*ಗೋರಿಯೊಳಗಿನ ಉಸಿರು”

ಪುಸ್ತತಕ ಸಂಗಾತಿ

*ಗೋರಿಯೊಳಗಿನ ಉಸಿರು”

ಗೋಕಾವಿ ನಾಡಿನ ಪ್ರಾಥಮಿಕ ಶಾಲೆಯೊಂದರ‌ ಮುಖ್ಯೋಪಾದ್ಯಾಯರಾಗಿರುವ  ಶ್ರೀ ಈಶ್ವರ ಮಮದಾಪೂರ ಅವರು ಈಗಾಗಲೇ‌ ಕನ್ಮಡ‌ ಕಾವ್ಯ ಕ್ಷೇತ್ರದ ಪರಿಚಿತ ಹೆಸರು. ಮಮದಾಪೂರರ ಚುಟುಕುಗಳು,ಮಮದಾಪೂರ  ಹನಿಗವಿತೆಗಳು , ಕಾವ್ಯಯಾನ (ಕವನ ಸಂಕಲನ) ಮೊದಲಾದ ಸಂಕಲನಗಳನ್ನು ಹೊರ ತಂದಿದ್ದಾರೆ. ಈಚೆಗೆ ಕಾವ್ಯ ರಚನೆಗೆ ಕಾವ್ಯರಚಕರಿಗೆ ಪ್ರಧಾನ ವೇದಿಕೆಯಾಗಿರುವದು ವ್ಯಾಟ್ಸಪ್ ಎಂಬ ವಿನೂತನ ಮಾದ್ಯಮ.ಕನ್ನಡ ಕಾವ್ಯಕೂಟ ಎಂಬ ವ್ಯಾಟ್ಸಪ್ ಬಳಗದ  ಮೂಲಕವೇ ನೂರಾರು ಜನ‌ ಸಶಕ್ತ ಕವಿಗಳನ್ನು ಒಂದುಗೂಡಿಸಿದ ವಿಶೇಷತೆ ಈಶ್ವರ ಅವರದು.ಅವರು ಬರೆದಿರುವ ಚುಟುಕುಗಳ ವಿಶೇಷತೆಯನ್ನು ಗುರುತಿಸಿದ ಹಿರಿಯ ಕವಿ ಡಾ.ಸಿ.ಪಿ.ಕೆ ಯವರು ಈಶ್ವರ‌ ಮಮದಾಪೂರ ಅವರನ್ನು‌      ‘ ಪ್ರೇಮದ ಪ್ರವಾದಿ’  ಎಂದು ಗುರುತಿಸಿರುವುದು  ಮಮದಾಪೂರ ರ ಕಾವ್ಯಕ್ಕೆ ಸಂದ ಗೌರವವಾಗಿದೆ.

