ಪುಸ್ತಕ ಸಂಗಾತಿ
ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು


ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.
೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ ಮಹತ್ವವೇ ಅದು. ಜೊತೆಗಿದ್ದು ಒಂಟಿಯಾದ ಭಾವ, ಸರಸ, ವಿರಸ, ಹುಸಿಮುನಿಸು ಇವೆಲ್ಲವೂ `ಯುವಕಾವ್ಯ’ದ ಲಕ್ಷಣಗಳೇ. ಅವರ ಕಾವ್ಯಾತ್ಮಕತೆಗೊಂದು ಉದಾಹರಣೆ ನೋಡೋಣ:
ನೆನಪಿದೆಯಾ ಅಂದು ನಾವಿಬ್ಬರೆ
ಬಿದ್ದ ಎಲೆಗಳನ್ನಾರಿಸುತ್ತಿದ್ದೆವು
ಚಳಿ ಬೆರಗಲಿ ನಮ್ಮ ನೋಡುತ್ತಿದ್ದರೂ
ಲೆಕ್ಕಿಸದೆ ( ಚಳಿಗೆ ಅದರುವ ಪದಗಳು)
`ನೀನು ಮತ್ತು ಚಳಿ’ ಅದರ ವಿಸ್ಕೃತ ಭಾವವೇ ಕವನದ ಕೊನೆಯ ಭಾಗದಲ್ಲಿ ,
ಗೋರಿಯಲ್ಲಿ ಮಲಗಿದ
ಅವನ ಮೈ ಮೇಲೆ
ತೊಟ್ಟು ಕಳಚಿದ ಎಲೆ
ಬೀಳುತ್ತದೆ
ಸದ್ದೆಬ್ಬಿಸಿ ಈ ಚಳಿಯಲಿ
ಇಲ್ಲಿ ಮಾತು ಮೌನಗಳ ಅನುಸಂಧಾನವೂ ಇದೆ. ಪ್ರೀತಿಯ ಉತ್ಕಟತೆಯೂ ಹರಳುಗಟ್ಟಿದೆ. ಇಷ್ಟೇ ಆಗಿದ್ದರೆ ಅಕ್ಷತಾ `ಗಜಲ’ ಬರೆದು `ಪ್ರೇಮ ಕವಯತ್ರಿ’ ಎಂದು ಬ್ರ್ಯಾಂಡ್ ಆಗುತ್ತಿದ್ದರು. ಆದರೆ ಹಾಗಾಗದೇ ಸ್ತ್ರೀ ಪರ ವಾದ, ಕಾಳಜಿ, ದಾಂಪತ್ಯದ ಬಂಧನ, ಒಲ್ಲದ ಗಂಡನ ಆಕ್ರೋಶ, ಹೆಣ್ಣು ಈಗಲೂ ದ್ವೀತಿಯ ದರ್ಜೆಯ ಪ್ರಜೆಯಾಗಿರುವುದು.. ಹೀಗೆ ಕವನಗಳು ಕುಡಿಯೊಡೆಯುತ್ತದೆ. ನಾನು ದೀಪ ಹಚ್ಚಬೇಕೆಂದಿದ್ದೆ ಎಂಬ ಶೀರ್ಷಿಕೆ ಕವನವನ್ನು ಪರಿಶೀಲಿಸಿದರೆ, ಇದು ಸ್ಪಷ್ಟವಾಗುತ್ತದೆ. ಹೆಣ್ಣಿನ ಆಶಯ ಒಂದು, ವಾಸ್ತವ ಬೇರೊಂದು. ಹೀಗೆ ವೈರುದ್ಯಗಳನ್ನು ಕಾಣಿಸುವ `ಕವಿತೆ’ ಇದು.
