ಹಳೆಯ ಅಂಕಣ ಹೊಸ ಓದುಗರಿಗೆ

ಅಂಕಣ ಬರಹ

ಹೂವ ತಹೆನಲ್ಲದೆ ಹುಲ್ಲ ತಾರೆನು

Mahadevi Akka Yakka - Home | Facebook

ಅಕ್ಕಮಹಾದೇವಿ ವಚನಕಾರ್ತಿಯರಲ್ಲಿಯೇ ತಾನು ಬದುಕಿದ ಕ್ರಮದಿಂದಲೇ ಮುಂಚೂಣಿಯಲ್ಲಿ ನಿಲ್ಲುವವಳು. ಸಂಸಾರವನ್ನು ತೊರೆಯುವುದಷ್ಟೇ ಅಲ್ಲ, ಒಂಟಿಯಾಗಿ ನಿಂತು ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಬದುಕಿ ತೋರಿಸಿದವಳು. ತನ್ನ ಬದುಕನ್ನೇ ಭಾವಗೀತೆಯಂತೆ ಹಾಡಿ ಹುಡುಕಿ ಕಂಡು ಬಾಳ ಸವೆಸಿ ಕಪ್ಪುರವಾದವಳು. ಕುಟುಂಬ, ಸಮಾಜದೊಡನೆ ಸಂಬಂಧ ಕಳೆದುಕೊಂಡರೂ, ಶಿವಶರಣ ಸಮುದಾಯದೊಂದಿಗೆ ಸಾಧಿಸುವ ಸಂಬಂಧವು ಅವಳಲ್ಲಿದ್ದ ತತ್ವ, ಆಚರಣೆಗಳ ಏಕತೆಯನ್ನು ಮತ್ತು ಸಂಬಂಧಗಳಲ್ಲಿನ ಸ್ಪಷ್ಟತೆಗಳು ವಚನಗಳಿಂದ ತಿಳಿದುಬರುತ್ತದೆ. ಅಕ್ಕ, ತನ್ನ ಹುಟುಕಾಟವನ್ನು ಯಶಸ್ವಿಯಾಗಿಸಿಕೊಳ್ಳುವಲ್ಲಿ ಅವಳಲ್ಲಿರುವ ಎಚ್ಚರಿಕೆ ಈ ಸಂಬಂಧಗಳ ಸ್ಪಷ್ಟತೆಯಿಂದ ತಿಳಿಯುತ್ತದೆ. ಕೈ ಹಿಡಿದ ಗಂಡನೊಡನೆ ಸಂಬಂಧದ ಸ್ಪಷ್ಟತೆಗೂ, ಕಲ್ಯಾಣಪಟ್ಟಣದ ಶಿವಶರಣರೊಂದಿಗಿನ ಸಂಬಂಧಕ್ಕೂ, ಪ್ರಕೃತಿಯೊಡನೆ ಸಾಧಿಸುವ ಸಂಬಂಧಕ್ಕೂ ಮಹತ್ತರವಾದ ವ್ಯತ್ಯಾಸವಿದೆ. ಅವೆಲ್ಲವೂ ಇವಳು ಹುಡುಕುವ ವಸ್ತುವಿಗೆ ಪೂರಕವಾರ್ಗವಾಗಿ ಕೆಲವು ಬಿಟ್ಟು ಹೋದರೆ, ಕೆಲವು ಇವಳನ್ನು ಕರೆದುಕೊಂಡು ಮುನ್ನಡೆಸುತ್ತದೆ. ಎದುರಿನವರನ್ನು ಸಂಭೋಧಿಸಿ ಸಾಧಿಸುವ ಸಂಬಂಧ ಅವಳಲ್ಲಿನ ಸ್ಪಷ್ಟತೆ ಮತ್ತು ಹುಡುಕಾಟಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಾದೇವಿಯಕ್ಕಳ ಪ್ರಖ್ಯಾತ ವಚನವೊಂದು ಪ್ರಕೃತಿಯ ಇತರ ಜೀವಿಗಳೊಂದಿಗೆ ಸಾಧಿಸುವ ಸಂಬಂಧ ಮತ್ತು ಅವಳ ಹುಡುಕಾಟಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ. ಈ ವಚನವು ಹಲವಾರು ಸಂಪಾದನಾ ಕೃತಿಗಳಲ್ಲಿಯು ಬಂದಿದ್ದು, ಬಹಳ ಪ್ರಖ್ಯಾತವಾದದ್ದೂ ಆಗಿದೆ. ಅಕ್ಕನ ವವನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ‌. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ‌ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ

ಚಿಲಿಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೇ ನೀವು ಕಾಣಿರೇ

ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೇ ನೀವು ಕಾಣಿರೇ

ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೇ ನೀವು ಕಾಣಿರೇ

ಕೊಳನ ತಡಿಯೊಳಾಡುವ ಹಂಸೆಗಳಿರಾ ನೀವು ಕಾಣಿರೇ ನೀವು ಕಾಣಿರೇ

ಗಿರಿಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೇ ನೀವು ಕಾಣಿರೇ

ಚೆನ್ನಮಲ್ಲಿಕಾರ್ಜುನನೆಲ್ಲಿರ್ದಹನೆಂದು ನೀವು ಹೇಳಿರೇ ನೀವು ಹೇಳಿರೇ ೧

ಮೇಲಿನ ವಚನವು ಅಲ್ಪ ಮಾರುಪಾಡುಗಳನ್ನು ಹೊಂದಿ ಜೋಳನರಾಶಿ ದೊಡ್ಡನಗೌಡರ ೨, ಭೂಸನೂರು ಮಠರ ಸಂಪಾದನೆ ೩ ಯ ಗೋಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯಸಂಪಾದನೆಯಲ್ಲಿ ಬಂದಿದೆ. ಬಸವಯುಗದ ವಚನ ಮಹಾಸಂಪುಟ ೪, ವಚನ ಧರ್ಮ ಸಾರ ೫, ಮಹಾದೇವಿಯಕ್ಕನ ವಚನಗಳು ೬ ಕೃತಿಗಳಲ್ಲಿ ಬಂದಿದೆ. ಎಲ್ಲ ಸಂದಾನೆಯಲ್ಲಿಯೂ ಕೊನೆಯ ಸಾಲಿನ ನೀವು ಹೇಳಿರೇ ಎಂಬ ಪದವು ಒಂದು ಬಾರಿ ಮಾತ್ರ ಬಂದಿದೆ, ‘ರೇ’ ಎಂಬ ಧೀರ್ಘಾಕ್ಷರದ ಬದಲು ‘ರೆ’ ಎಂದಷ್ಟೇ ಸಂಪಾದನೆಯಾಗಿದೆ. ಹಲಗೆಯಾರ್ಯನ ಶೂನ್ಯಸಂಪಾದನೆಯಲ್ಲಿ ಈ ವಚನ ಇಲ್ಲದಿರುವುದು ಬಹಳ ಆಶ್ಚರ್ಯವೆನಿಸುತ್ತದೆ.೭

