ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ

ವಿಶೇಷ ಲೇಖನ

ಚನ್ನಣ್ಣ ವಾಲೀಕಾರ

ನೀ ಹೋದ ಮರುದಿನ  ಮತ್ತ ನಂ ಬದುಕು  ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
                          ಚನ್ನಣ್ಣ ವಾಲೀಕಾರ



ಬಾಬಾಸಾಹೇಬರು ಎಳೆದುತಂದ ಸಮಾನತೆ ಬಂಡಿಯನ್ನು ಮುಂದೆಳೆಯುವಲ್ಲಿ ಸೋತು ನಿಂತ ತುಳಿತಕ್ಕೊಳಗಾದ ಜನಸಮುದಾಯದ ನಾಯಕರನ್ನು ಕುರಿತು ಎದಿಬ್ಯಾನಿಯಿಂದ ಹಾಡಿದವರು ಬಂಡಾಯ ಸಾಹಿತ್ಯ ಚಳುವಳಿಯ ಹರಿಕಾರ ಡಾ.ಚನ್ನಣ್ಣ ವಾಲೀಕಾರರು. ಅವರು” ಬಿಸಿಲು ನೆಲ ಕಂಡ ಬೆಳದಿಂಗಳ ಚೇತನ”.
         1986-87 ಇರಬಹುದು ನಾನು ಕಲಬುರಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ದಿನಗಳು, ಅಂದು ಕಲಬುರಗಿಯಲ್ಲಿ ಪ್ರಸಿದ್ಧವಾದ ಎಸ್.ಎಸ್.ಭಾವಿಕಟ್ಟಿ      ಪುಸ್ತಕದಂಗಡಿಯಲ್ಲಿ  ನನಗೆ ಬೇಕಾದ ಪಠ್ಯಪುಸ್ತಕಗಳನ್ನು ಹುಡು ಕುತ್ತಿಮರುವಾಗ ನನ್ನ ಕಣ್ಣಿಗೆ ಬಿದ್ದದ್ದು “ಮರದ ಮೇಲಿನ ಗಾಳಿ” ಕವನ ಸಂಕಲನ
(ಲೇ:- ಚನ್ನಣ್ಣ ವಾಲೀಕಾರ) ಆಗ ಅವರಿನ್ನೂ ಡಾಕ್ಟರ್ ಆಗಿರಲಿಲ್ಲ ಅನಿಸುತ್ತದೆ. ಈ ಕವನ ಸಂಕಲನ ಓದಿದ್ದೇ ನಾನು ಅವರ ಸಾಹಿತ್ಯ ಕೃಷಿಗೆ ಮಾರು ಹೋದೆ ಅನಿಸುತ್ತದೆ. ಕನ್ನಡ ಸಾಹಿತ್ಯವನ್ನು  ಸೈದ್ಧಾಂತಿಕವಾಗಿ, ಶಾಸ್ತ್ರೀಯವಾಗಿ ಇಂದಿಗೂ ಓದಿಲ್ಲದ ನನಗೆ ಆ ಸಂಕಲನದಲ್ಲಿನ ಕಾವ್ಯದ ವಸ್ತು ಮತ್ತು ನನ್ನ ಬಾಲ್ಯಾನುಭವದ
ಘಟನೆಗಳ ಪ್ರತಿಬಿಂಬ ಕಂಡುಬಂದು “ಈ ತರಹದ ಪದ್ಯಗಳು ನಾನು ಓದಿದ ಕನ್ನಡ (ಪಠ್ಯದ) ಪುಸ್ತಕಗಳಲ್ಲಿ ಒಂದೂ ಇಲ್ಲವಲ್ಲ”ಅನಿಸಿತ್ತು. ಅಷ್ಟಕ್ಕೂ ಆ ಕವನಗಳನ್ನು ಅರ್ಥೈಸಿಕೊಳ್ಳುವಷ್ಟು ಸಹೃದಯತೆ, ಪ್ರಬುದ್ಧತೆಯೇನೂ ಅಂದು  ನನ್ನಲ್ಲಿರಲಿಲ್ಲ.
             ಅದೇ ತಾನೇ ಕನ್ನಡ ಸಾಹಿತ್ಯದಲ್ಲಿ  ನವ್ಯಪಂಥ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಅದರ ಪ್ರಭಾವದಿಂದಲೋ ಏನೋ ಚನ್ನಣ್ಣ ಅವರ ಮರದ ಮೇಲಿನ ಗಾಳಿ ಕವನ ಸಂಕಲನ ಈ ಪಂಥಕ್ಕೆ ಸಮೀಪವಾಗಿತ್ತು ಎಂದು ನನಗೆ ಅದನ್ನು ಓದಿದ ಹಲವಾರು ವರ್ಷಗಳ ನಂತರ ಅನಿಸಿತ್ತು.


