ಪುಸ್ತಕ ಸಂಗಾತಿ
ರಾಗವಿಲ್ಲದಿದ್ದರೂ ಸರಿ
ಕೃತಿ…..ರಾಗವಿಲ್ಲದಿದ್ದರೂ ಸರಿ ಗಜಲ್ ಸಂಕಲನ
ಲೇಖಕರು..ಉಮರ್ ದೇವರಮನಿ
ಪ್ರಕಾಶಕರು…….ಸಮದ್ ಪ್ರಕಾಶನ ಮಾನವಿ ಜಿ.ರಾಯಚೂರು *
ಉಮರ್ ದೇವರಮನಿ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಾನವಿ ನಗರದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸ ಕರಾಗಿದ್ದರೂ ಪ್ರವೃತ್ತಿಯಲ್ಲಿಸಾಹಿತಿಗಳಾಗಿದ್ದಾರೆ.ಮೂರು ವರ್ಷಗಳ ಹಿಂದೆ ಕಾವ್ಯ ಕಡಲು ವಾಟ್ಸಪ್ ಗುಂಪಿನಲ್ಲಿ ಪರಿಚಯ ವಾದವರು ,ಆಗಾಗ ಗುಂಪಿನಲ್ಲಿ ಉತ್ತಮವಾದ ಗಜಲ್ಗಳನ್ನು ಓದಲು ಹಾಕುತ್ತಿದ್ದರು.ಈಗ ಅವರು ತಮ್ಮ ಪ್ರಕಟಿತ ಮೊದಲ ಗಜಲ್ ಸಂಕಲನ *ರಾಗವಿಲ್ಲದಿದ್ದರೂ ಸರಿ * ಎಂಬ ಕೃತಿಯನ್ನು ಓದಲು ಕಳಿಸಿಕೊಟ್ಟಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರ, ಕನಾ೯ಟಕ ಸರಕಾರ ಯುವ ಬರಹಗಾರರ ಚೊಚ್ಚಲು ಕೃತಿ ಪ್ರಕಟಿಸಲು ಕೊಡುವ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಉಮರ್ ದೇವರಮನಿ ಯವರು ಮಿತ ಭಾಷಿ,ಸಂವೇದನಾಶೀಲ ಕವಿಯಾಗಿದ್ದಾರೆ. ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಅನೇಕ ಉದು೯ ಕವಿಗಳ ಉದು೯ ಗಜಲ್ ಗಳನ್ನು ಓದಿ ಆಳವಾಗಿ ಅದರ ಛಂದೋಬದ್ಧತೆ ಯನ್ನು ಗೇಯತೆ ಲಾಲಿತ್ಯ ತಿಳಿದುಕೊಂಡು ಕನ್ನಡ ಗಜಲ್ ಗಳ ಛಂದೋಬದ್ಧತೆ ಯನ್ನು ಅರಿತುಕೊಂಡು ಕನ್ನಡ ಗಜಲ್ಗಳನ್ನು ರಚಿಸಿ ಓದುಗರಿಗೆ ಉತ್ತಮವಾದ ಕನ್ನಡ ಗಜಲ್ ಗಳ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ಸಿದ್ದಾರೆ.
ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಕನ್ನಡ ಗಜಲ್ ಸಂಕಲನಕ್ಕೆ ಖ್ಯಾತ ಹಿರಿಯ ಕವಿಯತ್ರಿ,ಗಜಲ್ ಕಾತಿ೯,ವಿಮರ್ಶಕಿ ಚಿಂತಕಿ ಹಾಗೂ ಸಹೃದಯಿ ಗಳಾದ ಮೆಹಬೂಬ್ ಬೀ ಶೇಖ ಅವರು ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದಿದ್ದಾರೆ. ಮತ್ತು ಗಜಲ್ ಪರಂಪರೆ ಬಗ್ಗೆ ,ಗಜಲ್ಗಳಿಗೆ ಬಳಿಸುವ ಸಾಂಕೇತಿಕ ಭಾಷೆಯ ಬಗ್ಗೆ ,ರೂಪಕಗಳ ಬಗ್ಗೆ, ಹಾಗೂ ಉಮರ್ ದೇವರಮನಿಯವರ “ರಾಗವಿಲ್ಲದಿದ್ದರೂ ಸರಿ” ಸಂಕಲನದ ಬಗ್ಗೆ ವಿಮಶಾ೯ತ್ಮಕವಾಗಿ ವಿವರವಾಗಿ ಬರೆದಿದ್ದಾರೆ, ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆ.