      “ಗೋರಿಯೊಳಗಿನ‌ ಉಸಿರು” ಮಮದಾಪೂರ ಅವರು ರಚಿಸಿದ ಒಟ್ಟು ೩೭ ಗಜಲ್ಗಳ ಸಂಕಲನ .  ಇದು ೨೦೨೦ ರಲ್ಲಿ ಈಶ್ವರ ಪ್ರಕಾಶನ ಗೋಕಾಕದಿಂದ ಪ್ರಕಟವಾಗಿದೆ .ಇಲ್ಲಿನ  ಪ್ರತಿ ಗಜಲ್ ಗಳೂ ಹೊಂದುವ ಚಂದದ ರೇಖಾ ಚಿತ್ರ ಒಳಗೊಂಡಿವೆ . ಈಚೆಗೆ ಕಾವ್ಯ‌ ಮತ್ತು‌ ಕುಂಚಗಳೆರಡೂ ಸ್ಪಂದಿಸುತ್ತ ಸಂಕಲನ ಗಳ ಅಂದ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ತೀರಾ ಈಚೆಗೆ ಬಂದ ಗದುಗಿನ ಕವಿ ಏ. ಎಸ್‌.ಮಕಾನದಾರ ಅವರ ‘ಪ್ಯಾರಿ ಪದ್ಯಗಳು’ ಹನಿಗವನ ಸಂಕಲನದಲ್ಲಿ  ಕವಿಯಂತೆಯೆ ಚಿತ್ರ ಒದಗಿಸಿದ ಚಿತ್ರಕಲಾವಿದ ವಿಜಯ ಕಿರೇಸೂರ ಅವರ ಪರಿಚಯದ ಒಂದು ಪುಟ ಸೇರಿಸಿದ್ದು ನಿಜಕ್ಕೂ ಕಲೆಗಳ ಸಾಂಗತ್ಯದ ಉದಾಹರಣೆಯಾಗಿದೆ. ಈಶ್ವರ ಅವರ ಸಂಕಲನಕ್ಕೆ ಅವರ ಕಾವ್ಯದ ಓದುಗ ಸದಾ ಪ್ರೇರಕರೆಂದು ಗುರುತಿಸಿಕೊಂಡ ಯುವ‌‌ ಗಜಲ್ ಕಾರರಾದ ಶ್ರೀ ಜಬೀವುಲ್ಲಾ .ಎಂ.ಅಸದ್ ರವರು ಚಿತ್ರ ಬಿಡಿಸಿದ್ದಾರೆ ಮಾತ್ರವಲ್ಲ ,ಈಶ್ವರ್ ಅವರ ಗಜಲ್ ಗಳ ಕುರಿತು ಕೆಲವು ಮೆಚ್ಚಿಕೆಯ‌‌ ಮಾತೂ‌ ಬರೆದಿದ್ದಾರೆ.

  ಈಶ್ವರ ಅವರ ಗಜಲ್ ಗಳು ಕೇವಲ ಪ್ರೇಮದ ಆಲಾಪಗಳಲ್ಲ. ನವಿರು‌ಭಾವದ ನಿರೂಪಣೆಗಳಲ್ಲ ಬೆನ್ನುಡಿ ಬರೆದಿರುವ ಹಿರಿಯ ಕವಿಗಳಾದ ಡಾ. ಸರಜೂ ಕಾಟ್ಕರ್ ಅವರು ಗುರುತಿಸಿರುವಂತೆ .” ಮಮದಾಪೂರ ಅವರ ಗಜಲ್ ಯಾಕೆ ವಿಶಿಷ್ಟವಾಗುತ್ತದೆ ಎಂದರೆ ಅವರು ಬರೀ ಪ್ರೀತಿ ,ಪ್ರೇಮ, ವಿರಹ , ಸಾಕಿ,ಚಂದ್ರ , ಚಕೋರಿಗಳನ್ನು ಮಾತ್ರ ತಮ್ಮ ಗಜಲ್ಗಳಲ್ಲಿ ತರುವದಿಲ್ಲ. ಸಾಮಾಜಿಕ ಅನಿಷ್ಠಗಳಾದ ಬಡತನ‌,ಪರಿಸರ ಮಾಲಿನ್ಯ ನಗರೀಕರಣದ ಶಾಪ ,ಜಾತಿ,ವರ್ಣಭೇದ, ಮುಂತಾದ ಸಾಮಾಜಿಕ  ಪಿಡುಗುಗಳ ಬಗ್ಗೆಯೂ ಅವರ ಗಜಲ್ ಗಳ ಮೂಲಕ ಧ್ವನಿ ಒದಗಿಸಿದ್ದಾರೆ. ಕಾವ್ಯವು ನೊಂದವರ ಧ್ವನಿಯಾಗಬೇಕು. ಹಾಗಾದಾಗ ಮಾತ್ರ ಅವರ ಸಾರ್ಥಕತೆಗೆ ಅರ್ಥ ಬರುತ್ತದೆ.ಈಶ್ವರ ಮಮದಾಪೂರ ಕಾವ್ಯವು ನೊಂದವರ , ಬೆಂದವರ ಧ್ವನಿಯಾಗಿ ಹೊರಹೊಮ್ಮಿದೆ ” ಎನ್ನುವ ಅವರ ಮಾತುಗಳೂ ಈಶ್ವರ ಅವರ ಗಜಲ್  ಕಾವ್ಯಕ್ಕೆ‌ ನಿಜವಾಗಿ ಸಂದ ಗೌರವವಾಗಿದೆ.ಮತ್ತು‌ ಅವರು ಬರೆದಿರುವ ಸಾಲುಗಳಿಗೆ‌ ಪೂರಕವಾದ ಪುರಾವೆಗಳನ್ನು ಒದಗಿಸುವ ಎಷ್ಟೋ ಗಜಲ ಗಳು ಈ ಸಂಕಲನದಲ್ಲಿರುವುದೂ ಅಷ್ಟೇ ಸತ್ಯವಾಗಿದೆ.

