ಕವಿತೆ
ಬೋಳುಮರ
ರೇಷ್ಮಾ ಕಂದಕೂರ
ಮುಗಿಲಾಚೆ ನಿಂತನೇ ದೊರೆ
ಕಾಲಕಿಲ್ಲದ ಆಸರೆ
ಬಣಗುಡುತ ಧರೆಯೊಡಲು
ಕೊಕ್ಕೆ ಬಿಗಿದ ಕೊರಳು
ಪಕ್ಕೆಲುಬಿಗೂ ಪಾಶಾಣ
ಶೋಷಣೆಯ ಮುಖವಾಡ ಹೊತ್ತು.
ಮುನಿಸಿನ ಮೊಡದ ತೆರೆ
ಕೈಚಲ್ಲಿದರು ಆದರಿಸುವವರು
ನಾನಾಗಿಹೆ ಬೋಳುಮರ
ಹುಲ್ಲುಕಡ್ಡಿಯು ಆಕ್ರೋಶದಿ ನಲುಗಿ
ಕೀಲುಗಳ ಮುರಿಯುವ ಭರದಿ
ಬೇರಿನಾಳಕೂ ಇಳಿಯತ ಗಂಗೆ.
ಬದುಕು ಬವಣೆಯ ಹರಿಗೋಲು
ಚೈತ್ರಕೂ ಸಂಚಕಾರದ ನಂಟು
ಅನಂತಕೂ ಅಂತ್ಯದ ದಿಗಿಲೂ
ಸ್ವಾರ್ಥದಿ ಪ್ರವಹಿಸುವ ಮನುಜ
ಗೂಢಾರ್ಥವ ಬೇಧಿಸದಾದ
ಚಾಂಡಾಳನಾದ ಸನ್ಮಿತ್ರನಂತೆ.
ನಿಗೂಢದ ಸುದ್ದಿ
ಬಿಡಿಸುವವರೇ ಕಗ್ಗಂಟಿಗೆ ದೂಡಿ
ಹಿಡಿಸುವವರ ಪೊರೆಯದೇ ಬಿಸಾಡಿ
ದುಡಿವ ಕೈಗಳ ಮುರಿದ
ಸಿಡಿದೆದ್ದ ಮಾತೆಯ ಒಡಲು
ವಿಕಲ್ಪದ ಸಂಕೇತವಾಗಿ ನಿಂತೆಹಳು.
**********************