ಸಂಕಲನಕ್ಕೆ ಬೆನ್ನುಡಿಯನ್ನು ಹಿರಿಯ ಸಾಹಿತಿಗಳಾದ ಕೇಶವ ಮಳಗಿ ಯವರು ವಿಮಶಾ೯ತ್ಮಕ ವಾದ ಬೆನ್ನುಡಿಯನ್ನು ಬರೆದು ದೇರವಮನಿ ಯವರ ಬೆನ್ನುತಟ್ಟಿದ್ದಾರೆ.
ಶ್ರೇಷ್ಠ ಗಜಲ್ ಕಾರರಾದ”ಅಲ್ಲಮ” ಗಿರೀಶ ಜಕಾಪುರೆ ಯವರು ದೇವರಮನಿಯವರು ತಮ್ಮ ಇಷ್ಟವಾದ ಗಜಲ್ ಕಾರರೆಂದು ಸಂವೇದನಾಶೀಲ ಕವಿ ಎಂದು ಉತ್ತಮ ಗಜಲ್ ಸಾಹಿತ್ಯದ ಗಂಭೀರ ಗಜಲ್ ಕೃಷಿಕರೆಂದು ಹೇಳಿದ್ದಾರೆ.
ಹಿರಿಯ ಗಜಲ್ ಕಾರರಾದ ಡಾ.ಗೋವಿಂದ ಹೆಗಡೆ ಯವರು ಉಮರ್ ದೇವರಮನಿ ಯವರು ಗಜಲ್ನ ನಾಡಿ ಮಿಡಿತವನ್ನು ಬಲ್ಲವರಾಗಿದ್ದಾರೆಂದು,ಇದು ಇವರ ಮೊದಲ ಸಂಕಲನವಾಗಿದ್ದರೂ ಗಜಲ್ ಲೋಕದ ಹೊಸ ವಿಸ್ತಾರಗಳನ್ನು ನಮಗೆ ಕಾಣುವಂತೆ ಗಜಲ್ ಗಳನ್ನು ರಚಿಸಿದ್ದಾರೆಂದು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ
ಜಬೀವುಲ್ಲಾ ಎಂ ಅಸದ್ ಅವರು ಗಜಲ್ ಕಾರರು ಹಾಗೂ ಚಿತ್ರಕಲಾವಿದರೂ ಆಗಿದ್ದು ಈ ಸಂಕಲನದ ಎಲ್ಲಾ ಗಜಲ್ ಗಳಿಗೆ ಅರ್ಥ ಪೂರ್ಣವಾದ ಸುಂದರ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆ, ಹಾಗೂ ಕೃತಿಯಲ್ಲಿ ಬೆರಗು ಹುಟ್ಟಿಸುವ ರೂಪಕಗಳು ,ಪರವಶಗೊಳಿಸುವ ಪ್ರತಿಮೆಗಳು ದಿವ್ಯ ಪ್ರಭೆಯ ಮೂಲಕ ಓದುಗನ ಮೈ ಮನಸ್ಸು ಗಳನ್ನು ಆವರಿಸಿ ದೈವಿಕ ಸಾಕ್ಷಾತ್ಕರವನ್ನು ಈ ಗಜಲ್ ಗಳು ಪ್ರಸಾದಿಸುತ್ತವೆಂದು,ತಮ್ಮ ಅನಿಸಿಕೆಯಲ್ಲಿ ಬರೆದಿದ್ದಾರೆ.