         ಎರಡನೆಯ ಗಜಲ್ ದಲ್ಲಿ ಅನುಭಾವಿಕ‌ ನೆಲೆ ಇದೆ. ದಾಸರು‌ ಮನುಷ್ಯನ ಐಹಿಕ ಬದುಕು ಅರ್ಥಹೀನ, ಆತನ‌‌ ನಿಜವಾದ ನೆಲೆ ಏನಿದ್ದರೂ ಅದು‌ ಪರಲೋಕ, ಇಲ್ಲಿಗೆ ಬಂದಿರುವದು ಸುಮ್ಮನೇ ಎನ್ನುವ ಅರ್ಥದ ವಿಚಾರ‌ ಮಂಡಿಸಿದ್ದರು. ಈ‌ ಕವಿ ಕೂಡಾ ದಾಸರ ಪದ್ಯದ ಸಾಲನ್ನೇ ಬಳಸಿಕೊಂಡು ಗಜಲ್ ವಿಸ್ತರಿಸುವ ರೀತಿ ಕುತೂಹಲಕ ರವಾಗಿದೆ.

ಇಲ್ಲಿರುವದು ಸುಮ್ಮನೆ ನಿಜವಲ್ಲವೆ‌ ಗೆಳೆಯ

ಅಲ್ಲಿರುವದು ನಮ್ಮ‌ ಮನೆ ಹೌದಲ್ಲವೇ ಗೆಳೆಯ

ಎನ್ನುವ ಕವಿ ಆದರೆ ಇರುವಷ್ಟು ಕಾಲವಾದರೂ ಪರಸ್ಪರರು ಹೊಂದಿಕೊಂಡು ಹೋಗುವದು ಅಗತ್ಯ ವಲ್ಲವೇ ? ಎಂಬ ಬಹು‌ ಮಹತ್ವದ ತಿರುವನ್ನು‌‌ ಕವಿತೆಗೆ ಒದಗಿಸುತ್ತದೆ. .ಬದುಕನ್ನು ನಿರಾಕರಿಸುವ ನೆಲೆಯಿಂದ ಬದುಕನ್ನು ಸಹ್ಯವಾಗಿಸುವ ನೆಲೆಗೆ ಎತ್ತರಿಸುವ ಪ್ರಯತ್ನವಿದು. ಅದನ್ನೇ ಹೇಳುವ ಗಜಲ್ ಅನುಭಾವಿಕ ನೆಲೆಯಲ್ಲಿ ನಿಲ್ಲದೇ “ಇರುವಷ್ಟು ದಿನವಾದರೂ ಬದುಕನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಗಿಳಿಯುವುದು”   ಈಶ್ವರರ ಕವಿತೆಯ ವಿಶೇಷತೆಯಾಗಿದೆ. ಅಂತೆಯೆ ಗಜಲ್‌ ಕೊನೆಮುಟ್ಟುವ  ಈ ತೀರ್ಮಾನ ಮಹತ್ವದ್ದು.

