ವಿಶೇಷ ಲೇಖನ
ಕನ್ನಡ ಘಟಾನುಘಟಿಗಳ
ಪ್ರಚಾರ ಶುರು..!











ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕøತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇಚ್ಛಾಶಕ್ತಿಯೊಂದಿಗೆ ಉದಯಿಸಿದ್ದೇ ಕನ್ನಡ ಸಾಹಿತ್ಯ ಪರಿಷತ್. ಪರಿಷತ್ತಿನ ಆರಂಭ ಕಾಲದಿಂದಲೂ 1940 ರವರೆಗೂ ಅಧ್ಯಕ್ಷರನ್ನು ಅವರ ಸಾಹಿತ್ಯ, ಕನ್ನಡ ನಾಡು-ನುಡಿಯ ಬಗೆಗಿನ ಸೇವೆ, ಬದ್ಧತೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರವೇ ಪರಿಷತ್ತಿಗೂ ಚುನಾವಣೆಯ ಪದ್ಧತಿ ಜಾರಿಗೊಂಡಿತು.
ತಿರುಮಲೆ ತಾತಾಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಗೊ.ರು ಚನ್ನಬಸಪ್ಪ, ಸಾ.ಶಿ.ಮರಳಯ್ಯ, ಡಾ.ಹಂಪ ನಾಗರಾಜಯ್ಯ, ಜಿ.ನಾರಾಯಣ, ಚಂದ್ರಶೇಖರ ಪಾಟೀಲರಂತಹ ಸಾರಸ್ವತ ದಿಗ್ಗಜರು ಪರಿಷತ್ತಿನ ಆಡಳಿತ ಚುಕ್ಕಾಣಿ ಹಿಡಿದು ಕನ್ನಡದ ಕೈಂಕರ್ಯಕ್ಕೆ ತಮ್ಮದೇ ಕೊಡುಗೆ ನೀಡಿದವರು.
ಬಹುತೇಕ ಸಾಹಿತಿಗಳು; ಹೋರಾಟಗಾರರೇ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಿರಿ ಅಲಂಕರಿಸುತ್ತ ಬಂದರೂ ಡಾ. ನಲ್ಲೂರು ಪ್ರಸಾದ್ ಆರ್. ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿಯಂತಹ ಸಾಹಿತ್ಯಾಸಕ್ತರು ಆಯ್ಕೆಯಾಗುವ ಮೂಲಕ ಹೊಸ ಶಕೆಗೆ ನಾಂದಿ ಹಾಡಿದರು. ಇದೀಗ ಮುಂದುವರೆದು ನಿವೃತ್ತ ಅಧಿಕಾರಿ ವರ್ಗವೂ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗಳತ್ತ ಆಸಕ್ತವಾಗಿವೆ.
ಮನು ಬಳಿಗಾರ್ ಅವರು ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಈ ಪರಂಪರೆಗೆ ನಾಂದಿ ಹಾಡಿದರು. 5 ವರ್ಷಗಳ ಕಾಲ ಅಧ್ಯಕ್ಷಗಾದಿ ಅಲಂಕರಿಸಿದ ಅವರ ಆಡಳಿತಾವಧಿ 2021 ಮಾರ್ಚ್-3ಕ್ಕೆ ಅಂತ್ಯವಾಗಲಿದ್ದು ಈಗಿನಿಂದಲೇ ಆಕಾಂಕ್ಷಿಗಳ ಚುನಾವಣಾ ತಯಾರಿ ಚುರುಕುಗೊಂಡಿದೆ. ವಾಡಿಕೆಯಂತೆ ಕಸಾಪಗೆ ಅಧ್ಯಕ್ಷರ ಆಡಳಿತಾವಧಿ 3 ವರ್ಷಕ್ಕೆ ಸೀಮಿತವಾಗಿತ್ತು. ಪ್ರಸ್ತುತ ಅಧ್ಯಕ್ಷರಾದ ಮನು ಬಳಿಗಾರ್ ಅವರು, 5 ವರ್ಷಕ್ಕೆ ಏರಿಕೆ ಮಾಡಿದ ಪರಿಣಾಮ ಅವರಿಗೆ ಎರಡು ವರ್ಷಗಳ ಹೆಚ್ಚುವರಿ ಅವಧಿ ಲಭಿಸಿತು.
