ಕವಿತೆ
ನಾವಿಲ್ಲದಿದ್ದರೂ
ಅರುಣಕುಮಾರ ಹಬ್ಬು
ಮುದುಡಿದೇಕೀ ಮನ ನಲ್ಲೆ
ಹಾಲು ಗಲ್ಲದಲಿ ನೆರಿಗೆ ಕಂಡಿತೇ
ಬೇಸರಿಸದಿರು ನಾನಿಲ್ಲವೇ ನಿನ್ನ ಜತೆ
ನನ್ನ ಮೊಗವ ನೋಡೊಂದು ಬಾರಿ
ಅಲ್ಲಿಯೂ ಕಾಣದೇ ಸುಕ್ಕು
ನಲಿವಿಲ್ಲವೇ ತುಟಿಯಲಿ
ನೆನಪಿಸು ಒಂದು ಬಾರಿ ನಾ ಸವರಿಲ್ಲವೇ
ನಿನ್ನ ನವಿರಾದ ಮೃದು ಗಲ್ಲವ
ಎಷ್ಟೊಂದು ನಗು ತುಂಬಿತ್ತು ಮುಗುದೆ ನಿನ್ನಲಿ
ಬಾಳ ಉಯ್ಯಾಲೆಯಲಿ ಜೀಕುತ್ತ
ನಲಿ ನಲಿದು ಕುಣಿದು ಕುಪ್ಪಳಿಸಿದ
ಭಾವ ಕ್ಷಣಗಳ ಸ್ಮರಿಸಿ ಮುದಗೊಳ್ಳಬಾರದೇ
ಮರುಕಳಿಸಿಲ್ಲವೇ ನಮ್ಮ ಸಂತಸ
ಅರಳಿದೆರಡು ಹೂಗಳಲಿ
ಮೈ ಜುಮ್ಮೆನ್ನುವ ಸಂತಸದಲಿ
ಕಳೆದಿಲ್ಲವೇ ದಿನಗಳು ಕಷ್ಟ ಸುಖಗಳ
ಏರಿಳಿತಗಳಲಿ, ಜೊತೆ ಜೊತೆಯಲಿ
ಅನುಭವಗಳ ಅಮೃತ ಗಳಿಗೆಯಲ್ಲಿ
ಮಾತು ಮೌನದಲಿ, ಪ್ರೀತಿ ಕೋಪದಲಿ
ಅರಳುತ್ತ ಮುಲುಗುತ್ತಾ
ಮತ್ತೆ ನಳನಳಿಸಿತ್ತಲ್ಲವೇ ಬದುಕು
ಕರಗಿದೆಯೇ ಆ ಮಧುರ ಭಾವ
ಅಳಿದಿದೆಯೇ ಜೀವನದ ಉತ್ಸಾಹ
ಇಲ್ಲ ಮುಗುದೆ ಹಾಗೇ ಉಳಿದಿದೆ
ಕಾಲ ಕಳೆದಿದೆ, ಜೀವ ಸವೆದಿದೆ ನಿಜ
ಸಹಜ ಅದು ದೇಹ ಮಾತ್ರಕೆ ನಲ್ಲೆ
ಮುಪ್ಪು ಬಂದಿಲ್ಲ ಭಾವಕೆ
ಹೃದಯದಲಿ ನೀನಿನ್ನೂ ತರಳೆ
ಮನದಲಿ ನೀನು ಶಾಶ್ವತ
ಮರೆಯಾಗದು ನಿನ್ನ ಮುಗ್ದ ಪ್ರೇಮ
ಪ್ರೀತಿಗೆ ಅಂತ್ಯವಿಲ್ಲ, ಅಳಿವಿಲ್ಲ
ನೀ ಅರಿತಿಲ್ಲವೇ ಗೆಳತಿ
ನಾವಿಲ್ಲದಿದ್ದರೂ …
****************************************************
Very nice
Super
ಧನ್ಯವಾದಗಳು