ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ-8
ಸ್ಕೂಬಾ ಡೈವಿಂಗ್ ಬಗ್ಗೆ ಓದಿ ಮಾತ್ರ ಗೊತ್ತು. ಸತೀಶ್ ಅವರನ್ನು ಬಿಟ್ಟು ನಾನು ಡೈವ್ ಮಾಡಲು ಹೋಗುವುದು ಸಾಧ್ಯವಿರಲಿಲ್ಲ. ಮಕ್ಕಳಿಬ್ಬರೂ ಗಣೇಶಣ್ಣನ ಕುಟುಂಬದ ಜೊತೆ ಸ್ಕೂಬಾ ಡೈವಿಂಗ್ ನ ಅನುಭವವನ್ನು ಪಡೆಯಲು ಹೋದರು.
ಅಂಡಮಾನ್ ಗೆ ಹೊರಡುವಾಗ ಮಾಡಿದ ತಯಾರಿಯಲ್ಲಿ ಸಾಕಷ್ಟು ಚಿಲ್ಲರೆ ದುಡ್ಡು ಐವತ್ತು, ನೂರು, ಇನ್ನೂರರ ನೋಟುಗಳನ್ನು ಇಟ್ಟುಕೊಂಡಿದ್ದೆವು. ಹತ್ತು ಇಪ್ಪತ್ತರ ನೋಟುಗಳು ಕೂಡಾ. ಆದರೆ ಇಲ್ಲಿಯವರೆಗೆ ಎಲ್ಲಿಯೂ ನಾವು ಖರ್ಚು ಮಾಡುವ ಪ್ರಮೇಯವೇ ಬಂದಿರಲಿಲ್ಲ.
ಶಾಪಿಂಗ್ ಗೆಂದು ಕೊನೆಯ ದಿನ ಕರೆದುಕೊಂಡು ಹೋಗುತ್ತೇವೆಂದು ದರ್ಶನ್ ಮತ್ತು ರಾಕೇಶ್ ಆಶ್ವಾಸನೆ ಕೊಟ್ಟಿದ್ದರು.
ಈ ದಿನದ ನೀರಿನ ಆಟಗಳ ಖರ್ಚು ಮಾತ್ರ ನಾವು ಕೊಡಬೇಕಾಗಿತ್ತು.
ಸ್ಕೂಬಾ ಡೈವಿಂಗ್ ಲ್ಲಿ ಎರಡು ವಿಧ. Sea shore diving ಅಂದರೆ ದಡದಿಂದಲೇ ಸಮುದ್ರದ ತಳಕ್ಕೆ ಕೊಂಡು ಹೋಗುವುದು.
ಇನ್ನೊಂದು deep sea diving. ದೊಡ್ಡದಾದ ದೋಣಿಯಲ್ಲಿ ಸಮುದ್ರದ ನಡು ಭಾಗಕ್ಕೆ ಕೊಂಡೊಯ್ದು ಅಲ್ಲಿಂದ ಜಿಗಿದು ಆಳಕ್ಕೆ ಹೋಗುವುದು.
ಡೀಪ್ ಸೀ ಗೆ ಹೋಗುವುದೆಂದು ತೀರ್ಮಾನಿಸಿ ಎಲ್ಲರೂ ಹೊರಟರು. ಒಬ್ಬೊಬ್ಬರಿಗೆ ನಾಲ್ಕುವರೆ ಸಾವಿರ ರೂಪಾಯಿಗಳು.
ಇವರು ಹೋಗುವ ಮೊದಲೇ ಒಂದು ತಂಡ ಹೊರಡುತ್ತಿರುವುದರಿಂದ ಇನ್ನು ಒಂದು ಗಂಟೆ ಕಾಯಬೇಕಿತ್ತು.
ಅಲ್ಲಿಯವರೆಗೆ ಗಾಜಿನ ತಳದ ದೋಣಿಯಲ್ಲಿ ಸಮುದ್ರ ಯಾನಕ್ಕೆಂದು ಮಕ್ಕಳು ಮೂವರು ತಯಾರಾದರು. ಸಮುದ್ರದ ಆಳದಲ್ಲಿರುವ ಸುಂದರ ಪ್ರಪಂಚ ಗಾಜಿನ ಮೂಲಕ ಕೂತಲ್ಲಿಂದಲೇ ನೋಡಬಹುದಿತ್ತು.
