ನೆನಪಿನ ನವಿಲು ಗರಿಗಳ ನೇವರಿಕೆ

ಪುಸ್ತಕ ಸಂಗಾತಿ

ನೆನಪಿನ ನವಿಲು ಗರಿಗಳ ನೇವರಿಕೆ

ಒಂದು ವಿಳಾಸದ ಹಿಂದೆ

ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ…ಕಾರ್ಮುಗಿಲ ಅಂಚಿನಲ್ಲಿ ಭರವಸೆ ಬೆಳ್ಳಿ ಝರಿ ಎಚ್ಚ್ಚೆಸ್ವಿಯವರ ಈ ಸಾಲುಗಳು ನೆನಪಾದವು ಸ್ಮಿತಾ ಅವರ  ’ಒಂದು ವಿಳಾಸದ ಹಿಂದೆ’ ಲಲಿತ ಪ್ರಬಂದಗಳ ಸಂಗ್ರಹವನ್ನೋದುವಾಗ. ಮನಸಿನಾಳದಲ್ಲಿ ಹುದುಗಿರುವ ನೆನಪುಗಳ ನವಿಲುಗರಿಯ ನಯಗಾರಿಕೆ ಸೋಕಿ ಮನಕೆ ಹಿತವೆನಿಸುವಂತ ಬರಹ. ಇಲ್ಲಿನ ಸಾಕಷ್ಟು ಬರಹಗಳು ನನ್ನ ಅನುಭವಗಳೊಂದಿಗೂ ಅಂಟಿಕೊಂಡಂತೆ ಭಸವಾಗಿದಕ್ಕೋ ಏನೋ ಆಪ್ತ ಎನಿಸುತಿತ್ತು. (ಈ ಪುಸ್ತಕ ನನಗೆ ತಲುಪಿ ಬಹಳ ದಿನಗಳಾಗಿವೆ. ಸಮಯದ ಅಭಾವದಿಂದ ಈಗ ಬರೆಯುತ್ತಿರುವೆ…)

ಸ್ಮಿತಾ ಅವರೇ ಹೇಳುವಂತೆ ಕಾವ್ಯ ಪ್ರೇಮಿಯಾದ ಅವರಿಗೆ ಅವರ ಬರಹಗಳು ಕಾವ್ಯವಾಗಿ ರೂಪುಗೊಳ್ಳದಿದ್ದಾಗ ಬಂದಂತಹ ಬರಹಗಳಿವು  ಎಂದು. ಅದಕ್ಕೆ ಈ ಎಲ್ಲಾ ಬರಹಗಳಲ್ಲಿ- ಗದ್ಯದಲ್ಲಿ ಕಾವ್ಯದ ಸ್ಪರ್ಷ ಅಥವಾ ನೇವರಿಕೆ ಎನ್ನಿ ಖಂಡಿತಾ ಓದುವಾಗ ನಿಮ್ಮ ಅನುಭವಕ್ಕೆ ಬರುತ್ತದೆ. ಅಂದರೆ ನಾನಿಲ್ಲಿ ಕಾವ್ಯಮಯವಾಗಿದೆ ಎಂದು ಹೇಳುತ್ತಿಲ್ಲ…ಕಾವ್ಯದ ನೇವರಿಕೆ ಎಂದು ಅದಕ್ಕೆ ಹೇಳುತ್ತಿದ್ದೇನೆ. ಬರೆಯುವ ಕಲೆ ಸಿದ್ದಿಸಿರುವ ಅವರಿಗೆ ಅವರ ಬರಹಕ್ಕೊಂದು ಅಂದದ ಚೌಕಟ್ಟು ಕೊಡುವುದು ಗೊತ್ತಿದೆ. ತಮ್ಮ ಅನುಭವಗಳನ್ನು ದಾಖಲಿಸುವಾಗ ಎಲ್ಲೂ ಬೋರ್ ಎನಿಸುವ ರೀತಿಯಲ್ಲಿ ಬರೆಯುವುದಿಲ್ಲ. ಕೇವಲ ತಮಗನಿಸಿದ್ದನ್ನು ದಖಲಿಸುವುದೂ ಇಲ್ಲ. ತಮ್ಮ ಅನುಭವಕ್ಕೆ ದಕ್ಕಿದನ್ನು ಓದುಗರು ಹೇಗೆ ಸ್ವೀಕರಿಸಬೇಕೋ ಹಾಗೆ ಬರೆಯುವ ಎಚ್ಚರ ಇಲ್ಲಿನ ಬರಹಗಳಲ್ಲಿದೆ. ಅದಕ್ಕೆ ನವಿರು ನಿರೂಪಣೆ ಎಂದಿದ್ದು.

