ಪುಸ್ತಕ ಸಂಗಾತಿ
ಕಾವ್ಯವೆಂಬ ಕಾವು ಆರದ ಮಗ್ಗಲು
ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ.
ಕವಿತೆಯೆಂದರೆ
ಮಣ್ಣಿನೊಳಗೆ ಬೀಜ ಬೆರೆತು
ಮೊಳೆತು ಎಸಳೊಡೆದು ದಳಗಳಾಗಿ ಅರಳಿ
ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ)
ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. ಬೀಜ ಮೊಳೆತು ದಳಗಳಾಗಿ ಅರಳಿ,ಹಣ್ಣಾಗಿ ಮಾಗುವ ಈ ವಿಕಸನದ ಕ್ರಿಯೆ ಜೀವಂತ. ಭವದಿಂದ ಅನುಭವ, ಅನುಭವದಿಂದ ಅನುಭಾವ. ಈ ಗುಟ್ಟು ಕವಿತೆಯನ್ನು ಒಳಗೊಳಗೇ ಮಾಗಿಸುತ್ತದೆ. ತೇಜಾವತಿಯವರ ಕವಿತೆಗಳಲ್ಲಿ ಹೀಗೆ ಹಿಗ್ಗುವ ಮಹತ್ವಾಕಾಂಕ್ಷೆಯಿದೆ. ಆ ದಾರಿಯಲ್ಲಿ ಅವರ ಹಸಿಹೆಜ್ಜೆಗಳು ಮೂಡುತ್ತಿವೆ.
ಕವಿತೆ ಹದಗೊಂಡ ತನ್ನೊಳಗನ್ನು ಕಾಣಿಸಲು ಭಾಷೆಯು ಸೂಕ್ಷ್ಮಗೊಳ್ಳಬೇಕು. ಕಣ್ಣಿನಾಚೆಯ ಸತ್ಯವನ್ನು ಕವಿಯು ಕಾಣಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಇಂಥ ಸೂಕ್ಷ್ಮತೆಯಿಂದ ಕಂಪಿಸುವ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕವಿ ತನ್ನ ಪ್ರಜ್ಞೆಯನ್ನು ಬೆಳಕಾಗಿಸಿ ಕತ್ತಲನ್ನು, ದುಃಖವನ್ನು ಸದಾ ದಾಟಲು ಪ್ರಯತ್ನಿಸುತ್ತಿರುತ್ತಾಳೆ/ತ್ತಾನೆ. ಅಂಥ ಬೆಳಕಿನ ಕಾವು ಆರದಂತೆ ಕಾಪಿಟ್ಟುಕೊಳ್ಳುವ ನಿಗಿನಿಗಿ ಹಂಬಲವು ಇಲ್ಲಿನ ಕವಿತೆಗಳನ್ನು ಸದಾ ಎಚ್ಚರದಲ್ಲಿ ಇರಿಸಿದೆ. ಸುತ್ತುವರಿದ ಸಮಾಜದ ಚೌಕಟ್ಟುಗಳು, ತೋರಿಕೆಯ ಬದುಕಿನ ಬಂಧನದಾಚೆಗೆ ತೂರಿಬರಲು ತಪಿಸುವ ಆರ್ದ್ರ ದನಿಯೊಂದು ಇಲ್ಲಿ ನಿನದಿಸುತ್ತದೆ. ತೇಜಾವತಿಯವರ ಕವಿತೆಗಳು ಸ್ಮೃತಿ, ಎಚ್ಚರ ಹಾಗೂ ಇದನ್ನು ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆಹಿಡಿಯಲು ಹವಣಿಸುತ್ತಾರೆ. “ಊರುಗಳೇ ತಲೆದಿಂಬಾದವು” ಎಂಬ ಕವಿತೆ ಇಂಥ ಬೆರಗಲ್ಲಿ ಹುಟ್ಟಿದ್ದು.
ಪ್ರೀತಿ -ಸ್ನೇಹಗಳ ಸೆಳೆತದಲ್ಲಿ ಹಿಗ್ಗುತ್ತ ಹರಿಯುವ ಬದುಕಲ್ಲಿ ಅದನ್ನು ನಿರ್ಬಂಧಿಸುವ ವರ್ತಮಾನದ ಸೂಕ್ಷ್ಮತೆಯನ್ನು ತೇಜಾವತಿಯವರ ಕವಿತೆ ಪ್ರಶ್ನಿಸುತ್ತ ಪ್ರತಿರೋಧಿಸುತ್ತ ಹರಿಯುತ್ತವೆ.
