು ಕತ್ತರಿಸಿ ಕೊಂದು ಹಾಕಿಬಿಟ್ಟರು! ಬಳಿಕ ನೋಡುವುದೇನು, ಬೇಟೆಯಾಡುವುದರಲ್ಲಿ ಅವರು ಎಷ್ಟೊಂದು ನಿಸ್ಸೀಮರೋ ಆ ಪ್ರಾಣಿಗಳನ್ನು ಮಾಂಸ ಮಾಡುವುದರಲ್ಲೂ ಅಷ್ಟೇ ಗಟ್ಟಿಗರು. ಆ ಹಂದಿಗಳನ್ನು ಕೇವಲ ಒಂದು ಗಂಟೆಯೊಳಗೆ ಕಡಿದು, ಕೊಚ್ಚಿ ಚಂದದ ಮಾಂಸ ಮಾಡಿ ರಾಶಿ ಹಾಕಿಬಿಟ್ಟರು. ಅದರಲ್ಲೊಂದು ದೊಡ್ಡ ಪಾಲನ್ನು ಪುರಂದರಣ್ಣ ತಮ್ಮ ಹೊಟೇಲಿಗೆ ಕಳುಹಿಸಿಕೊಟ್ಟರು. ಒಂದು ಪಾಲು ನನಗೂ ಸಿಕ್ಕಿತು. ಉಳಿದದ್ದನ್ನು ಅವರು ತಮಗಿಟ್ಟುಕೊಂಡು ಆವತ್ತಿನ ಕೆಲಸವನ್ನು ಮುಗಿಸಿದರು!’ ಎಂದು ಶಂಕರ ಮುಗ್ಧ, ಅಮಾಯಕ ಜೀವರಾಶಿಗಳನ್ನು ಅಮಾನುಷವಾಗಿ ಕೊಲ್ಲುವುದು ಮತ್ತು ಸಿಗಿದು ಕಬಳಿಸುವುದು ಮನುಷ್ಯರ ಬಹು ದೊಡ್ಡ ಸಾಹಸಗಾಥೆ ಎಂಬಂತೆಯೇ ಹೆಮ್ಮೆಯಿಂದ ವಿವರಿಸಿದ. ಆದರೆ ಏಕನಾಥರಿಗೆ ಅಸಹ್ಯದಿಂದ ಹೊಟ್ಟೆ ತೊಳಸಿದಂತಾಯಿತು.

ಥು, ಥೂ! ಎಂಥ ಜನರಪ್ಪಾ ಇವರೆಲ್ಲಾ…! ನರರಾಕ್ಷಸರಿಗಿಂತ ಸ್ವಲ್ಪವೂ ಕಡಿಮೆಯವರಲ್ಲ ಮುಂಡೇಮಕ್ಕಳು! ಎಂದು ಏಕನಾಥರು ಮನಸ್ಸಿನಲ್ಲೇ ಬೈದುಕೊಂಡರು. ಆದರೆ ಹೊರಗೆ ತೋರಿಸಿಕೊಳ್ಳದೆ, ‘ಅಬ್ಬಾ ದೇವರೇ…! ಅಸಹ್ಯ ಮಾರಾಯಾ. ಆದರೂ ನಿಮ್ಮ ಸಾಹಸವನ್ನು ಮೆಚ್ಚಲೇಬೇಕು ನೋಡು!’ ಎಂದು ಪ್ರಶಂಸಿಸಿದರು.

‘ಅಯ್ಯೋ, ಅದರಲ್ಲೇನು ಮುಚ್ಚುಮರೆ ಗುರೂಜೀ ನಾವು ಹುಟ್ಟಿನಿಂದಲೇ ಮಾಂಸಹಾರಿಗಳು. ಅದರಲ್ಲೂ ಕಾಡುಹಂದಿಯ ಮಾಂಸವೆಂದರೆ ಕೇಳಬೇಕೇ…? ಅಬ್ಬಾ! ಎಂಥ ರುಚಿ!! ಅದೆಂಥ ಸೊಗಸು!!! ಥೂ! ಅದರ ಮಜಾ ನಿಮ್ಮ ಮುಂದೆ ಹೇಳಿದರೇನು ಪ್ರಯೋಜನ? ಬಿಡಿ ಗುರೂಜೀ…!’ ಎಂದು ವ್ಯಂಗ್ಯವಾಗಿ ನಕ್ಕ.

‘ಹೌದೌದು ಮಾರಾಯಾ, ಆ ಅದ್ಭುತ ರುಚಿ ಈ ಜನ್ಮದಲ್ಲಿ ನಮಗೆ ಆಗಿಬರುವಂಥದ್ದಲ್ಲ ಬಿಡು. ಈಗ ಮುಂದಿನ ಕಥೆ ಹೇಳು’ ಎಂದರು ಏಕನಾಥರೂ ನಗುತ್ತ.