ಬದುಕು ಬದಲಾವಣೆಗಳಿಗೆ ಒಡ್ದಿಕೊಳ್ಳುತ್ತದೆ. ಆಗ ದಕ್ಕುವ ಅನುಭವಗಳ ನವಿರು ನಿರೂಪಣೆ ಈ ಸಂಗ್ರಹ. ಬಾಲ್ಯದ ತುಂಟತನದ ಬಗೆಗಿನ ಬರಹ, ಎದೆಯೊಳಗೊಂದು ನದಿಯ ಹರಿವು,ಒಂದು ರೈಲು ಪ್ರಯಾಣ, ಅಡುಗೆ ಕೋಣೆಯೊಳಗಿನ ಎಡವಟ್ಟುಗಳು, ಏನ್ ತಿಂಡಿ, ಒಲೆಯ ಉರಿಯ ಮುಂದೆ… ಹೀಗೆ ಹೆಚ್ಚುಕಡಿಮೆ ಎಲ್ಲಾ ಬರಹಗಳು ಬದಲಾಗುತ್ತಿರುವ ಬದುಕಿನ ಬಗೆಗೆ ಹೆಚ್ಚು ಒತ್ತು ಕೊಟ್ಟಂತೆ ಎಂದು ಗ್ರಹಿಸಬಹುದಾಗಿದೆ. ಬಾಲ್ಯದಿಂದ ಇಲ್ಲಿಯ ತನಕದ ಎಲ್ಲಾ ಬವಣೆ ಬದಲಾವಣೆಗಳು ಈ ಬರಹಗಳಲ್ಲಿ ಸ್ಪಷ್ಟವಾಗೇ ಕಾಣುತ್ತದೆ. ನಮ್ಮ ನೆನಪುಗಳೂ ತೆರೆದುಕೊಂಡು ತುಟಿಯಂಚಿನಲ್ಲಿ ಕಿರುನಗೆಯೊಂದನ್ನು ಮೂಡಿಸುತ್ತದೆ.

ಗೊರೂರರು ಒಂದು ಮುನ್ನುಡಿಯಲ್ಲಿ ಬರೆಯುತ್ತಾ ಹೇಳಿದ ಈ  ಮಾತುಗಳು ನನಗೆ ನೆನಪಾಗುತ್ತಿದೆ. ಲಲಿತ ಪ್ರಬಂದಕ್ಕೆ ಇಂತಹುದೆ ವಿಷಯ ಎಂಬುದಿಲ್ಲ. ಯಾವ ವಿಷಯವೂ ಆಗಬಹುದು. ಆದರೆ ಅದರ ನಿರೂಪಣಾ ಕ್ರಮ ಆಕರ್ಷಕವಾಗಿರಬೇಕು. ಅದು ನಮ್ಮ ಜೀವನದ  ಮೇಲೂ ಹೊಸ ಬೆಳಕನ್ನು ಬೀರಬೇಕು. ಪದಗಳು ಮಿತವಾಗಿ ಅರ್ಥಪೂರ್ಣವಾಗಿ ಮಧುರವಾಗಿರಬೇಕು. ನಮ್ಮನ್ನು ನಲಿಸಬೇಕು, ತಿದ್ದಬೇಕು,ಹೃದಯ ಅರಳಿಸಬೇಕು ಭಾವನೆಗಳನ್ನು ಬೆಳೆಸಬೇಕು. ಎಲ್ಲವೂ ಸಹಜವಾಗಿರಬೇಕು. ಗುರಿ ಮುಟ್ಟುವುದೊಂದೇ ಮುಖ್ಯವಲ್ಲ ಮಾರ್ಗ ಪ್ರಯಣವೂ ಆಕರ್ಷಕವಾಗಿರಬೇಕು. ಬರೆಯುವ ವ್ಯಕ್ತಿಯ ಸಂಸ್ಕಾರಕನುಗುಣವಾಗಿ ಅದರಲ್ಲಿ ನಾವೀನ್ಯವೂ ಮಾತು ಕಲೆಗಳ ಸಂಗಮವೂ ಆಗುತ್ತದೆ.

