ಕವಿತೆ
ಅರಣ್ಯ ರೋಧನ
ಗಂಗಾಧರ ಬಿ ಎಲ್ ನಿಟ್ಟೂರ್
ಪಾಳು ಭೂಮಿಯೊಳು ನಿಂತು
ಫಸಲಿಗೆ ಆಸೆ ಪಡುತ
ತಮ್ಮ ಸೊಂಡಿಲ ಮುಸುರೆ ತಾವೇ ಕುಡಿಯುತ
ಕರೆದರೂ ಕರ್ಮಕೆ ಬಾರದೆ
ಊಟದ ತಕರಾರು ತೆಗೆದು
ಪಂಕ್ತಿ ಭೋಜನ ಬಯಸಿದರೆ
ಕರೆದು ಮಣೆ ಹಾಕಿ
ಭೂರೀ ಭೋಜನ ಬಡಿಸಿ
ಕಿರೀಟವಿಟ್ಟು ಮೆರೆಸುವರೆ ಮಂದಿ
ಭದ್ರ ಕೋಟೆ ತಮದೆಂಬ
ಭ್ರಮೆಯೊಳು ಮುಳುಗಿ
ತಾವೂ ಶೂರ ಧೀರರು
ತಮಗೂ ಪಟ್ಟಗಟ್ಟಿರೆಂದು
ಬೊಬ್ಬೆ ಹೊಡೆವ
ಸ್ವಘೋಷಿತ ಬುದ್ಧಿಜೀವಿಗಳ
ಸೊಲ್ಲೆಂದಿಗೂ ಅರಣ್ಯರೋದನ
ಆಟಾಳು ಮೋಟಾಳು ಕಟ್ಟಾಳು
ಬಿಟ್ಟಾಳುವ ಜಟ್ಟಿಗರಿಗಂಜಿ
ಬಾಣ ಹೂಡಿ ಬತ್ತಳಿಕೆ ಬೀಸದೆ
ತಂತ್ರ ಕುತಂತ್ರಕೆ ರಣವೀಳ್ಯವೀಯದೆ
ರಣಾಂಗಣವನೆಂದೂ ಮೆಟ್ಟದೆ
ಸುಲಭ ಜಯ ಬಯಸಿದವರಿಗಾವ ಹಕ್ಕು
ಗುಳ್ಳೆನರಿ ಬುದ್ಧಿ ತ್ಯಜಿಸದೆ
ಹಮ್ಮು ಬಿಮ್ಮಿನ ಪದ ತ್ಯಾಗ ಮಾಡದೆ
ನಾಡಿನೇಳ್ಗೆಯ ಕೈಂಕರ್ಯಕೆ ಮೈಗೊಳದೆ
ಸೋಲು ಗೆಲುವಿಗೆ ಎದೆಗೊಡದೆ
ಜನಮನವಾದರೂ ಸೂರೆಗೊಳದೆ
ಮೋಡದ ಮರೆಯ ನುಡಿ ವೀರರಾಗಿ
ಪುಕ್ಕಟೆ ಪಾರುಪತ್ಯಕೆ ತವಕಿಸಿ
ಹತಾಶೆ ನಿರಾಸೆಯ ಸೋಗಿನಲಿ
ಸಂಧಿ ಗೊಂದಿಯಲಿ ಸೆಡ್ಡು ಹೊಡೆದು
ತೊಡೆ ಮುರಿದುಕೊಳುವ ಸಡ್ಡಾಳಿಗೆ
ಪರಮವೀರ ಚಕ್ರದ ಹಗಲುಗನಸೇ
ಅಹಮಿಕೆಯ ಕೋಟೆಯಲಿ ಜಗವೇ ಬಂಧಿ
ಮೈ ಕೊಡವಿ ನಿಲ್ಲದವಗ್ಯಾಕೆ ನಾಕಾಬಂಧಿ
********************************************
ಸಂಗಾತಿಗೆ ಧನ್ಯವಾದ …
ಆಹಾ, ಎಷ್ಟು ಚೆನ್ನಾಗಿ ಹೊಡೆದಿರುವಿರಿ…ಸೂಪರ್