ನಿಘಂಟು ತಜ್ಞ, ಶತಾಯುಷಿ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ

ನಿಘಂಟು ತಜ್ಞ, ಶತಾಯುಷಿ ಸಾಹಿತಿ

ಪ್ರೊ.ಜಿ.ವೆಂಕಟಸುಬ್ಬಯ್ಯ

ಜಿ.ವೆಂಕಟಸುಬ್ಬಯ್ಯನವರ ಬಗೆಗೆ ಮೊನ್ನೆಯೇ ಬರೆಯಬೇಕಿತ್ತು. ಆದರೆ ಕೆಲ ಕಾರಣಗಳಿಂದ ಬರೆಯಲಾಗಿರಲಿಲ್ಲ. ಆ ಬರಹವನ್ನು ಈಗ ಬರೆಯುತ್ತಿದ್ದೇನೆ…

108 ವರ್ಷ ವಯಸ್ಸಾಗಿದ್ದ ನಿಘಂಟು ತಜ್ಞರಾದ ಮತ್ತು ಸಾಹಿತಿಗಳಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಏಪ್ರಿಲ್ 18-19 ಮಧ್ಯರಾತ್ರಿ ಬೆಂಗಳೂರಿನಲ್ಲಿ ತೀರಿದರು.

ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮೊನ್ನೆ ಮಧ್ಯರಾತ್ರಿ 1:30 ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದರು.

ಅವರು 1913 ರ, ಆಗಸ್ಟ್ 23 ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್​ನಲ್ಲಿ ಜನಿಸಿದವರು. ಪ್ರೊ.ಜಿ.ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಎಲ್ಲಕ್ಕಿಂತಲೂ ಅವರ ಹೆಚ್ಚು ಕೊಡುಗೆ ಇರುವುದು ಕನ್ನಡ ನಿಘಂಟು ಕ್ಷೇತ್ರಕ್ಕೆನೇ. ಅವರು ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿದ್ದರು. ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿಗಳ ಗೌರವಗಳು ಬಂದಿದ್ದವು.

ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನು ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನ ಯೋಗ್ಯವೆನಿಸಿದೆ. ಇವರ ಇಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ.

ವೆಂಕಟಸುಬ್ಬಯ್ಯ ಅವರ ತಂದೆ ಗಂಜಾಮ್ ತಿಮ್ಮಣ್ಣಯ್ಯ ಅವರೂ ಕೂಡ ಕನ್ನಡ ಮತ್ತು ಸಂಸ್ಕೃತ ಭಾಷೆಯ ವಿದ್ವಾಂಸರಾಗಿದ್ದವರು. ಸರ್ಕಾರಿ ನೌಕರಿಯಲ್ಲಿದ್ದವರು.

ಜಿ.ವೆಂಕಟಸುಬ್ಬಯ್ಯ ಅವರು ಹೆಚ್ಚಾಗಿ ಓದಿದ್ದು ಮೈಸೂರಿನಲ್ಲಿ. 1938 ರಲ್ಲಿ ಇವರು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದವರು. ಮಂಡ್ಯದ ಸರ್ಕಾರಿ ಶಾಲೆ ಹಾಗೂ ಬೆಂಗಳೂರಿನ ಬಿ.ಎಚ್​.ಎಸ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದ ಇವರು ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಯೂ ಕೆಲಸ ಮಾಡಿದವರು. ಇವರು ನಿವೃತ್ತರಾಗುವ ಮುನ್ನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ಸೇವೆ ನಿಭಾಯಿಸಿದ್ದವರು.

