ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ-17

ಆತ್ಮಾನುಸಂಧಾನ

ಕಲ್ಲುಗಣಿಗಳಲ್ಲಿ ಹತ್ತಿಳಿದೆ ;

ಪಂಚವಾದ್ಯ ಮೇಳದಲ್ಲಿ ತಿರುಗಾಡಿದೆ

Beautiful Big Stones Pile Laying On The Ground In The Forest... Stock  Photo, Picture And Royalty Free Image. Image 106576241.

ನಮ್ಮ ಆಗೇರ ಜನಾಂಗದ ಮುಖ್ಯ ಉದ್ಯೋಗ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು. ಆದರೆ ಮಳೆಗಾಲದಲ್ಲಿ ಉಪ್ಪಿನ ಉತ್ಪಾದನೆ ಸಾಧ್ಯವಿಲ್ಲ. ಹಾಗಾಗಿ ಅವರು ಅನಿವಾರ್ಯವಾಗಿ ಇತರ ಕೆಲಸಗಳಲ್ಲೂ ತೊಡಗಿಸಿಕೊಳ್ಳದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿತ್ತು. ಕೃಷಿಕೂಲಿ, ಕಟ್ಟಡ ನಿರ್ಮಾಣ, ಕಲ್ಲುಗಣಿಗಳಲ್ಲಿ ಕಲ್ಲು ಕಡಿದು ತೆಗೆಯುವ ಕೆಲಸಗಳಲ್ಲಿಯೂ ನೈಪುಣ್ಯವನ್ನು ಸಾಧಿಸಿ ಅಂಥ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

            ನಮ್ಮೂರಿನಲ್ಲಿ ಜಟ್ಟಿ ಮಾಣಿ ಆಗೇರ ಎಂಬಾತ ಇಂಥ ಎಲ್ಲ ಕೆಲಸದಲ್ಲಿ ಕುಶಲ ಕರ್ಮಿಯಾಗಿದ್ದು ಹಲವು ಬಗೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಹಿರಿಯರಲ್ಲಿ ಬಹಳ ಮುಖ್ಯ ವ್ಯಕ್ತಿಯಾಗಿದ್ದ. ಈತ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವ ಕೆಲಸದಲ್ಲಿಯೂ ಅತ್ಯಂತ ನಿಪುಣನಾಗಿದ್ದರೂ ಅದೇಕೋ ಆಗರದ ಕೆಲಸದಲ್ಲಿ ಬಹಳಕಾಲ ನಿಲ್ಲಲಿಲ್ಲ.

            ದೈಹಿಕವಾಗಿ ತುಂಬ ಬಲಶಾಲಿಯಂತೆ ಕಾಣುತ್ತಿದ್ದ ಆತನಿಗೆ ಕೇರಿಯಲ್ಲಿ ತುಂಬ ಗೌರವವಿತ್ತು. ಕೇರಿಯ ಜನರಿಗೆ ಅನಾರೋಗ್ಯವಾದಲ್ಲಿ, ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಇತ್ಯಾದಿಗಳಲ್ಲಿ ಜಟ್ಟಣ್ಣ ಎಲ್ಲರಿಗಿಂತ ಮುಂದೆ ನಿಂತು ಕಾರ್ಯನಿರ್ವಹಿಸುವ ಅವನ ಧಾಡಸಿತನದಿಂದಲೇ ಅವನು ಎಲ್ಲರಿಗೂ ಅನಿವಾರ್ಯವೆನಿಸಿದ್ದ. ನನ್ನನ್ನು ವಿಶೇಷವಾದ ಪ್ರೀತಿ ಅಕ್ಕರೆಯಿಂದಲೇ ಕಾಣುತ್ತಿದ್ದರಿಂದ ಅವನು ನನಗೂ ಬಹಳ ಅಚ್ಚುಮೆಚ್ಚಿನವನೇ ಆಗಿದ್ದ. ಉಪ್ಪಿನಾಗರದ ಕೆಲಸ ಬಿಟ್ಟ ಮೇಲೆ ಜಟ್ಟಣ್ಣ ಅಂಕೋಲೆಯ ಹಿಚ್ಕಡ ಭಾಗದಲ್ಲಿ ಕಲ್ಲುಗಣಿಯಲ್ಲಿ ಕಲ್ಲು ತೆಗೆಯುವ ಕೆಲಸಕ್ಕೆ ಹೋಗುತ್ತಿದ್ದ. ಊರಿನಲ್ಲಿ ತೋಟ ಇತ್ಯಾದಿ ಇರುವಲ್ಲಿ ತೆಂಗಿನ ಮರ ಹತ್ತುವುದರಲ್ಲಿ ನಿಪುಣನಾದ್ದರಿಂದ ಕಾಯಿ ಕೀಳಲು ಬಹುತೇಕ ಜನ ಇವನನ್ನೇ ಅವಲಂಬಿಸಿದ್ದರು.