ಇದನ್ನಾದರೂ ನೋಡಬಹುದು ಅಂದುಕೊಂಡಿದ್ದೆ ಆದರೆ
ಸಣ್ಣಗೆ ತಲೆ ಸುತ್ತುವ ಸಂಭವವಿದೆ ಎಂದುದರಿಂದ ಬೇಡವೆನಿಸಿತು.
ಸಮುದ್ರದೊಳಗೆ ದೂರ ದೂರ ನಡುವಿನವರೆಗೂ ದೋಣಿಯಲ್ಲಿ ವಿಹರಿಸುವುದು, ದೋಣಿ ಓಲಾಡುವಾಗ ಕೆಳಗಿನ ದೃಶ್ಯವನ್ನು ವೀಕ್ಷಿಸುವುದು ಒಂದು ರೀತಿಯಲ್ಲಿ ಪುಳಕವೇನೋ ಸರಿ. ತಲೆಯೊಳಗೆ, ಹೊಟ್ಟೆಯೊಳಗೆ ವಿಚಿತ್ರ ಸಂಕಟವಂತೂ ಆಗಿಯೇ ಆಗುತ್ತದೆ.
ಮೊದಲಿನ ರೀತಿಯಾಗಿದ್ದರೆ ಪರವಾಗಿರಲಿಲ್ಲ. ಈಗ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಆರೋಗ್ಯವಾಗಿರುವುದು ಮುಖ್ಯವಾಗಿತ್ತು.
ಮಕ್ಕಳು ಬಂದು ಅವರು ನೋಡಿದ್ದನ್ನು ಬಣ್ಣಿಸಿದ್ದೇ ಬಣ್ಣಿಸಿದ್ದು. ಅವರ ಖುಷಿ ನೋಡಿಯೇ ನನಗೂ ತೃಪ್ತಿಯಾಯಿತು.
ಸ್ಕೂಬಾ ಡೈವಿಂಗ್ ಮಾಡುವವರಿಗೆ ಮೊದಲು ಕೆಲವು ಸೂಚನೆಗಳನ್ನು ನೀಡುತ್ತಾರೆ. ಕೆಲವು ಎಚ್ಚರಿಕೆಗಳು ಮತ್ತು ಕೆಲವು ಕೈ ಸನ್ನೆಗಳನ್ನು ಕಲಿಸುತ್ತಾರೆ.
ನಾನು ಆರಾಮಾಗಿದ್ದೇನೆ, ಉಸಿರಾಟಕ್ಕೇನೂ ತೊಂದರೆಯಿಲ್ಲ, ಅಥವಾ ನನಗೆ ತೊಂದರೆ ಆಗುತ್ತಿದೆ, ನಾನು ಮೇಲೆ ಹೋಗಬೇಕು ಈ ತರದ ಸಂದೇಶಗಳನ್ನು ಕೈ ಸನ್ನೆಯಿಂದ ತಿಳಿಸಲು ಅಭ್ಯಾಸ ಮಾಡಿಸಿ, ಅವರಿಗೆ ಡೈವಿಂಗ್ ಉಡುಪುಗಳನ್ನು ತೊಡಲು ಕೊಟ್ಟರು. ಮೈಗೆ ಅಂಟಿಕೊಂಡಂತಹ ಬಿಗಿಯಾದ ಉಡುಪಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತಿದ್ದರು.