ಇವರು ಸರ್ಕಾರದ ಅಧಿಕಾರಿಯಾಗಿದ್ದರೂ ಕೂಡ ಕವಿಗಳು ಎಂದು ಮುದ್ದಾಮ್ ಸಾಹಿತಿ ಎಂದು ಗುರುತಿಸಲ್ಪಡುವ ಅವರು, ಸಾಹಿತಿಗಳಾಗಿ ರಾಜ್ಯದ ವಿವಿಧೆಡೆ ಅಖಿಲ ಭಾರತ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಯೂ ಇವರಿಗಿದೆ.
ಈಗ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತುದ ಹಾಲಿ ಗೌರವ ಕಾರ್ಯದರ್ಶಿ ವಾ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳದ ಶೇಖರಗೌಡ ಮಾಲೀ ಪಾಟೀಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅಖಾಡದಲ್ಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆಲವರು ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ.
ಅಧ್ಯಕ್ಷರ ಅವಧಿ 3 ವರ್ಷಕ್ಕೆ ಮುಗಿಯುತ್ತದೆ ಎಂದು ತಿಳಿದು ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲೇ ಆಕಾಂಕ್ಷಿಗಳು ಪ್ರಚಾರ ಕಾರ್ಯ ಬಿರುಸಿನಿಂದ ನಡೆಸಿದ್ದರು. ಆದರೆ ಅಧ್ಯಕ್ಷರ ಅಧಿಕಾರವಧಿ 2 ವರ್ಷ ಮುಂದಕ್ಕೆ ಹೋದ ಪರಿಣಾಮ ಇವರು ಪ್ರಚಾರದಿಂದ ಹಿಂದೆ ಸರಿಯಬೇಕಾಯಿತು. ಈಗ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ.
3 ಲಕ್ಷಕ್ಕೂ ಅಧಿಕ ಮತದಾರರು–
ಕಳೆದ ಐದು ವರ್ಷಗಳ ಹಿಂದೆಯೇ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ 30 ಜಿಲ್ಲೆಗಳು, 5 ಗಡಿನಾಡು ಘಟಕಗಳು ಒಟ್ಟು ಸೇರಿ ಸುಮಾರು 1.87 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಎಲ್ಲಾ ಘಟಕಗಳಲ್ಲಿ ಹೊಸದಾಗಿ 1.24 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, 3,25,098 ಮಂದಿ ಸದಸ್ಯರು ಸದಸ್ಯತ್ವ ಪಡೆದಂತಾಗಿದೆ. ಪರಿಷತ್ತಿಗೆ ಇಷ್ಟು ಸಂಖ್ಯೆಯ ಜನರು ಸದಸ್ಯರಾಗಿರುವುದು ಇದೇ ಮೊದಲು.
