ಕವಿತೆ
ಮಣ್ಣು ,ಅನ್ನ ಮತ್ತು ಪ್ರಭು
ಬಿ.ಶ್ರೀನಿವಾಸ
ನೆಲಕೆ ಬಿದ್ದರೆ ಅನ್ನದಾತ
ದಂಗೆಯೇಳುತ್ತದೆ ಅನ್ನ
*
ಮಕ್ಕಳ ಮುಂದೆ ಅಪ್ಪ ಅಳಬಾರದು
ಅಪ್ಪನ ಮುಂದೆ ಮಕ್ಕಳು ಸಾಯಬಾರದು
ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು
ಸುಳ್ಳಾಯಿತು
ಲೋಕರೂಢಿಯ ಮಾತು.
*
ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳು
ನೆಲದ ಮೇಲಿರುವ ತನಕ
ಅದೇ ಮಣ್ಣಿನ ಮೃದು ಪಾದಗಳು
ನೆಲದಡಿಗೆ ಸೇರಿದವನ ಎದೆಯ ಮೇಲೆ
*
ಮಣ್ಣಿಗೂ
ಅಪ್ಪನಿಗೂ ಸಂಬಂಧ ಕೇಳುವಿರಿ ನೀವು
ಇದೆ
ಅಜ್ಜ-ಮೊಮ್ಮಗನ ಸಂಬಂಧ!
*
ಉಣ್ಣುವ ಅನ್ನದ ಕಣ್ಣು
ಎದುರಿಸಲಾಗದ ಕೊಲೆಗಾರ
ಹೇಡಿ
ಹೇಡಿಯೆಂದು ಕಿರುಚಾಡುತ್ತಾನೆ
*
ಕಳಚಿ ಬಿದ್ದಿವೆ
ಪದವಿಗಳು,ಪುರಸ್ಕಾರಗಳು
ಅಕ್ಷರಗಳು….ಬೀದಿಯ ತುಂಬಾ
ನಾನೀಗ
ಲೋಕದ ಸಾಲಿಯ ಪಾಲಿನ ಬೆತ್ತಲೆ ಅಪರಾಧಿ
*
ಮಾತು
ಮಾತು…ಬರೀ ಮಾತೂ
ಮಾತಾಡುತ್ತಲೇ ಇದ್ದಾನೆ ಪ್ರಭು
ದಯವಿಟ್ಟು ಯಾರಾದರೂ ಸುಮ್ಮನಿರಿಸಿ
ನಾವು ಉಸಿರಾಡಬೇಕಿದೆ.
*********************