‘ಆಯ್ತು, ಕೇಳಿ’ ಎಂದು ಶಂಕರ ಮರಳಿ ಕಥೆ ಮುಂದುವರೆಸಿದ.

‘ಆ ಕಾಡು ಜನರು ಮರುದಿನದಿಂದ ಮತ್ತೆ ಕೆಲಸ ಶುರು ಮಾಡಿದರು. ಆ ನಂತರ ಅವರು ಮುಂದಿನ ಹತ್ತು, ಹದಿನೈದು ದಿನಗಳಲ್ಲಿ ಆ ಕಾಡಿನೊಳಗಿದ್ದು ತಮ್ಮ ಕೈಗೆ ಸಿಕ್ಕಿದ ಆರು ಮುಂಗುಸಿಗಳನ್ನೂ ಇಪ್ಪತ್ತು ಮೊಲಗಳನ್ನೂ ಹತ್ತಿಪ್ಪತ್ತು ಕಾಡುಹಂದಿ, ಮುಳ್ಳು ಹಂದಿ, ಚಿಪ್ಪುಹಂದಿ, ಕಾಳಬೆರು (ಕಬ್ಬೆಕ್ಕು) ಮತ್ತು ಒಂದಿಪ್ಪತ್ತು ಒಡು(ಉಡ)ಗಳನ್ನೂ ಮಕ್ಕಳಾಟದಂತೆ ಅಟ್ಟಾಡಿಸಿ ಹಿಡಿದು ರಪರಪ್ಪನೆ ಅವನ್ನು ನೆಲಕ್ಕೆ ಬಡಿದು ಕೊಂದು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದುದನ್ನು ನೋಡಿದ ನಮಗೆಲ್ಲ ಆ ಹಾಡಿಯೊಳಗೆ ಅಷ್ಟೊಂದು ಮೃಗಗಳು ವಾಸಿಸುತ್ತಿದ್ದವು ಅಂತ ಗೊತ್ತೇ ಇರಲಿಲ್ಲ ಗುರೂಜಿ! ಕೆಲವೇ ದಿನದೊಳಗೆ ಅವರು ಅಲ್ಲಿನ ಅರ್ಧಕ್ಕರ್ಧ ಪ್ರಾಣಿಗಳನ್ನು ಖಾಲಿ ಮಾಡಿಬಿಟ್ಟರು. ಕೆಲಸದ ದಿನಗಳಲ್ಲಿ ಪ್ರತಿನಿತ್ಯ ತಮಗೆ ಬೇಕಾದಷ್ಟನ್ನು ತಿನ್ನುತ್ತಿದ್ದರು. ಮಿಕ್ಕಿದ್ದನ್ನು ಪುರಂದರಣ್ಣನ ಹೊಟೇಲಿಗೂ ತಮ್ಮ ಊರಿಗೂ ಹೊತ್ತುಕೊಂಡು ಹೋಗಿ ಕೊಟ್ಟು ಬರುತ್ತಿದ್ದರು. ಅದರ ನಡುವೆ ಇನ್ನೊಂದು ಸಂಗತಿ ಗೊತ್ತುಂಟಾ, ಕಾಡುಗುಡ್ಡಗಳಲ್ಲಿ ಜೆಸಿಬಿ, ಹಿಟಾಚಿಗಳಂಥ ಯಂತ್ರಗಳಲ್ಲಿ ಕೆಲಸ ಮಾಡುವ ವೇಳೆ ಅಲ್ಲಿನ ಕಾಡುಪ್ರಾಣಿಗಳನ್ನು ಹೇಗೆ ಹೊಡೆಯಬೇಕೆಂಬುದನ್ನೂ ಅವರು ನಮ್ಮ ಯಂತ್ರ ಚಾಲಕರಿಗೆ ಕಲಿಸಿಕೊಟ್ಟರು!’ ಎಂದು ಶಂಕರ ತಲತಲಾಂತರದಿಂದ ತಮ್ಮ ಮೂಲನೆಲೆಗಳಲ್ಲಿ ಶಾಂತಿ, ಸಮೃದ್ಧಿಯಿಂದ ಜೀವಿಸುತ್ತಿದ್ದಂಥ ಮೂಕ ಜೀವರಾಶಿಗಳ ನೆಲೆಯನ್ನು ಧ್ವಂಸಗೊಳಿಸಿದ್ದನ್ನೂ ಅವುಗಳ ಮಾರಣ ಹೋಮದ ಧಾರುಣ ಕಥೆಯನ್ನೂ ತನ್ನ ಜೀವಮಾನದ ದೊಡ್ಡ ಸಾಧನೆ ಎಂಬಂತೆಯೇ ಗುರೂಜಿಗೆ ಬಣ್ಣಿಸಿದ. ಶಂಕರನ ಇಡೀ ಕಥೆಯನ್ನು ತೆರೆದ ಬಾಯಿ, ಬಿಟ್ಟ ಕಣ್ಣುಗಳಿಂದ ಕೇಳಿಸಿಕೊಂಡು ರೋಮಾಂಚಿತರಾಗುತ್ತ ನಡುನಡುವೆ ವಿಸ್ಮಯ ಮತ್ತು ಅಸಹ್ಯವನ್ನೂ ಪಡುತ್ತಿದ್ದ ಏಕನಾಥರು ಕೊನೆಯಲ್ಲಿ, ‘ಆ ಕಾಡು ಜನರು ಖಂಡಿತಾ ಮನುಷ್ಯರಲ್ಲ ಮಾರಾಯಾ. ರಾಕ್ಷಸರ ಸಂತಾನವೇ ಇರಬೇಕು! ನಿನ್ನ ಪುರಂದರಣ್ಣನಿಗೆ ಅವರೆಲ್ಲ ಎಲ್ಲಿ ಸಿಕ್ಕಿದರು ಮಾರಾಯಾ?’ ಎಂದು ಅಚ್ಚರಿ ತೋರಿಸಿದವರು ಬಳಿಕ, ‘ಪರ್ವಾಗಿಲ್ಲ ಮಾರಾಯ ನೀವೆಲ್ಲಾ! ಬರೇ ಜಾಗದ ವ್ಯಾಪಾರ ಮಾತ್ರ ಮಾಡುವುದಲ್ಲ ಅದರೊಂದಿಗೆ ಕಾಡುಪ್ರಾಣಿಗಳ ಮಾಂಸದ ದಂಧೆಯಲ್ಲೂ ಸಾಕಷ್ಟು ಸಂಪಾದಿಸುತ್ತಿದ್ದೀರಿ ಅಂತಾಯ್ತು!’ ಎಂದು ನಕ್ಕರು.

