ತವರಿನ ಬೆಟ್ಟ

ಕಥೆ

ತವರಿನ ಬೆಟ್ಟ

ಶಾಂತಿ ವಾಸು

Old Indian Woman Paintings | Fine Art America

ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ?  ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, ಕುಕ್ಕರಗಾಲಲ್ಲಿ ಕೂತು ಬೀಡಿ ಸೇದುತ್ತಿದ್ದ ಅಪ್ಪ, ತಾತು ಕಂಡಿದ್ದೇ ತಡ ದುರುಗುಟ್ಟಿ ನೋಡಿ “ಆ ಬಟ್ಟೆ ಬಿಚ್ಚಿ ಒಗಿಯೋಕ್ಕಾಕು ಅಂತ ಎಷ್ಡಪ ಯೋಳಾನಿ? ಮೂಸಾದೇ ಬ್ಯಾಡ ನೋಡೀರೇ ಸಾಕು ಗಬ್ಬಂತದೆ” ಎಂದವನು ಪಂಚೆಯನ್ನು ಮೊಣಕಾಲುಗುಂಟ ಮಾಡಚುತ್ತಾ ತಾತುವನ್ನು ದಾಟಿ ಮುಂದೆ ಹೋಗಿ, ತೆನೆ ಬಿಟ್ಟ ಜೋಳದ ಹುಲ್ಲಿಗೆ ಮೂತ್ರ ಸಿಂಪಡಿಸಿ ಬಂದು, ಮಡಚಿದ ಪಂಚೆಗಿಂತಲೂ ಕೆಳಕ್ಕಿದ್ದ ಖಾಕಿ ಚಡ್ಡಿ ಕಾಣಿಸುವಂತೆ ತಾತುವಿನ ಎದುರಿಗೆ ತುಸು ದೂರವಿದ್ದ ನೇರಳೆಮರದ ಕೆಳಗೆ ಕುಕ್ಕರಗಾಲಲ್ಲಿ ಕುಳಿತು ಮೊಣಕಾಲುಗಳನ್ನು ಕೈಗಳಿಗೆ ಆಸರೆ ಕೊಟ್ಟು, ಓಲೆಯೂರಿನ ಬೀದಿಬೀದಿಗಳಲ್ಲಿ ಟಂಕಿ ನೀಡಿದ ಪಿರ್ಯಾದಿ ಬಗೆಹರಿಸುವ ಸಲುವಾಗಿ ಮಾರನೇದಿನ ಮಧ್ಯಾಹ್ನ ಮೂರು ಗಂಟೆಗೆ ಊರಹಿರಿಯ ಗುಡ್ಡಯ್ಯನ ಮನೆ ಮುಂದೆ ಜನ ಸೇರಬೇಕೆಂದು ಇಂದು ಬೆಳ್ಳಂಬೆಳಗ್ಗೆ  ಸಾರಿದ ಡಂಗೂರದ ಖಾರ ಅಳ್ಳಯ್ಯನ ಮನದಲ್ಲಿ ಉರಿಯುತ್ತಿತ್ತು.

ಅವನು ತೊಟ್ಟ ಬಟ್ಟೆ ತಾತುವಿನಷ್ಟು ಮಾಸದಿದ್ದರೂ, ಒಗೆದು ಐದಾರು ತಿಂಗಳಾಗಿರುವ ಲಕ್ಷಣವೆಂಬಂತೆ ಮೂಲ ಬಣ್ಣ ಕಳೆದುಕೊಂಡಿದ್ದವು. ಸುಮ್ಮನೆ ಕುಳಿತು ಅತ್ತಿತ್ತ ನೋಡುತ್ತಿದ್ದ ತಾತು ಕೊನೆಗೆ ತಾನೇ ಮೌನ ಮುರಿದು “ಮತ್ತೇನಂತೆ ನಿನ್ನೆಂಡ್ರಿಗೆ? ವತ್ತಾರೆದ್ದು ವಟಗುಡ್ತಾವ್ಳಿ. ನಿಮ್ಮವ್ವುನ್ನ ಬೆಟ್ಟ ಬ್ಯಾಡ ಗದ್ದೆ ಕೇಳು ಅಂತಂದು ತಮ್ಮನ್ಮನೀಗೆ ಕಳ್ಸಿರವ್ಳು ಇವ್ಳು. ಈಗ್ಯಾಕೆ ಪಂಚಾತಿಗೆ ಪಿರ್ಯಾದು ಕೊಟ್ಟಾಳೋ ಕೇಲ್ಲಾ ಅಂದ್ರೆ, ಮನೆ ಕಟ್ಟೋ ಮಾತಾಡ್ತೀ ಯಾಕ್ಲಾ ಬಾಡ್ಕೋ? ಈಗ್ಲೇ ಉಣ್ಣಾಕ್ಕಿಕ್ಕಲ್ಲಾ, ನಂಬಟ್ಟೆ ಒಗ್ಯಾ ಕೆಲ್ಸ ಒಂದಪನಾರಾ ಮಾಡಾಳೇನ್ಲಾ? ನಿಮ್ಮವ್ವ ಓಗಿ ಆಗ್ಲೇ ಮೂರು ವರ್ಸಾ ಆದೋ.  ಈಗ್ಯಾಕೆ ನಿನ್ನವ್ವನ್ಮ್ಯಾಲೆ ಪಿರೀತಿ ಉಕ್ತಾ ಐತೆ ಅಂತ ಕೇಳೀಯಾ?” ಎನ್ನುತ್ತಾ ತಾನೂ ಸುಟ್ಟು ಬೆರಳನ್ನೂ ಸುಟ್ಟ ಬೀಡಿ ಎಸೆದು ಸುಮ್ಮನೆ ನಾಲಿಗೆ ಹೊರಚಾಚಿ “ಥು ಥು” ಎಂದು ನಾಲಿಗೆಗಂಟಿದ ತಂಬಾಕಿನ ನಾರನ್ನು ಹೊರದಬ್ಬಿದ.