ಈ ವಚನದ ಹಿನ್ನೆಲೆಯ ಬಗೆಗೆ ಎರಡು ಮಾತುಗಳನ್ನಾಡುವುದು ಬಹಳ ಮುಖ್ಯವಾಗುತ್ತದೆ‌. ಶರಣರ ಬದುಕನ್ನು ಕಲಾತ್ಮಕವಾಗಿ ಕಾಲ್ಪನಿಕವಾಗಿ ಕಟ್ಟಿದ ಶೂನ್ಯಸಂಪಾದನೆಗಳಲ್ಲಿ ಇದು ಹೇಗೆ ಬಂದಿದೆ ? ಎಲ್ಲಿ ಬಂದಿದೆ ಎನ್ನುವುದು ಸಹಾ ಮುಖ್ಯವಾದದ್ದು. ಗೋಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯಲ್ಲಿ ಈ‌ ವಚನದ ಸಂದರ್ಭ – ಅಲ್ಲಮ, ಬಸವಣ್ಣ ಮತ್ತಿತರ ಶರಣರ ಭೇಟಿಯ ನಂತರ ಅಲ್ಲಮನಿಂದ ಉಪದೇಶವಾದ ಬಳಿಕ ಶ್ರೀಶೈಲಕ್ಕೆ ಹೋಗುವ ಹಾದಿಯಲ್ಲಿ ಬಂದಿದೆ. “ಇಂತು ಮಹಾದೇವಿಯಕ್ಕಳು ಶ್ರೀಗಿರಿಯತ್ತ ಬರುತ್ತ, ವನಾಂತರದೊಳು ಖಗಮೃಗಂಗಳಂ ಕಂಡು ನುಡಿಸುತ್ತಿರ್ದ ಪ್ರಾಸ್ತಾವದಲ್ಲಿ ಬಂದಿದೆ.ಮತ್ತೊಂದು ಸಂಪಾದನೆಯಲ್ಲಿ “ಮಹಾದೇವಿ ಬಹು ಕಷ್ಟದಿಂದ ಆಯಾಸದಿಂದ ಬರುತ್ತಿರುವಾಗ ಸುಂದರ ವನವನ್ನು ಮಧುರ ಧ್ವನಿಗೈವ ಪಕ್ಷಿಗಳಿಂದ, ಹೂ ಹಿಡಿದ ಬಳ್ಳಿಗಳಿಂದ, ಮೃದುವಾದ ಗುಂಪಾದ ವೃಕ್ಷರಾಜಿಯ ಸಮೀಪಿಸಿದಾಗ, ಮಂದಮಾರುತ ಸುಳಿದು ಸ್ವಾಗತ ನೀಡಿದಂತಾಗಿ ಮಾರ್ಗಾಯಾಸ ಕಳೆದುಕೊಂಡು, ಅಲ್ಲಿ ಅತಿ ವಿನೋದ ವಿಹಾರದ ಗಿಳಿ, ಕೋಗಿಲೆ, ಭೃಂಗರಾಜಿಗಳಿಂದ ಕಲಕಲದ ದನಿ ಕೇಳಿ ಅವುಗಳನ್ನು ಸಮೀಪಿಸಿ ಹೀಗೆ ಕೇಳುತ್ತಾಳೆ” ೯  “ಅಲ್ಲಲ್ಲಿ ನಿಂತು, ಕುಳಿತು, ದೇಹಶ್ರಮ ನೀಗಿಸಿಕೊಳ್ಳುತ್ತ ಶ್ರೀಪರ್ವತದ ಮಹಾರಣ್ಯಕ್ಕೆ ಬಂದಳು. ಚೆನ್ನಮಲ್ಲಿಕಾರ್ಜುನನ ಸ್ಮರಣೆಯೇ ಅಕ್ಕಗೆ ಸಕಲ ಶಕ್ತಿಗಳನ್ನು ನೀಡಿತ್ತು” ೧೦  ಈ ಎರಡೂ ಸಂಪಾದನೆಗಳಿಂದ ಬಹುಮುಖ್ಯವಾದ ಒಂದೆರಡು ಅಂಶಗಳನ್ನು ತಿಳಿಯಬಹುದು. ಒಂದು. ಅಕ್ಕ ಶ್ರೀಶೈಲ ಪರ್ವತದ ಹಾದಿಯಲ್ಲಿ ಹೋಗುವಾಗ ಹಾಡಿಕೊಂಡ ವಚನವಿದು. ಮತ್ತೊಂದು, ಶ್ರೀಶೈಲ ಪರ್ವತದ ಮಹಾರಣ್ಯದ ಕೊಳವೊಂದರ ಬಳಿ ವಿಶ್ರಾಂತಿ ಪಡೆಯುವಾಗ ಹಾಡಿಕೊಂಡ ವಚನ. ಹೀಗೆ ವಚನದಲ್ಲಿನ ಕ್ರಿಯೆ ಮತ್ತು ಅಕ್ಕಳ ಕ್ರಿಯೆಯನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ವಚನದಲ್ಲಿ ಏಕಕಾಲಕ್ಕೆ ಕೊಳ, ಗಿರಿ ಗಹ್ವರ ಎಲ್ಲವೂ ಬರುತ್ತದೆ‌. ಇದನ್ನು ನಡೆದುಕೊಂಡು ಹೋಗುತ್ತಿರುವಾಗ ಕಂಡು ಹಾಡಿದ್ದು ಅಥವಾ ಕಂಡಿದ್ದನ್ನು ಒಂದೆಡೆ ಕುಳಿತು ನೆನಪಿಸಿಕೊಂಡು ಹಾಡಿದ್ದು ಎಂದು ಅರ್ಥೈಸಿಕೊಳ್ಫಬಹುದು.