‘ಮತ್ತೇನು ಮಾಡುವುದು ಗುರೂಜಿ, ಒಂದು ಜಾಗಕ್ಕೆ ಕೋಟಿಗಟ್ಟಲೆ ಸುರಿದ ಮೇಲೆ ಅಲ್ಲಿನ ಎಲ್ಲವೂ ನಮ್ಮ ಸಂಪತ್ತೇ ಅಲ್ಲವಾ. ಅದನ್ನು ಬಿಡಲಿಕ್ಕಾಗುತ್ತದಾ ಹೇಳಿ? ಅಷ್ಟಲ್ಲದೇ ನಿಮಗ ಇನ್ನೊಂದು ವಿಷಯ ಗೊತ್ತುಂಟಾ ಗುರೂಜಿ, ನಾವು ಯಾವ ಜಾಗವನ್ನು ಕೊಂಡುಕೊಳ್ಳುವುದಿದ್ದರೂ ಅದನ್ನೆಲ್ಲ ಲೆಕ್ಕ ಹಾಕಿಯೇ ಬೆಲೆ ಕಟ್ಟುವುದು ನೋಡಿ!’ ಎಂದ ಶಂಕರನೂ ಜೋರಾಗಿ ನಕ್ಕ.

‘ಹೌದು ಹೌದು. ಶಂಕರಾ, ನೀನು ಹೇಳುವುದನ್ನು ಒಂದು ರೀತಿಯಲ್ಲಿ ಯೋಚಿಸಿದರೆ ನೀವು ಮಾಡಿದ್ದು ಸರಿಯಾಗೇ ಇದೆ! ಅಂಥ ಕ್ರೂರ ಮೃಗಗಳನ್ನು ಕಂಡಲ್ಲಿ ನಾಶ ಮಾಡುವುದು ಎಲ್ಲರಿಗೂ ಒಳ್ಳೆಯದೇ ಅಲ್ಲವಾ. ಈಗೀಗ ಇಡೀ ದೇಶವೇ ನಗರೀಕರಣದತ್ತ ಸಾಗುತ್ತಿರುವಾಗ ಅಂಥ ಜಂತುಗಳು ಇನ್ನು ಮುಂದೆ ಉಳಿದುಕೊಂಡರೂ ಯಾರಿಗೇನು ಪ್ರಯೋಜನ ಹೇಳು? ಅವು ಅಕ್ಕಪಕ್ಕದ ಹೊಲಗದ್ದೆ ಮತ್ತು ತೋಟಗಳಿಗೆ ನುಗ್ಗುತ್ತ ಬಡ ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳನ್ನೆಲ್ಲ ಹಾಳುಧೂಳು ಮಾಡಿ ಹಾಕುತ್ತವೆ. ಅಷ್ಟಲ್ಲದೇ ಅವು ಆಗಾಗ ಮನುಷ್ಯರ ಮೇಲೂ ದಾಳಿ ಮಾಡುತ್ತಿರುವಂಥ ಘಟನೆಗಳನ್ನು ನಾವೂ ಟಿವಿ, ಪೇಪರುಗಳಲ್ಲಿ ಯಾವಾಗಲೂ ನೋಡುತ್ತಲೇ ಇರುತ್ತೇವಲ್ಲ! ಹಾಗಾಗಿ ಆ ದುಷ್ಟ ಪ್ರಾಣಿಗಳನ್ನು ಜೀವ ಸಹಿತ ಬಿಡುವುದು ಯಾರಿಗೂ ಕ್ಷೇಮವಲ್ಲ!’ ಎಂದು ಅವನ ಘನಕಾರ್ಯವನ್ನು ಸಮರ್ಥಿಸಿಕೊಂಡ ಏಕನಾಥರು ಅದರೊಂದಿಗೆ ಅವನಿಗೊಂದು ಶಹಬ್ಬಾಸ್‍ಗಿರಿಯನ್ನೂ ಕೊಟ್ಟು ಅವನ ನಗುವಿನಲ್ಲಿ ತಾವೂ ಭಾಗಿಯಾದರು. ಅಷ್ಟರಲ್ಲಿ ದೇವಕಿ ಇಬ್ಬರಿಗೂ ಮತ್ತೊಂದು ಸುತ್ತಿನ ಬೆಲ್ಲದ ಕಾಫಿಯನ್ನು ತಂದು ಕೊಟ್ಟಳು. ಆಗ ಇಬ್ಬರ ಮಾತಿಗೂ ಸ್ವಲ್ಪ ವಿರಾಮ ಬಿತ್ತು.


(ಮುಂದುವರೆಯುವುದು