ಸಂಕಲನದ ಮುಖ ಪುಟವನ್ನು ರಟ್ಟಿಹಳ್ಳಿ ರಾಘವಾಂಕುರ ಅವರು ಸೊಗಸಾಗಿ ಸಿದ್ದ ಪಡಿಸಿದ್ದಾರೆ.
ಉಮರ್ ದೇವರಮನಿ ಯವರ ವ್ಯಾಖ್ಯಾನ ದಲ್ಲಿ ಗಜಲ್ ಎಂದರೆ “ಆತ್ಮದೊಂದಗಿನ ಸಂವಾದ ,ಅದು ನನಗೆ ದಕ್ಕಿದ್ದಲ್ಲ ನನ್ನಾತ್ಮಕ್ಕೆ ದಕ್ಕಿದ್ದು,ಏಕಾಂತದಲ್ಲಿ ಪ್ರಾಥಿ೯ಸಿದ್ದು,ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳೊಂದಿಗಿನ ನನ್ನ ಅಂತರಂಗದ ಮನುಷ್ಯತ್ವದ ನೋವಿನ ಪಿಸುನುಡಿಯ ರಾಗ” ಎಂದು ಹೇಳಿದ್ದಾರೆ. ಉಮರ್ ದೇವರಮನಿ ಯವರು ಕೇವಲ ಪ್ರೀತಿ ,ಪ್ರೇಮ,ವಿರಹ,ಗಳಿಗೆ ಮಾತ್ರ ಗಜಲ್ ಗಳನ್ನು ರಚಿಸದೆ ಸಮುದಾಯ ಎದುರಿಸುತ್ತಿರುವ ತಲ್ಲಣಗಳು ಹಾಗೂ ಅವಮಾನಗಳನ್ನು ಮೂಕನಾಗಿ ನೋಡೂತ್ತಾ ಧಿಗ್ಬ್ರಾಂತಿ ಗೊಳಗಾಗಿ ಅವುಗಳಿಗೆ ಸ್ವಂದಿಸಿ ಗಜಲ್ಗಳನ್ನು ರಚಿಸಿದ್ದಾರೆ.
ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಎಂಬ ಕನ್ನಡ ಗಜಲ್ ಸಂಕಲನದಲ್ಲಿ ಒಟ್ಟು ೫೩ ಗಜಲ್ಗಳಿದ್ದು ಪ್ರತಿಗಜಲ್ ಗಳಿಗೆ ಶೀರ್ಷಿಕೆ ಯನ್ನು ಕೊಟ್ಟಿದ್ದಾರೆ ಮತ್ತು ಭಾವಕ್ಕೆ ತಕ್ಕಂತೆ ಕಲಾಕಾರರಿಂದ ಚಿತ್ರಗಳನ್ನು ತೆಗೆದಸಿದ್ದಾರೆ.ಸಂಕಲನದ ಗಜಲ್ಗಳನ್ನು ಓದುತ್ತಾ ಹೋದಂತೆ ಗಜಲ್ ಗಳಿಗೆ ಬೇಕಾಗುವ ಭಾವತೀವ್ರತೆ,ರೂಪಕಗಳು,ಪ್ರತೀಕಗಳನ್ನು ಬಳಿಸಿ ಗಜಲ್ ರಚಿಸಿದ್ದಾರೆ.ಗಜಲ್ದ ಮಿಸ್ರಾ ಗಳು ಉದ್ದವಿರದೆ(ಚೋಟಿ ಬೆಹರ್)ಕಡಿಮೆ ಶಬ್ದ ಗಳಲ್ಲಿ ಹೆಚ್ಚಿನ ಭಾವತುಂಬಿದ್ದಾರೆ.ಈ ಸಂಕಲನದಲ್ಲಿ ಹೆಚ್ಚಿಗೆ ಗಮನಕ್ಕೆ ಬರುವ ಅಂಶವೆಂದರೆ ಬಹುತೇಕ ಗಜಲ್ ಗಳು ಸಮಾಜಮುಖಿಯಾಗಿವೆ.