ಗೊರೂರರ ಈ ಎಲ್ಲ ಹಿತವಚನಗಳ ಮೊತ್ತದಂತೆ ಸ್ಮಿತಾ ಅವರ ಈ ಲಲಿತಪ್ರಬಂದಗಳು – ಎಂದು ನನಗೆ ಬಹಳವಾಗಿ ಅನಿಸುತ್ತದೆ. ನದಿ,ಕಾಡು,ಮಳೆ,ಗಡಿಯಾರ, ಅಡುಗೆ,ಕಾಡಿಗೆ, ಒಗ್ಗರಣೆ,ಅರೆಯುವ ಕಲ್ಲು, ಮಾತು,ಕವಿತೆ,ಪಾದುಕೆ,ಚೌತಿ ಚಂದ್ರಮ… ಎಲ್ಲವೂ ಇವರ ಭಾವಲಹರಿಗೆ ಹಾಡಾಗಿ ಬಂದಂತಿದೆ. ಎಲ್ಲವನ್ನೂ ಬೆರಗಿನಿಂದ ನೋಡುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಜೊತೆಗೆ ಅದನ್ನು ಆಕರ್ಷಕ ನಿರೂಪಣೆಯೊಂದಿಗೆ ಅಕ್ಷರಕ್ಕಿಳಿಸುವ ಪರಿಯೂ ಅನನ್ಯವಾಗಿದೆ. ನಮ್ಮ ನೆನಪುಗಳನ್ನೂ ಕೆದಕಿದವು.ಅರೆ ಇದು ನನ್ನದೂ ಅನುಭವವಲ್ಲವೇ… ನಾನು ಬರೆಯಬೇಕಿತ್ತು ಎಂದು ಅನಿಸುವುದುಂಟು. ತನ್ನ ಬರಹಗಳು ಯಾವಾಗ ಓದುಗರ ಭಾವನೆ ಅಥವಾ ನೆನಪುಗಳಿಗೆ ಬೆಸೆಯುತ್ತವೋ ಅಲ್ಲಿಗೆ ಅದು ಆ ಬರಹದ ಸಾರ್ಥಕ್ಯ ಎಂದು ನಾನು ಭಾವಿಸುತ್ತೇನೆ. ಸ್ಮಿತಾ ಅವರಿಂದ ಇನ್ನಷ್ಟು ಮತ್ತಷ್ಟು  ಕಾವ್ಯ, ಬರಹಗಳು, ಅವರ ಬದುಕಿನ ಬೆರಗುಗಳು ತೆರೆದುಕೊಳ್ಳಲಿ… ನಮ್ಮ ಬೆರಗುಗಳೊಂದಿಗೆ ಬೆಸೆದುಕೊಳ್ಳಲಿ ಎಂದು ಆಶಿಸುತ್ತೇನೆ.

**************************

ಮಮತಾಶಂಕರ್

10 thoughts on “ನೆನಪಿನ ನವಿಲು ಗರಿಗಳ ನೇವರಿಕೆ

  1. ಮಮತಾ…ನಿಮ್ಮ ಓದಿನ ಪ್ರೀತಿಗೆ ಶರಣು.ಬಿಡುವಿಲ್ಲದ ಸಮಯದ ನಡುವೆಯೂ ಓದಿ ಚೆಂದಕ್ಕೆ ಬರೆದಿರುವಿರಿ..ನಿಮಗೂ,ಸದಾ ಪ್ರೋತ್ಸಾಹಿಸುವ ಸಂಗಾತಿ ಪತ್ರಿಕೆಗೂ ಪ್ರೀತಿಯ ವಂದನೆ

