ಕವಿತೆ
ತೆವಳುವುದನ್ನುಮರೆತ ನಾನು
ವಿಶ್ವನಾಥಎನ್. ನೇರಳಕಟ್ಟೆ
ನಾನು ತೆವಳುತ್ತಾ ಸಾಗುತ್ತಿದ್ದೆ
‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು
ಎದ್ದು ನಿಂತೆ
ಅವರ ಬಾಯಿಗಳು ಸದ್ದು ಮಾಡಿದವು
‘ನಿಂತರೆಸಾಲದು, ನಡೆಯಬೇಕು’
ನಡೆಯುತ್ತಾ ಹೊರಟೆ ಮತ್ತು
ಎಡವಿದೆ
‘ಎಡವದೆಯೇನಡೆ’ ಎಂಬ ಸಲಹೆ
ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ
‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’
ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು
ಮೀನಿನ ಅಪ್ಪನಂತೆ ಈಜಿದೆ
ಮತ್ತು ಅವರ ಮುಖ ನೋಡಿದೆ
ಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು
‘ಹಾರಲಾರೆ ನೀನು’
ಸವಾಲೇ ರೆಕ್ಕೆಗಳಾದವು ನನಗೆ
ಹಾರತೊಡಗಿದೆ ಮತ್ತು
ಹಾರುತ್ತಲೇ ಇದ್ದೆ
ಕೆಳಗನ್ನು ನೋಡಿದರೆ
ಮತ್ತೆ ತುಟಿಗಳ ಪಿಟಿಪಿಟಿ-
‘ಈಗ ತೆವಳುನೀನು, ಸಾಧ್ಯವಾದರೆ’
ತೆವಳ ಹೊರಟ ನಾನೀಗ ಪರಾಜಿತ
ಏಕೆಂದರೆ, ಹಾರುವ ತರಾತುರಿಯಲ್ಲಿ
ಮರೆತೇಬಿಟ್ಟಿದ್ದೇನೆ- ತೆವಳುವುದನ್ನು