ಕವಿಯು ಸಮಾಜದ ದುಃಖವನ್ನು ತನ್ನದಾಗಿಸಿಕೊಂಡು ನೊಂದು ಗಜಲ್ ಮೂಲಕ ಸಾಂತ್ವನ ಹೇಳುತ್ತಾ ಮುಲಾಮ ಹಚ್ಚ ಬಯಸಿದ್ದಾರೆ.ವಿಶ್ವವೇ ಕುಟುಂಬ ಎಂಬಂತೆ ಕವಿಯು ವಿಶ್ವದ ನೋವಿಗೆ ನೊಂದು ಮನುಕುಲ ಉಧ್ಧಾರದ ಆಶಯವನ್ನು ಎತ್ತಿ ಹಿಡಿದಿದ್ದಾರೆ.ಗಜಲ್ ಕಾರರಿಗೆ ಇರಬೇಕಾದ ಧ್ಯಾನಸ್ಥ ಮನದಿಂದ ತನ್ನಾತ್ಮದೊಂದಿಗೆ ಸಂವಾದಿಸಿ ಗಜಲ್ ಗಳನ್ನು ರಚಿಸಿದ್ದಾರೆ.
ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ ” ಎಂಬ ಗಜಲ್ ಸಂಕಲನದಲ್ಲಿ ಮುರದ್ದಫ್,ಗೈರಮುರದ್ದಫ್, ಮುಸಲ್ ಸಲ್, ಗೈರ್ ಮುಸಲ್ ಸಲ್ ,ಆಜಾದ್ ಗಜಲ್ ,ಮತ್ತು ರಾಜಕೀಯ ಗಜಲ್ ಗಳನ್ನು ಓದಬಹುದು.ಕೆಲವು ಗಜಲ್ಗಳು ಛಂದೋಬದ್ಧ ವಾಗಿದ್ದರೆ ಇನ್ನೂ ಕೆಲವು ಮುಕ್ತ ಛಂದಸ್ಸು ಗಳಾಗಿರುವುದರಿಂದ ದೇವರಮನಿ ಯವರು ತಮ್ಮ ಸಂಕಲನಕ್ಕೆ “ರಾಗವಿಲ್ಲದಿದ್ದರೂ ಸರಿ” ಎಂಬ ಶೀರ್ಷಿಕೆಯನ್ನು ಸಂಕಲನಕ್ಕೆ ಇಟ್ಟಂತೆ ಅನಿಸುತ್ತದೆ ಕೆಲವು ಗಜಲ್ ಗಳಲ್ಲಿ ಬಳಿಸಿದ ರೂಪಕಗಳು ವಚನ ಸಾಹಿತ್ಯ, ತತ್ವಪದಗಳ ಸಾಹಿತ್ಯ, ನುಡಿಗಟ್ಟುಗಳನ್ನು ಬಳಿಸಿದ್ದು ಕಂಡುಬರುತ್ತದೆ.ಮತ್ತು ಕೆಲವು ಗಜಲ್ ಗಳನ್ನು ಓದಿದಾಗ ಗಾಲಿಬ್ ಅವರ ಗಜಲ್ಗಳ ಛಾಯೆ ಬಿದ್ದಂತೆ ಭಾಸವಾಗುತ್ತದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಸಂಕಲನವು ಪ್ರೌಢತೆಯಿಂದ ಕೂಡಿದ್ದು ಯುವ ಗಜಲ್ ಕಾರರಿಗೆ ಮಾರ್ಗದರ್ಶನ ಮಾಡುವಂತಹ ಕೃತಿಯಾಗಿದೆ.