ದೀಪ ಹಚ್ಚುತ್ತೇನೆ
ಎಲ್ಲರೆದೆಯಲ್ಲಿ ಎಂದೆ
ಸುದ್ದಿ ಮಾಡು ಎಲ್ಲ
ಗೊತ್ತಾಗಲಿ ಎಂದರು
ಪುಕ್ಕಟ್ಟಿನ ಜಾಹೀರಾತಾಗಿಬಿಟ್ಟೆ
ಹೀಗೆ ಹೆಣ್ಣಿನ ದುಸ್ಥಿತಿ ಈಗಲೂ ಮುಂದುವರೆದಿರುವದನ್ನು ನೋವಿನಿಂದ ಚಿತ್ರಿಸಿದ್ದಾರೆ. ಒಬ್ಬರ ಅಡಿಯಾಗಬೇಕಾದ ದುರವಸ್ಥೆಗೆ ಒತ್ತು ನೀಡಿದ್ದಾರೆ. ಕತ್ತಿ ರಕ್ತ ಮೀಯುತಿದೆ, ಮಸರಿಯಾಗಬಾರದು ಈ ಎರಡು ಕವನಗಳು ನನಗೆ ವಿಶಿಷ್ಟವೆನಿಸಿದ್ದು. ನೋವಿನ ಘಳಿಗೆಯೊಂದು ನಗುವ ಅರಸುತಿದೆ ಎಂಬ ಕವನದಲ್ಲಿ ಎರಡು ಧರ್ಮಗಳ ಆತ್ಮೀಯತೆ, ಬಾಲ್ಯ ಕಳೆಯುತ್ತಿದ್ದಂತೆ ಬೇರೆಯಾಗುವ ಪರಿ, ಹುಡುಗಿ ಬೆಳೆದಂತೆ ಮಸೀದಿಗೆ ಪ್ರವೇಶವಿಲ್ಲ ಎಂದು ಸಾರುವ ಫಲಕ
ಆಗಲೇ ತಿಳಿದದ್ದು
ನನ್ನ ಫ್ರಾಕಿನ ಅಳತೆ ಬದಲಾಗಿದೆಯೆಂದು
ಎಂಬ ಮಾತು ಧ್ವನಿಪೂರ್ಣವಾಗಿದೆ ( ಈಗ ಮಹಿಳೆಯರಿಗೆ ಮಸೀದಿಯ ಪ್ರತ್ಯೇಕ ಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ ಆ ಮಾತು ಬೇರೆ) ಗ್ರಾಮೀಣ ಭಾಗದಲ್ಲಿ ಮೂಲಭೂತವಾದಿ ಸ್ತ್ರೀ ಸಮಾನತೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ `ಸತ್ಯ’ವನ್ನು ಒಂದು ಕಥನ ಕವನದ ಗುಣವುಳ್ಳ ಕವನದ ಮೂಲಕ ಬಿಂಬಿಸಿದ್ದಾರೆ. ಇಲ್ಲಿ ನನಗೆ ಮಲೆಯಾಳಿ ಕಥೆಗಾರ್ತಿ ಪಿ ವತ್ಸಲಾ ಅವರ ನಾನು ಅನುವಾದಿಸಿದ ಕಥೆ ನೆನಪಾಯಿತು. ಸ್ತ್ರೀ ಪರ ಹೋರಾಟದ ಕಥನಗಳು ಮುಗಿಯದು.
ಇದಲ್ಲದೆ ಪ್ರವಾಹದ ಅತಂತ್ರ ಬದುಕು, ಶ್ರಮಿಕರ, ರೈತರ ಕುರಿತು ಕಾಳಜಿಗಳು ಈ ಸಂಕಲನದಲ್ಲಿ ವ್ಯಕ್ತವಾಗಿವೆ.
ಭತ್ತ ಬೆಳೆಯುವ ಹೊತ್ತು
ರೈತನ ಹಸ್ತದಂಚಿನಲಿ
ಜನಿಸಿದ ಜಲ
ಒಟ್ಟಾರೆ ಅಕ್ಷತಾ ಅವರ ಈ ಕೃತಿ ಏಕಾಂತ ಲೋಕಾಂತವಾಗುವ ಪ್ರಕ್ರಿಯೆಯಲ್ಲಿರುವುದು ಸ್ವಾಗತಾರ್ಹವಾಗಿದೆ.
************************************************
ಡಾ.ಕಮಲಾಹೆಮ್ಮಿಗೆ

ಉತ್ತಮ ವಿಮರ್ಶೆ.