ಪುಸ್ತಕ ಸಂಗಾತಿ
‘ ಬಯಲೊಳಗೆ ಬಯಲಾಗಿ’
ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಈಗಾಗಲೇ ಅಂತರ್ಜಾಲದ ಗುಂಪುಗಳ ಮೂಲಕ ಗಜಲ್ ಕಾರರಾಗಿ ಹೆಸರು ಮಾಡಿರುವ ಶ್ರೀ. ಲಕ್ಷ್ಮಿಕಾಂತ ಮಿರಜಕರ ಅವರು ಬಯಲೊಳಗೆ ಬಯಲಾಗಿ ತಮ್ಮ ಮೊದಲ ಗಜಲ್ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶ್ರೀ. ನೇತಾಜಿ ಹಾಗೂ ಶ್ರೀಮತಿ. ಲಕ್ಷ್ಮಿ ದಂಪತಿಯ ಪುತ್ರರಾದ ಲಕ್ಷ್ಮಿಕಾಂತ ಹುಟ್ಟೂರು ಶಿಗ್ಗಾಂವನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದವರು. ಬೆಂಗಳೂರಿನ ಎಂ. ವಿ. ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ನಂತರ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ , ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಮಾಧ್ಯಮ ಅಧ್ಯಯನ ಎಂ.ಎ ಪದವಿಗಳನ್ನು ಪೂರೈಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಲಕ್ಷ್ಮಿಕಾಂತ ಅವರ ಕಥೆ, ಕವನ ಮತ್ತು ಗಜಲ್ ಗಳು ಪ್ರಕಟಗೊಂಡಿವೆ. ನವೀನಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ , ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾವ್ಯ ಸ್ಪರ್ಧೆಯ ಬಹುಮಾನ ಹಾಗೂ ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ ೨೦೧೬ ನೇ ಸಾಲಿನ ‘ಆದರ್ಶ ಶಿಕ್ಷಕ ಪ್ರಶಸ್ತಿ’ , ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ ‘ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೨೦೧೮ ನೇ ಸಾಲಿನ ‘ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿ’ಗಳು ಲಭಿಸಿವೆ.
ಗಜಲ್ ರಚನೆಯ ನಿಯಮಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ನಂತರವೇ ಲಕ್ಷ್ಮಿಕಾಂತ ಅವರ ಮೊದಲ ಗಜಲ್ ಸಂಕಲನದ ಕನಸು ನನಸಾದುದು. ನೇತಾಜಿ ಪ್ರಕಾಶನದಿಂದ ಪ್ರಕಟಗೊಂಡಿರುವ ಬಯಲೊಳಗೆ ಬಯಲಾಗಿ ಕೃತಿಯಲ್ಲಿ ಒಟ್ಟು ೬೩ ಗಜಲ್ ಗಳಿವೆ. ಮುರದ್ಧಫ್ ಗಜಲ್ ಗಳೇ ಹೆಚ್ಚಾಗಿದ್ದು ಗೈರ್ ಮುರದ್ಧಫ್ , ಜುಲ್ ಕಾಫಿಯಾ ಮತ್ತು ಸಂಪೂರ್ಣ ಮತ್ಲಾ ಗಜಲ್ ಗಳೂ ಇವೆ. ಗಜಲ್ ಕ್ಷೇತ್ರದಲ್ಲಿ ಖ್ಯಾತನಾಮರಾದ ಶ್ರೀ. ಅಲ್ಲಾಗಿರಿರಾಜ್, ಕನಕಗಿರಿ ಅವರ ಮುನ್ನುಡಿ ಹಾಗೂ ಶ್ರೀಮತಿ. ಪ್ರೇಮಾ ಹೂಗಾರ ಅವರ ಬೆನ್ನುಡಿ ಇವೆ.