ನಮ್ಮ ದೀಕ್ಷಾಳಿಗೆ ಸಿಕ್ಕಿದ್ದು ಸ್ವಲ್ಪ ಬಿಗಿ ಇತ್ತಂತೆ. ಕನ್ನಡಿಯಲ್ಲಿ ನೋಡಿಕೊಂಡಾಗ ಚಂದ ಕಾಣ್ತಿದೆಯಲ್ಲಾ ಇರಲಿ ಅಂದುಕೊಂಡು ಸುಮ್ಮನಿದ್ದಳು. ಅವರನ್ನೆಲ್ಲಾ ಒಂದು ದೊಡ್ಡ ದೋಣಿಯೊಳಗೆ ಕೂರಿಸಿ ಕರೆದುಕೊಂಡು ಹೋದರು. ಪ್ರತಿಯೊಬ್ಬರಿಗೂ ಒಬ್ಬೊಬ್ಬ ಡೈವಿಂಗ್ ತರಬೇತಿ ಹೊಂದಿದ ಸಹಾಯಕರಿರುತ್ತಾರೆ. ಆಮ್ಲಜನಕದ ಭಾರವಾದ ಸಿಲಿಂಡರ್ ಗಳನ್ನು ಹೊತ್ತು ಅದರ ಪೈಪ್ ನಿಂದ ಬರುವ ಗಾಳಿಯಲ್ಲಿ ಬಾಯಿಯಿಂದ ಉಸಿರಾಡಬೇಕು. ಅದರ ಎಲ್ಲಾ ನಿರ್ದೇಶನಗಳನ್ನು ಮೊದಲೇ ನೀಡಿರುತ್ತಾರೆ.
ನಾವಿಬ್ಬರೂ ಒಂದು ಉದ್ದವಾದ ಕಲ್ಲಿನ ಬೆಂಚ್ ನೋಡಿ ಅಲ್ಲಿ ಕೂತೆವು. ಸಮುದ್ರದ ಅಲೆಗಳ ಸೌಂದರ್ಯ ನೋಡುತ್ತಾ ಕೂತಾಗ ಇಂಥಾದೊಂದು ದಿನ ನಾವು ಈ ದ್ವೀಪಕ್ಕೆ ಬಂದು ಹೀಗೆ ಕೂತು ಯಾವುದೇ ಚಿಂತೆಯಿಲ್ಲದೆ ಕಾಲ ಕಳೆಯುತ್ತೇವೆ ಎಂದು ಯಾವತ್ತೂ ಯೋಚಿಸಿಯೂ ಇರಲಿಲ್ಲ.
ಕೂತಲ್ಲೇ ಸತೀಶ್ ಆಕಳಿಸಲು ತೊಡಗಿದರು. ನಿದ್ರೆ ಬರ್ತಿದೆ ಎಂದು ಆ ಬೆಂಚ್ ಮೇಲೆ ಉದ್ದಕ್ಕೆ ಮಲಗಿದರು.
ಸಮುದ್ರದ ಅಲೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದುದರರಿಂದ ಸ್ಕೂಬಾ ಡೈವಿಂಗ್ ಗೆ ಹೊರಟವರನ್ನು ಅಲ್ಲಿಯೇ ಸ್ವಲ್ಪ ತಡೆದು ನಿಲ್ಲಿಸಿದ್ದರು. ಸುಮಾರು ಮುಕ್ಕಾಲು ಗಂಟೆಯ ನಂತರ ವಾತಾವರಣ ತಿಳಿಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದುದರಿಂದ ಮುಂದುವರೆದು ಹೋಗಿದ್ದರು.
ಅದರ ಬಗ್ಗೆ ಅಲ್ಲಿ ಧ್ವನಿವರ್ದಕದಲ್ಲಿ ಘೋಷಿಸಿದುದರಿಂದ ನಮಗೆ ತಿಳಿಯಿತು.
ಇಷ್ಟು ದೂರದ ಊರಿಗೆ ಬಂದು ಸಣ್ಣ ಪುಟಾಣಿ ಮಕ್ಕಳನ್ನು ಹೊರತು ಪಡಿಸಿದರೆ, ಎರಡು ಗಂಟೆಗಳಷ್ಟು ಕಾಲ ಸಮುದ್ರ ತೀರದಲ್ಲಿ ನಿಶ್ಚಿಂತೆಯಿಂದ ಮಲಗಿದ್ದು ಇವರೊಬ್ಬರೇ ಇರಬಹುದು ಎಂದು ಮನಸ್ಸಿನಲ್ಲೇ ನಗುತ್ತಾ ಕುಳಿತೆ.