****************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

4 thoughts on “

  1. ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಿಮ್ಮ ಈ ಕೃತಿ…. ನಿಮ್ಮ ಎಲ್ಲಾ ಕೃತಿಗಳು ಆಧ್ಯಾತ್ಮ ವಾಸ್ತವ ಹಾಗೂ ವೈಜ್ಞಾನಿಕ ಆಧಾರದ ಮೇಲೆಯೇ ಇರುವುದರಿಂದ ಜನಸಾಮಾನ್ಯರಿಗೂ ಹಾಗೂ ಎಲ್ಲಾ ವರ್ಗದ , ಎಲ್ಲಾ ವಯಸ್ಸಿನ , ಆಂಗ್ಲ ಭಾಷೆಯಲ್ಲಿ ಜನರೇಶನ್ ಅಂತ ಹೇಳಬಹುದು…. ಅರ್ಥವಾಗುವಂತಿದೆ…. ಇಂತಹ ಹಲವಾರು ಅರ್ಥಗರ್ಭಿತ , ಮೂಢನಂಬಿಕೆಗಳನ್ನು ಹೊಡೆದೋಡಿಸುವಂತಹ ಹಾಗೂ ವಾಸ್ತವ , ಸಾಂಪ್ರದಾಯಿಕ , ಅನುಷ್ಠಾನ ಹಾಗೂ ಪ್ರಾಕೃತಿಕ , ಸಾಮಾಜಿಕ ಬದ್ಧತೆಗಳನ್ನೊಳಗೊಂಡ ಜವಾಬ್ದಾರಿಯುತ ಕೃತಿಗಳು ನಿಮ್ಮ ಹಸ್ತ ಕಮಲದಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ…..

    1. ನಿಮ್ಮ ಓದಿನ ಆಸಕ್ತಿ ಮತ್ತು ವಿಷಯವಸ್ತುವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗ್ರಹಿಸುವಂಥ ನಿಮ್ಮ ಎತ್ತರದ ಮನಸ್ಥತಿಯು ನಮ್ಮಂಥ ಬರಹಗಾರರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಅನಂತಾನಂತ ವಂದನೆಗಳು.

  2. ಈ ಅಧ್ಯಾಯದಲ್ಲಿ ಏಕನಾಥನ ಮನೆಗೆ ಬಂದ ಶಂಕರ ಹೇಳುವ ತನ್ನ ಕಥೆ ಬಹಳ ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ಒಂದೇ ಓಗದಲ್ಲಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಕಾರರ ಕಥನ ಕೌಶಲ್ಯ ಮೆಚ್ಚುವಂಥದ್ದು. ಅಭಿನಂದನೆ ಸರ್.

  3. ನಿಮ್ಮ ಓದು ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ಅನಿತಾ ಅವರೇ….

Leave a Reply

Back To Top