ಈ ವಚನವು ಕಲ್ಯಾಣಪಟ್ಟಣವನ್ನು ಬಿಟ್ಟು ಶ್ರೀಶೈಲ ಪರ್ವತದ ಕಡೆಗೆ ಒಂಟಿಯಾಗಿ ನಡೆಯುವಾಗ ಬಂದಿರುವುದು. ಅನುಭವಾವಿಗಳು ಸಾಧಕರು ಒಂಟಿಯಾಗಿರುವವರು. ಅಕ್ಕನ ಜೊತೆಗೆ ಕಾಡು, ಬೆಟ್ಟ, ನದಿ, ಪಕ್ಷಿಗಳು, ಕೊಳ್ಳಗಳಲ್ಲದೆ ಬೇರೆ ಇಲ್ಲ. ಅವುಗಳೇ ಇಲ್ಲಿನ ವಚನಗಳ ಮೂಲವಸ್ತುಗಳಾಗಿವೆ. ಅದರಿಂದ ಮತ್ತೊಂದಕ್ಕೆ ಪಡೆದುಕೊಳ್ಳುವ ಸಂಬಂಧಕ್ಕೆ ಅವುಗಳ ಮಾರ್ಗವೂ ಆಗಿವೆ. ಹಾದಿ ತೋರಿಸುವ ಕೈಮರವಾಗಿ ಇವೆ. ಇದೊಂದು ಅತ್ಯದ್ಭುತವಾದ ಸಂವಾದ. ಭಾಷೆಯರಿಯದ ಜೀವಿಗಳನ್ನು ಭಾಷೆಯ ಮೂಲಕ ಸಂವಾದಕ್ಕೆ ಎಳೆಯುವ ಸಮಯದಲ್ಲಿ ಅಕ್ಕ ಹೊಂದಿರಬಹುದಾದ ಬಹುದೊಡ್ಡ ಉತ್ಸಾಹ, ಆಸೆ, ಶೋಕಗಳು ಈ‌ ವಚನದ ಭಾವಕೇಂದ್ರವಾಗಿದೆ. ಎಂ. ಆರ್. ಶ್ರೀನಿವಾಸ ಮೂರ್ತಿಯವರು ಈ ವಚನಕ್ಕೆ ಬರೆದಿರುವ ವ್ಯಾಖ್ಯಾನವನ್ನೊಮ್ಮೆ ಗಮನಿಸಿ “ಅಂಗಲಾಚುತ್ತಾ ಕಾಡಿನಲ್ಲಿ ಹೋಗುತ್ತಿದ್ದಾಳೆ. ಗಿಳಿ ಕೋಗಿಲೆ ಭೃಂಗ ಹಂಸೆ ನವಿಲು ಸಂತೋಷದಿಂದ ಗೀತೆಗಳನ್ನು ಹಾಡುತ್ತ ಕುಣಿಯುತ್ತ ಆಡುತ್ತ ನಲಿಯುತ್ತ ಸಂಭ್ರಮಗೊಳ್ಳುತ್ತ ಆ ಭಗವಂತನ ಕಾಣುತ್ತಿದೆಯಲ್ಲ ! ಅರಣ್ಯದ ಪಕ್ಷಿಗಳಿಗೆಲ್ಲ ಗೋಚರವಾಗಿ ನನಗೆ ಮಾತ್ರ ಅಗೋಚರವಾಗಿ ಕೋಟಲೆಗೊಳಿಸುತ್ತಿರುವುದು ನ್ಯಾಯವೇ ? ಚೆನ್ನಮಲ್ಲಿಕಾರ್ಜುನ”೧೧ ಎಂದಿರುವ ಮಾತು ಬಹಳ ಸ್ಪಷ್ಟವಾದ ಗ್ರಹಿಕೆಯಾಗಿದೆ. ಈ‌ ವಚನದ ಆಂತರ್ಯದಲ್ಲೊಂದು ಸಣ್ಣ ಶೋಕದ ಎಳೆಯಿದೆ. ಈ ವಚನದ ಕ್ರಿಯಾಕೇಂದ್ರವೆಂದರೆ ಹುಡುಕಾಟ.