ನಾಲ್ಕೈದು ಜನರನ್ನು ಒಮ್ಮೆ ಕರೆದುಕೊಂಡು ಸಮುದ್ರದಾಳಕ್ಕೆ ಜಿಗಿದಿದ್ದಾರೆ. ಉಳಿದವರನ್ನು ದೋಣಿಯಲ್ಲೇ ಕೂರಿಸಿದ್ದರು. ಆ ದೋಣಿ ಸಮುದ್ರದ ಮೇಲೆ, ನಿಂತಲ್ಲಿಯೇ ನಿಂತು ತೇಲಾಡುವಾಗ ತಲೆ ಸುತ್ತಿದಂತೆ ಆಗುತಿತ್ತಂತೆ.
ಡೈವಿಂಗ್ ತರಬೇತಿ ಪಡೆದು ಅಲ್ಲಿ ಕೆಲಸಕ್ಕೆಂದು ದೂರದೂರದ ಊರಿನಿಂದ ಹುಡುಗರು ಬಂದು ಸೇರಿದ್ದಾರೆ.
ನೀರಿನೊಳಗೆ ಫೋಟೊಗಳನ್ನು ಕೂಡಾ ಅವರದೇ ಕ್ಯಾಮರಾಗಳಲ್ಲಿ ತೆಗೆದು ಕೊಡುತ್ತಾರೆ ಅವರವರ ಸಹಾಯಕರು.
ಒಬ್ಬ ಹುಡುಗ ಯಾರ ಜೊತೆ ಹೋಗಲು ಕಳಿಸಿದರೂ ಹೋಗದೆ ದೀಕ್ಷಾಳ ಜೊತೆ ಹೋಗಲು ಎಂದು ಹೊರಟಾಗ ಅವನ ಜತೆ ಇದ್ದವರು ಅವನನ್ನು ಛೇಡಿಸಿ ನಕ್ಕರಂತೆ. ಸಮುದ್ರದೊಳಗೆ ಜಿಗಿದು ಸ್ವಲ್ಪ ಹೊತ್ತು ಉಸಿರಾಟ ಅಭ್ಯಾಸ ಆಗೋವರೆಗೆ ಸೆಣಸಾಡಿ ಉಡುಪು ಬಿಗಿಯಾಗಿದ್ದರಿಂದಲೋ ಏನೋ ಉಸಿರು ಕಟ್ಟಿದಂತಾಗಿ ಮೇಲೆ ಕರೆದು ಕೊಂಡು ಹೋಗಲು ಸನ್ನೆ ಮಾಡಿದಳಂತೆ.
ಧಾತ್ರಿ, ಶ್ರೀಪಾದ ಇಬ್ಬರೂ ಆರಾಮಾಗಿದ್ದರು. ಗಣೇಶಣ್ಣನಿಗೂ ಮೊದಲಿಗೆ ಕಸಿವಿಸಿಯಾದರೂ ನಂತರ ಸರಿ ಹೋಯ್ತಂತೆ. ಸರಸ್ವತಿಯೂ ಖುಷಿಯಿಂದ ಎಲ್ಲವನ್ನೂ ನೋಡಿ ಅನುಭವಿಸಿ ಬಂದಿದ್ದರು.
ಆಳದಲ್ಲಿ ಅದೆಷ್ಟು ಸುಂದರವೆಂದು ತಿಳಿಸಲು ಅವರ ಬಳಿ ಶಬ್ದಗಳೇ ಇರಲಿಲ್ಲ. ಬಣ್ಣ ಬಣ್ಣದ ಮೀನುಗಳು ನಮ್ಮನ್ನು ತಾಕಿಕೊಂಡೇ ಚಲಿಸುತ್ತವಂತೆ, ಒಳಗಿನ ಹವಳದ ಗಿಡಗಳಿಂದ ಬಣ್ಣಬಣ್ಣದ ಬೆಳಕು ಬಂದಂತೆ, ನೀಲಿ, ಕೆಂಪು, ನೇರಳೆ, ಹಳದಿ ಬಣ್ಣದ ಹವಳದ ಗುಪ್ಪೆಗಳು ನೋಡಲು ಕಣ್ಣೇ ಸಾಲುವುದಿಲ್ಲ. ಒಮ್ಮೆ ನೀರಿನೊಳಗೆ ಅಭ್ಯಾಸವಾಯಿತೆಂದರೆ ಮತ್ತೆ ಮೇಲೆ ಬರಲು ಮನಸ್ಸೇ ಬರುವುದಿಲ್ಲವಂತೆ.