ಅವರಿಗೆ ಕನ್ನಡ ಕಾವ್ಯದಲ್ಲಿ ಶಾಶ್ವತ ಸ್ಥಾನ ಒದಗಿಸಿದ ಕೃತಿಗಳು, “ಕರಿತಲಿ ಮಾನವನ ಜೀಪದ” ಕವನ ಸಂಕಲನ ಮತ್ತು “ಬೆಳ್ಳ್ಯ” ನಾಟಕ. ಕರಿತಲಿ ಮಾನವನ ಜೀಪದ ಬಹುಚರ್ಚಿತ ಕೃತಿ,
ಅಂದಿನ ಬಂಡಾಯ ಸಾಹಿತ್ಯ ಚಳುವಳಿಯ ಊರ್ಜಿತಾವಸ್ಥೆಯ ದಿನಗಳಲ್ಲಿ ಹೈದರಾಬಾದ್ ಕರ್ನಾಟಕದ ರಾಜ್ಯವ್ಯಾಪಿ ಚರ್ಚೆಗೊಂಡ ಮುಖ್ಯ ಕಾವ್ಯ ಕೃತಿ.ವಿಪರ್ಯಾಸವೆಂದರೆ ಈ (ಹೈಕ) ಭಾಗದ ವಿದ್ವಜ್ಜನರಿಂದಲೇ ಅಂದು ಈ ಕೃತಿಯ ಕುರಿತು ಅಸಮಾಧಾನ ಅಪಪ್ರಚಾರಗಳು ನಡೆದವು. ಕರಿತಲಿ ಮಾನವನ ಜೀಪದ ಕೃತಿಯಲ್ಲಿ ಚನ್ನಣ್ಣ ವಾಲೀಕಾರರು ನಡೆಸಿದ ಪ್ರಯೋಗಶೀಲತೆ  ಬಹುಶಃ ಅಂದಿನವರಿಗೆ ಪಚನವಾಗಲಿಲ್ಲ ಎನಿಸುತ್ತದೆ. ಹೈದರಾಬಾದ್ ಕರ್ನಾಟಕದ ಜಾನಪದದ ಮೂಲಮಟ್ಟುಗಳನ್ನು ಕಾವ್ಯರಚನೆಗೆ ಬಳಸಿದ್ದು ಅವರ ಕವಿತ್ವದ ದೃಷ್ಟಿಯಿಂದ ಅಂದು ತುಂಬ ರಿಸ್ಕಿಯಾದ ನಿರ್ಧಾರವಾಗಿತ್ತು. ಪ್ರಾದೇಶಿಕ ಭಾಷೆಯ ಬಳಕೆ ಅಂದಿನ ಕನ್ನಡ ಕಾವ್ಯಕ್ಷೇತ್ರದಲ್ಲಿ ಅಪರೂಪದಲ್ಲಿ ಅಪರೂಪದ ಕವಿಗಳು ಮಾತ್ರ ಬಳಸುತ್ತಿದ್ದರು. ದೇವನೂರು ಮಹಾದೇವರ “ಕುಸುಮಬಾಲೆ” ಕೃತಿ ಪ್ರಕಟವಾಗುವದಕ್ಕೂ ಮೊದಲು ಈ ಪ್ರಯೋಗವನ್ನು ಚನ್ನಣ್ಣ ವಾಲೀಕಾರರು ಮಾಡಿದ್ದರು. ಕರಿತಲಿ ಮಾನವನ ಜೀಪದ ಕೃತಿಗೆ ಅಂದಿನ ಕನ್ನಡ ಸಾಹಿತ್ಯ    ವಿಮರ್ಶಾ ಕ್ಷೇತ್ರದಿಂದ ನ್ಯಾಯ ದೊರೆಯಲಿಲ್ಲ ಎಂದರೆ ಸುಳ್ಳು ಆಪಾದನೆ ಮಾಡಿದಂತಾಗುವದಿಲ್ಲ. ದೇವನೂರರ ಕುಸುಮಬಾಲೆ ಸೃಷ್ಟಿಸಿದ ಸಂಚಲನದಿಂದಾಗಿ ಅಂದು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿ ಕೃತಿರಚನೆ ಮಾಡುವದು ಒಂದು “ರಚನಾ ಮಾರ್ಗ”ಎಂಬಷ್ಟು ಜನಜನಿತವಾಯಿತು. ಆದರೆ ಈ ಪ್ರಯತ್ನ ಆರಂಭಿಸಿದ ಚನ್ನಣ್ಣ  ವಾಲೀಕಾರರ ಹೆಸರು ವಿಮರ್ಶಕ ಲೋಕ ಮರೆಗೆ ಸರಿಸಿತು. ಕವಿ, ಲೇಖಕನೊಬ್ಬನ ಭಾವಯಿತ್ರಿ ಪ್ರತಿಭೆ ಹೇಗೆ ಗುರುತಿಸಲ್ಪಡುತ್ತದೆ ಎಂಬುದಕ್ಕೆ ದೇವನೂರರೇ ಚನ್ನಣ್ಣ ವಾಲೀಕಾರರ ಕಾವ್ಯ ಕುರಿತು  ಆಡಿದ ಮಾತುಗಳು ಸಾಕ್ಷಿಯಾಗಿವೆ. ಚನ್ನಣ್ಣರ ತಮ್ಮ  “ವೈರಿಗಳ ಮಧ್ಯೆ ಎದ್ದ ಕಗ್ಗತ್ತಲೆ ಖಂಡದ ಕಾವ್ಯ” ಕೃತಿಯ ಹಿನ್ನುಡಿಯಲ್ಲಿ ಈ ಮಾತನ್ನು ಪ್ರಸ್ತಾಪಿಸುತ್ತಾರೆ. ‘ಕರಿತಲಿ ಮಾನವನ ಜೀಪದದಿಂದ ನೀವು ಚಿಗುರೊಡೆಯಬೇಕು’ ಎಂದು ಹೇಳಿದ ದೇವನೂರ ಮಹಾದೇವರ ಮಾತನ್ನು ನಾನು1980ರಲ್ಲಿಯೇ ಪರಿಗಣಿಸಬೇಕಾಗಿತ್ತು
(ವೈರಿಗಳ ಮಧ್ಯೆ ಎದ್ದ ಕಗ್ಗತ್ತಲೆ ಖಂಡದ ಕಾವ್ಯ,ಹಿನ್ನುಡಿ-೨,ಪುಟ ಸಂ.೧೬೪ ಪ್ರ:ಅರಸಂಬೇಡಕರ್ ವಿಚಾರ ಪ್ರಚಾರ ಸಮಿತಿ ಬಡೇಪುರ ಕಾಲೋನಿ,ಸೇಡಂ ರಸ್ತೆ ಗುಲಬರ್ಗಾ).