            ಯಕ್ಷಗಾನದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ ಜಟ್ಟಣ್ಣ ಮೇಳದ ಆಟಗಳನ್ನು ತಪ್ಪದೇ ನೋಡುತ್ತಿದ್ದ. ಚಿಟ್ಟಾಣಿ, ಜಲವಳ್ಳಿ ಮುಂತಾದ ಪ್ರಸಿದ್ಧ ಕಲಾವಿದರ ವೇಷವನ್ನು ನೋಡಿ ಅನುಕರಣೆ ಮಾಡಬಲ್ಲ ಪ್ರತಿಭೆ ಅವನಿಗಿತ್ತು. ಹೆಚ್ಚಾಗಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜಟ್ಟಣ್ಣ ವೇಷ ಕಟ್ಟಿ ನಿಂತರೆ ಹೆಚ್ಚು ಕಡಿಮೆ ಚಿಟ್ಟಾಣಿಯವರ ಪಾತ್ರದಂತೆಯೇ ಕಾಣಿಸುತ್ತಲೂ ಇದ್ದ. ಆದರೆ ಪಾತ್ರದ ಸಂಭಾಷಣೆ ಇತ್ಯಾದಿಗಳನ್ನು ಬೇರೆಯವರಿಂದ ಬರೆಯಿಸಿಕೊಂಡು ಓದಿಸಿ ಕೇಳಿ ಕಂಠಪಾಠ ಮಾಡುವುದು ಅವನಿಗೆ ಅನಿವಾರ್ಯವಾಗಿತ್ತು. ಆದರೂ ಊರಿನಲ್ಲಿ ವರ್ಷಕ್ಕೊಮ್ಮೆ ಆಡುವ ಯಕ್ಷಗಾನ ಬಯಲಾಟದಲ್ಲಿ ತಪ್ಪದೇ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಗಳಿಸುತ್ತಿದ್ದ.

            ಜಟ್ಟಣ್ಣನ ಇನ್ನೊಂದು ವಿಶೇಷವೆಂದರೆ ಶಹನಾಯಿ ವಾದನ ಕಲೆ. ನಮ್ಮ ಆಗೇರರಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳಿಗಾಗಿ ಪಂಚವಾದ್ಯ ಎಂಬ ವಾದ್ಯ ವಿಶೇಷವೊಂದು ಎಲ್ಲ ಊರುಗಳಲ್ಲಿಯೂ ಇತ್ತು. ಶಹನಾಯಿ, ಶ್ರುತಿ, ಡೊಳ್ಳು, ಸಮ್ಮಿಳ (ಗಿಡಬಿಡಿ) ಕಚಾಳ (ಚಕ್ರತಾಳ) ಮುಂತಾದ ಐದು ವಾದ್ಯ ವಿಶೇಷಗಳು ಇರುವುದರಿಂದ ಇದನ್ನು ಪಂಚವಾದ್ಯ ತಂಡವೆಂದೇ ಜನ ಗುರುತಿಸುತ್ತಿದ್ದರು.