ಸಂಕಲನಕ್ಕೆ ಮುಖಪುಟವೇ ಮುಖ್ಯ ಆಕರ್ಷಣೆಯಾಗಿದೆ. ಮುದ್ರಣ ಅಚ್ಚುಕಟ್ಟಾಗಿದ್ದು ಪ್ರತೀ ಗಜಲಿನ ಪುಟ ವಿನ್ಯಾಸ ಓದುಗರ ಮನಸೆಳೆಯುತ್ತದೆ. ಗಜಲ್ ಗಳು ಕೇವಲ ಪ್ರೇಮ, ಪ್ರೀತಿ , ಶೃಂಗಾರಗಳಿಗೆ ಸೀಮಿತವಾಗಿರದೇ ಗಾಂಧಿ, ಡಾ.ಅಂಬೇಡ್ಕರ್, ದಮನಿತರ ನೋವು, ಹೆಣ್ಣಿನ ಶೋಷಣೆ, ಅಸಮಾನತೆ, ಮನುಷ್ಯರ ಸ್ವಾರ್ಥ, ಬಲಹೀನರ ಅಸಹಾಯಕತೆ , ಕೋಮುವಾದ…ಹೀಗೆ ವಿವಿಧ ವ್ಯಕ್ತಿ , ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ರಚಿಸಲ್ಪಟ್ಟಿವೆ.
ಅಗಲಿದ ಪ್ರೀತಿಯ ತಂದೆಯವರಿಗೆ ಈ ಸಂಕಲನವನ್ನು ಅರ್ಪಿಸಿರುವ ಲಕ್ಷ್ಮಿಕಾಂತ ಅವರೇ ತಮ್ಮ ನುಡಿಗಳಲ್ಲಿ ಹೇಳಿರುವಂತೆ ‘ ಬಯಲು ‘ ಎಂಬ ಪದಕ್ಕೆ ‘ ಖಾಲಿಯಾದ ಆವರಣ ‘ ಎಂಬ ಅರ್ಥವಿದ್ದರೂ ಶರಣರು ಈ ಪದವನ್ನು ಪರಮಾತ್ಮನಿಗೆ ಸಮೀಕರಿಸಿದ್ದಾರೆ. ‘ಬಯಲು’ ಎಂಬುದಕ್ಕೆ ಸೃಷ್ಟಿಯೆಂಬ ದೇವರು, ಸತ್ಯ, ಜ್ಞಾನ, ಆನಂದ, ಶಕ್ತಿ , ಮುಕ್ತಿ, ನಿರ್ವಾಣ, ಸಮಾಧಿ, ಶಿವತ್ವ, ಬುದ್ಧತ್ವ, ಬಸವತ್ವ…… ಇತ್ಯಾದಿ ಅರ್ಥಗಳಿದ್ದು ಪರಿಪೂರ್ಣವಾದ
ಅನಂತ ಚೈತನ್ಯದ ಪ್ರತೀಕವಾಗಿದೆ.
ಮನುಷ್ಯ ಸ್ಥಾವರನಾಗದೇ ಜಂಗಮನಾಗಿದ್ದು ಬಯಲೊಳಗೆ ಬಯಲಾಗಿ ಬೆರೆತು ಯಾವಾಗಲೂ ಬಯಲಾಗುವ ಗುಣವನ್ನು ಹೊಂದಿರಬೇಕೆಂಬ ಆಶಯದೊಂದಿಗೆ ಈ ಗಜಲ್ ಸಂಕಲನವನ್ನು ಹೊರತಂದಿರುವ ಲಕ್ಷ್ಮಿಕಾಂತ ಅವರು ಗಜಲ್ ರಚನೆಯ ಅಮಲಿನಲ್ಲಿ ಕಳೆದುಹೋಗಿದ್ದಾರೆ. ಅವುಗಳು ನೀಡಿದ ಸುಖ ಮತ್ತು ಪ್ರಶಾಂತ ಭಾವನೆಯನ್ನು ತನ್ಮಯತೆಯಿಂದ ಅನುಭವಿಸಿದ್ದಾರೆ. ಬದುಕನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ಕಲಿತಿದ್ದಾರೆ. ಬಯಲೊಳಗೆ ಬಯಲಾಗಿ ಸಂಕಲನದ ಗಜಲ್ ಗಳನ್ನು ಓದುತ್ತಿದ್ದಂತೆ ಓದುಗರೂ ಓದಿನ ನಶೆಯಲ್ಲಿ , ದೊರೆವ ಹಿತ ಸಂವೇದನೆಯಲ್ಲಿ ಕಳೆದುಹೋಗುವುದು ಸುಳ್ಳಲ್ಲ.
