ಯುಗಾದಿ ವಿಶೇಷ ಬರಹ

ಕಹಿ ಜಾಸ್ತಿ ತಿಂದ್ರೆ ವರ್ಷ ಪೂರ್ತಿ ಸಿಹಿಯಂತೆ

 ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ವರ್ಷದ ಆರಂಭ ಯುಗಾದಿ.

ಸಂವತ್ಸರವೊಂದು ಮುಗಿದು ಮತ್ತೊಂದು ಸಂವತ್ಸರಕ್ಕೆ ಕಾಲಿಡುವ ಸಮಯ

ಅರವತ್ತು ಸಂವತ್ಸರಗಳ  ಈ ಚಕ್ರದಲ್ಲಿ ಈಗ ನಾವು ೩೫ ರ ಪ್ಲವ ನಾಮ ಸಂವತ್ಸರದಲ್ಲಿ ಇದ್ದೇವೆ.

ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಬಂದಮೇಲೆ ತಿಥಿ ನಕ್ಷತ್ರ ಸಂವತ್ಸರಗಳ ಲೆಕ್ಕಾಚಾರ ಅಷ್ಟಾಗಿ ನಮ್ಮ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿಲ್ಲ.

 ಅದರಲ್ಲಿ ಯುಗಾದಿಯ ಆಚರಣೆ ಸ್ವಲ್ಪ ಮುಂಚೂಣಿಯಲ್ಲಿದೆ ಅನ್ನಬಹುದೇನೋ.

ಯಾಕೆಂದರೆ ನಾವು ಹೊಸವರ್ಷವನ್ನು ಡಿಸೇಂಬರ್ 31ರಂದು ಸಂಪದ್ಭರಿತವಾಗಿ ಆಚರಿಸುತ್ತೇವೆ.

 ಅದೇನೇ ಇದ್ದರೂ ವಾಸ್ತವದ ಲೆಕ್ಕಾಚಾರ ಕಾಲಮಾನ ಬದಲಾಗಲಾರದು.

ಹೂ ಹೀಚು ಹಣ್ಣುಗಳಿಂದ

 ಪ್ರಕೃತಿ ಹೊಸ ಹೊಸ ಬಗೆಯ ಉಡುಗೆ ತೊಟ್ಟು ಸಂಭ್ರಮಿಸುವ ಕಾಲ ಈಗಲೇ.

ಇಯರ್ ಎಂಡ್ ಅಂತ ಈಗಲೂ ಲೆಕ್ಕಾಚಾರ ಮಾರ್ಚ್ ತಿಂಗಳನ್ನೇ ಹೇಳೋದು.

ಯುಗಾದಿಯ ನಂತರ ವಿಪರೀತವಾಗುವ ತಾಪಮಾನ.

 ಹಲವಾರು ರೋಗ ರುಜಿನಗಳನ್ನು ತರುತ್ತದೆ. ನೂರಕ್ಕೂ ಹೆಚ್ಚು ಔಷಧೀಯ ಗುಣವಿರುವ ಬೇವು, ಇದರ ಸೇವನೆಯಿಂದ,

ಬರುವ ರೋಗಗಳನ್ನು ತಡೆಗಟ್ಟಬಹುದು.

ಮತ್ತು ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ

ಜೊತೆಗೆ ಬೆಲ್ಲವನ್ನೂ ತಿನ್ನುವ  ವೈಜ್ಞಾನಿಕ ಕಾರಣವೂ ನಮಗಿಲ್ಲಿ ಸಿಗುತ್ತದೆ.

ಈಗಲೂ ಹಳ್ಳಿಗಳಲ್ಲಿ ಬೆಲ್ಲ ತಿಂದು ನೀರು ಕುಡಿಯುವ ಪದ್ಧತಿ ಇದೆ.