ನಿನ್ನಷ್ಟಕ್ಕೆ ನೀನೋಬ್ಬನೇ ನಗುತ್ತಿದ್ದರೇನು ಬಂತು

ನೊಂದವರ ಹೃದಯದಲ್ಲಿರಲು ಈಶ್ವರನಿಗೂ ಪ್ರೀತಿಯಲ್ಲವೇ ಮಿತ್ರ

ಕವಿತೆಯ ಬಂಧ ಯಾವುದಾದರೇನು? ಅದು ಬದುಕನ್ನು ಪ್ರೀತಿಸುವುದು‌ ಮುಖ್ಯ ಎನ್ನುವದು ‌ಇಲ್ಲಿ‌ ಮಹತ್ವದ್ದು .

          ಸಂಕಲನಕ್ಕೆ ಅರ್ಥಪೂರ್ಣ  ಮುನ್ನುಡಿ ಬರೆದಿರುವ ಡಾ,ಮಲ್ಲಿನಾಥ ಎಸ್ ತಳವಾರ ಅವರು  ಗಜಲ್ ಓದಿಗೆ ಹೊಸ ಪ್ರಸ್ತಾವಣೆ ಎನ್ನುವ ರೀತಿಯಲ್ಲಿ ಕೆಲವು‌ ಮಾತು ಹೇಳಿರುವದು ಗಜಲ್‌ ಪ್ರವೇಶಕ್ಕೆ ಒಳ್ಳೆಯ ದಾರಿ ತೋರುತ್ತದೆ. ಗಜಲ್‌ ಕುರಿತು ಶ್ರೀಯುತರು ಹೇಳುವ‌ ಮಾತುಗಳು ಸದಾ ಮನನಯೋಗ್ಯವಾಗಿವೆ. ಆರಂಭದಲ್ಲಿ ಪ್ರೀತಿ, ‌ಪ್ರೇಮ, ವಿರಹಗಳ ಸುತ್ತ ಸುತ್ತುತ್ತಿದ್ದ ಗಜಲ್ ಕಾವ್ಯ ಪ್ರಕಾರ ಇಂದು ಮಾನವ ಬದುಕಿನ ಸಕಲ ಲೋಕಕ್ಕೂ ವಿಸ್ತಾರಗೊಂಡು ಗಜಲ್ ಕಾವ್ಯ ಆಧುನಿ‌ಕ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಹೊರಹೊಮ್ಮಿದೆ  . ನೂರಾರು ಜನ‌ ಕವಿಗಳು ಗಜಲ್ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. “ಲಯ,ನಿಯಮ, ಲಕ್ಷಣಗಳನ್ನು ಹೊಂದಿರುವ ಗಜಲ್ ಕಾವ್ಯ ಪ್ರಕಾರವು ಸಾಹಿತ್ಯಾಸಕ್ತರ ಮನ ಸೆಳೆಯುತ್ತಿದೆ.ಇದರ ಮೂಲ ಛಂದಸ್ಸು  ಅರಬ್ ರಾಷ್ಟ್ರದಿಂದ ಬಂದಿದ್ದರೂ ಅದು ನೆಲೆಸಿದ್ದು ,ವಿಕಸನ ಗೊಂಡಿದ್ದು ಹಾಗೂ ಸಮೃದ್ಧ ಪರಂಪರೆಯಾಗಿ ಬೆಳೆದು ಬಂದದ್ದು‌ ಮಾತ್ರ ನಮ್ಮ ಭರತ ಖಂಡದಲ್ಲಿಯೇ. ಹಿಂದೂಸ್ತಾನಕ್ಕೆ ಬಂದ ಗಜಲ್ ನಲ್ಲಿ ಈ ದೇಶದ ಲೋಕಗೀತೆ ,ರೀತಿ ರಿವಾಜುಗಳು, ಋತು, ನೀರು,ಗಾಳಿ,ಹಸಿರು,ನೆಲ,ಹೂ ಹಬ್ಬ… ಹೀಗೆ ಹತ್ತು ಹಲವಾರು ವಿಷಯಗಳನ್ಮು ಒಳಗೊಂಡು ಇಂದು ಭಾರತೀಯ ಸಾಹಿತ್ಯ ಪ್ರಕಾರವಾಗಿ ಸಹೃದಯರ‌ ಮನವನ್ನು ತಣಿಸುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕಾವ್ಯ‌ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬ ಕವಿಯೂ ತಾವೊಂದು ಗಜಲ್ ಬರೆಯಲೇಬೇಕು,ಬರೆಯದೆ ಹೋದರೆ ತನ್ನ ಸಾರಸ್ವತ ಲೋಕವೇ ಅಪೂರ್ಣ ಎಂದು ಭಾವಿಸಬಹುದಾದಷ್ಟು ”  (ಗಜಲ್ ಎಂಬ ಜೀವನದಿಯಲ್ಲಿ..-ಡಾ.ಮಲ್ಲಿಕಾರ್ಜುನ .ಎಸ್ ತಳವಾರ – ಮುನ್ನುಡಿಯಲ್ಲಿ) ಎಂದಿರುವದು ಸತ್ಯವಾಗಿದೆ.