ಮೊದಲ ಐದು ಸಾಲುಗಳ ಕೊನೆಯಲ್ಲಿ ‘ನೀವು ಕಾಣಿರೇ’ ಎಂಬ ಪದ ಪುಂಜವು ದೀರ್ಘಸ್ವರದೊಂದಿಗೆ ಬಂದಿದ್ದು, ‘ನೀವು’ ಎನ್ನುವುದು ಗೌರವ ಸೂಚಕವೂ, ಬಹುವಚನವೂ ಆಗಿದೆ. ಕೊನೆಯ ಸಾಲಿನಲ್ಲಿನ ‘ಎಲ್ಲಿರ್ದಹನೆಂದು’ ಎಂಬುದೂ ಏಕವಚನವಾಗಿದ್ದು ಚೆನ್ನಮಲ್ಲಿಕಾರ್ಜುನನ ಮೇಲಿನ ಅಪಾರವಾದ ಪ್ರೀತಿಯ ದ್ಯೋತಕವಾಗಿದೆ. ಒಟ್ಟೂ ವಚನವು ಕಾಣುವಿಕೆಗೆ ಸಿಕ್ಕಿದ್ದನ್ನು ಪ್ರಶ್ನಿಸಿ ಕೇಳಿ ಮುಂದೆ ಕಾಣಬಹುದಾದ ಒಂದು ಆಸೆಯನ್ನು ಹೊತ್ತು ಚಲನೆ ಪಡೆದಿದೆ‌. ದೈವವೆನ್ನುವುದು ಗ್ರಹಿಕೆ ನಿಲುಕುವುದೇ ಹೊರತು ಹೊರಗಡೆ ಸಾದರ ಪಡಿಸಿ ಸಾಕ್ಷಿ ಸಮೇತ ತೋರಿಸುವುದಲ್ಲ. ಅದನ್ನೇ ಈ ವಚನವು ಆಂತರಿಕ ಗ್ರಹಿಕೆಯನ್ನು ಸ್ಪಷ್ಟಗೊಳಿಸಿಕೊಳ್ಳುವ, ಅದಕ್ಕಾಗಿ ಸಂವಹನಕ್ಕೆ ಮುಂದಾಗುವ ಕ್ರಮದಲ್ಲಿದೆ.