*ನನ್ನ ಹೃದಯ ದಲ್ಲಿ ನೆಲೆಸಿದ ಮತ್ತು ಅನುರಾಗದ ಅಲೆಯನ್ನು ಎಬ್ಬಿಸಿದ ಕೆಲವು ಗಜಲ್ ಗಳ ಮಿಸ್ರಾ ಗಳನ್ನು ಇಲ್ಲಿ ಸಾದರ ಪಡಿಸಲು ಇಚ್ಛಿಸುವೆ *
“ಪ್ರೀತಿಯ ಮೈಖಾನೆಯಲಿ ಅಪರಿಚಿತರು ಇರುವುದಿಲ್ಲ
ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ”
“ಕಲ್ಲು ಹೃದಯ ಗಳ ಮೇಲೆ ಹೂವು ಅರಳುವುದಿಲ್ಲ
ನೀ ಪ್ರೀತಿಯ ಹನಿಯಾಗಬೇಕು ನನ್ನ ಈ ನೆಲಕೆ”
“
ಚಿಗುರೊಡೆಯಬೇಕು ನಿನ್ನ ಎದೆಗೆ ಬಿದ್ದ ಬೀಜ
ಹೇಗೆ ಉಸಿರಾಡುವುದು ಮೊಳಕೆ ಒಲವು ಮಣ್ಣಾಗು”
“ಮೌನ ಮುರಿದು ಮಾತನಾಡಬೇಕಿದೆ”ಉಮರ್”
ಮೂಕ ಮಗುವಿಗೆ ಎಂದು ಹಾಲು ಸಿಗಲೇ ಇಲ್ಲ”
“ಮುಲ್ಲಾ ನೀನು ಕರೆಯಲಿಲ್ಲ ನಾ ಅಲ್ಲಾಹನಿಗಾಗಿ ಬರಲೇ ಇಲ್ಲ
ಮಸೀದಿಯೇನೋ ಕಟ್ಟಿಸಿದೆ ನಮಾಜು ಅಲ್ಲಿ ಮಾಡಲೇ ಇಲ್ಲ”
“ಮುಖ ಸ್ವಚ್ಛ ವಾಗುವುದಿಲ್ಲ ಕನ್ನಡಿಯನ್ನೆಷ್ಟೇ ಉಜ್ಜುತಿರು
ನಿನ್ನ ಬಾಗಿಲು ತೆರೆಯುವುದಿಲ್ಲ ಬೇರೆ ಕದ ಎಷ್ಟೇ ತಟ್ಟುತಿರು”
“ಎಲ್ಲರು ತಲೆದೂಗುತಿದ್ದಾರೆ ವಿರಹದ ಗೀತೆ ಕೇಳಿ
ನೋವುಂಡ ಗಾಯ ಪ್ರೀತಿಯನು ಬೇಡುತಿದೆ”
“ಬುದ್ಧ ಬಸವ ಏಸು ಪೈಗಂಬರರೇ ನೀವೆ ಕೇಳಿ
ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ”
“ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲ
ತುಕ್ಕು ಹಿಡಿದ ಕಬ್ಬಿಣ ಎಂದೂ ತೂತು ಮುಚ್ಚುವುದಿಲ್ಲ”
“ಇನ್ನೂ ಉಸಿರಾಡುವ ಹೆಣಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ
ಬಿಕ್ಕಳಿಸಿತಿರುವ ಪ್ರಜೆಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ”
“ರೊಟ್ಟಿ ಕೇಳಿದರೆ ಹೇಸಿಗೆ ತಿನ್ನುಎನುವವರೆ ಹೆಚ್ಚು
ಒಂದು ರೂಪಾಯಿ ಇವರಿಂದ ಕೊಡಲಾಗಲಿಲ್ಲ ಆನಂದ”
“ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ ” ಉಮರ್”