ಇಲ್ಲಿನ ಗಜಲ್ ಗಳನ್ನು  ಎರಡು ಭಾಗವಾಗಿಸಬಹುದು.ಪ್ರೀತಿ ಪ್ರೇಮ ವಿರಹ,ತನ್ನ ನಲ್ಲೆಯ ಅಗಲಿಕೆ , ಅದರ ವಿಷಾದ ಈ ಅಂಶಗಳನ್ನು ಹೇಳುವ ಗಜಲ್ ಗಳು ಇಲ್ಲಿ ಕೆಲವಿವೆ.

“ಕೇಳದೇ ಕೊಟ್ಟಿರುವೆ ಹೃದಯವನ್ನು ಸ್ವೀಕರಿಸು ಗೆಳತಿ

ಇನ್ನೇನು ಬೇಕು ನನ್ನನ್ನು‌ ಮೀಸಲಿಟ್ಟಿರುವೆ  ಪ್ರೀತಿಸು ಗೆಳತಿ”

ಈ ಬಗೆಯ ಅಹವಾಲುಗಳು

,

” ಜೀವಂತ ಕೊಲ್ಲದಿರು ಪ್ರೀತಿಯನ್ನು ಹೊರಗಿಟ್ಟು

ಸತ್ತರೂ  ಮುಳ್ಳಿರದ ಗುಲಾಬಿ ನೀಡುವೆ ಮುದ್ದಿಸು ಗೆಳತಿ “

  ಎಂಬ ಈ ಥರದ ಪ್ರೇಮಾಧಿಕ್ಯದ ಸಾಲುಗಳೂ ಇವೆ.

ಅತಿಶಯ ಪ್ರೇಮ ಇಲ್ಲಿನದು.ಅವಳ ಪ್ರೇಮದ ತಿರಸ್ಕಾರ ಅವನನ್ನು  ಜೀವಂತ  ಹೆಣವಾಗಿಸಿದೆ.ಅದಕ್ಜೆ ತನ್ನವಳಾಗಿದ್ದವಳನ್ನು