ದೀಕ್ಷಾ ಮೇಲೆ ಬಂದವಳೇ ಗಳಗಳನೆ ವಾಂತಿ ಮಾಡಿದ್ದು ನೋಡಿ ಆ ಹುಡುಗನ ಸಂಗಡಿಗರು ಮತ್ತೆ ಅವನನ್ನು ಛೇಡಿಸಿ ನಕ್ಕರಂತೆ. ಅವನು ಆಮೇಲೆ ಇವಳ ಕಡೆ ತಿರುಗಿಯೂ ನೋಡಿಲ್ಲ ಎಂದು ಹೇಳಿ, ಇನ್ನೊಮ್ಮೆ ನಾನು ಡೈವ್ ಮಾಡಿಯೇ ಮಾಡ್ತಿನಿ ಅವರೆಲ್ಲಾ ನಕ್ಕರಲ್ಲ, ಅವರ ಎದುರಿಗೆ ನಾನು ಚೆನ್ನಾಗಿ ಒಂದು ಗಂಟೆ ಸಮುದ್ರದೊಳಗೆ ಇದ್ದು ಬರ್ತೀನಿ ನೋಡ್ತಿರಿ. ಎಂದು ಆಮೇಲೆ ಸ್ವಲ್ಪ ಸೌಖ್ಯವಾದ ಮೇಲೆ ರಾಕೇಶ್ ಸರ್ ಬಳಿ ನಾಳೆ ಮತ್ತೆ ಮಾಡಬಹುದಾ ಎಂದು ಕೇಳಿದಳು. ಅವರು ಇಲ್ಲಮ್ಮಾ, ಸ್ಕೂಬಾ ಡೈವ್ ಮಾಡಿದ ಇಪ್ಪತ್ತನಾಲ್ಕು ಗಂಟೆಗಳ ನಂತರವೇ ವಿಮಾನಯಾನ ಮಾಡಬೇಕು ಎನ್ನುವ ನಿಯಮವಿದೆ , ಎಚ್ಚರಿಕೆಯ ದೃಷ್ಟಿಯಿಂದ ಅದಕ್ಕಾಗಿಯೇ ನಾವು ಹೊರಡುವ ಒಂದು ದಿನ ಮುಂಚೆ ಈ ಚಟುವಟಿಕೆಗಳಿಗಾಗಿ ಇಡುತ್ತೇವೆ ಎಂದರು. ಹಾಗಾದರೆ ಬರುವ ವರ್ಷ ನಾನೊಬ್ಬಳೇ ಬರ್ತೇನೆ ಎಂದು ಅವರ ಬಳಿ ಹೇಳಿದಳು.
ಸಮುದ್ರದಿಂದ ಮೇಲೆ ಬಂದ ಮೇಲೆ ಎಲ್ಲರಿಗೂ ಹೊಟ್ಟೆಯೊಳಗೆ ಸಂಕಟವಾಗಿ, ಯಾರೂ ಮದ್ಯಾಹ್ನದ ಊಟ ಮಾಡುವ ಯೋಚನೆಯಲ್ಲೇ ಇಲ್ಲ. ಸ್ವಲ್ಪ ಮೊಸರನ್ನ, ಸ್ವಲ್ಪ ಹಣ್ಣುಗಳನ್ನು ತಿಂದರೂ ಅದೂ ಹೊಟ್ಟೆಯೊಳಗೆ ಮಾತನಾಡಲು ಶುರು ಮಾಡಿತೆಂದು ಸುಮ್ಮನೆ ಹಾಗೆ ಬಿದ್ದುಕೊಂಡಿದ್ದರು. ನಮ್ಮದೆಲ್ಲಾ ಊಟ ಅವರು ಬರುವುದರೊಳಗೆ ಆಗಿತ್ತು.