 ಮಲೆನಾಡಿನ  ಜೋರು ಮಳೆಗೆ ಜೀವ ಉಳಿಸಿಕೊಳ್ಳಲು ಹೆಣಗಾಡುವ ಬೇವಿನಗಿಡ ಅಪರೂಪದ ಅತಿಥಿ. ಹಬ್ಬದ ಮುಂಚಿನ ದಿನವೇ ಯಾರ ಮನೆಯಲ್ಲಿ ಬೇವಿನ ಗಿಡವಿದೆ ಎನ್ನುವ ತಲಾಷ್. ಕಣ್ಣು ಉಜ್ಜುತ್ತಲೇ ಬೇವಿನ ಎಲೆ ಕಿತ್ತು ತರುವ ಕಾಯಕ. ಹೆಚ್ಚು ಎಲೆ ತಂದರೆ ಹೆಚ್ಚು ತಿನ್ನಿಸುತ್ತಾಳೆ ಅಮ್ಮ ಎಂದು ಚೂರೇಚೂರು ಹಿಡಿದು ಬರುವ ಹುಷಾರಿತನ.

 ಇದೇನು ಇಷ್ಟು ಹನಿ ಇನ್ನೂ ಬೇಕು ಎನ್ನುವ ಅಮ್ಮ ಮತ್ತೆ ತರುವ ವರೆಗೂ ಬಿಡ್ತಿರಲಿಲ್ಲ.

 ಅಮ್ಮ ಅದೆಷ್ಟು ಕಹಿ ತಿನ್ನಿಸುತ್ತಾಳೋ ಇಂದು

 ಎಂದು ನಮ್ಮ ನಮ್ಮೊಳಗೆ ಚರ್ಚೆ ಹೇಗೆ ತಪ್ಪಿಸಿಕೊಳ್ಳುವದೆಂದು.

 ಎಲ್ಲಾ ಹಬ್ಬಗಳಲ್ಲೂ ಸಂಭ್ರಮ ಸೂಸುವ ಮುಖದಲ್ಲಿ ಆವತ್ತು ಸ್ವಲ್ಪ ಮಂಕು.

ತುಪ್ಪದಲ್ಲಿ ಹುರಿದು ಜೊತೆಗಿಷ್ಟು ಬೆಲ್ಲ ಇಟ್ಟು ದೇವರಿಗೆ ಕೈಮುಗಿದು ತಿನ್ನಿ ಎನ್ನುತಿದ್ದಳು.

 ಈ ದಿನ ಕಹಿ ಜಾಸ್ತಿ ತಿಂದವರಿಗೆ  ಬದುಕಿನಲ್ಲಿ ಸಿಹಿ ಜಾಸ್ತಿ ಎನ್ನುವ ಅಮ್ಮನ ನುಡಿಗಟ್ಟಿಗೆ ಹೆದರಿ ತಟ್ಟೆಯಲ್ಲಿದ್ದ ಬೇವಿನ ಎಲೆಗಳೆಲ್ಲ ಖಾಲಿ.

ಕಿವುಚಿದ ಮುಖದಲ್ಲಿ ಪೆಚ್ಚು ನಗು.

ಅಪ್ಪ ಪೂಜೆಗೆ ಇಟ್ಟ ಪಂಚಾಂಗ ತೆಗೆದು ತಿಥಿ, ವಾರ,ನಕ್ಷತ್ರ,ವಾರ್ಷಿಕ ಹಬ್ಬಗಳನ್ನು ಓದುತ್ತಿದ್ದರು. ಆಗಲೇ ನಮಗೆ ವರ್ಷ ಭವಿಷ್ಯ ಓದಲು ಕಾತರ.

 ಯಾರು ಮೊದಲು ಓದುವುದು

 ಪೂರ್ಣ ವರ್ಷದ ಭವಿಷ್ಯವೀಗ ನಮ್ಮ ಕೈಯೊಳಗೆ ಇದೆ ಎನ್ನುವ  ಕೆಟ್ಟ ಕುತೂಹಲ.

ಮತ್ತೆ ತಿಳಿದು ಕೊಳ್ಳುವ ಗಡಿಬಿಡಿ.

 ಯಾರಾದರೂ ಒಬ್ಬರು ಎಲ್ಲರ ಭವಿಷ್ಯವನ್ನು ದೊಡ್ಡದಾಗಿ ಓದಬೇಕು ಎನ್ನುವಲ್ಲಿಗೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ.

