ಕವಿತೆ
ಅಷ್ಟೇ ಸಾಕು.
ಅಬ್ಳಿ,ಹೆಗಡೆ
ಈ…ನೀರವದೊಳಗೂ
ಸಂತೆಯ ಗಿಜಿ,ಗಿಜಿ.
ಈ ರೌರವದೊಳಗೂ
ಏನಾದರೊಂದು ಖುಷಿ,
ಸಂಭ್ರಮ ನನ್ನೊಟ್ಟಿಗೆ.
ಒಂಟಿತನದ ನಂಟು
ಬಾದಿಸುವದಿಲ್ಲ ನನ್ನ
ನನ್ನೊಟ್ಟಿಗಿನ ಸಂಜೆ
ಬಂಜೆಯಾದರೂ..
ಹಗಲ ನಗು ಮಾಸಿದರೂ,
ಹಿಂಬಾಲಿಸಲೊಂದು
ನೆರಳು,
ನೋಡಿಕೊಳ್ಳಲೊಂದು
ಕನ್ನಡಿ,
ಇಷ್ಟಿದ್ದರೂ ಸಾಕು,ನನಗೆ
ನಾ ಒಂಟಿಯೆನಿಸುವದಿಲ್ಲ
ಸಾಲದ್ದಕ್ಕೆ……
ಸಾವಿನಮನೆಯ ನಿಶ್ಶಬ್ಧ
ಕತ್ತಲಲ್ಲಿ ಹಚ್ಚಿಟ್ಟ-
ಮಿಣುಕು ದೀಪ
ವೊಂದಿದೆಯಲ್ಲ ಮಸ್ತಕದಲ್ಲಿ
ನೆನಪಿನ ಪುಸ್ತಕ
ತೆರೆದೋದಲು.
ಅಷ್ಟೇ ಸಾಕು,ನಾ
ಒಂಟಿಯೆನಿಸುವದಿಲ್ಲ.
ಹೊತ್ತಿನ ಹೊತ್ತಿಗೆಯಲ್ಲಿ
ರಾಶಿ,ರಾಶಿ,ಸಂಭ್ರಮಗಳ
ನೆನಪಿನ ಚಿತ್ತಾರಗಳಿವೆ,
ಚಿತ್ತವನು ಸಂತೈಲು.
ಬಾಲ್ಯದಲ್ಲಿ…..ಮರಿ-
ಹಾಕಲಿಟ್ಟ ನವಿಲುಗರಿ,
ಮರದ ಟೊಂಗೆಯಲ್ಲಿ
ಸಿಕ್ಕಿಬಿದ್ದ ದಾರ ಹರಿದ
ಬಣ್ಣದ ಗಾಳಿಪಟ,
ಬದುಕಿನೆಲ್ಲ ಮೊದಲುಗಳ
ಸವಿ,ಸವಿ ನೆನಪು,
ಇದ್ದೇ ಇವೆಯಲ್ಲ..
ನನ್ನೊಟ್ಟಿಗೆ..!
ಅಸಹ್ಯದ ಕ಼ಣಗಳನ್ನೂ
ಸಹ್ಯವಾಗಿಸಲು.
ಒಂಟಿತನ ನೀಗಿಸಲು.
ಯಾವುದಿಲ್ಲವಾದರೂ
ಕೊನೇಪಕ಼ ನನ್ನೊಳಗಿನ
‘ನಾನಂತೂ’….
ಇದ್ದೇ ಇದೆಯಲ್ಲ,
ನನ್ನೊಟ್ಟಿಗೆ.
ಅಷ್ಟೇ ಸಾಕು ಬದುಕಿಗೆ.
**********
ಒಂಟಿತನ ಮರೆಯಲು ತನ್ನನ್ನು ತಾನು ಕಾಣುವ ಯತ್ನ ಈ ಕಾನನದಲ್ಲಿದೆ. ಒಂದು ಸುಂದರ ಅರ್ಥಪೂರ್ಣ ಕವನವಿದು.