“ಒಲವ ಜಲದಿಂದ ಹೊರಗೇಕೆ ನೂಕಿದೆ ನನ್ನನ್ನು

ಪ್ರೀತಿಯ ಉಸಿರಿಲ್ಲದೆ ಹೆಣವಾಗಿಸಿದೆ ಗೆಳತಿ‌ “

ಎಂದು ಕೇಳುತ್ತಾನೆ

.ಅವಳಿಲ್ಲದ ರಾತ್ತಿ ತುಂಬ ಜಡವಾಗಿದ್ದು ” ಚಂದ್ರಮನ ಬೆಳಕದಿಂಗಳು ಕೂಡ ಬಿಸಿಯಾಗಿದೆ ” ಎನ್ನುತ್ತಾರೆ.ಈ ಜಗತ್ತು ಇಂತ‌ಹ ಪ್ರೀತಿಯನ್ನು ಹುಚ್ವು ಎನ್ನುತ್ತದೆ . ಆದರೆ ಯಾವ‌ ಪ್ರೇಮಿಗಳು ತಾನೇ  ಲೋಕದ ಮಾತು‌ ಕೇಳಿದ್ದಾರೆ?ಸತ್ತರೂ ಗೋರಿಯಲ್ಲದ್ದು  ಕನಸು ಕಾಣುವ ಇರಾದೆ ಇರುವ ಇಲ್ಲಿನ‌ ಪ್ರೇಮಿ ದೇವರನ್ನು

“ಪ್ರೇಮಿಗಳಿಗೆ ವಿರಹದ ಶಾಪ ಇರಬಾರದು ಈಶ್ವರನೇ

  ಒಂದಾಗಿ ಬಾಳುವಾಸೆ ಇನ್ನು ಜೀವಂತವಿದೆ ಗೆಳತಿ “

ಎಂದು ತಪಿಸುತ್ತಾನೆ  ಇಂತಹ ಹತ್ತಾರು ಸಾಲುಗಳನ್ನು  ಸಂಕಲನದಲ್ಲಿ ಕಾಣಬಹುದು.

ಆದರೆ ನಿಜಕ್ಕೂ ಈ ಗಜಲ್ ಸಂಕಲನದ ಮಹತ್ವ ಇರುವದು ಇಲ್ಲಿ ಸಾಮಾಜಿಕವಾಗಿರುವ ಗಜಲಗಳ ರಚನೆಯಲ್ಲಿ. ಪಗರಾಣಿಗಳನ್ನು‌ ಮನುಷ್ಯ ನಡೆಸಿಕೊಳ್ಳುವ ರೀತಿಯೂ ಕವಿಯ ಮನವನ್ನು ನೋಯಿಸಿದೆ. ಗೋವಿನ ಹಾಡಿನ ರೀತಿಯಲ್ಲಿ ಇರುವ ಗಜಲ್ ಕಸ ತಿಂದರೂ ರಸವನ್ನೇ ನೀಡುವ ಅಕಳ‌ ಮೊಲೆಗೆ ಎಂಜಿನ್ ಗಳನ್ನು ಹಾಕಿ ಹಿಂಡುವ ದಾರುಣ ಚಿತ್ರನೀಡುತ್ತಾರೆ.ಇಲ್ಲಿ ಸಂಬಂಧಗಳು ಕುಸಿಯುತ್ತಿರುವದರತ್ತವೂ ಕವಿಯ ನೋವಿದೆ.

ಇದರ ಜೊತೆಗೆ ಜ್ಞಾನದ  ಹಂಬಲವನ್ನು ಕವಿ ವ್ಯಕ್ತಪಡಿ ಸುತ್ತಾನೆ. ಆದರೆ ಆ ಜ್ಞಾನದ ಹಂಬಲ ಸ್ವ ಉಧ್ದಾರವನ್ನು ಬಯಸುವ ಪಾರಮಾರ್ಥದ ಹಂಬಲ ಮಾತ್ರವಾಗಿರದೆ ಅಲ್ಲಿಯೂ ಕೊನೆಗೆ ಕವಿ