ಎಲ್ಲಿಯೋ ನೆಟ್ಟ ನೋಟವನ್ನು ಬದಲಿಸದ ಅಳ್ಳಯ್ಯ “ವತ್ತಾರಿಂದಲ್ಲ ಮೊನ್ನೆ ಬಂದಾಗಿಂದ್ಲೇ, ಅತ್ತೆ ಬಂದ್ರೆ ಜೊತೆಗೇ ಬೆಟ್ಟ ಬತ್ತದೆ ಆಮ್ಯಾಕೆ ಬೆಟ್ಟ ಮಾರಿ, ಈ ಮನೆ ಕೆಡವಿ ಬ್ಯಾರೆ ಮನೆ ಕಟ್ಟುಸ್ಬೇಕು ಅಂತವ್ಳೇ” ಎನ್ನುತ್ತಾ ಮುಂದುವರೆಸಿ “ಬೆಟ್ಟ ಬ್ಯಾಡಾಂದು ಊರುಕೇರಿ ಒಂದ್ಮಾಡ್ದೂಳು ನೀನು ಈಗ್ಯಾಕೇ ಪಂಚಾತಿ ರಂಡೆ ಅಂತ ನಾನಂದ್ರೆ, ಅವ್ವನ್ನ ಕರ್ಕೊಂಬರ್ಲಿ ಅಂತನೇ ನಾಳೆ ಪಂಚಾತಿ ಕರ್ದಾಳಂತೆ” ಎಂದವನು ಖೇದಕರ ಮುಖ ಮಾಡಿ “ಆಸ್ತಿಗಂತ ಅವ್ವನ್ನ ತವರಿಗೆ ಓಡುಸ್ದೆ ಅಂತ ಊರೇ ಉಗೀತಾ ಅದೆ. ಅದ್ರಾಗೆ ಈ ರಂಡೆ  ಶಿಲ್ಮಾವನ್ಮ್ಯಾಲೆ (ಶಿಳ್ಳೆ ಮಾವ) ಪಿರ್ಯಾದು ಕೊಟ್ಟವಳೆ. ಓಗಿಬರೋ ತಾವು ಮುಖ ತೋರ್ಸೋದೆಂಗೆ?” ಎನ್ನುತ್ತಾ ಬಲಗಡೆ ಕತ್ತು ಹೊರಳಿಸಿ ಜಗುಲಿಯ ಮೇಲಿದ್ದ ತಾತುವನ್ನು ನೋಡಿ “ಇವ್ಳವ್ವ ಬೆಟ್ಟ ಮಾರೋಕೆ ಯೋಳಿ ಕಳ್ಸಿರೊ ಹಂಗೆ ಕಾಣ್ತದೆ ಕಣಪ್ಪ. ಯಾರೋ ಯೋಳಾರಂತೆ, ಅವ್ವನ್ಗೆ ಶಿಲ್ಮಾವ ಕೊಟ್ಟಿರೋ ಬೆಟ್ಟ ಪೂರಾ ಗ್ರೇನಿಟ್ ಇದ್ದಾದಂತೆ. ತೊಂಬತ್ತು ಲಕ್ಸಾನೋ ಒಂದು ಕೋಟಿನೊ ಆದಾತಂತೆ.” ಎಂದ.