ಅಪ್ಪನ ರಾಶಿಯಿಂದ ಶುರುವಾದ ಭವಿಷ್ಯ

ಸುಮಾರು ಒಂದು ತಾಸುಗಳ ಕಾಲ ನಡೆಯುವ ಈ ಪ್ರಕ್ರಿಯೆಯಲ್ಲಿ ಇಡೀ ವರ್ಷದ ಬದುಕೇ ಕಣ್ಮುಂದೆ ನಿಂತು ಕುಣಿದ ಭಾವ.

ಗೊತ್ತಿದ್ದವರದ್ದೆಲ್ಲ ಓದಿ ಎಲ್ಲರ ಹಣೆಬರಹ ಬಲ್ಲವರಂತೆ ಪೋಸು.

ಕಲಹ,ಪ್ರೀತಿ, ಸಂತಾನ ಭಾಗ್ಯ,ಕಂಕಣ ಭಾಗ್ಯ, ಧನಹಾನಿ,ಮಾನ ಹಾನಿ.

ಇದನ್ನೆಲ್ಲಾ ಪರಿಹರಿಸಲು ಸರಿದೂಗಿಸಲು ಅಲ್ಲೊಂದು ಸಣ್ಣ ತಯಾರಿ.

 ಒಂದಕ್ಕೊಂದು ತಾಳೆಯಾಗದ ಭವಿಷ್ಯ ಫಲಕ್ಕೆ

ಚಿಂತಿತ ಮನಸು,ಮುಸಿ ಮುಸಿ ನಗು.

 ಒಟ್ಟಿನಲ್ಲಿ ಈ ವರ್ಷ ಮಿಶ್ರಫಲ ಎಂದಾಗ ಒಂತರ ಮಿಶ್ರಭಾವ.

 ವರ್ಷಾರಂಭದ ವಾಸ್ತವ ಮತ್ತು ಕಲ್ಪನೆಗಳ ಬದುಕಿಗೆ,

ಅಮ್ಮನ ಅಡುಗೆಯ ಹೋಳಿಗೆ ಸಿಹಿಯೊಡನೆ ಸಣ್ಣ ಆರಂಭ.

 ಅಳು ನಗು ಕಿತ್ತಾಟ ಪ್ರೀತಿ ಇಂದು ನೀವು ಏನೇ ಮಾಡಿದರೂ  ವರ್ಷ ಪೂರ್ತಿ ಅದೇ ಇರುತ್ತೆ ನಿಮ್ ಪಾಲಿಗೆ ಎನ್ನುವ ವಾರ್ನಿಂಗ್ ಗೆ ಎಲ್ಲ ಮರೆತ ಭರಪೂರ ಪ್ರೀತಿ.

 ಹಬ್ಬಗಳು ಯಾವುದೇ ಇರಲಿ ಆರೋಗ್ಯ,ಪ್ರೀತಿ, ನಿಷ್ಠೆ,ನಂಬಿಕೆಗಳ ಜೊತೆಗೆ ಬಂಧಗಳ ಬೆಸೆಯುವುದೇ ಎಲ್ಲ ಹಬ್ಬದ ಉದ್ದೇಶ ಎನ್ನುವುದು ನಾವು ಅರಿಯಬೇಕಾದ ಸತ್ಯ.

ಯೇ ಕಹಿ ಜಾಸ್ತಿ ತಿನ್ನು ಇಲ್ಲ ಅಂದ್ರೆ ಬದುಕು ಸಿಹಿಯಾಗಿ ಇರಲ್ಲ ಅನ್ನೋದನ್ನ ಮಗನಿಗೆ ಹೇಳೋದನ್ನ ಮರೆತಿಲ್ಲ ನಾನು

ಯಾಕೆಂದ್ರೆ ನಂಬಿಕೆಯೇ ಬದುಕು.

**************************************

ಸ್ಮಿತಾ ಭಟ್

5 thoughts on “

  1. ನಿಜ.ನಂಬಿಕೆಯೇ ಬದುಕು.ಚೆನ್ನಾಗಿದೆ ಸ್ಮಿತಾ

Leave a Reply

Back To Top