ಚಿಲಿಮಿಲಿ ಎಂದೋದುವ      – ಗಿಳಿಗಳಿರಾ

ಸರವೆತ್ತು ಪಾಡುವ             ‌  – ಕೋಗಿಲೆಗಳಿರಾ

ಎರಗಿ ಬಂದಾಡುವ              – ದುಂಬಿಗಳಿರಾ

ಕೊಳನ ತಡಿಯೊಳಾಡುವ    – ಹಂಸೆಗಳಿರಾ

ಗಿರಿಗಹ್ವರದೊಳಾಡುವ        – ನವಿಲುಗಳಿರಾ

ಈ ಸಾಲುಗಳಲ್ಲೆಲ್ಲಾ ಮೊದಲ ಪದವು ಕ್ರಿಯಾದಗಳಾಗಿದ್ದು ಅನಂತರದ್ದು ಕ್ರಿಯೆಗೆ ಕಾರಣವಾದ ಜೀವಿಯ ಹೆಸರುಗಳು ಬಂದಿವೆ. ಓದು, ಪಾಡು, ಬಂದಾಡು, ತಡಿಯೊಳಾಡು, ದೊಳಾಡು ಇವೆಲ್ಲವೂ ವರ್ತಮಾನ ಕ್ರಿಯಾಪದದಂತೆ ಕಂಡರೂ, ಪ್ರತೀ ಪದದ ಕೊನೆಯಲ್ಲಿ ಸೇರುವ ‘ಉವ’ ಎಂಬ ಪ್ರತ್ಯಯವು ಸೇರಿದೆ‌ ಮತ್ತದು ಭವಿಷ್ಯಕಾಲ ಸೂಚಕವಾಗಿದೆ. ( ಉದಾಹರಣೆಗೆ: ಎಂದು+ಓದು+ಉವ ) ಅಕ್ಕ ತನ್ನ ಮುಂದಿನ ಆಸೆ, ನಡೆಯನ್ನು ಈ ಜೀವಿಗಳೊಂದಿಗೆ ಸ್ಪಷ್ಟಪಡಿಸತ್ತಾ ಸಾಗುತ್ತಿದ್ದಾಳೆ. ‘ಎರಗು’ ಎಂಬ ಪದಕ್ಕೆ ವಚನ ಸಂದರ್ಭದಲ್ಲಿ ‘ನಮಸ್ಕಾರ ಮಾಡು, ಬಾಗು’ ಎಂದು ಎಂ. ಆರ್. ಶ್ರೀ ರವರು ಅರ್ಥ ಮಾಡಿದ್ದಾರೆ, ಆದರೆ ಫ. ಗು. ಹಳಕಟ್ಟಿಯವರು ಇದೇ ಎರಗು ಪದಕ್ಕೆ ‘ಮೇಲೆ ಬಂದು ಬೀಳು’ ಎಂದು ಮಾಡಿರುವ ಅರ್ಥ ಸಮಂಜಸವಾಗಿದೆ. ಮದುಮದದ ಜವ್ವನದ ಹೆಣ್ಣು ಅಕ್ಕ ಎನ್ನುವುದನ್ನು ಮರೆಯಬಾರದು. ಹೂವಿನಂತಹವಳು ತಾನು ಎಂಬ ಆತ್ಮಪ್ರತ್ಯಯವೂ ಈ ಪದದ ಬಳಕೆಯ ಹಿಂದೆ ಕೆಲಸ ಮಾಡಿದೆ. ಈ ವಚನದಲ್ಲಿನ ಬಹುಮುಖ್ಯ ಧ್ವನಿಯ ಪದವಾದ “ನೀವು ಕಾಣಿರೇ” ಎಂಬುದು ಎರಡು ರೀತಿಯ ಅರ್ಥ ತರಂಗಗಳನ್ನು ಉಂಟುಮಾಡುತ್ತವೆ. ಒಂದು, ಚೆನ್ನಮಲ್ಲಿಕಾರ್ಜುನನನ್ನು ನೀವು ಕಂಡಿದ್ದೀರಾ ? ಎಂದು ಪ್ರಶ್ನಿಸುವ ರೀತಿಯಲ್ಲಿಯೂ, ಎರಡು. ನಾನು ಚೆನ್ನಮಲ್ಲಿಕಾರ್ಜುನನನ್ನು ಕಂಡಿದ್ದೇನೆ ನೀವು ಕಂಡಿದ್ದೀರಾ ಎಂದು ಮರುಪ್ರಶ್ನೆ ಮಾಡುವ ಹಾಗೆ ಭಾಸವಾಗುತ್ತದೆ. ಕೊನೆಯ ಪದವಾದ ‘ನೀವು ಹೇಳಿರೇ’ ಎಂಬುದೂ ನಾನು ಕಂಡಿದ್ದೇನೆ, ನೀವು ಕಂಡಿರುವಿರಾ ? ಅವನ ನಿಲ್ದಾಣವಾವುದು ? ಎಂದು ಪ್ರಶ್ನಾರ್ಥಕವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಶ್ರೀಶೈಲಕ್ಕೆ ಬರುವ ಹಾದಿಯಲ್ಲಿ ಎಲ್ಲ ಶರಣರ ವಿಯೋಗದಿಂದ ಉಂಟಾದ ದುಃಖವೂ ವಚನದ ಆಂತರ್ಯದಲ್ಲಿ ಇದೆ. ಈ ವಚನ ವಿಶೇಷ ಎನಿಸುವುದಕ್ಕೆ ಮತ್ತೊಂದಷ್ಟು ಅಂಶಗಳಿವೆ.