            ಹಾಲಕ್ಕಿ ಮತ್ತಿತರ ಹಿಂದುಳಿದ ಸಮಾಜಗಳಿಂದಲೂ ಪಂಚವಾದ್ಯ ತಂಡಕ್ಕೆ ಅಹ್ವಾನ ಬರುತ್ತಿದ್ದವು. ಜಟ್ಟಣ್ಣ ಶಹನಾಯಿ ವಾದನದಿಂದ ಪ್ರಸಿದ್ಧನಾಗಿ ಸುತ್ತಲಿನ ಊರುಗಳಲ್ಲಿಯೂ ಅವನ ಪಂಚವಾದ್ಯ ತಂಡಕ್ಕೆ ಬೇಡಿಕೆ ಬರುವಂತೆ ಮಾಡಿದ್ದ. ವಾದ್ಯದ ತಾಲೀಮು ನಡೆಯುವಾಗ ನಾನೂ ಭಾಗವಹಿಸುತ್ತ ತಂಡದಲ್ಲಿ ಸಮ್ಮೀಳ ಅಥವಾ ಚಕ್ರತಾಳ ನುಡಿಸುವ ಅನುಭವ ಪಡೆದುಕೊಂಡಿದ್ದೆ. ಈ ವಾದ್ಯ ನುಡಿಸುವ ತಂಡದ ಕಲಾವಿದರ ಗೈರು ಹಾಜರಿಯಲ್ಲಿ ಜಟ್ಟಣ್ಣ ಒತ್ತಾಯ ಮಾಡಿ ನನ್ನನ್ನು ಒಂದೆರಡು ಬಾರಿ ಹಾಲಕ್ಕಿ ಜನಾಂಗದವರ ಮದುವೆಗೆ ಕರೆದೊಯ್ದ ಸಂದರ್ಭಗಳೂ ಇವೆ. ಆದರೆ ಅಸ್ಪೃಶ್ಯತೆಯ ಕಾರಣದಿಂದ ಪಂಚವಾದ್ಯ ತಂಡದವರನ್ನು ಮದುವೆ ಮನೆಯವರು ನಡೆಸಿಕೊಳ್ಳುವ ರೀತಿ ಸಹನೀಯವಾಗಿ ಕಾಣಿಸದೆ ನಾನು ಅಂಥ ಅವಕಾಶ ಬಂದಾಗಲೂ ತಪ್ಪಿಸಿಕೊಂಡು ದೂರ ಉಳಿದೆ. ಆದರೆ ಈಗಲೂ ಪಂಚವಾದ್ಯದ ಗಾನದ ಇಂಪು ಮತ್ತೆ ಮತ್ತೆ ಸ್ಪರಣೆಗೆ ಬರುವಾಗ ಅಂಥದೊಂದು ವಾದ್ಯ ವಿಶೇಷ ಕಣ್ಮರೆಯಾದುದಕ್ಕೆ ವಿಷಾಧವೆನಿಸುತ್ತದೆ.

            ಜಟ್ಟಣ್ಣ ಪಂಚವಾದ್ಯದ ಶಹನಾಯಿ ತಂಡಕಟ್ಟಿ ಹೆಸರು ಮಾಡಿದ್ದು ಮಾತ್ರವಲ್ಲದೆ ಗೋಕರ್ಣ ಸೀಮೆಯ ತುಂಬ ಶಹನಾಯಿ ಜಟ್ಟಿ ಎಂದೇ ಪ್ರಸಿದ್ಧಿ ಪಡೆದದ್ದು ಅಪರೂಪದ ಸಾಧನೆಯೇ ಆಗಿದೆ. ಜಟ್ಟಣ್ಣನ ಕಿರಿಯ ಸಹೋದರನೇ ನನ್ನ ಸಹಪಾಠಿಯಾದ ಕೃಷ್ಣ ಮಾಸ್ಕೇರಿ. ಅಂದು ಕೃಷ್ಣ ಕೂಡ ಈ ತಂಡದ ಪ್ರತಿಭಾವಂತ ಸದಸ್ಯನಾಗಿದ್ದ. ತಂಡದಲ್ಲಿ ಮುಖ್ಯ ವಾದ್ಯವಾದ ಡೊಳ್ಳು ನುಡಿಸುವಲ್ಲಿ ನಿಪುಣನಾಗಿದ್ದ. ಜಟ್ಟಣ್ಣನ ಮರಣಾನಂತರ ತಾನೇ ಸ್ವತಃ ಶಹನಾಯಿ ವಾದಕನಾಗಿ ತಂಡವನ್ನು ಬಹುಕಾಲ ಮುಂದುವರೆಸಿದ್ದ. ಆದರೆ ಕಾಲಾವಶದಿಂದ ಪಂಚವಾದ್ಯದ ಬೇಡಿಕೆ ಸಮಾಜದಲ್ಲಿ ಕಡಿಮೆಯಾಗುತ್ತಿದ್ದಂತೆ ಕೃಷ್ಣ ಯಕ್ಷಗಾನ ಭಾಗವತಿಕೆಯಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡ.

