ಕವಿತೆ
ಅವಳು
ಎಂ. ಆರ್. ಆನಸೂಯ
ಅವಳು
ಎದೆಯಾಳಕ್ಕಿಳಿಸಿದಳು ನಂಬಿ
ಅವನಾಡಿದ
ತುಟಿಯಿಂದೀಚಿನ ಸೋಗಿನ ಮಾತುಗಳನ್ನು
ನೀರೆರೆಯುತ್ತ ಒಲುಮೆಯಿಂದ
ಕಂಡಳು ಬಣ್ಣದ ಸವಿಗನಸುಗಳ
ಕಳಚಲು ಗೋಮುಖ ವ್ಯಾಘ್ರ ಮುಖವಾಡ
ಹಂಬಲಿಸಿದಳು ಸಾಪೇಕ್ಷ ಸಾನುರಾಗದ
ಪ್ರೀತಿಗಾಗಿ ಏಕಮುಖ ಪ್ರೀತಿಯಲಿ
ಕಿತ್ತೊಗೆಯಲಾರಳು ಪ್ರೀತಿಯ ಬೇರುಗಳ
ಕಾದಾರಿದ ನಿರೀಕ್ಷೆಯ ಬೂದಿಯೊಳಗೆ
ನಿಗಿನಿಗಿ ಕೆಂಡದಂಥ ಪ್ರೀತಿಗಾಗಿ ಕೆದಕಿದಳು
ಕಾಣದೆ ನಿಡಿದುಸಿರೆಳೆದರೂ ದ್ವೇಷಿಸಲಾರಳು
ಅನರ್ಹ ಪ್ರೀತಿಗೆ ಅರ್ಪಿಸಿದ ಅನರ್ಥಕ್ಕೆ
ಆಗಬಾರದು ಬದುಕು ಸುಡುವ ಚಿತೆ
ಶೀತಲ ಕ್ರೌರ್ಯದ ಪ್ರತಿಕೃತಿಯಾದವನತ್ತ
ತಾಳಿದಳು ತಣ್ಣಗಿನ ನಿರ್ಲಕ್ಷ್ಯ
ದೂರವಾದವರಿಂದ ತಾನೂ
ದೂರವಾಗಿ ಬದುಕಿದಳು ತನಗಾಗಿ
*********************************
ಒಂದು ಧನಾತ್ಮಕ ಶಕ್ತಿ ಮತ್ತು ಚಿಂತನೆಯ ಕವಿತೆ…. ಚೆನ್ನಾಗಿ ಬರೆದಿದ್ದೀರಿ ಮೇಡಂ…