ಇಂತಹ ಜಿ.ವೆಂಕಟಸುಬ್ಬಯ್ಯ ಅವರ ಬದುಕು ಮತ್ತು ಸಾಹಿತ್ಯ ಕೆಲಸ ಹೀಗಿದೆ ನೋಡಿ…

ನಿಟಘಂಟು ತಜ್ಞರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯ, ಅರಮನೆಯ ವಿದ್ವಾಂಸರು. ತಾಯಿ ಸುಬ್ಬಮ್ಮನವರು. ಇವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಇವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇವರು ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ.1937 ರಲ್ಲಿ ಎಂ.ಎ., 1939ರಲ್ಲಿ ಬಿ.ಟಿ. ಪದವಿ ಪಡೆದು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿಯಾದರು ಜಿ.ವೆಂಕಟಸುಬ್ಬಯ್ಯನವರು.

ಜಿ.ವೆಂಕಟಸುಬ್ಬಯ್ಯ.ಗೆ ಸಾಹಿತ್ಯಾಭಿರುಚಿ ಬಳುವಳಿಯಾಗಿ ಬಂದುದು ಅವರ ತಂದೆಯಿಂದಲೇ. ತಿಮ್ಮಣ್ಣಯ್ಯನವರು ವೇದ ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು.

ಅಷ್ಟಾದಶ ಪುರಾಣಗಳ ಅನುವಾದ ಕಾರ‍್ಯದಲ್ಲಿ ಇವರು ನೀಡಿದ ಸಹಾಯ ಹಸ್ತ ಅಪಾರವಾದದ್ದು. ಆದರೆ ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದಿದೂ ಮುಂದು ಇದ್ದವರು.

ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಹಲವಾರು ಕೃತಿ ರಚನೆ ಮಾಡಿದವರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದವರು. ಎಚ್.ಎಂ.ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈ ಬರಹದ ಪತ್ರಿಕೆಗೆ ನೀಡಿದ ಸಹಾಯವೂ ಅಮುಲ್ಯವಾದದು.

ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದರು ಜಿ.ವೆಂಕಟಸುಬ್ಬಯ್ಯ. 1954 ರಿಂದ 56 ರವರೆಗೆ ಸಾಹಿತ್ಯ ಪರಿಷತ್ತಿನ ಕಾರ‍್ಯದರ್ಶಿ, 1975 ರಿಂದ-79ರವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965 ರಿಂದ 67 ರವರೆಗೆ ವಿಶ್ವಕೋಶದ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿಯೂ ಸಲ್ಲಿಸಿದ ಸೇವೆ ಸಲ್ಲಿಸಿದವರು ಜಿ.ವೆಂಕಟಸುಬ್ಬಯ್ಯ.

ಇವರು ರಚಿಸಿದ ಕೃತಿಗಳೆಂದರೆ ವಿಮರ್ಶೆ-ನಯಸೇನ, ಅನುಕಲ್ಪನೆ. ಸಂಪಾದಿತ (ಇತರರೊಡನೆ)- ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ. ಅನುವಾದ-ಶಂಕರಾಚಾರ‍್ಯ, ಕಬೀರ, ಲಿಂಡನ್ ಜಾನ್ಸನ್. ಮಕ್ಕಳಿಗಾಗಿ-ರಾಬಿನ್‌ ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ.0

ಇವರ ಕಾವ್ಯಕೃತಿಗಳು ಹೀಗಿವೆ– ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ. ಇತರ-ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ೬೦ಕ್ಕೂ ಹೆಚ್ಚು ಕೃತಿ ರಚನೆ ಮಾಡಿದವರು ಜಿ.ವೆಂಕಟಸುಬ್ಬಯ್ಯನವರು.

ಇವರಿಗೆ ಹಲವಾರು ಪ್ರಶಸ್ತಿಗಳು-ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ ಮುಂತಾದುವುಗಳು ಸಂದಿದವು.

ಇಷ್ಟು ಹೇಳಿ ಜಿ.ವೆಂಕಟಸುಬ್ಬಯ್ಯನವರ ಬಗೆಗಿನ ಈ ಬರಹ ಸದ್ಯಕ್ಕೆ ಮುಗಿಸುತ್ತೇನೆ..!

************************************************

 ಕೆ.ಶಿವು.ಲಕ್ಕಣ್ಣವರ

Leave a Reply

Back To Top