೧. ಸಾಮಾನ್ಯವಾದ ಹಕ್ಕಿಗಳು,  ಪಕ್ಷಿಗಳು ಮತ್ತು ಸ್ಥಳಗಳನ್ನು ಕೂಡಿಸಿರುವ ಸಂರಚನಾ ವಿಧಾನದಿಂದ ಬಹು ಎತ್ತರದಲ್ಲಿ ನಿಲ್ಲುತ್ತದೆ. ಭಾಷೆಯೊಂದರ ರಚನಾ ವಿನ್ಯಾಸಕ್ಕೆ ಉತ್ಕಟವಾದ ಭಾವದ ಸ್ಪರ್ಷ ಸಿಕ್ಕಾಗ ಆಗುವ ಕಾವ್ಯಕ್ಕೆ ಈ ವಚನವೇ ಸಾಕ್ಷಿ. ಭಾವದಿಂದ ಭಾಷೆ ಉನ್ನತ ಮಟ್ಟಕ್ಕೆ ಏರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯೂ ಹೌದು.

೨. ಅನುಭಾವಿಗಳು ವಿಚಿತ್ರವಾದ ವರ್ತನೆಗಳನ್ನು ಹೊಂದಿರುವವರು. ಜಡ ಚೇತನಗಳ ಮುಟ್ಟಿ ಮಾತನಾಡಿಸುವವರು. ಧ್ವನಿಯನ್ನು ದನಿಯನ್ನು ಬನಿಯಲ್ಲಿ ಬರಮಾಡಿಕೊಳ್ಳುವವರು. ಮೌನದಲಿ ಭಾಷೆಯ ನಿಲ್ಲಿಸಿ ನಗುವವರು. ಈ ವಚನದಲ್ಲಿಯೂ ಮನುಷ್ಯ ನಿರ್ಮಿತ ಭಾಷೆಯಲ್ಲದ ಮತ್ತೊಂದರ ಮೂಲಕ ಮನುಷ್ಯ ಭಾಷೆಯಲ್ಲಿಯೇ ಸಂವಹನಕ್ಕೆ ನಿಂತಿರುವುದು ತಿಳಿಯುತ್ತದೆ. ಇದು ಮೇಲು ನೋಟಕ್ಕೆ ವಿವೇಕ ವಿಕಳಾವಸ್ಥೆ ಎಂದು ಕಂಡರೂ ಅನುಭಾವಿಗಳಿಗೆ ಸಹಜವದು.

೩. ಚೆನ್ನಮಲ್ಲಿಕಾರ್ಜುನನನ್ನು ಕಾಣುವ ಆಸೆಯ ಉತ್ಕಟಾವಸ್ಥೆ ಈ ವಚನದಲ್ಲಿ ಕೆಲಸ ಮಾಡುತ್ತಿದೆ.

೪. ನಿರಂತರವಾದ ಹುಟುಕಾಟ ಈ ವಚನದ ಕ್ರಿಯೆ.

೫. ಕೊಳ, ಗಿರಿ, ಗಹ್ವರಗಳು ಬಂದಿವೆ. ಒಂದಕ್ಕಿಂತ ಒಂದು ಭಿನ್ನವಾದ ಸ್ಥಾನಗಳು. ಆದರೆ ಒಂದು ನಿರಂತರವಾದ ಕ್ರಮದಲ್ಲಿ ಬಂದಿವೆ.

