ಜಗದ ಜ್ಯೋತಿ
ರೇಮಾಸಂ
ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ
ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ
ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ
ಮದುವೆಯ ಹಂದರವು ಹರಿವಿರಲಿಲ್ಲ
ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ
ಸಮಾನತೆಗಾಗಿ ಧರಣಿ ಹೂಡದೆ
ಹೆಣ್ಣೆಂದು ಅವಕಾಶವಾದಿಯಾಗದೆ
ಅಲ್ಲಮರ ಮಂಟಪದ ಜ್ಯೋತಿಯಾದೆ
ಉಡತಡಿ ಉಡುಗೊರೆಯಾಗಿ ಉದಯಿಸಿದೆ
ಕದಳಿಗೆ ಕರ್ಪುರದಂತೆ ಅರ್ಪಿತಳಾದೆ
ನೀ ಶರಣ ಚಳುವಳಿಯ ಚೇತನ
ಅಲ್ಲಮರ ಸಮ ಸಂವೇದನಶೀಲಳು
ಅನುಭಾವಿಯುಕ್ತ ಮೇರು ಸಾಹಿತಿ
ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ
ಕನ್ನಡದ ಪ್ರಥಮ ಬಂಡಾಯ ಕವಯತ್ರಿ
ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ
ಮನವು ಚಂಚಲದಿ ಬೆತ್ತಲಾಗಿದೆ
ಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆ
ಭೌತಿಕ ಭೋಗ ಬಂಧನದಲಿದೆಯಂದೆ
ಜಗದ ಬೆತ್ತಲ ನೀ ಸ್ವತಃ ತೋರಿದೆ
ಭೋಗ ಜೀವನದ ಬಲಿದಾನ
ಕರ್ಮಠ ಯೋಗಿಣಿಯಾಗಿ ಸಾಧನ
ಯೋಗಾಂಗ ತ್ರಿವಿಧಿಯ ಅನುಷ್ಠಾನ
ಅಲ್ಲಮರಿಂದ ಧೀರ ನುಡಿ ತಾಯಿ ನಮನ
ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ
ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳು
ಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳು
ಕೇಶಾಂಬರವು ಜಗದ ಜನರ ಹಂಗಿಗೆಂದವಳು
ಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳು
ಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು
**********************************