    1. ಧನ್ಯವಾದಗಳು ಸ್ಮಿತಾ…. ನಿಮ್ಮ ಪುಸ್ತಕವೇ ಹಾಗೆ ಬರೆಸಿಕೊಂಡಿತು! ನನ್ನದು ಕೇವಲ ಅನಿಸಿಕೆ ಅಷ್ಟೇ

  2. ಚಂದ ಬರೆದಿದ್ದೀರಿ
    ಧನ್ಯವಾದ ನಿಮಗೆ ಪ್ರಕಟಿಸಿದ ಸಂಗಾತಿಗೆ
    ಅಭಿನಂದನೆ ಸ್ಮಿತಾರಿಗೆ

  3. ‘ಒಂದು ವಿಳಾಸದ ಹಿಂದೆ ,’ಓದಿದ್ದೇ, ಓದಿದ್ದು ಮತ್ತೆ ಓದುವಂತೆ ತಾವು ಬರೆದಿದ್ದೀರಾ.

  4. ಧನ್ಯವಾದಗಳು ತಮಗೆ…. ಸ್ಮಿತಾ ಬರಹವೇ ಹಾಗಿದೆ…

  5. ಮಮತಾ ಶಂಕರ್ ಅವರೇ,
    ತೇಜಸ್ವಿಯವರ ‘ಮಿಸ್ಸಿಂಗ್ ಲಿಂಕ್’ ಎಂಬ ಪುಸ್ತಕ ಆರಂಭವಾಗುವುದು, ನೀವ್ಯಾರು? ಎಂಬ ಪರಿಚಯಾತ್ಮಕ ಪ್ರಶ್ನೆಯಿಂದ. ಮನುಷ್ಯನ ಜೆನೆಟಿಕ್ evolution ನ ಬಗೆಗಿನ ಅನ್ವೇಷಣಾತ್ಮಕ ಪುಸ್ತಕ ಅದು.
    ಹಾಗೆಯೇ ಸ್ಮಿತಾ ಅವರ ‘ ಒಂದು ವಿಳಾಸದ ಹಿಂದೆ’ ಎಂಬ ಪುಸ್ತಕವೂ ವಿಳಾಸದ ಹಿಂದಿನ ಹುಡುಕಾಟಕ್ಕೆ ತೆರೆಯುತ್ತದೆ.

    ನೀವು ಪುಸ್ತಕದ ಪರಿಚಯ ಮಾಡಿರುವುದು ತುಂಬಾ ಪ್ರೇರಣಾತ್ಮಕವಾಗಿದೆ. ಅನನ್ಯ ಬರಹ.

    ನಿಮ್ಮಿಬ್ಬರಿಗೂ ಅಭಿನಂದನೆಗಳು.

    1. ಕಾನತ್ತಿಲ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು… ನಾನು ಕೇವಲ ಪುಸ್ತಕ ಓದಿ ಅನಿಸಿಕೆ ಹಂಚಿಕೊಂಡಿರುವೆ. ನನಗೆ ನಿಮ್ಮ ವಿಶ್ಲೇಷಣಾತ್ಮಕ ವಿಮರ್ಶೆಗಳನ್ನು ಓದಿದಾಗ ನಿಮ್ಮ ಹಾಗೆ ಕವಿತೆ ಅಥವಾ ಬರಹದ ಆಳಕ್ಕಿಳಿದು ವಿಮರ್ಶೆ ಮಾಡುವ ಆಸೆ ಇದೆ… ಇದೊಂದು ಸಣ್ಣ ಪ್ರಯತ್ನ ಮಾಡಿರುವೆ. ಇನ್ನೂ ನಾನು ನ್ಯಾಯ ಒದಗಿಸಿಲ್ಲ ಎಂದು ಬೇಸರವಿದೆ ನನಗೆ… ಇರಲಿ… ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ನನ್ನ ನಮನಗಳು…ಸರ್

Leave a Reply

Back To Top