ಹೊಸ ಹಿಗ್ಗು…..!!

ಕವಿತೆ

ಹೊಸ ಹಿಗ್ಗು…..!!

ಯಮುನಾ.ಕಂಬಾರ

Mountains, Lake, Reflection, Alps

ಎಲ್ಲಿಹುದು ಹೊಸ
ಹಿಗ್ಗು – ಕ್ಷಣ ನಾನು
ಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆ
ಬೆಳ್ಳಿ ಮೋಡದ
ಕಪ್ಪಿನಲ್ಲೋ …ಇಲ್ಲಾ
ಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ//

ನೀಲಿ ಆಗಸದ
ಎದೆ ತುಂಬಿ
ತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿ
ಅದೇ ಆ ಎಂದಿನ
ಕಲುಷಿತ ಹವೆ
ಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ//

ಋಷಿ ಮುನಿಯ
ತಪದಂತೆ ಏಕ
ವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳು
ಹೊಸ ಚಿಗುರು
ಹಸಿರೆಲೆಯು ಕಳೆ
ಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ//

ಹೊರಳುತಿವೆ ಹಗಲುಗಳು
ಸರಿಯುತಿವೆ ರಾತ್ರಿಗಳು
ಅಂಕೆ ಸಂಕಲೆಗಳಿಲ್ಲದೇ ನವಿರು ನವಿರಾಗಿ
ಗಡಿಯ ದಾಟಿದ
ಲೆಕ್ಕ ವಿಧಿ ಮಿಕ್ಕಿ ಹರಿಯುತಿದೆ
ಮೂಗಿನ ನೇರಕ್ಕೆ ಗುಣಕ ಚಿನ್ಹವ ಹಾಕಿ //ಪ//

ಅಧಿಕಾರ ಅಂತಸ್ತು
ಕೇಕೆ ಹಾಕಿವೆ ಇಲ್ಲಿ
ಭಾತೃತ್ವ ಸಹಕಾರ ಕೊಲೆಯ ಮಾಡಿ
ಸತ್ತ ಶವಗಳ
ಕಬ್ಬವಾಸನೆಯು ಎಲ್ಲೆಲ್ಲೂ
ಹೊಸ ಹಿಗ್ಗು ಎಲ್ಲಿಹುದು ಹುಡುಕುತಿರುವೆ. //ಪ್//

ಇದ್ದ ಮೂವರಲ್ಲಿ
ಕದ್ದವರು ಯಾರೆಂದು
ಹುಡುಕುವುದು ಕಷ್ಟವೇ….!!?? ಅಂತೂ ಒಗಟು
ಜಾಳಿಗೆ ಬಗರಿ
ಕೈಯಲ್ಲಿ ಇರಲು
ತಿರಗದೇನು…..??!! ಬುಗುರಿ ತಡವೇತಕೇ……!!!?? //ಪ//

ನಾನು ನಾನೇ ಎಂಬ
ನನ್ನ ಸುಖವೇ ಮೊದಲೆಂಬ
ವರ್ತುಳಗಳು ಸುತ್ತಿತ್ತಿರುವ ನಿತ್ಯ ಸಮಯ
ನನ್ನ ವರ್ತುಳ ಫರಿಧಿ
ಮತ್ತೊಂದ ವರ್ತುಳ
ಗಡಿಗೆ ಬದುಕ ಹಂಚಿಕೊಂಡ ಸತ್ಯ ಮರೆತಿಹೆವು ಇಂದು //ಪ//

ಅಂಗೈ ಹುಣ್ಣಿಗೆ
ಕನ್ನಡಿ ಏಕೆ..?
ಬಲ್ಲೆವಾದರೂ ನಾವು ಕೈ ನೋಡಲಾರೆವು
ಹೊಸ ಹೊಸ ಶಬ್ದ
ಹೊಸ ಹೊಸ ಕವಿತೆ
ಬರೆದೆವಾದರೂ ನಾವು ಓದಲಾರೆವು. //ಪ//

****************************************

One thought on “ಹೊಸ ಹಿಗ್ಗು…..!!

  1. ಕವಿತೆ ಚೆನ್ನಾಗಿದೆ ಮೇಡಂ… ಅಭಿನಂದನೆಗಳು

Leave a Reply

Back To Top