ನೆನಪು
ಸಮಾಜ ಚಿಕಿತ್ಸಕ ಡಾ. ಜಗದೀಶ್ ಬಿ.ಡಿ.ಎಸ್. ಎಂಡಿಎಸ್
ಈಗ ನಿಮ್ಮ ಬಳಗಕ್ಕೆ ನಿಮ್ಮ ಸೇವೆಯೊಂದೆ ನೆನಪು….
ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದ ಡಾ. ಜಗದೀಶ್, ಇಲ್ಲಿನ ಆಸ್ಪತ್ರೆಯಲ್ಲಿ ‘ಹಲ್ಲು ಡಾಕ್ಟರ್’ ಎಂದೇ ಪ್ರಸಿದ್ಧ. ಇವರು ವೈದ್ಯರಷ್ಟೇ ಅಲ್ಲದೆ, ಸಾಮಾಜಿಕ ಚಿಕಿತ್ಸಕರೂ, ಸ್ನೇಹಜೀವಿಯೂ ಆಗಿದ್ದರು. ಬಹಳಷ್ಟು ವರ್ಷಗಳ ಕಾಲ ಅರಸೀಕೆರೆಯಲ್ಲಿಯೇ ವೈವಿಧ್ಯ ಚಟುವಟಿಕೆಗಳಲ್ಲಿ ತೊಡಗಿ ನಿವೃತ್ತಿ ನಂತರ ಮೈಸೂರು ಸೇರಿದರು. ನಾನು ಬೆಂಗಳೂರು ವಾಸಿಯಾದೆ.
ಅರಸೀಕೆರೆಯಲ್ಲಿದ್ದಷ್ಟು ಕಾಲ ನನ್ನ ಜೊತೆಯಲ್ಲಿ ಸಮಾಜಮುಖಿ ವಿಜ್ಞಾನ ಚಳುವಳಿಗೆ ಜೊತೆಯಾದ ಡಾ. ಜಗದೀಶ್, ನಾವೊಂದಿಷ್ಟು ಗೆಳೆಯರು ಅರಸೀಕೆರೆ ವಿಜ್ಞಾನ ಕೇಂದ್ರ ಸ್ಥಾಪಿಸಿದಾಗ ಅದರ ಅಧ್ಯಕ್ಷರಾಗಿ ತಮ್ಮ ವೃತ್ತಿ ಬದುಕಿನ ಮಧ್ಯೆ ಬಿಡುವಿನ ವೇಳೆಯಲ್ಲಿ ಕ್ರಿಯಾಶೀಲರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಬೆಂಬಲ ನೀಡಿ ಸಕ್ರೀಯರಾಗಿದ್ದರು.
ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿ ತೊಡಗಿ ಹಣಗಳಿಸುವ ಸಾಕಷ್ಟು ಅವಕಾಶಗಳು ಅವರಿಗಿದ್ದವು . ವಿಭಿನ್ನ ಹವ್ಯಾಸದ ಗುಂಗು ಹಿಡಿಸಿಕೊಂಡ ಅವರು ಸದಾ ನಮ್ಮ ಜೊತೆ ಚಾರಣ, ನಕ್ಷತ್ರವೀಕ್ಷಣೆ, ಪಕ್ಷಿವೀಕ್ಷಣೆ, ಮೊದಲಾದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ನಾವು ತೆರಳಿದ ಕಡೆಯೆಲ್ಲಾ ನಮ್ಮೊಂದಿಗೆ ಹೊರಡುತ್ತಿದ್ದರು. ಬಿಸಲೇ ಅರಣ್ಯ, ಎಡಕುಮೆರಿ, ಕೆಮ್ಮಣ್ಣುಗುಂಡಿ ಮುಂತಾದ ಪಶ್ಚಿಮಘಟ್ಟಗಳ ಚಾರಣಕ್ಕೆ ನಾವು ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಹೊರಡಲು ಯೋಜಿಸಿದಾಗ ಹೆಗಲಿಗೆ ಒಂದು ಕ್ಯಾಮೆರ, ಒಂದು ಟಾರ್ಚು, ಬೈನಾಕ್ಯುಲರ್, ರೆಕಾರ್ಡರ್, ಸಕಲ ಸಾಮಗ್ರಿಗಳೊಂದಿಗೆ ತಾವೂ ಅಣಿಯಾಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲವನ್ನೂ ವಿವರಿಸುತ್ತ, ಮಕ್ಕಳ ಅಚ್ಚುಮೆಚ್ಚಿನ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸೂಕ್ತ ತಂಗುವ ವ್ಯವಸ್ಥೆ ಇಲ್ಲದಿದ್ದರೂ ಎಲ್ಲೆಂದರಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಜತೆಗೂಡುತ್ತಿದ್ದರು.