ತಾತು ಯಾವುದೇ ಭಾವನೆ ತೋರದೆ ಗಡಸು ದನಿಯಲ್ಲಿ “ಅಲ್ಲಲೇ ಅವ್ಳು ಬೆಟ್ಟ ಮಾರು ಅಂದ್ರೆ ಮಾರಕ್ಕೇನು ಅವಳವ್ವoದೇನ್ಲಾ?” ಎನ್ನುವಷ್ಟರಲ್ಲಿ ಕೋಳಿಗಳಿಗೆ ಹಿಂದಿನ ದಿನದ ಮುದ್ದೆ ಪಾತ್ರೆಗಂಟಿದ ಅಟ್ಟೆಸೆಯಲು ಬಂದ ಅಳ್ಳನ ಹೆಂಡತಿ ಟಂಕಿ ತುಸು ನಿಂತಂತೆ ಮಾಡಿ ಬಾಗಿಲ ಕಡೆ ತಿರುಗಿದ ಭಂಗಿಯಲ್ಲಿ ಆಕಸ್ಮಿಕವೆಂಬಂತೆ “ಮಾವ ನಾಳೆ ಅತ್ತೆ ಬರ್ಬೋದು ?” ಎಂದಳು. ತನ್ನ ಮಾತು ಅರ್ಧಕ್ಕೆ ನಿಲ್ಲಿಸಿ, ಟಂಕಿಯ ಮಾತಿಗೆ ಉರಿದುಬಿದ್ದ ಮಾವ. “ಓಯ್ ಓಗು ಒಳ್ಗೆ. ತೂದ್ಬುಟ್ರೆ ಅಂಗೇ ಉದ್ರೋಯ್ತಿಯ. ಯಾ ಗಳ್ಗೆನಾಗೆ ಬಂದ್ಯೋ ಅಲ್ಲಿಂದ್ಲೇ ಸುರುವಾತು ದರಿದ್ರ. ಹರೀವಲ್ದಾಗೈತೆ ಕರ್ಮ. ಒಂದಪನಾರ ನೆಲ ಗುಡ್ಸುದ್ದೇ ಕಾಣೆ. ಬಂದುದ್ದೇ ಬಂದೆ ಎಲ್ರು ಸಂತೋಸ ಗುಡುಸ್ಬುಟ್ಟೆ. ಸಾಲ್ದು ಅಂತ ಪಿರ್ಯಾದಿ ಕೊಟ್ಟಿದ್ದೀಯಲ್ಲ, ಏನು ನಮ್ಮಾನ ಕಳೀಬೇಕಂತ ಮಾಡಿದ್ದೀಯ ಯಂಗೆ? ಮನಿ ಬುಟ್ಟೋಗೂ ಅಂದ್ರೂ ಹೋಗವಲ್ಲೇ?” ಎನ್ನುತ್ತಾ ಬುಸುಗುಟ್ಟಿದ ತಾತುವನ್ನು  ಓರೆಗಣ್ಣಿಂದ ನೋಡಿ ಒಳಗೆ ಹೋದವಳಿಗೆ ಕೇಳುವಂತೆ “ನೀನು ಬೋದು, ಓಗು ಅಂದೇಟ್ಗೆ ನನ್ಪೀರಿ ದಡ್ಡಿ ಸುಮ್ಮುನೋಗ್ಬುಟ್ಲು. ಕರ್ಯಾಕೆ ಅಂತ ಓದ್ನನ್ಮಗುನ್ನ ಆ ಶಿಳ್ಳೆ ಬಾಯ್ಗೆ ಬಂದಂಗೆ ಅಂದು ಕಳುಸ್ದ. ಈಗ ಯಾಮಕ ಇಟ್ಕಂಡು ಪಂಚಾತಿನಾಗೆ ಅವುಳ್ನ ಬೇಕು ಅಂತ ಕೇಳೀ?” ಅಂದ.

ಟಂಕಿಗೆ ಕೇಳಿಸಿತೋ ಇಲ್ಲವೋ ತಿಳೀದಾಗಲೀ ಮತ್ತೆ ಬಂದು “ಮುದ್ದೆ ಉಣ್ಣಕ್ಕಿಕ್ಕಾನೇ?” ಎಂದಳು. ಎದ್ದು ಪಂಚೆ ಇಳಿಬಿಟ್ಟು ಹೊರಟ ಅಳ್ಳಯ್ಯನನ್ನು ಹಿಂಬಾಲಿಸಲು ತಾತು ಕುಳಿತಂತೆಯೇ ಕಂಬಳಿಯನ್ನು ಎಡ ಹೆಗಲಿನ ಮೇಲೆ ಹಾಕಿ, ಕೋಲು ಅಲ್ಲೇ ಬಿಟ್ಟು ಎದ್ದು ಒಳಗೆ ಹೋದವ ಬಾಗಿಲ ಎಡಮಗ್ಗುಲಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತ. ಪಂಚೆ ಕಾಲಿಗೆ ತೊಡರಿ ‘ರಪ ರಪ’ ಸದ್ದು ಮಾಡಿ ಗುಡಿಸದೇ ಎಷ್ಟೋ ದಿನಗಳಾಗಿದ್ದ ನೆಲದ ಧೂಳನ್ನು ಮೇಲೆಬ್ಬಿಸಿ, ಹೊಸ್ತಿಲಿನಿಂದ ಒಳಗಿಣುಕಿದ ಹನ್ನೊಂದು ಗಂಟೆಯ ಬಿಸಿಲಿನ ದಟ್ಟ ಕಿರಣಕ್ಕೆ ಧೂಪವನ್ನಾಗಿಸಿದ್ದ ಅಳ್ಳಯ್ಯ.