ಅಷ್ಟೇ ಅಲ್ಲ; ಈ ಹಿಂದೆ ಬೆಂಗಳೂರಿನಲ್ಲಿ ಒಂದೇ ಕಡೆ ಮತದಾನ ನಡೆಯುತ್ತಿತ್ತು. ಈಗ ಕ್ಷೇತ್ರವಾರು ಅಂದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ಈ ನವೆಂಬರ್‌ನಲ್ಲೇ ಮನು ಬಳಿಗಾರ್ ಅವರು ಪತ್ರ ಬರೆಯಲಿದ್ದು; ಆ ನಂತರವೇ ಚುನಾವಣಾಧಿಕಾರಿಗಳು ನೇಮಕಗೊಳ್ಳುತ್ತಿದ್ದಂತೆಯೇ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ಕನಿಷ್ಟ ಮೂರು ವರ್ಷ ಸದಸ್ಯರಾಗಿರುವವರು ಮತದಾನಕ್ಕೆ ಅರ್ಹರಾಗಿರುತ್ತಾರೆ. ಅಧ್ಯಕ್ಷರ ಆಯ್ಕೆ ಜೊತೆ ಎಲ್ಲಾ 30 ಜಿಲ್ಲೆ ಹಾಗೂ 5 ಗಡಿನಾಡು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಚುನಾವಣೆಗೆ ಸ್ಪರ್ಧೆ ಸುಲಭವಲ್ಲ–
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಗೆ ಸ್ಪರ್ಧಿಸುವುದು ಪ್ರಸ್ತುತ ಸಂದರ್ಭದಲ್ಲಿ ಸುಲಭದ ಮಾತಲ್ಲ. 3.25 ಲಕ್ಷ ಮತದಾರರನ್ನು ಸಂಪರ್ಕಿಸಬೇಕಾದರೆ ಹಣಬಲ ಇರಲೇ ಬೇಕು. ಇಡೀ ರಾಜ್ಯದಾದ್ಯಂತ ಸಂಚರಿಸಿ ಮತದಾರರ ಓಲೈಕೆ ಮಾಡಬೇಕು. ಜಾತಿ ರಾಜಕಾರಣವೂ ಇಲ್ಲಿ ಮುಖ್ಯವಾಗುತ್ತದೆ. ಹಣ, ಜಾತಿ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಬಡ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಯ ಕನಸು ಕಾಣುವುದು ದುಸ್ತರವೇ ಸರಿ.
ಮಹಿಳೆಯರಿಗೆ ಅವಕಾಶ ನೀಡಿ–
ಶತಮಾನಗಳ ಇತಿಹಾಸವಿರುವ ಪರಿಷತ್ತಿಗೆ ಈವರೆಗೂ ಒಬ್ಬ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿಲ್ಲ. ಹೀಗಾಗಿಯೇ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಏಕೆ ಮಹಿಳಾ ಸಾಹಿತಿಯೊಬ್ಬರ ಸಾರಥ್ಯಕ್ಕೆ ಸಿಗಬಾರದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.
ವಚನ ಸಾಹಿತ್ಯದಿಂದ ಇತ್ತೀಚಿನ ನವ ಸಾಹಿತ್ಯದ ವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳಾ ಲೇಖಕಿಯರಿಗೆ ಕೊರತೆಯಿಲ್ಲ. ಗಟ್ಟಿತನದ ಸಾಹಿತ್ಯ ರಚನೆಯಲ್ಲೂ ಮಹಿಳೆಯರು ತೊಡಗಿದ್ದಾರೆ. ಹಾಗಾಗಿಯೇ ಈ ಬಾರಿ ಮಹಿಳೆಯರಿಗೆ ಸ್ಥಾನ ಸಿಗಲಿ ಎಂಬ ಒತ್ತಾಯಗಳೂ ಕೇಳಿ ಬರುತ್ತಿವೆ.
ಒಟ್ಟಾರೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಜಿದ್ದಾಜಿದ್ದಿನ ಕಣವಾಗಲಿದ್ದು, ಯಾವುದೇ ರಾಜಕೀಯ ಚುನಾವಣೆಗಳಿಗೂ ಕಡಿಮೆ ಇಲ್ಲದಂತೆ ನಡೆಯುವ ಮುನ್ಸೂಚನೆಗಳೂ ಹೆಚ್ಚಾಗಿವೆ. ಕನ್ನಡ ಸಾರಸ್ವತ ಸಂಸ್ಥೆಗೆ ನೂತನ ಸಾರಥಿಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೇ ನಾವು..!
*********************************
ಕೆ.ಶಿವು.ಲಕ್ಕಣ್ಣವರ

One thought on “ಪರಿಷತ್ತಿಗೆ ಚುನಾವಣೆ”