ಮತ್ತೆ ನಮ್ಮ ಪ್ರಯಾಣ ಪೋರ್ಟ್ ಬ್ಲೇರ್ ಗೆ ಹಡಗಿನಲ್ಲಿ ಹೋಗುವುದಿತ್ತು. ಈ ಸಲ ಹಡಗಿನಲ್ಲಿ ಮೇಲಿನ ಅಂತಸ್ತು ಇತ್ತು. ನಮ್ಮನ್ನು ಮೇಲಿನ ಅಂತಸ್ತಿನಲ್ಲಿ ಕೂರಿಸಿದರು.
ಹಡಗಿನೊಳಗೆ ಸ್ಯಾಂಡ್ ವಿಚ್ ಮತ್ತು ಜ್ಯೂಸ್ ಕೊಟ್ಟಿದ್ದರಿಂದ ಊಟ ಮಾಡದೇ ಇದ್ದವರಿಗೆ ಅದನ್ನು ತಿಂದು ಸ್ವಲ್ಪ ಹಾಯೆನಿಸಿತು.
ನನಗೆ ಸಣ್ಣಗೆ ಚಳಿಯಾಗಲು ಶುರುವಾಯ್ತು. ದೀಕ್ಷಾ ಅವಳ ಬ್ಯಾಗ್ ನಿಂದ ಒಂದು ಶಾಲು ತೆಗೆದು ನನಗೆ ಕೊಟ್ಟಳು. ಅದು ಅವಳ ಪ್ರೀತಿಯ ಶಾಲ್. ಹೊದ್ದುಕೊಂಡು ಬೆಚ್ಚಗೆ ಕೂತಿದ್ದು ನೆನಪಿದೆ. ಅದರ ಋಣ ನಮ್ಮೊಂದಿಗೆ ಆವತ್ತೇ ತೀರಿ ಕೊನೆಯಾಗುತ್ತದೆಂದು ಅಂದುಕೊಂಡಿರಲಿಲ್ಲ.
ಇವತ್ತಿಗೂ ಶಾಲಿನ ಬಗ್ಗೆ ಮಾತನಾಡುವುದನ್ನು ಅವಳು ಬಿಟ್ಟಿಲ್ಲ. ಮೈಸೂರಿಗೆ ಅರ್ಬನ್ ಹಾಟ್ ಪ್ರದರ್ಶನ ಬಂದಾಗ ಖರೀದಿಸಿದ ತಿಳಿ ಗುಲಾಬಿ ಬಣ್ಣದ ಮೇಲೆ ಬಿಳಿಯ ಸಣ್ಣ ಸಣ್ಣ ಹೂಗಳಿದ್ದ ಕಾಶ್ಮೀರಿ ಶಾಲು ಅದು.
ಕೊರೊನಾ ಶುರು ಆಗುವ ಮೊದಲೇ ಮತ್ತೊಮ್ಮೆ ಬಂತೆಂದು ಹೋಗಿ ಹುಡುಕಿದರೆ ಆ ಅಂಗಡಿಯೇ ಬಂದಿರಲಿಲ್ಲ. ಮೊನ್ನೆ ಮೊನ್ನೆ ಬಂದ ಹುನರ್ ಹಾಟ್ ಲ್ಲಿ ಹುಡುಕಿದರೂ ಇಲ್ಲ. ಅವಳನ್ನು ಖುಷಿ ಪಡಿಸೋಣ ಎಂದು ದುಬಾರಿ ಪಶ್ಮಿನಾ ಶಾಲು ಖರೀದಿಸಿ ತಂದುಕೊಟ್ಟರೂ ಆ ಶಾಲಿನಷ್ಟು ಚೆನ್ನಾಗಿಲ್ಲ ಎಂದೇ ಅಂದಳು.
(ಮುಂದುವರೆಯುವುದು..)
*************************************************************
–
ಶೀಲಾ ಭಂಡಾರ್ಕರ್.