ಹಸಿದ ಹೊಟ್ಡೆಗಳು ಕಂಡರೂ ಕುರುಡತನವೇಕೆ ನನ್ನಲ್ಲಿ

ಹಂಚಿ ತಿನ್ನುವ ಗುಣ ಬರಬೇಕಿದೆ  ನನ್ನಲ್ಲಿ

ಎನ್ನುವಲ್ಲಿ ಮತ್ತೆ ಅದೃ ಬಡವರ ಪರ,ಇಲ್ಲದವರ ಪರ ಕಾಳಜಿ ವಹಿಸುವ ಪ್ರಜ್ಞೆಯಾಗಿ ಕಂಡಿದೆ. ಹಾಗೆಯೇ ಬಾಲ್ಯದ ಸ್ನೇಹ ಎಂದೂ ಕಡಿಮೆಯಾಗದುದನ್ನು ಮಕ್ಕಳ ಮೃದು ಹೃದಯಗಳನ್ನು ಗುರುತಿಸುತ್ತಾರೆ.ಅವರದು ” ಪುಟ್ಟ ಎದೆಯಲ್ಲಿ ಅಡಗಿಹ ಗಟ್ಟಿ ನಿಷ್ಕಲ್ಮಶ ಪ್ರೀತಿ” ಎಂದು ಕಂಡುಕೊಂಡಿದ್ದಾರೆ. ಅವರ ಕಾವ್ಯದ ಪ್ರಮುಖ ಉದ್ದೇಶವೆ ಒಡೆದವ ಮನಸುಗಳನ್ನು ಒಂದು‌ ಮಾಡುವದು‌ ಮತ್ತು

” ಭಿನ್ನ‌ಮನಸುಗಳ ಸುಟ್ಟು ಪ್ರೀತಿ ಬಿತ್ತುವುದು” ಆಗಿದೆ.ಒಟ್ಟಾರೆ ಅವರ ಗಜಲು ಗಳು ಸಾರುವದು ಮನುಷ್ಯ  ಪ್ರೀತಿಯನ್ನೇ..ಅದು ಅವರು‌‌ ಕಂಡು‌ಕೊಂಡ ಗಂಡು ಹೆಣ್ಣಿನ‌ ಪ್ರೀತಿಯಲ್ಲಿಯೂ ಇದೆ ಅಂತೆಯೆ ತಮ್ಮ ಚೆಲುವೆಗೆ ಹೇಳುವ ಈ‌ಮಾತು ಲೋಕ‌ ಕಾಪಾಡುವ ಮಾತೂ ಹೌದು.

ದಿಕ್ಕೆಟ್ಟ ದಾರಿಯಲ್ಲಿ ದಾರಿ ದೀವಿಗೆಯಾದೆ ಚಲುವೆ

ಕತ್ತಲೆ ರಾತ್ರಿಯಲ್ಲಿ‌ತೋರು ಬೆಳಕಾದೆ ಚಲುವೆ

ಕಾವ್ಯವೂ ದಿಕ್ಜೆಟ್ಟ ದಾರಿಯಲ್ಲಿ ಬೆಳಕು ಚಲ್ಕುವ ದೀವಿಗೆ ಎಂದು ನಂಬಿದ ಶ್ರೀ ಈಶ್ವರ ಮಮದಾಪೂರ ಕಾವ್ಯೋದ್ಯೋಗದ ಆರಂಭದಿಂದಲೂ‌ ಪ್ರೀತಿ ಬೆಳೆಯನ್ನೇ ಬಿತ್ತಿ‌ ಬೆಳೆದಿದ್ದಾರೆ. ಅವರಿಂದ ಇನ್ನೂ ಇಂತಹ ಹತ್ತಾರು ಕೃತಿ‌ ನಿರೀಕ್ಷಿಸಬಹುದಾಗಿದೆ.

*****************************

ಡಾ.ಯ.ಮಾ.ಯಾಕೊಳ್ಳಿ

3 thoughts on “*ಗೋರಿಯೊಳಗಿನ ಉಸಿರು”

  1. ಅತ್ಯುತ್ತಮ ವಿಮರ್ಶೆಯೊಂದಿಗೆ ಉತ್ತಮ ಲೇಖನ ಬರೆದ ಡಾ.ವಾಯ್ .ಎಂ. ಯಾಕೊಳ್ಳಿ ಗುರುಗಳಿಗೆ ಧನ್ಯವಾದಗಳು. ಸಂಗಾತಿ ಬಳಗಕ್ಕೂ ಅನಂತ ಧನ್ಯವಾದಗಳು.
    – ಈಶ್ವರ ಮಮದಾಪೂರ

Leave a Reply

Back To Top