ಮರಗಳ ಸ್ವಗತ ಸಾಂತ್ವಾನ

ಕವಿತೆ

ಮರಗಳ ಸ್ವಗತ ಸಾಂತ್ವಾನ

ಅಭಿಜ್ಞಾ ಪಿಎಮ್ ಗೌಡ

Mountains, Tree, Road, Hills, Highlands

ಹೇ ಮನುಜ.! ನಿನ್ನ ಸ್ವಾರ್ಥಕಾಗಿ
ಪ್ರಕೃತಿಯನ್ನೆ ವಿಕೃತಿಗೈದು
ಇಳೆಯೊಡಲ ಬರಿದುಗೊಳಿಸಿ
ಮಾರಣ ಹೋಮ ಮಾಡುತ
ಧರೆಯ ಬಂಜರಾಗಿಸಿದ್ದು ನ್ಯಾಯವೆ.?
ನಿನಗರಿವಿಲ್ಲದೆ ಅವಳೊಡಲನು
ಅಳಿವಿನಂಚಿನಲಿ ನಿಲ್ಲಿಸಿ
ತರುಲತೆಗಳ ಕತ್ತನು ಹಿಚುಕಿ
ಮಾರಾಟಕಿಳಿಸಿರುವೆಯಲ್ಲ
ನೀನೆಂತಹ ಗೋಮುಖ ವ್ಯಾಘ್ರಿ.!!

ಮೊಳಕೆಯಿಂದಿಡಿದು ಮರದವರೆಗೂ
ಗಾಳಿ ನೆರಳು ನೀಡಿ ಮಳೆಯಲ್ಲಿ
ಆಸರೆಯಾದರೆ ನನ್ನೆ ಕೊಂದು
ಅಹಂನ ಗದ್ದುಗೆಯಲಿ ತೇಲುತಿರುವೆ
ಒಮ್ಮೆ ಯೋಚಿಸು ಓ.! ಮನುಜ…
ಮಳೆಯಿಲ್ಲದೆ ಇಳೆ ಇರುವುದೆ.?
ಇಳೆಯಿಲ್ಲದೆ ನೀನಿರುವೆಯಾ.?
ನಿನ್ನ ಲಲಾಟಕೆ ನನ್ನೆ ಗುರಿಮಾಡಿರುವೆ
ನಿನ್ನಾಟಿಕೆಯ ಅಲಂಕಾರಕೇಕೆ
ನನ್ನ ಕಡಿದು ಮಾರಾಟಕಿಟ್ಟಿರುವೆ.?

ಹವಾಮಾನ ವೈಪರಿತ್ಯಗಳುಂಟಾಗುವುದೆ
ನಮ್ಮಿಂದ ಹೇ.!ಮನುಜ ನೀ ತಿಳಿ
ಮಳೆ ಗಾಳಿ ನೀರಿನ ಉತ್ಪಾನ್ನದ ಮೂಲ
ನಾವಲ್ಲವೇ.? ,ನಮ್ಮಿರುವಿಕೆಯ
ಪ್ರಭಾವ ಮಳೆ ಬೆಳೆಯ ಸೊಬಗು!
ಹೀಗಿರುವಾಗ ಕಾಡುಗಳ
ಕಡಿದು ಕಾಂಕ್ರೀಟ್ ನಗರಗಳ
ನಿರ್ಮಿಸಿದರೆ ಉಳಿಗಾಲವಿದೆಯೆ.?
ಇಳೆಗೆ ಅನಾವೃಷ್ಟಿಯ ಭೀತಿ ಎದುರಾಗಿ
ನಿಮ್ಮ ಕುಲದೊಂದಿಗೆ ಸಕಲ
ಜೀವಿಗಳ ವಿನಾಶದಂಚಿಗೆ ತಳ್ಳುತಿರುವೆ.!!

ಈಗಲಾದರು ಬಿಟ್ಟು ಬಿಡು ನಿನ್ನ ಸ್ವಾರ್ಥ
ನಿಸ್ವಾರ್ಥ ನಿಷ್ಕಲ್ಮಶದಿ ಮುನ್ನಡೆದು
ಪರಿಸರ ಉಳಿಸಿ ಅನಾಹುತಗಳ ಆವಾರ
ತಪ್ಪಿಸು.! ಇಲ್ಲದಿರೆ ಅನುಭವಿಸು
ಘನಘೋರ ಪರಿಸ್ಥಿತಿ ಅಲೆಗಳ ಆರ್ಭಟವ
ನಾಡ ಉಳಿಸಲು ಪ್ರಯತ್ನಿಸು
ನಿನಗಷ್ಟೆ ಅಲ್ಲ ಈ ಪ್ರಕೃತಿ ಪರಿಸರ
ನಿನ್ನ ಮುಂದಿನ ಪೀಳಿಗೆಗು ಉಳಿಸುತ
ಪರಿಸರ ಸುರಕ್ಷತೆಯ ಜಾಗೃತಿ ಮೂಡಿಸಿ
ನಾಡು ಉಳಿಸಿ ಕಾಡನ್ನು ಬೆಳಸು ಮನುಜ||

*************************************

Leave a Reply

Back To Top