ನಮ್ಮ ವಿಜ್ಞಾನ ಕೇಂದ್ರ ಹೆಸರಿಗಷ್ಟೇ ವಿಜ್ಞಾನ ಕೇಂದ್ರವಾಗಿದ್ದರೂ , ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತಿದ್ದವು. ವರ್ಷವಿಡೀ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಾನು ದಿಢೀರೆಂದು ಆಯೋಜಿಸಲು ಯೋಚಿಸುತ್ತಿದ್ದೆ. ಸಾಹಿತ್ಯಾಸಕ್ತನಾಗಿ ಇಂತಹ ಕಾರ್ಯಗಳನ್ನು ಎಷ್ಟೋ ಬಾರಿ ಏಕಮುಖಿಯಾಗಿ ತೀರ್ಮಾನ ಕೈಗೊಂಡು ನಂತರ ಡಾಕ್ಟರರಿಗೆ ತಿಳಿಸಿದರೂ ಅವರು ಬೇಸರಪಟ್ಟುಕೊಳ್ಳದೇ ನಗುತ್ತಲೇ ‘ಎಸ್ ಬಾಸ್’ ಎಂದು ಒಪ್ಪಿಬಿಡುತ್ತಿದ್ದರು. ಇಂತಹ ಕಾರ್ಯಕ್ರಮಕ್ಕೆ ಹಣದ ಅಗತ್ಯ ಉಂಟಾದಾಗ ಊರಿನ ಶ್ರೀಮಂತ ದಾನಿಗಳಿಂದ ಹಣ ಸಂಗ್ರಹಿಸಲು ಇವರನ್ನೇ ಮುಂದುಮಾಡುತ್ತಿದ್ದೆ. ಒಮ್ಮೆಯೂ ಬೇಸರಪಟ್ಟುಕೊಳ್ಳದೇ ಈ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದರು. ತಾವು ಕೆಲವೊಮ್ಮೆ ಮುಂಚೂಣಿಯಲ್ಲಿದ್ದುಕೊಂಡು , ಮತ್ತೆ ಕೆಲವೊಮ್ಮೆ ಹಿನ್ನೆಲೆಯಲ್ಲಿ ನಿಂತು ಪ್ರೋತ್ಸಾಹಿಸುತ್ತಿದ್ದರು. ನಾನು ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ಗ್ರಾಮೀಣ ಪ್ರತಿಭೆಗಳನ್ನ ಒಟ್ಟುಗೂಡಿಸಿ ‘ಮಹಾಮಾಯಿ’ ನಾಟಕವನ್ನು ನಿರ್ಮಿಸಲು ರಂಗತರಬೇತಿ ಶಿಬಿರ ಆಯೋಜಿಸಿದಾಗ ಜಗದೀಶ್ ನೀಡಿದ ಸಹಾಯವನ್ನು ಮರೆಯಲಾರೆ.
ಅಷ್ಟೇ ಅಲ್ಲ, ರೈತಸಂಘ, ದಲಿತಸಂಘದ, ಗೆಳೆಯರನ್ನ ಇವರ ಬಳಿ ಕಳಿಸಿದಾಗ ಅವರಿಗೆ ವಿಶೇಷ ಆಸಕ್ತಿಯಿಂದ ಹಲ್ಲಿನ ಚಿಕಿತ್ಸೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಬೇರೆ ಬೇರೆ ರೀತಿಯ ರೋಗಗಳಿಂದ ಬಳಲುವ ರೋಗಿಗಳಿಗೂ ಇವರು ತಮಗೆ ಪರಿಚಿತವಿದ್ದ ಡಾಕ್ಟರುಗಳನ್ನು ಸಂಪರ್ಕಿಸುವಂತೆ ಹೇಳಿ ಅವರಿಗೂ ಸಹಕಾರ ನೀಡುತ್ತಿದ್ದರು. ವಿದ್ಯಾರ್ಥಿಗಳು, ಸಹಾಯ ಕೇಳಿ ಬಂದವರು ಯಾರೂ ಬರಿಗೈಯಲ್ಲಿ ಹಿಂದಿರುಗಿಲ್ಲ. ನಮ್ಮ ನಂತರ ನಮ್ಮ ಶಿಷ್ಯರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ಅಪೇಕ್ಷಿಸಿ ಹೋದಾಗ ಅವರಿಗೂ ಸಹಾಯ ಹಸ್ತ ಚಾಚಿದ್ದುಂಟು. ಶಾಲೆಗಳಲ್ಲಿ ‘ಹಲ್ಲಿನ ತಪಾಸಣೆ ಶಿಬಿರ’ಗಳನ್ನು ಏರ್ಪಡಿಸಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್, ಬ್ರಶ್ ವಿತರಿಸುತ್ತಿದ್ದರು.