          
        ಚನ್ನಣ್ಣ ವಾಲೀಕಾರರ “ಬೆಳ್ಳ್ಯ” ಕಾದಂಬರಿಗ ಕೂಡ ಇಂತಹುದೇ ತಾರತಮ್ಯ ಒದಗಿ ಬಂತು ಎನಿಸುತ್ತದೆ. ಆಕಾಶವಾಣಿಯ ರಾಷ್ಟ್ರೀಯ ನಾಟಕ ಸ್ಪರ್ಧೆಗೆ ಕಳಿಸುವ ಸಂದರ್ಭದಲ್ಲಿ ಈ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಬೇಕಾದಾಗ ಕಾದಂಬರಿಯಲ್ಲಿರುವ ಈ ಭಾಗದ ಆಡುಭಾಷೆ ನುಡಿಗಟ್ಟುಗಳನ್ನು ಗ್ರಾಂಥಿಕ ಭಾಷೆಗೆ ಬದಲಾಯಿಸುವ ಪ್ರಸಂಗ ಒದಗಿತು ಎಂದು ಕೇಳಿದ್ದೇನೆ. ಆಗ ಕಾದಂಬರಿಯ ಮೂಲಭಾಷಾ ಸೊಗಡು ಉಳಿಯಲಿಲ್ಲ.