ತವರುಮನೆಯವರು ಮೂರು ವರ್ಷದ ಕೆಳಗೆ ಭಾಗವಾಗುವ ಸಂಧರ್ಭದಲ್ಲಿ ಹರಿಷಿಣ ಕುಂಕುಮಕ್ಕೆಂದು ಒಬ್ಬಳೇ ಹೆಣ್ಣುಮಗಳು ಪೀರಿಗೆ, ಬಸ್ಸು ಓಡಾಡುವ ರಸ್ತೆ ಬದಿಯಲ್ಲಿ ಎಪ್ಪತ್ತೈದು ತೆಂಗಿನಮರ, ಒಂದು ಭಾವಿ ಇರುವ ಎರಡೆಕರೆ ಜಾಗ ಹಾಗೂ ಊರೊಳಗೆ ನದಿ ಕೊಳ್ಳದ ಪಕ್ಕಕ್ಕಿದ್ದ ಎರಡೆಕರೆ ಭತ್ತದ ಗದ್ದೆಯನ್ನು ಬಳುವಳಿಯಾಗಿ ನೀಡಿದ್ದರು. ಆದರೆ ಊರೊಳಗಿನ ಗದ್ದೆಯ ಜಾಗದಲ್ಲಿ ಹರಡಿದ್ದ ಎರಡಾಳೆತ್ತರದ ಬೆಟ್ಟವು ಪೀರಿಯ ಒಂದೂಕಾಲೆಕರೆ ಜೊತೆಗೆ ಅಕ್ಕಪಕ್ಕದ ಸುಮಾರು ಇಪ್ಪತ್ತೆರಡು ಎಕರೆ ಜಮೀನನ್ನು ನುಂಗಿತ್ತು.

ತಮಗೆ ನೀಡಿದ ಜಮೀನಿನಲ್ಲಿ ಬೆಟ್ಟ ಬಂದಿದ್ದು ಅದನ್ನು ಹಿಂತಿರುಗಿಸಿ, ಬಸ್ಸು ಓಡಾಡುವ ಜಾಗದಲ್ಲಿ ಪೀರಿಗೆ ಮೊದಲೇ ನೀಡಿದ ಜಮೀನಿನ ಪಕ್ಕದಲ್ಲೇ ಬದಲಿ ಜಾಗ  ಕೇಳಿ ಪಡೆದು ತರಬೇಕೆಂದು, ಲೋಕಜ್ಞಾನವಿಲ್ಲದ ಅತ್ತೆಯನ್ನು ಪುಸಲಾಯಿಸಿ ಓಲೆಯೂರಿನಿಂದ ಅವಳ ತವರಿಗೆ ಕಳುಹಿಸಿದ್ದಳು ದುರಾಶೆಯ ಹೆಣ್ಣು ಟಂಕಿ. ಅತ್ತೆಯನ್ನು ತವರಿಗೆ ಅಟ್ಟಿದವಳಿಗೆ ಮನೆಯಲ್ಲಿದ್ದ ಎರಡು ಗಂಡುಗಳು ಲೆಕ್ಕದಲ್ಲೇ ಇರಲಿಲ್ಲವಾಗಿ ಸದಾ ಅವಳಮ್ಮನ ಮನೆಗೆ ಹೋಗಿ ಬಿಡಾರ ಹೂಡುವುದು, ಅಪ್ಪಮಗ ಆಳುಗಳನ್ನಿಟ್ಟು ಉದುರಿಸಿ ಸಿಪ್ಪೆಬಿಡಿಸಿ ಬೀಜ ತೆಗೆಸಿಟ್ಟ ಹುಣಸೆಹಣ್ಣು,ಅಕ್ಕಿ, ಬೆಲ್ಲ, ತೆಂಗಿನಕಾಯಿಗಳನ್ನು ಆಗಾಗ ಬಂದು, ಯಾರನ್ನೂ ಕೇಳದೆ ಹೊತ್ತುಕೊಂಡು ಹೋಗಿ ತವರು ಮನೆಯನ್ನು ಉದ್ದಾರ ಮಾಡುವವಳಾಗಿದ್ದಳು. ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಿಲ್ಲದ ಟಂಕಿ ಆ ಮನೆ ಈ ಮನೆ ಸುತ್ತುತ್ತಾ, ಸಂಸಾರ ಮಾಡುವ ಹಂಗಿಗೇ ಹೋಗಿರಲಿಲ್ಲ.

ಇವಳಿಲ್ಲದಾಗ ಪಕ್ಕದೂರಿನಲ್ಲಿದ್ದ ತಾತುವಿನ ಮಗಳು ಚಕ್ಕಿಯನ್ನು ಕರೆತರುವ ಅಪ್ಪಮಗ ಊಟದ ಚಿಂತೆಯೊಂದಿಲ್ಲದೆ ಕಾಲಕಳೆಯುತ್ತಿದ್ದರು. ಆದರೆ ಈಗ ಒಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಮನೆಗೆ ಬಂದ ಟಂಕಿ, ಚಕ್ಕಿಯನ್ನು ಬಾಯಿಗೆ ಬಂದಂತೆ ಬೈದು ಮತ್ತೆ ಬಾರದಂತೆ ತಾಕೀತು ಮಾಡಿ ಕಳಿಸಿದ್ದಳು. ನಂತರದ ವ್ಯವಸ್ಥೆಯಲ್ಲಿ ಆಳು ಕರಿಯನ ಹೆಂಡತಿ ಅವೇರಿ, ನಿತ್ಯ ಬಂದು ನಾಲ್ಕು ಮುದ್ದೆ ಯಾವುದೋ ಒಂದು ಸಾರು ಮಾಡಿಟ್ಟು ಹೋದರೆ ಈ ನತದೃಷ್ಟರು ಎರಡು ಹೊತ್ತು ತಾವೇ ಬಡಿಸಿಕೊಂಡು ಉಣ್ಣುವರು. ಬೇರೆ ಮನೆಯ ಹೆಣ್ಣನ್ನು ಸೊಸೆಯಾಗಿ ಕರೆತಂದ ಈ ಸಂಸಾರವು ಯಾವುದೇ ತಪ್ಪೇ ಮಾಡದೆ ಪ್ರತಿದಿನ ಶಿಕ್ಷೆ ಅನುಭವಿಸುತ್ತಿತ್ತು. ಒಂದು ವಾರದ ಹಿಂದೆ ಇದ್ದಕ್ಕಿದ್ದಂತೆ ಅತ್ತೆಯ ಬಗ್ಗೆ ಅತೀ ಅಕ್ಕರೆ ಬಂದು “ಅತ್ತೆ ಪೀರಿಯನ್ನು ಕರೆತಂದು ಬಿಡಲು ಅವಳ ತಮ್ಮನಿಗೆ ತಾಕೀತು ಮಾಡಬೇಕು” ಎಂದು ಊರ ಹಿರಿಯರಲ್ಲಿ ಪಿರ್ಯಾದಿ ನೀಡಿದ್ದಳು. ಅಂತೆಯೇ ನಾಳೆ ಪಂಚಾಯ್ತಿ ಕೂಡುವುದಿತ್ತು.