ಅಕ್ಕನ ಈ ವಚನ ಬಹಳ ಉತ್ಸಾಹದಲ್ಲಿ, ಶರಣರ ಅಗಲಿಕೆಯಿಂದ ಉಂಟಾದ ವಿಕಳಾವಸ್ಥೆಯನ್ನು ತಡೆದುಕೊಂಡು, ಕಂಡ ಭವಿಷ್ಯವನ್ನು ಸಾಧಿಸಿಕೊಳ್ಳುವ ಮಾರ್ಗದಲ್ಲಿ ಕ್ರಮಿಸುತ್ತಲೇ‌ ಇದೆ.


ಅಡಿಟಿಪ್ಪಣಿಗಳು

೧. ವಚನ ಸಾಹಿತ್ಯ ಸಂಗ್ರಹ. ಸಂ.‌ ಭೂಸನೂರು ಮಠ ಸಂ. ಶಿ. ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆ. ಮೈಸೂರು. ಪು ೪೪೩. (೧೯೬೫)

೨. ಬಯಲಗಳಿಕೆಯ ಬೆಳಗು. ಜೋಳದರಾಶಿ ದೊಡ್ಡನಗೌಡ. ವಚನ ಅಧ್ಯಯನ ಕೇಂದ್ರ. ಬೆಳಗಾವಿ. ಪು ೪೯೩ – ೪೯೪ (೨೦೧೩)

೩. ಪ್ರಭುದೇವರ ಶೂನ್ಯಸಂಪಾದನೆ. ಸಂ. ಪ್ರೊ. ಸಂ. ಶಿ. ಭೂಸನೂರು ಮಠ. ಅಧವಾನಿ ಕಲ್ಲುಮಠದ ಪ್ರಕಟಣೆ. ಪು ೩೪೪ (೧೯೫೮)

೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ.‌ಎಂ. ಎಂ. ಕಲಬುರ್ಗಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ ಸಂ ೨೦೪. ಪು ೮೦೭ (೨೦೧೬)

೫. ವಚನ ಧರ್ಮ ಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಪು ೧೦೬ (೧೯೪೪)

೬. ಮಹಾದೇವಿಯಕ್ಕನ ವಚನಗಳು. ಸಂ. ಫ. ಗು. ಹಳಕಟ್ಟಿ. ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ ವಿಚಾಪುರ. ಪು ೪೧ (೧೯೩೧)

೭. ಹಲಗೆಯಾರ್ಯನ ಶೂನ್ಯಸಂಪಾದನೆ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು (೨೦೦೮)

೮. ಪ್ರಭುದೇವರ ಶೂನ್ಯಸಂಪಾದನೆ. ಸಂ. ಪ್ರೊ. ಸಂ. ಶಿ. ಭೂಸನೂರು ಮಠ. ಅಧವಾನಿ ಕಲ್ಲುಮಠದ ಪ್ರಕಟಣೆ. ಪು ೩೪೪ (೧೯೫೮)

೯. ಬಯಲಗಳಿಕೆಯ ಬೆಳಗು. ಜೋಳದರಾಶಿ ದೊಡ್ಡನಗೌಡ. ವಚನ ಅಧ್ಯಯನ ಕೇಂದ್ರ. ಬೆಳಗಾವಿ. ಪು ೪೯೩ (೨೦೧೩)

೧೦. ಪೂರ್ವೋಕ್ತ

೧೧. ವಚನ ಧರ್ಮ ಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಪು ೧೦೬ (೧೯೪೪)

***********************************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

3 thoughts on “ಹಳೆಯ ಅಂಕಣ ಹೊಸ ಓದುಗರಿಗೆ

  1. ಅಕ್ಕನ ವಚನ ವಿಶ್ಲೇಷಣೆ ಚೆನ್ನಾಗಿದೆ. ಹೀಗೆ ಸಾಗಲಿ ನಿಮ್ಮ ಸಾಹಿತ್ಯ ಪಯಣ !! ಶುಭಾಶಯಗಳು.

Leave a Reply

Back To Top