ಕವಿತೆಯ ದಿನಕೊಂದು ಕವಿತೆ
ಸುಧಾಮನ ಮನೆಗೆ ಕೃಷ್ಣ ಬಂದಾಗ
ವಾಸುದೇವ ನಾಡಿಗ್
ಇನ್ನೇನು
ಸುಧಾಮ
ಹೊರಡಬೇಕು ಮಣ್ಣ ಗಮಲಿನ
ಶಲ್ಯದಲಿ ಅವಲಕ್ಕಿಯ ಒತ್ತಿ ಸುತ್ತಿಕೊಂಡು
ಬಿರು ಬಿಸಿಲಿನ ಬೆವರು ನೆನೆಯದರಿಲಿ ಗಂಟು
ಹಿಮ್ಮಡಿಯ ಸೀಳು ನೆಲಕೆ ತಾಕಬೇಕು
ರಥ ಇಳಿದ ಮಾಧವ
ಹಣೆಯ ಬೆವರು ಸಿಡಿದು ಅಂಗಳವ
ತಂಪಾಗಿಸಿ
ಧಾವಿಸಿ ಬಂದ ರಥ ಗುಡಿಸಲಿಗೆ ತಂಗಾಳಿ
ತಾಕಿಸಿ
ಇಳಿದೇ ಬಿಟ್ಟ ನೋಡೀ ಮುರಳಿ ಮೋಹನ
ಕಾಡಿನಲಿ ಮೇಯುತ್ತಿದ್ದ ಗೋವುಗಳ
ಇತ್ತ ತಿರುಗಿದಂತೆ ಕೊರಳ ಗಂಟೆ ಸದ್ದು
ಯಾರು ಬಂದರೋ ಬಾಗಿಲಲ್ಲಿ?
ತಬ್ಬಿಬ್ಬು ಮಕ್ಕಳು ಮಡದಿ ಗುಡಿಸಲು ಗರಿ
ಮುಟ್ಟಿ ನೋಡಿಕೊಂಡ ಸುಧಾಮ ಗಂಟನು
ನಕ್ಕಳು ಮಡದಿ ಮಹಾಮಹಿಮನ ಕಂಡು
ಮಕ್ಕಳೆಲ್ಲ ಮುಟ್ಟಿ ಮುಟ್ಟಿ ನೋಡಿ
ಕೃಷ್ಣನ ಕಾಲು ತೋಳು ಕಿರೀಟ ಗರಿ
ಕೊಳಲು ಕೊರಳ ಹಾರ ಎದೆಕವಚ
ಸವರಿದವು ಕೊಳಲ ಮೈಯ.
ಯಾರಿವನು ತಂದೆ?
ಯಾರ ತಂದೆ?
ಏನ ತಂದೆ?
ರಥದ ತುಂಬಾ ಏನಿದೆ? ತಿನಿಸು ಉಡುಪು
ಆಟಿಕೆ ಕೊಡುಗೆ ನಾಳಿನ ಕನಸ ಕಂಪು
ಸುಧಾಮನ ಕಣ್ಣಲಿ ಕೊಳ
ಕಕ್ಕಾಬಿಕ್ಕಿ ಬೆಳಕ ಹಂಸ ಮಂಜು
ರಥವ ತುಂಬಿದ ಸಿರಿವಂತಿಕೆ
ಸೆರಗ ಗಂಟಿನ ಬಡತನ ಮಾತಿಗೆ ಇಳಿದವು
ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ
*********************************************
ಕವಿತೆಯನ್ನೇ ತುಂಬಿಕೊಂಡ ಕೊನೆಯ ಎರಡು ಸಾಲುಗಳು….ಬಹಳ ವಿಶೇಷ ಧನ್ಯವಾದಗಳು ಸರ್
ವಿಶೇಷ ಕವಿತೆ ನಿಜಕ್ಕೂ ವಿಶೇಷವಾಗಿದೆ ಸರ್. ಅಭಿನಂದನೆಗಳು