ಹಂಗಿಲ್ಲದ ಕವಿತೆ
ದೇವಯಾನಿ
ಸೆಕೆ ಎಂದು ಕಿಟಕಿ ತೆರೆದೆ
ಕಾವ್ಯ ಒಳ ನುಸುಳಿತು
ಕರೆಯದೆಯೂ ಬರಬಹುದೆ
ಎಂದರೆ ನಕ್ಕು
ಕಾಲ ಮೇಲೆ ಕಾಲು ಹಾಕಿ ಕುಳಿತಿತು
ಹಸಿದ ಹೊಟ್ಟೆಯ ಗುರುಗುರು
ಹರಿದ ನೆತ್ತರ ಧಾರೆ
ಮಹಲಿನ ಕಣ್ಕುಕ್ಕುವ ಬೆಳಕು
ಗುಡಿಸಲಿನ ಸಂದಿಲಿಣುಕಿದ
ಬಿಸಿಲಕೋಲು
ಹಾದಿಗೇನು ಬರವಿಲ್ಲ
ನನಗೆ ಕಾಲದ ಹಂಗಿಲ್ಲ
ಎಂದು ಗೋಡೆ ಗಡಿಯಾರ ಕಿತ್ತೆಸೆಯಿತು
ಸೆಕೆ ಎಂದು ಕಿಟಕಿ ತೆರೆದೆ
ಕಾವ್ಯ ಒಳ ನುಸುಳಿತು
ಪಕ್ಕದ ಮನೆಯ ಕುಕ್ಕರಿನ ಸೀಟಿ
ಅರಳಿದ ಕಣ್ಣ ಕಂದಮ್ಮ
ಸದ್ದಿಲ್ಲದೆ ಮಲಗಿದ ರಸ್ತೆ
ಬೆಳಗಾತ ನಗುವ ಹೂವು
ಮೂಲೆಯ ಕಸಬರಿಕೆ
ಹಾದಿಗೇನೂ ಬರವಿಲ್ಲ
ನನಗೆ ಕಾಲದ ಹಂಗಿಲ್ಲ
ಎಂದು ಗೋಡೆ ಗಡಿಯಾರ
ಕಿತ್ತೆಸೆಯಿತು
ಸೆಕೆ ಎಂದು ಕಿಟಕಿ ತೆರೆದೆ
ಕಾವ್ಯ ಒಳ ನುಸುಳಿತು
ಗುಡಿಯಲಡಗಿದವನೂ
ಬಯಲ ಹೊದ್ದವನೂ
ನಿರುಮ್ಮಳ ನಿದ್ರಿಸುವಾಗ
ಚಡಪಡಿಸಿದ್ದು ನೀನೊಬ್ಬನೆ
ಕರೆಯದೆಯೂ ಬರದೆ
ಇರದಾದೆ
ಹಾದಿಗಳು ನೂರುಂಟು
ನನಗೂ ನಿನಗೂ ತಪ್ಪದು
ಈ ನಂಟು ಎಂದು
ಕಾಲ ಮೇಲೆ ಕಾಲು ಹಾಕಿ ಕುಳಿತಿತು
ಸೆಕೆ ಎಂದು ಕಿಟಕಿ ತೆರೆದೆ
ಕಾವ್ಯ ಒಳ ನುಸುಳಿತು
**********************