ಚಾಪೆಯ ಮೇಲೆ ಕುಳಿತ ತಾತು ಅಲ್ಲೇ ಮಲಗಿ, ಒಂದು ಗೊರಕೆ ತೆಗೆದು ಎದ್ದು ತೊಟ್ಟಿಯ ನಂತರದ ಅಡುಗೆಮನೆ ದಾಟಿ ಹೋಗಿ ಹೊತ್ತಲಿನ ತೆಂಗಿನಮರದ ಹಿಂದಿನ ಗೋಡೆ ಮೇಲೆ ಮೂತ್ರವಿಸರ್ಜಿಸಿ ಬಂದು ಮತ್ತೆ ಚಾಪೆಯ ಮೇಲೆ ಕುಳಿತ. ನೋಡಿದರೆ ಸೊಸೆಯ ಸುಳಿವೂ ಇಲ್ಲ. ಮುದ್ದೆಯ ಘಮಲೂ ಇಲ್ಲ. ಅಳ್ಳಯ್ಯ ಎಲ್ಲೂ ಕಾಣಲಿಲ್ಲ. ಎದ್ದು ಅಡುಗೆ ಮನೆಯತ್ತ ಇಣುಕಿದವನಿಗೆ ಒಲೆ ಹಚ್ಚಿಯೇ ಇಲ್ಲದ್ದು ಕಂಡಿತು. ಹೊರಗೆ ಬಂದರೆ ಮಗ ಮರದಡಿ ಕುಂತು ಕಾಗದ ಸುತ್ತಿ ಕಿವಿಯೊಳಕ್ಕೆ ಬಿಟ್ಟು ನವೆಯನ್ನು ಹಿತವಾಗಿ ಶಮನ ಮಾಡಿಕೊಳ್ಳುತ್ತಿದ್ದ. “ಓಡೋದ್ಲೇನ್ಲಾ ಮತ್ತೆ?” ಎಂದ ತಾತುವನ್ನು ನೋಡದೆಯೇ  ಸಾಧಾರಣವೆಂಬ ಧೋರಣೆಯಲ್ಲಿ “ಊ” ಎಂದ ಅಳ್ಳಯ್ಯ.