  ಇವೆಲ್ಲದರ ನಡುವೆ ಅವರ ಡಾಕ್ಟರೇಟ ಪದವಿಗಾಗಿ ಆಯ್ದುಕೊಂಡ ವಿಷಯ ಕೂಡ ಅವರು ಅತಿ ಹೆಚ್ಚು ಇಷ್ಟಪಡುತ್ತಿದ್ದ ಗ್ರಾಮೀಣ ಜೀವನ ಕುರಿತೇ ಇದ್ದದ್ದು ನಿರೀಕ್ಷಿತವಾಗಿತ್ತು. ಈ ಸಂಶೋಧನೆಗಾಗಿ ಅವರು ಮಾಡಿದ ಕ್ಷೇತ್ರ ಕಾರ್ಯ,ಗ್ರಾಮೀಣ ಕಲಾವಿದರ,ಗ್ರಾಮೀಣ ಸ್ಥಳಗಳ ಸಂದರ್ಶನಗಳು ಅಚ್ಚರಿ ಮೂಡಿಸುತ್ತವೆ. ಈ ಸಂಶೋಧನಾ ಪ್ರಬಂಧ ಮತ್ತು ಕ್ಷೇತ್ರ ಕಾರ್ಯ ಇಂದಿನ ಯುವ ಸಂಶೋಧಕರಿಗೆ ಮಾದರಿ ಯಾಗಿವೆಯಂದರೆ ತಪ್ಪಾಗಲಾರದು.