ಬೀಸುವ ಗಾಳಿ, ಹರಿಯುವ ನದಿ, ಕೊರೆಯುವ ಹಿಮಗಲ್ಲಿಗಿಲ್ಲದ ಧರ್ಮದ ಹಂಗು ನಮಗೆಲ್ಲ ಯಾಕೆ? ಎಂದು ಆರ್ತವಾಗಿ ಕೇಳುತ್ತಾರೆ.
ಮನುಷ್ಯನ ಪ್ರಜ್ಞೆಯನ್ನು ಪ್ರಕೃತಿಯ ಅನಿರ್ಬಂಧಿತ ಪ್ರಜ್ಞೆಯಲ್ಲಿ ಕರಗಿಸುವ ನುಡಿಗಳಿಂದ ಕವಿತೆ ಒಳಗಿನ ಸ್ವಾತಂತ್ರ್ಯದ ಝರಿಯನ್ನು ಶೋಧಿಸಿಕೊಳ್ಳುತ್ತದೆ. ಘೋಷಣೆಗಿಳಿಯದೇ, ಕಾದಾಡದೇ ಎಲ್ಲವನ್ನೂ ಮೀರುವ ಸಂಯಮದ ದನಿಯೇ ಇಲ್ಲಿ ಕಸುವುಗೊಂಡಿದೆ. ಸುತ್ತಲಿನ ದಿಗ್ಬಂಧನಗಳನ್ನು ಕಳಚಿ ನಿರಾಳವಾಗುವ ದಾರಿಗಳನ್ನು ಹುಡುಕುವ ಮಾಧ್ಯಮವೂ ಇಲ್ಲಿ ಕವಿತೆಯೇ ಆಗಿದೆ.
ಒಂದು ದಿನ ಬೀಗ ಹಾಕಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು
ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ ಕರಗಿಹೋಯಿತು.. (ನೀರ ಮೇಲಿನ ಪಾದ)
ತೇಜಾವತಿಯವರ ಕವಿತೆಯಲ್ಲಿರುವ ಬೆಳಕಿನ ಹಂಬಲ, ಆಶಾವಾದ, ಭವಿಷ್ಯದ ಕುರಿತ ಕನಸುಗಳು…. ಇವೆಲ್ಲ ಕತ್ತಲ ಗರ್ಭದಲ್ಲಿಯೇ ಬೆಳಕಿನ ಬೀಜಗಳನ್ನು ಊರುತ್ತವೆ. ಅದರ ಅಪಾರ ಸಾಧ್ಯತೆಗಳನ್ನು ಕನಸುತ್ತವೆ. ಕಾವ್ಯವು ಕಾವು ಆರದ ಮಗ್ಗಲಾಗಿ ಅವರಿಗೆ ಕಾಣಿಸುವುದೇ ಚೇತೋಹಾರಿ.
ಬಾ… ಭವಿಷ್ಯದ ನಕ್ಷತ್ರಗಳಾಗೋಣ
ಕಾವು ಆರದ ಮಗ್ಗಲುಗಳು
ಎಡಬಿಡದೆ ಕಾಡಿಸುತ್ತವೆ ನಿನ್ನನ್ನೇ…
ಬದುಕಿನ ಎಲ್ಲ ಮರ್ಮರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದೊಂದು ನಮ್ಮನ್ನು ಕಾಡದೇ ಹೋದರೆ, ನಮ್ಮ ಕನಸುಗಳನ್ನು ಹಸಿಯಾಗಿ ಉಳಿಸದೇ ಹೋದರೆ ಕಾವ್ಯ ಹಳಹಳಿಕೆಯಾಗುತ್ತದೆ. ತೇಜಾವತಿಯವರ ಕಾವ್ಯ ಜೀವಂತವಾಗಿರುವುದೇ ಅದರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ.
******************************************
ಡಾ. ಗೀತಾ ವಸಂತ