ಮಾರನೇ ದಿನ ಊರ ಹಿರಿತಲೆ ಗುಡ್ಡಯ್ಯನ ಮನೆಯ ಅಕ್ಕಪಕ್ಕದ ಜಗುಲಿ ಮೇಲೆ ಸಾಲಾಗಿ ಕಾಲು ಇಳಿಬಿಟ್ಟು ಹಾಗೂ ನೆಲದ ಮೇಲೆ ಅಲ್ಲಲ್ಲಿ ಕುಕ್ಕರಗಾಲಲ್ಲಿ ಕುಳಿತ ಹದಿನೆಂಟು ಜನರಲ್ಲಿ ಮೂವರು ಪಟ್ಟಾಪಟ್ಟಿ ಚಡ್ಡಿ ಧರಿಸಿದ್ದರೆ ಮಿಕ್ಕವರು ಪಂಚೆಯನ್ನುಟ್ಟು ಪಂಚಾಯ್ತಿ ಕೇಳಲು ಬಂದಿದ್ದರು. ಇತ್ತ ಏಳು ಜನ ಬಂಧುಗಳೊಡನೆ ಓಲೆಯೂರಿಗೆ ಬಂದ ಶಿಳ್ಳೆ, ಅಕ್ಕ ಪೀರಿಯನ್ನು ಅವಳ ಮನೆಯಲ್ಲಿ ಬಿಟ್ಟು ಗುಡ್ಡಯ್ಯನ ಮನೆ ಬಳಿ ಬಂದು ನಾಲ್ಕು ಜನರ ಮಧ್ಯೆ ಜಗುಲಿಯ ಮೇಲೆ ಕುಳಿತ. ಹೊರ ಬಂದ ಗುಡ್ಡಯ್ಯ ಜಗುಲಿಯ ಕಂಬದ ಬಳಿ ನಿಂತು ಶಿಳ್ಳೆಯನ್ನುದ್ದೇಶಿಸಿ “ಊರಗೆಲ್ಲಾ ಸಂದಾಕದಾರೆನ್ಲಾ ಶಿಳ್ಳಾ?” ಎಂದರು. “ಊ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದು, ತಲೆ ಮುಂದೆ ಮಾಡಿ “ಬೆಟ್ಟ ಬ್ಯಾಡ ಅಂದೋಳು ಟಂಕಿ, ಬ್ಯಾರೆ ಕಡೆ ಗದ್ದೆ ಬೇಕು ಅನ್ನೋಳು ಟಂಕಿ, ಆಸ್ತಿ ತತ್ತಾ ಅಂತಂದು ಅತ್ತೇನ ತವ್ರಿಗೆ ಅಟ್ಟಿರೋಳು ಟಂಕಿ. ಈಗ ಅತ್ತೇನ ಬಿಟ್ಟೋರೋಕ್ಕೇ ಆಗಲ್ದು ತಂದು ಬುಡಿ ಅನ್ನೋಳು ಟಂಕಿನೇ. ಅದುಕ್ಕೇ ಬೆಟ್ಟ ನಾನೇ ಮಡೀಕ್ಕಂಡು, ರೊಡಾಗಿರೋ ಯಳ್ದೆಕ್ರೆ ಗದ್ದೆ ಅಕ್ಕಯ್ನ ಯಸುರ್ಗೆ ಮಾಡಿ ಕರ್ಕೊಂಬಂದು ಬುಟ್ಟಿವ್ನಿ. ಅತ್ತೆಸೊಸೆ ಮಧ್ಯ ನಾವ್ಯಾಕೆ?” ಎನ್ನುತ್ತಾ ಜಗುಲಿ ಇಳಿದು ಗುಡ್ಡಯ್ಯನ ಮುಂದೆ ಬಂದು “ಆದ್ರೆ ಅಣ್ಣೊ, ನಮ್ಮಕ್ಕನ್ನ ಸಾಯೋಗುಂಟ ನೋಡ್ಕಂಡ್ರೆ ಆಸ್ತಿ. ಇಲ್ದಿದ್ರಿಲ್ಲ ಅಂತ ಬರಸಿವ್ನಿ.” ಎನ್ನುತ್ತಾ ಪತ್ರವನ್ನು ಹಿರಿಯನ ಕೈಗಿತ್ತು “ಇಕಾ ಇದ್ನಾ ನೀನೇ ಟಂಕಿಗೆ ಕೊಡು. ನಾನು ಓಯ್ತೀನಿ” ಅನ್ನುತ್ತಾ ಏನನ್ನೋ ನೆನಪಿಸಿಕೊಂಡಂತೆ “ಭಾವನಾಸ್ತೀನೂ ಹಂಗೇ ಬರ್ಸೀವ್ನಿ”. ಎನ್ನುತ್ತಾ ತುಸುವೇ ದನಿಯೇರಿಸಿ “ನಿಮ್ಮೊರಿನ ಹೆಣ್ಣು ಟಂಕಿ ಹೇಳ್ದಂಗೆ ಎಲ್ಲಾ ಕೇಳಿವ್ನಿ. ಈಗ ಅವ್ಳು ನಮ್ಮಕ್ಕಯ್ಯನ್ನ ಸರೀ ನೋಡಲ್ಲಾಂದ್ರೆ ಏನು ಮಾಡ್ತೀರಿ?” ಕೇಳಿದ. ಹಿರಿಯ ಗುಡ್ಡಯ್ಯನಿಗೆ “ನಿಮ್ಮೂರಿನ ಹೆಣ್ಣು” ಎಂದದ್ದು ಅವಮಾನವಾದಂತಾಗಿ “ನಾವಿರೋದು ಯಾಕ್ಲಾ? ಅವುಳ್ನ ಈಗೇ ಕರ್ಸಿ ಯೋಳ್ತೀವಿ. ಬುದ್ದಿ ಬಂದಿಲ್ಲಾಂದ್ರೆ ಊರೊಳಿಕ್ಕೆ ಕಾಲು ಮಡಗಾಂಗಿಲ್ಲ. ಬೈಸ್ಕಾರ ಆಕ್ತೀವಿ. ಆದಾತೆ??” ಎಂದಂದು “ಅಲ್ಲಲೇ ಆಗ್ಲೇ ಪಂಚಾತಿ ಕರ್ಸಕ್ಕೇನಾಗಿತ್ಲಾ ನಿಂಗೆ? ಅತ್ತೇನ ವರ್ದಕ್ಸಿನೆ ತಾ ಅಂತ ಅಟ್ಟೋದೆಲ್ಲಾರ ಉಂಟೇನಲಾ?” ಎಂದು ಮಾತು ನಿಲ್ಲಿಸಿ ಪತ್ರದ ಕಡೆ ನೋಡಿ “ನೀನು ಸರಿಯಾಗೇ ಮಾಡಿದ್ದೀ ಬುಡು” ಎನ್ನುತ್ತಾ ಪಕ್ಕದಲ್ಲಿದ್ದವನನ್ನು ಕರೆದು “ಪಿರ್ಯಾದಿ ಕೊಟ್ಟು, ಡಂಗೂರ ಹಾಕ್ಸಿರೋಳು ಇಲ್ಲಿ ಬರೊಕ್ಕಾದೇ? ಓಗಿ ಒಂಕೂಗಾಕಿ ಬಾ ಓಡು” ಎಂದ.

