ಕವಿತೆ
ಸಿಲುಕಬಾರದು
ಸುಜಾತ ಲಕ್ಷ್ಮೀಪುರ
ಕಡುಬೀಸುಗತ್ತಿಗೆ ತಲೆಯೊಡ್ಡಿಯೂ ಉಳಿದುಬಿಡಬಹುದೇನೋ ಸಂಶಯದ ಅಗ್ನಿಪರ್ವತದ ಸುಳಿಗೆ ಸಿಲುಕಬಾರದು.
ಕಠೋರ ಹಾಲಾಹಲ ಕುಡಿದೂ ಬದುಕಿಬಿಡಬಹುದೇನೋ
ಅಪನಂಬಿಕೆಯ ಅಲಗಿನ
ಬಾಯಿಗೆ ತುತ್ತಾಗಬಾರದು.
ಮೋಸ ವಂಚನೆಯ ದಾರಿಯನೂ ತೊರೆಬಿಡಬಹುದೇನೋ
ಅರಿತರಿತು ನೋವೀವ ಪ್ರೀತಿ ಸ್ನೇಹದ ಬಲೆಗೆ ಬೀಳಬಾರದು.
ಹಣ ಕೀರ್ತಿ ಆಸೆ ದುರಾಸೆಯನೂ ಕೊಡವಿಬಿಡಬಹುದೇನೋ
ರಾಗ ಅನುರಾಗದ ಸರಪಣಿಯ
ಕುಣಿಕೆಗೆ ಕೈನೀಡಬಾರದು.
ದುಡಿದು ಕಾಯಸವೆಸಿ ಕಾಲವನೂ ದೂಡಿಬಿಡಬಹುದೇನೋ
ನೆನಪುಗಳ ಅಬ್ಬರದ ಅಲೆಗಳ
ಒಳಗೆ ನುಸುಳಿಕೊಳ್ಳಬಾರದು
ದೂರೀಕರಿಸಿ ತುಚ್ಛೀಕರಿಸಿಯೂ ಬಾಳಿಬಿಡಬಹುದೇನೋ
ಒಳಗೊಳಗೆ ಆರಾಧಿಸಿ ಪೂಜಿಸುತ
ಪ್ರೇಮಕೆ ಖೈದಿಯಾಗಬಾರದು.
********************************
ತುಂಬಾ ಚೆನ್ನಾಗಿ ಬರೆದಿದ್ದೀರ