ಮನಮುಟ್ಟುವ, ನನಗಿಷ್ಟವಾದ ಕೆಲವು ಗಜಲ್ ಗಳ ಸಾಲುಗಳನ್ನು ನಾನೀಗ ಉಲ್ಲೇಖಿಸುತ್ತಿದ್ದೇನೆ.
ಜಗದ ಎಲ್ಲ ಜೀವಿಗಳಲ್ಲಿ ಕಷ್ಟವೂ ಇದೆ ಸುಖವೂ ಇದೆ
ಹಣೆಯಲಿ ವಿಧಿ ಬರೆದ ನಸೀಬಿನ ಎದುರು ಎಲ್ಲರೂ ಒಂದೇ ( ಗಜಲ್ ೧ )
ಅರಿವೆಂಬ ಬಯಲೊಳಗೆ ಬಯಲಾಗಬೇಕಿದೆ ಸಾಕಿ
ಭಕ್ತಿಯೆಂಬ ಬಯಲೊಳಗೆ ಶರಣನಾಗಬೇಕಿದೆ ಸಾಕಿ ( ಗಜಲ್ ೪ )
ಸುಲಭವಾಗಿ ಸ್ನೇಹ ಸಂಬಂಧಗಳ ಕಡಿದುಕೊಳ್ಳುತ್ತಾರೆ ಕಾಂತ
ಮನಸ್ಸುಗಳ ನಡುವೆ ಗೋಡೆ ಕಟ್ಟಿದ್ದಾರೆ ಯಾರನ್ನು ದೂರದಲಿ ( ಗಜಲ್ ೮ )
ಪ್ರಕ್ಷುಬ್ಧ ಕಾಶ್ಮೀರ ಮತ್ತೆ ಪ್ರೇಮ ಕಾಶ್ಮೀರವಾಗಿ ಬದಲಾಗಲಿ ಇನ್ನಾದರೂ
ಕಲ್ಲು ತೂರುವ ಕೈಗಳಲಿ ಶಾಂತಿ ಹೂವುಗಳು ಅರಳಲಿ ಇನ್ನಾದರೂ ( ಗಜಲ್ ೧೩ )
ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ
ಕೆಸರಾದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ( ಗಜಲ್ ೧೯ )
ಜಾತಿ, ಧರ್ಮ ,ಅಂತಸ್ತು ಎಂದು ಹೆಚ್ಚು ಬೀಗಬೇಡ ಕಾಂತ
ಇತಿಹಾಸ ನೆನಪಿಸಿಕೊಳ್ಳುವುದಿಲ್ಲ ಮನುಷ್ಯತ್ವ ಮರೆತರೆ ( ಗಜಲ್ ೨೨ )
ಬೆಳಕನೀಯುವ ದೀಪಕ್ಕೂ ಇದೆ ಉರಿಯುವ ಸಂಕಟ
ನೋವುಂಡ ಮನವೇ ಮುಕ್ತವಾಗಿ ನಗುವುದು , ತಿಳಿಯಿತೇ ಸಖಿ ( ಗಜಲ್ ೨೮ )
ನೀನಿಲ್ಲದೆ ನನ್ನ ಹಗಲು ಇರುಳು ಕಳೆದಿಲ್ಲ
ನಿನ್ನ ತೋಳಲಿ ಇರದ ದಿನ ಅದು ನನ್ನದಲ್ಲ ( ಗಜಲ್ ೩೪ )
ನೀನು ಬೆಳಗಿದ ದೀಪದ ಬೆಳಕನು ಆರಿಸಿದ್ದೇವೆ ಕ್ಷಮಿಸು ಗಾಂಧಿ
ನೀನು ತೋರಿಸಿದ ಸರಿದಾರಿಯನ್ನು ತೊರೆದಿದ್ದೇವೆ, ಕ್ಷಮಿಸು ಗಾಂಧಿ ( ಗಜಲ್ ೪೦ )
