ಕವಿತೆ
ಅಮೃತಾ ಮೆಹಂದಳೆ ಹೊಸ ಕವಿತೆ
ಕೋಮುದಂಗೆಗೆ
ಆಕ್ರೋಶಗೊಳ್ಳುವ ನಾನು
ಸಹಿಷ್ಣುತೆಯ ಕವಿತೆ ಬರೆವೆ
ಸಾಮಾಜಿಕ ಕಾಳಜಿಯ
ಬಗ್ಗೆ ಬರೆವ ನಾನು
ಇಂದು ನೋಡಬೇಕಾದ
ಹೊಸ ಚಿತ್ರದ ಪಟ್ಟಿ ಮಾಡುವೆ
ಸೀರೆ ಚಾಲೆಂಜ್ ಗೆ
ಸಿಡಿಮಿಡಿಗೊಳ್ಳುವ ನಾನು
ಸೆಲ್ಫೀಯಲ್ಲಿ ಮೈಮರೆವೆ
ಹಸಿದವರ ವಿಡಿಯೋಗೆ
ಕಣ್ಣೀರ್ಗರೆಯುವ ನಾನು
ಪಾನಿಪುರಿಗೆ ಪುದಿನಾ ಜೋಡಿಸುವೆ
ರಾಜಕೀಯ ದೊಂಬರಾಟಕ್ಕೆ
ಅಸಹ್ಯಿಸಿಕೊಳ್ಳುವ ನಾನು
ಭಾಷಣಕ್ಕೆ ಕೈತಟ್ಟುವೆ
ಉಚಿತ ಭಾಗ್ಯಗಳ ಬಗ್ಗೆ
ಮೆಚ್ಚುಗೆ ತೋರುವ ನಾನು
ಪರಿಣಾಮಗಳಿಗೆ ಕುರುಡಳಾಗುವೆ
ಬೇಕಿಂಗ್ ನ್ಯೂಸ್
ಹಂಚಿಕೊಳ್ಳುವ ನಾನು
ಹಕ್ಕಿಗಾಗಿ ನೀರಿಡಲು ಮರೆವೆ
ಆರ್ಥಿಕ ಮುಗ್ಗಟ್ಟಿಗೆ
ಚಿಂತಿತಳಾಗುವ ನಾನು
ಬಾರದ ಪಾರ್ಸೆಲ್ಲಿಗೆ ಮರುಗುವೆ
ನಾಳಿನ ಭವಿಷ್ಯಕ್ಕೆ
ಸಿನಿಕಳಾಗುವ ನಾನು
ಹಪ್ಪಳಕ್ಕೆ ಅಕ್ಕಿ ನೆನೆಸುವೆ
ಆಧುನಿಕ ಜೀವನಶೈಲಿಗೆ
ಹಿಡಿಶಾಪ ಹಾಕುವ ನಾನು
ಪಿಜ್ಜಾ ಆಫರಿಗೆ ಕಣ್ಣರಳಿಸುವೆ
ದೇಶಪ್ರೇಮದ ರೀಮೇಕ್ ಹಾಡಿಗೆ
ಲವ್ ಇಮೋಜಿ ಒತ್ತುವ ನಾನು
ಮೆಚ್ಚಿನ ನಟನ ಬಿಲ್ಡಪ್ಪಿಗೆ ಸೋಲುವೆ
ವೈರಸ್ಸಿಗೆ ಬಲಿಯಾದವರ
ಸಂಖ್ಯೆಗೆ ಖಿನ್ನಳಾಗುವ ನಾನು
ಟೂರ್ ಪ್ಯಾಕೇಜಿನ ಲೆಕ್ಕಹಾಕುವೆ
ಸೇವೆಗೈಯುವ ವಾರಿಯರ್ಸ್ ಗೆ
ಬೆಂಬಲ ಸೂಚಿಸುವ ನಾನು
ಕಸ ಒಯ್ಯದ್ದಕ್ಕೆ ದೂರು ದಾಖಲಿಸುವೆ
ದೇಶವಿದೇಶಗಳ ನೀತಿನಿಯಮ
ವಿಶ್ಲೇಷಿಸುವ ನಾನು
ತರಕಾರಿ ಕೊಳ್ಳಲೂ
ಗೊಂದಲಗೊಳ್ಳುವೆ
ಈ ಮಣ್ಣಿನ ನಾಗರೀಕಳು ನಾನು
ನನ್ನ ನೆಲವ ಹೇಗೆ ಉಳಿಸಿಕೊಳ್ಳುವೆ!!
****************************
ಆಹಾ… ಸೂಪರ್