ಅರಸೀಕೆರೆ ತಾಲೂಕಿನ ಯಾವುದೇ ಎನ್.ಎಸ್.ಎಸ್. ಕ್ಯಾಂಪುಗಳಿಗೆ ಇವರೇ ಸಂಪನ್ಮೂಲ ವ್ಯಕ್ತಿಗಳು. ದಂತಕ್ಷಯ, ಮೌಡ್ಯಗಳ ವಿರುದ್ಧ, ಸೂರ್ಯ-ಚಂದ್ರಗ್ರಹಣಗಳಂದು ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುತ್ತಾ ವಿವರಿಸುತ್ತಿದ್ದರು. ಪ್ರೊಫೆಸರ್ ಎಂ.ಡಿ.ಎನ್. ಒಮ್ಮೆ ಜಗದೀಶರನ್ನು ಭೇಟಿಯಾದಾಗ ‘ನಿಮ್ಮಂತವರು ರೈತರ ಪರವಾಗಿ ಯೂರೋಪ್ ಪ್ರವಾಸಕ್ಕೆ ಬರಬೇಕು’ ಎನ್ನುತ್ತಾ ಆಹ್ವಾನಿಸಿದ್ದರು. ಯಾವುದೇ ಯೋಚನೆ ಮಾಡದೇ ನಮ್ಮ ಜೊತೆ ಯೂರೋಪ್ ಪ್ರವಾಸಕ್ಕೆ ಬಂದೇಬಿಟ್ಟರು.
ಸಿಟ್ಟು ಬಂದಾಗ ಇವರು ಆಡುವ ಮಾತುಗಳು ತೀರಾ ಅತಿರೇಕವೆಂದರೆ ಮುನಿಸಿಕೊಂಡ ಮಗುವಿನಂತೆ ಇರುತ್ತಿತ್ತು. ವ್ಯಕ್ತಿತ್ವ ಸದಾ ಸೀದಾ. ಇವರ ಸರಳತೆ , ಮೃದುತ್ವ, ಮಿತ ಭಾಷಿಕತೆ, ನಮ್ಮ ಜೊತೆ ಬೆರೆಯುವ ಗುಣ ಎಲ್ಲವೂ ವಿಶೇಷ. ನನ್ನಂತಹ ಒರಟನ ಜೊತೆ ಹೆಗಲಾಗಿ ಇವರು ಇದ್ದದ್ದು ನನಗೆ ಇಂದಿಗೂ ಸೋಜಿಗ. ಸದಾ ನಗುಮೊಗದ ಯಾವುದೇ ತಕರಾರುಗಳಿಲ್ಲದೆ ಜೀವಿಸಿದ ನೀವು ಇನ್ನಿಲ್ಲ ಎಂಬುದನ್ನು ನಂಬಲಾಗದು. ನಿಮ್ಮ ನೆನಪು ಮಾತ್ರ ಈಗ ನಮ್ಮೊಂದಿಗೆ. ಅಂತಿಮ ನಮನಗಳು ಡಾಕ್ಟರ್.
******************************************
ಡಾ. ಎಚ್.ಆರ್ .ಸ್ವಾಮಿ
ಆಪ್ತವಾಗಿದೆ. ಇಂತಹ ಸಹಜ ಸರಳ ಸಮಾಜಮುಖಿಗಳ ಪರಿಚಯವಾಗಬೇಕು.
ಮೈಸೂರಿನಲ್ಲಿ ನನಗೂ ಬಹಳ ಆತ್ಮೀಯರಾಗಿದ್ದ ಡಾ. ಜಗದೀಶ್ ಅವರ ಈ ಇಂಥ ಇನ್ನೊಂದು ವ್ಯಕ್ತಿತ್ವದ ಬಗ್ಗೆ ಓದಿ ಬಹಳ ಖುಷಿ ಆಯಿತು. ನನ್ನ ಕ್ಲಿನಿಕ್ಕಿಂದ ನಾಲ್ಕಾರು ಮನೆಗಳಾಚೆಯ ಡೆಂಟಲ್ ಕ್ಲಿನಿಕ್ಕಿನಲ್ಲೇ ಅವರ ಕಾಯಕ ಆಗಿತ್ತು – ಅಂತಿಮ ಘಳಿಗೆಯವರೆಗೆ. ಜಗದೀಶ್ ಇಲ್ಲದ ನೋವಿನ ನಡುವೆ ನಿಮ್ಮ, ಅವರ ಇನ್ನಿತರ ಚಟುವಟಿಕೆಯ ಬಗ್ಗೆ ಓದಿ ಸಂತೋಷ ಆಯಿತು. ತಮಗೆ ಅನಂತ ಧನ್ಯವಾದಗಳು ಡಾ. ಎಚ್. ಆರ್. ಸ್ವಾಮಿ ಅವರೇ…
We miss you uncle
Dr. Jadadheesh was a Simple, humorous person, Core professional in his Dental consultancy & service. He use to be very precise & professional in Dental treatment
Myself with family had a V.good, memorable time together during our weeklong trip to Andaman in Jan 2017
He is very nice person