ದ್ವೇಷವಾರಿಸಲು ಪ್ರೀತಿಯ ಒರತೆ ತೋಡಿಸುವುದಾದರೆ ತೋಡಿಸು”
“ನಿನ್ನ ಹೂದೋಟದಲಿ ಹಾರಾಡುವ ಮರಿದುಂಬಿ ನಾ
ಭರವಸೆಯ ಹೂ ಅರಳಿದಾಗಲೆಲ್ಲಾ ಹಗುರವಾಗುತ್ತೇನೆ”
ಉಮರ್ ದೇವರಮನಿ ಯವರು “ಉಮರ್” ಎಂಬ ತಖಲ್ಲುಸ್ (ಕಾವ್ಯನಾಮ) ವಾಗಿಟ್ಟುಕೊಂಡು ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ.ಈ ತಖಲ್ಲುಸ್ ಓದಿದಾಗ ವಿಶ್ವ ಕಂಡ ಮಹಾನ್ ಕವಿ “ಉಮರ್ ಖೈಯಾಮ್” ನೆನಪಾಗುತ್ತಾರೆ.ಉಮರ್ ದೇವರಮನಿ ಯವರ ಗಜಲ್ ರಚನೆ ಸರಳವಾಗಿ ,ವಾಸ್ತವವಾಗಿ, ಶಬ್ದ ಗಳ ಮಿತ ಬಳಿಕೆಯಲ್ಲಿ ಸಂವೇದನಾಶೀಲವಾದ ಭಾವ ತೀವ್ರತೆಯನ್ನು ತುಂಬಿದ್ದಾರೆ.ಗಜಲ್ ಒಂದು ಹಾಡುಗಬ್ಬ ವೆಂದು ಅವರು ಅರಿತಿದ್ದಾರೆ.ಪ್ರೀತಿ, ಪ್ರೇಮ ವಿರಹ , ವೈರಾಗ್ಯ, ಸಮಾನತೆ ,ಸ್ವಾತಂತ್ರ, ಶಾಂತಿ ಹೀಗೆ ಎಲ್ಲಾ ವಿಷಯಗಳಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ,ಲೌಕಿಕದಿಂದ ಅಲೌಕಿಕ ಕಡೆ ಕೊಂಡೊಯ್ಯತ್ತಾರೆ ಉಮರ್ ದೇವರಮನಿಯವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಓದುಗರಿಗೆ ತೃಪ್ತಿ ಪಡಿಸುತ್ತಾರೆಂಬ ಭರವಸೆಯ ಗಜಲ್ ಕಾರರಾಗಿದ್ದಾರೆ.ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಇವರಿಂದ ಅನೇಕ ಗಜಲ್ ಕೃತಿಗಳು ಬರಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆನು.
*****************************************************
ಪ್ರಭಾವತಿ ಎಸ್ ದೇಸಾಯಿ
ಚೆಂದ ವಿಶ್ಲೇಷಣೆ ಮೇಡಂ.
– ಮಹಿಪಾಲರೆಡ್ಡಿ
ಉಮರ್ ದೇವರಮನಿ ರವರ ರಾಗವಿಲ್ಲದಿದ್ದರೂ ಸರಿ… ಗಝಲ್ ಸಂಕಲನದ ಶಿಸ್ತುಬದ್ಧ ನಿರೂಪಣೆ, ವಸ್ತುನಿಷ್ಠ ವಿಮರ್ಶೆಯನ್ನೊಳಗೊಂಡ ಅದ್ಭೂತ ಅವಲೋಕನ ಪ್ರಭಾವತಿ ದೇಸಾಯಿ ಮೇಡಮ್ ಜಿ ರವರ ಓದುವ ಆಸಕ್ತಿ, ಸೂಕ್ಷ್ಮ ಗ್ರಹಿಕೆ ಹಾಗೂ ಚಿಂತನೆಗೆ ಸಾಕ್ಷಿಯಾಗಿದೆ.
ಅರ್ಥ ಪೂರ್ಣ ಅವಲೋಕನ .