ಶಿಳ್ಳೆ “ನಾನ್ಯಾಕೆ ಪಂಚಾತಿ ಸೇರುಸ್ಲಿ? ನಮ್ಮಕ್ಕಯ್ಯುಗೆ ಒಂದು ಪಿಡ್ಚೆ ಊಟ ಹೆಚ್ಗೆ ಬೇಯಾಕಿಲ್ವೆ ನಮ್ಮಟ್ಟಿನಾಗೆ? ನಂಗಾರ ಎಷ್ಟು ಹೆಣ್ಮಕ್ಕಳದಾವು? ನಿಮ್ಮೂರೋರು ಪಿರ್ಯಾದಿ ಕೊಟ್ಮ್ಯಾಲೂ ಅಕ್ಕಯ್ನ ಅಲ್ಲೇ ಇಟ್ಗಂಡ್ರೆ ಆಸ್ತಿಗೆ ಆಸೆಬಿದ್ದೆ ಅಂತ ಸರೀಕ್ರು ಬೆನ್ನಿಂದೆ ಮಾತಾಡಕಿಲ್ವೆ? ಅದುಕ್ಕೇ ನಮ್ಮಕ್ಕುನ್ನ ತಂದ್ಬುಟ್ಟಿವ್ನಿ. ಇನ್ನು ನಿಮ್ಮೊರಿಂಕತೆ ನಿಮ್ದು” ಎನ್ನುತ್ತಾ ಜೊತೆಗೆ  ಬಂದವನ್ನು ಎಬ್ಬಿಸಿಕೊಂಡು ಹೊರಟುಬಿಟ್ಟ. ಇನ್ನೊಬ್ಬನನ್ನು ಎಬ್ಬಿಸಿದ ಗುಡ್ಡಯ್ಯ “ಒಂಕೆಲ್ಸಾ ಮಾಡು. ನಾನು ತಾತು ಮನೇ ತಾಕ್ಕೊಯ್ತೀನಿ. ಟಂಕಿನ ಅಲ್ಲಿಗೇ ಬರೇಳು. ಪೀರಿ ಏನಂತಾಳೋ ಕೇಳಾನ” ಎಂದು ಹೊರಟರು. ಅಲ್ಲಿಲ್ಲಿ ಕುಳಿತು ಕಲಾಪ ನೋಡುತ್ತಿದ್ದವರು ಒಬ್ಬೊಬ್ಬರಾಗಿ ಅವನನ್ನು ಹಿಂಬಾಲಿಸಿದರು. ಗುಡ್ಡಯ್ಯನ ಮನೆಯಿಂದ ಮೂರು ರಸ್ತೆ ದಾಟಿ ಎಡಕ್ಕೆ ತಿರುಗಿ ಚಪ್ಪಡಿ ಹರಡಿದ ದಾರಿಯುದ್ದಕ್ಕೂ ಚದುರಿದಂತೆ ಬಂದ ಜನರೊಡನೆ ಕೆಲ ಹೆಂಗಸರೂ ಸೇರಿ, ತಾತು ಮನೆಗೆ ಬರುವಷ್ಟರಲ್ಲಿ ಗುಂಪಾಯಿತು. ನೇರವಾಗಿ ಒಳಹೋದ ಗುಡ್ಡಯ್ಯ ಕಣ್ಣುಗುಡ್ಡೆ ದೊಡ್ಡದು ಮಾಡಿ ನಿಂತರು. ತೊಟ್ಟಿಯ ಮೇಲಿನ ತೆರಪಿನಿಂದ ಬಾಗಿಲ ಕಡೆ ಬಿದ್ದ ಬಿಸಿಲಿನೊಳಕ್ಕೆ, ಹಲವರು ಒಮ್ಮೆಲೇ ಒಳಬಂದು ಎಬ್ಬಿಸಿದ ಧೂಳಿನ ಕಣಗಳು ಪ್ರವೇಶ ಮಾಡಿ ಪ್ರತಿಪಲಿಸಿ, ಕಣ್ಣ ಮುಂದಿನ ದೃಶ್ಯ ಅರ್ಥವಾಗಲು ಎಲ್ಲರಿಗೂ ಸ್ವಲ್ಪ ಸಮಯ ಬೇಕಾಯಿತು. ಕಣ್ಣು ಹೊಂದಿಸಿ ನೋಡಲು, ಪೀರಿ ಬಿಟ್ಟ ಕಣ್ಣು ಬಿಟ್ಟಂತೆ ದುಪ್ಪಟಿ ಹೊದ್ದು ಮಂಚದ ಮೇಲೆ ಮಲಗಿದ್ದಳು. ಪಕ್ಕದಲ್ಲಿ ಕುಳಿತ ಅಳ್ಳಯ್ಯ ಮಂಕಾಗಿದ್ದರೆ, ತಾತು ತಲೆಗೆ ಟವಲ್ಲು ಸುತ್ತಿ ಅವನಿಗಿಂತ ಎತ್ತರದ ಕೋಲು ಹಿಡಿದು ನಿಂತಿದ್ದ. “ಪೀರಿಗೇನಾಯ್ತೋ ಅಳ್ಳ” ಎಂದ ಗುಡ್ಡಯ್ಯನತ್ತ ನೋಡಿದ ಅಳ್ಳಯ್ಯ “ಲಕ್ವಾ ವಡ್ಧದಂತೆ. ಕೈಕಾಲು ಸೆಟಕೊಂಡಯ್ತೆ. ಏಳಾಕಾಗಲ್ತು” ಎನ್ನುತ್ತಾ ಬಿಕ್ಕಿಬಿಕ್ಕಿ ಅಳಹತ್ತಿದ.

