ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ವಿಶೇಷ ಲೇಖನ

ಅಕ್ಕಮಹಾದೇವಿ

ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ಆಶಾ ಸಿದ್ದಲಿಂಗಯ್ಯ

Anubhava Mantapa | First Parliament of the World - The Stimulus for Change

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.

 ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ.

ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ.

ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.

 ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ.

ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ,

ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ.

ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ.

ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು.

ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು.

ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ?

ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ?

ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ.

ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ.

ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ?

ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ.

ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ.

ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ.

ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ?

ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ.

ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು)

ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು)

ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು.

ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ.

ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.

ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ.

ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಬಸವಣ್ಣ : ಶರಣು ತಾಯೇ ಶರಣು ಶರಣು.

ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಚನ್ನಬಸವಣ್ಣ : ಶರಣು ತಾಯೇ ಶರಣು.

ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಸಿದ್ಧರಾಮ : ಶರಣು ತಾಯೇ ಶರಣು.

ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ.

ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು

ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು.

ಆಗ ಅಕ್ಕನು ಶರಣರೊಂದಿಗೆ

ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು.

*********************

Leave a Reply

Back To Top