           ಚನ್ನಣ್ಣಾ ವಾಲೀಕಾರರು ಕೈ ಹಚ್ಚದ ಕನ್ನಡ ಸಾಹಿತ್ಯ ಪ್ರಕಾರವೇ ಇಲ್ಲ. ಕವನ,ನಾಟಕ,ಸಣ್ಣ ಕತೆ,ಸಂಶೋಧನಾ ಪ್ರಬಂಧ,ಖಂಡಕಾವ್ಯ, ಕಾದಂಬರಿ,  ಮಹಾಕಾವ್ಯ, ಚುಟುಕು, ಬಯಲಾಟ, ಲಾವಣಿ…………..ಇನ್ನೂ ಏನೇನೋ……ಏನು ಬರೆದರೂ ಬೃಹತ್ ಗ್ರಂಥಗಳೇ. ಅವರು ಡಾಕ್ಟರೇಟ್ ಗಾಗಿ ಮಾಡಿದ ಕ್ಷೇತ್ರ ಕಾರ್ಯ “ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು” ಸಂಶೋಧನಾ ಕೃತಿ ಅವರಿಗೆ  ಪಿ.ಎಚ್ ಡಿ ಪದವಿ  ತಂದು ಕೊಟ್ಟಿದ್ದಲ್ಲದೇ ನಂತರ ಅಷ್ಟೇ ಮಹತ್ವದ ಇನ್ನಷ್ಟು ಕೃತಿಗಳ ರಚನೆಗೆ ಆಕರವಾಗಿ ಇತರೆ ಗ್ರಂಥಗಳ ಸೃಷ್ಟಿಗೆ ಕಾರಣವಾಯಿತು. “ಮಹಾರಾಷ್ಟ್ರ ನೆಲದಲ್ಲಿ ವೇಶ್ಯಾ ಸೋದರಿಯರ ಕಣ್ಣೀರಿನ ಕಥೆಯ ಕೋಗಿಲೆಗಾನ” ಎಂಬ ಬೃಹತ್ ಸಮೀಕ್ಷಾ ಪ್ರವಾಸಕಥನ ಶೋಷಿತ ಮಹಿಳೆಯರ  ಕುರಿತು ಅವರಿಗಿದ್ದ ಕಳಕಳಿಗೆ ಸಾಕ್ಷಿಯಾಗಿದೆ.
    “ವ್ಯೊಮಾವ್ಯೋಮ” ಮಹಾಕಾವ್ಯ ಅವರ ಪ್ರಕಟಿತ ಮಹತ್ಕೃತಿ.ಮತ್ತು ಇದೇ ಅವರು ಬದುಕಿರುವಾಗ ಪ್ರಕಟಗೊಂಡ ಕೊನೆಯ ಕೃತಿ. ಸಾವಿರಾರು ಪುಟಗಳ ಈ ಪುಸ್ತಕ ಬಹುಶಃ ಅವರು ತುಂಬಾ ಮಹಾತ್ವಾಕಾಂಕ್ಷೆಯನ್ನು ಇಟ್ಟು ಕೊಂಡು ಬರೆದ ಕೃತಿ. ಇದರಲ್ಲಿ ಎಲ್ಲಿಯೂ ಲೇಖನ ಚಿನ್ನೆಯ ಬಳಕೆಯಾಗಿಲ್ಲವೆಂಬುದು ಅಚ್ಚರಿ.ಇದು ತುಂಬಾ ವಿಚಿತ್ರವಾದ ಛಂದಸ್ಸು. ವ್ಯೊಮಾವ್ಯೋಮ ರಚನೆಗಾಗಿ ಅವರು ವರ್ಷಗಳವರೆಗೆ ಮನೆಬಿಟ್ಟರೆಂಬ ಪ್ರತೀತಿ ಕೂಡ ಇದೆ. ಕನ್ನಡದ ಸಂದರ್ಭದಲ್ಲಿ ಇಂಥ ಮಹತ್ಕಾರ್ಯಗಳು ನಡಯುವದು ಅಪರೂಪಕ್ಕೊಮ್ಮೆ. ಇಂಥ  ಕೃತಿ ಕೃತಿಕಾರ ಕಲ್ಯಾಣ ಕರ್ನಾಟಕದ ಭುವನದ ಭಾಗ್ಯ ಎಂದರೆ  ಕೆಲವರಿಗೆ ಉತ್ಪ್ರೇಕ್ಷೆ ಎನ್ನಿಸಬಹುದು. ಆದರೆ ಕಲ್ಯಾಣ ಕರ್ನಾಟಕದ ಆಚೆ ಇಂಥ ಬೃಹತ್  ಗ್ರಂಥಗಳು  ಪ್ರಕಟವಾದಾಗಲೆಲ್ಲ ಪ್ರಮುಖ ದಿನಪತ್ರಿಕೆಗಳು ಸಾಹಿತ್ಯ ಪತ್ರಿಕೆಗಳು ವರ್ಷಗಟ್ಟಳೆ ಹಾಡಿ ಹಾರೈಸಿದ್ದಿದೆ.ಆದರೆ ಈ ಕೃತಿ ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ಬರುವ ವರ್ಷದ ಉತ್ತಮ ಪುಸ್ತಕಗಳ ಪಟ್ಟಿಯಲ್ಲಿ ಕೂಡ ಕಾಣಲಿಲ್ಲ. ಈ ಬಗ್ಗೆ ಚನ್ನಣ್ಣರ ನಿಲುವು ದೃಢವಾಗಿತ್ತು.ಅವರು ತಮ್ಮ “ವೈರಿಗಳ ಮಧ್ಯೆ………ಕವನ ಸಂಕಲನದಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ಜನತೆಯ ಮುಂದೆ ನನ್ನ ಕಾವ್ಯ ಇದೆ,ಸತ್ವ ಇದ್ದರೆ ಉಳಿಯುವೆ.ಇಲ್ಲದಿದ್ದರೆ ಅಳಿಯುವೆ. ನನ್ನಲ್ಲಿ  ಸತ್ವವೇ ಇಲ್ಲದಿದ್ದರೆ ಆಗುವವರು ಕುಂಡಿಯಲ್ಲಿ ಕೋಲಿಟ್ಟು ನಿಲ್ಲಿಸಿದರೂ ನಾನು ಉಳಿಯಲಾರೆ”.  ಹಾಗೆಯೇ ಇಂದು  ನಮ್ಮ ಮುಂದೆ ವಾಲೀಕಾರರ ಬದುಕು ಬರಹಗಳಿವೆ.