ಶಿಳ್ಳೆ ಬಂದು ಅತ್ತೆಯನ್ನು ಬಿಟ್ಟು ಆಸ್ತಿಪತ್ರ ಕೊಟ್ಟು ಹೋದ ಸುದ್ದಿ ಕೇಳಿ ಬೆಟ್ಟದಷ್ಟು ಆಸೆ ಹೊತ್ತು ಓಡಿಬಂದ ಟಂಕಿಗೆ, ಎದುರಿನ ದೃಶ್ಯಗಳು ತೀವ್ರ ಪಜೀತಿಗೊಳಪಡಿಸಿದವು. “ಇದೇನು ಮುದುಕಿ ಮಲ್ಗದೆ? ಮನೇನಾಗೆ ಜನ ತುಂಬೌರೆ. ಏನಾಯ್ತೋ?” ಎನ್ನುತ್ತಾ ಮನಸಿನ ಜೊತೆ ಮಾತಾಡುತ್ತಿದ್ದವಳನ್ನು ನೋಡಿದ ಗುಡ್ಡಯ್ಯ “ಬಾವ್ವ ಬಾವ್ವ. ನೀ ಕೇಳ್ದೆoತ  ಶಿಳ್ಳೆ ನಿಮ್ಮತ್ತೇನ ತಂದು ಬುಟ್ಟು, ಇಕಾ ಈ ಆಸ್ತಿಪತ್ರ ನಂತಾವ ಕೊಟ್ಟೋಗೋನೆ. ಈವಮ್ಮನ ಉಚ್ಛೆಲದ್ದಿ ಬಾಚಿ ಸಂದಾಗಿ ನೋಡ್ಕಂಡ್ರೆ ಆಸ್ತಿ ಕೊಡ್ಬೇಕು ಅಂತ ಬರ್ದದಂತೆ ಕಣಾ. ನೀ ಬ್ಯಾಡಂದ ಬೆಟ್ಟ ವಾಪಿಸ್ ತಕ್ಕಂಡೂ, ನೀ ಕೇಳಿರೂ ಗದ್ದೇನೇ ಕೊಟ್ಟವನೆ. ಈ ಮನೀನುವೆ ನಿಮ್ಮಾವ ಅಂಗೇ ಬರಸೌನಂತೆ. ಇನ್ನೇನವ್ವಾ ನಿಮ್ಮತ್ತೇನ ನೋಡ್ಕೋ. ಇಲ್ದಿದ್ರೆ ನಿನ್ನ ಊರ್ನಿಂದ ಬೈಸ್ಕಾರ ಆಕ್ತೀವಿ ಅಂತ ಎಲ್ರೆದ್ರೂ ಮಾತಾಗದೆ” ಎನ್ನುತ್ತಿದ್ದಂತೆ ಲೆಕ್ಕಾಚಾರ ತಪ್ಪಿದ ಭಾವ ಮುಖದಲ್ಲಿ ತೋರಲಾಗದೆ, ಪೀರಿಯ ಸೇವೆ ಮಾಡುವ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯಾವುದೇ ನೆಪವೂ ಸಿಗದೆ ಟಂಕಿಯ ಮುಖದ ಕಳೆಯೇ ಇಂಗಿಹೋಯಿತು. “ಏನೋ ಗಾಸಾರ ಇದ್ದುದು ಕಳೀತು ಬುಡು ತಾತು. ಅಷ್ಟು ಬೇಕೇಬೇಕಂತ ಪಿರ್ಯಾದಿ ಕೊಟ್ಟು ಕರುಸ್ಕೊಂಡಿರೋ ಟಂಕಿ ಅತ್ತೇನ ಸಂದಾಗಿ ನೋಡ್ಕೋಳ್ದೆ ಹೋದಾಳೇ ? ನಾವೂ ಆಗಾಗ ಬಂದು ನೋಡ್ಕೊಂಡೊಯ್ತೀವಿ. ಚಿಂತೆ ಮಾಡ್ಬ್ಯಾಡ” ಎನ್ನುತ್ತಾ ಮನೆ ಹಾದಿ ಹಿಡಿದರು ಊರ ಜನ.

***********************************

One thought on “ತವರಿನ ಬೆಟ್ಟ

Leave a Reply

Back To Top