ಕವಿತೆ
ಜೀವದಾತೆ ಪ್ರಕೃತಿ ಮಾತೆ
ಸುವಿಧಾ ಹಡಿನಬಾಳ
ಹೇ ಪ್ರಭು , ಋತುರಾಜ ವಸಂತ
ನೀ ಬಂದೆ ನಸುನಗುತ
ಪ್ರಕೃತಿಗೆ ಹೊಸ ಕಳೆಯ ನೀಡುತ್ತ
ಆದರೆ ಕಳೆದಿಲ್ಲ ಮನುಕುಲದ
ದುಗುಡ ದುಮ್ಮಾನ ನಿನ್ನ ಆಗಮನದಿಂದ !
ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟು
ಹೂ ಹಣ್ಣು ಕಾಯಿ ತೊಟ್ಟು
ಕೋಗಿಲೆ ಗಿಳಿ ಗೊರವಂಕಗಳುಲಿವಾಗ
ಮನುಜನಿಗೇಕೆ ಈ ವಿಯೋಗ ?
ಜೀವಸಂಕುಲವೆ ತಿಂದುಂಡು ನಲಿದು
ಹಾಯಾಗಿ ಇರುವಾಗ ನಿನ್ನದೆ
ಒಂದು ಭಾಗ ಹುಲು ಮಾನವನಿಗೇಕೆ
ಜೀವಭಯ ತಳಮಳ ತುಮುಲ?
ಹೇ ಕಾಮಧೇನು ಕರುಣಾಮಯೀ
ಪ್ರಕೃತಿ ಮಾತೆ ಜೀವದಾತೆ
ನಿನ್ನ ಮೇಲೆ ಅಟ್ಡಹಾಸಗೈವ
ಸ್ವಾರ್ಥ ನರನ ಮೇಲೆ ಕೋಪವೆ
ಅಥವಾ ನಿನ್ನ ಬಲಿದಾನಕೆ ನೀನಿಟ್ಡ ಶಾಪವೆ?
ಸಾಕು ಪ್ರಭು, ಸಹಿಸಲಾಗುತ್ತಿಲ್ಲ
ಸಾವಿನ ಸರಣಿ ಓಟವ
ಮುಗ್ಧ ಜನರ ನರಳಾಟವ
ಕಂಬನಿ ತುಂಬಿದ ಕಣ್ಣ ನೋಟವ
ಇನ್ನಾದರೂ ಬುದ್ಧಿ ಕಲಿತಾನು ಬಿಡು
ಅಧಿಕಾರ ಹಣದಾಸೆ ಅಹಂಕಾರ ಸೇಡು
ಕರುಣೆ ತೋರು ಮೊರೆಯ ಕೇಳು
ರಕ್ಷಿಸು ಮನುಕುಲವ ಹೇ ದಯಾಸಿಂದೂ……
*****************************************