          ಬಂಡಾಯ ಬದ್ದತೆಗಳ ದೃಢಸಂಕಲ್ಪಿ:- ಚನ್ನಣ್ಣನವರದು  ಬಂಡಾಯ ಮತ್ತು ಬದ್ಧತೆಗೆ ಅರ್ಪಿಸಿಕೊಂಡು ಬದುಕಿದ ವ್ಯಕ್ತಿತ್ವ. ಭಾವಜೀವಿ,ಮುಗ್ಧ ಮನಸ್ಸು, ಸರಳತೆ ಒಂದೆಡೆಯಾದರೆ ಕಟುಸ್ವಾಭಿಮಾನಿ,ನಿರ್ಭಿಡೆಯ ನಡತೆ ಯಾವದೇ ಚಾಪಲೂಸಿ ಮಾಡದೇ ಸಂತನಂತೆ ಬರಹ , ಬರಹ, ಬರಹ ಎನ್ನುತ್ತಾ ಬೆಟ್ಟದಷ್ಟು ಬರೆದಿಟ್ಟು ಮತ್ತೆ ಬರುವೆನೆಂದು ಆ ದಡ ಸೇರಿದ ಚನ್ನಣ್ಣ ತಮ್ಮ ಕಾವ್ಯದಲ್ಲಿ ತಾನು ಹೇಗೆ ಜೀವಂತವಾಗಿದ್ದೇನೆಂದು ಹೀಗೆ ಬರೆದು ಕೊಂಡಿದ್ದಾರೆ.



ನಾ ಕಣ್ಣ ಮುಚ್ಚಿದರು/ಸತ್ತು ಹೋಗುವದಿಲ್ಲ
ರೂಪಾಂತರ ಹೊಂದುತ್ತ ಕಾಲ್ಕಾಲಾ/
ನಾನಿಲ್ಲಿ ಭೂಮಿಯೊಳಗ ಬೆಳೆಯುವೆನು
.
( ವೈರಿಗಳ ಮಧ್ಯೆ ಎದ್ದ ಕಗ್ಗತ್ತಲ ಖಂಡದ ಕಾವ್ಯ, ೩.ಸಾವಿನ ತ್ರಿಪದಿ)

****************************************



                               ಡಿ ಎಮ್ ನದಾಫ್


                                

Leave a Reply

Back To Top