ಒಳಕೊಳೆ ತೊಳೆಯುವ ಜೀವಕೆ ಹತ್ತಿದಾಗಬೇಕು
ಭರವಸೆ ತುಂಬುವ ಜೀವಕೆ ಹತ್ತಿರಾಗಬೇಕು ( ಗಜಲ್ ೪೪ )
ಪ್ರೀತಿ ಬಿಟ್ಟು ಯಾವುದೂ ಶ್ರೇಷ್ಠವಲ್ಲ ಇಲ್ಲಿ
ಒಬ್ಬರಿಗೆ ಒಬ್ಬರು ನೆರವಾಗಬೇಕು ಮನುಷ್ಯರಂತೆ ( ಗಜಲ್ ೫೦ )
ನಡೆಯುತ್ತ ಅಂದುಕೊಂಡ ಗಮ್ಯ ಸೇರುವ ಅಲೆಮಾರಿಯಂತೆ ನಾನು
ಈಜುತ್ತ ಕಷ್ಟಗಳ ನದಿಯನ್ನು ದಾಟುವ ಸಾಹಸಿಯಂತೆ ನಾನು ( ಗಜಲ್ ೬೦ )
ಲಕ್ಷ್ಮಿಕಾಂತ ಅವರ ಬರವಣಿಗೆ ಶಕ್ತಿಯುತವಾಗಿರುವುದಷ್ಟೇ ಅಲ್ಲದೆ ಸಾಮಾಜಿಕ ಪಿಡುಗುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಗೂ ಮೌಲ್ಯಯುತ ಸಂದೇಶವನ್ನು ನೀಡುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ. ಆದರೆ , ಕೆಲವು ಗಜಲ್ ಗಳ ಮಿಸ್ರಾಗಳು ಸ್ವತಂತ್ರವಾಗಿಲ್ಲದಿರುವುದು ಒಂದು ಸಣ್ಣ ಕೊರತೆ. ಮುಂದಿನ ದಿನಗಳಲ್ಲಿ ಇದನ್ನು ನೀಗಿಸಿಕೊಂಡು ಅವರು ಮತ್ತಷ್ಟು ಸತ್ವಯುತ ಗಜಲ್ ಸಂಕಲನಗಳನ್ನು ಹೊರತರುವ ಮೂಲಕ ಗಜಲ್ ರಚನೆಯ ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಾಗಲೆಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಆ ತಾಯಿ ಸರಸ್ವತಿಯ ಆಶೀರ್ವಾದ ಎಂದೂ ಕಾಂತ ನ ಮೇಲಿರಲಿ.
***************************
ಎ . ಹೇಮಗಂಗಾ
ತುಂಬ ಸುಂದರ ಮತ್ತು ಸಂಕ್ಷಿಪ್ತ ವಿಮರ್ಶೆ ಮತ್ತು ವಿಶ್ಲೇಷಣೆ.ಗಜಲ್ ನ ಹೂರಣದ ಒಂದು ಸವಿ ತುತ್ತನ್ನು ತಿನ್ನಿಸಿ, ಮತ್ತಷ್ಟು ತಿನ್ನಬೇಕೆಂಬ ಹಂಬಲ ಹುಟ್ಟು ಹಾಕಿದೆ. ಧನ್ಯವಾದಗಳು ಹೇಮಗಂಗಾ ಮೇಡಮ್.