            ಜಟ್ಟಣ್ಣ ನನ್ನನ್ನು ಕೃಷ್ಣನನ್ನೂ ಒಮ್ಮೆ ತಾನು ಕಲ್ಲು ಕಡಿಯುವ ಕಲ್ಲು ಗಣಿಗೆ ಕರೆದೊಯ್ದಿದ್ದ. ಆಗ ಹಿಚ್ಕಡದ ಕಲ್ಲು ಆಸುಪಾಸಿನಲ್ಲಿ ತುಂಬ ಪ್ರಸಿದ್ದಿಯಲ್ಲಿತ್ತು. (ಈಗಲೂ ಇದೆ) ಬಹಳಷ್ಟು ಜನ ತಮ್ಮ ಜಮೀನಿನಲ್ಲಿ ಚೀರೆಕಲ್ಲು ತೆಗೆಯುವುದನ್ನು ಒಂದು ಉದ್ಯಮವೆಂಬಂತೆ ನಡೆಸುತ್ತಿದ್ದರು. ಗಂಗಾವಳಿ ನದಿಯಾಚೆಗಿನ ಹಿಚ್ಕಡಕ್ಕೆ ನಮ್ಮೂರಿನಿಂದ ನದಿ ತೀರದ ಗುಂಟ ಕಾಲುದಾರಿಯಲ್ಲಿ ನಡೆದು ಅಗ್ಗರಗೋಣ, ಜುಗಾ ಮುಂತಾದ ಊರುಗಳನ್ನು ಬಳಸಿ ಹಿಚ್ಕಡ ತಾರಿಯನ್ನು ಚಿಕ್ಕ ದೋಣಿಯ ಮೂಲಕ ದಾಟಿ ಕಲ್ಲುಗಣಿ ತಲುಪಬೇಕಾಗಿತ್ತು.

            ಹಿಚ್ಕಡದ ದಂಡೆ ಭಾಗಕ್ಕೆ ಹೊಂದಿಕೊಂಡಂತೆ  ವಿಶಾಲವಾದ ಗದ್ದೆ ಬಯಲು, ಆಚೆ ದಿನ್ನೆಯ ಮೇಲೆ ನೂರಾರು ನಾಡವರು, ಹರಿಕಾಂತರು, ಆಗೇರರು ಇತ್ಯಾದಿ ಜಾತಿಯ ಜನರ ಮನೆಗಳು ಇರುವ ಕೊಪ್ಪವಿದೆ. ಅದರಾಚೆ ಗುಡ್ಡದಂಚಿನವರೆಗೂ ವಿಶಾಲವಾದ ಚೀರೆಕಲ್ಲಿನ ಬೇಣವಿದೆ. ಅಲ್ಲಿ ಚಿನ್ನದ ಗಟ್ಟಿಗಳಂಥ ಚೀರೆಕಲ್ಲುಗಳನ್ನು ಎಬ್ಬಿಸುವ ಕಲ್ಲುಗಣಿಗಳಿವೆ. ಇಲ್ಲಿರುವ ಹತ್ತಾರು ಗಣಿಗಳಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಆಗೇರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದರು.

            ಇದೊಂದು ಕೌಶಲ್ಯದ ಕೆಲಸ. ಕಲ್ಲು ತೆಗೆಯುತ್ತಾ ತೆಗೆಯುತ್ತಾ ಗಣಿ ಆಳವಾಗುತ್ತ ಹೋಗುತ್ತದೆ. ಬಾವಿಗಿಂತ ಆಳವಾದ ಇಂಥ ಗಣಿಗಳಲ್ಲಿ ಇಳಿಯುವುದಕ್ಕೆ ಗೋಡೆಗುಂಟ ಅವರೇ ನಿರ್ಮಿಸಿಕೊಂಡ ಕಾಲುದಾರಿಯಂಥ ಮೆಟ್ಟಿಲು! ಅದರ ಆಧಾರದಿಂದಲೇ ಇಳಿಯಬೇಕು. ತೆಗೆದ ಕಲ್ಲುಗಳನ್ನು ಅದೇ ಮೆಟ್ಟಿಲುಗಳ ಮೂಲಕವೇ ಹೊತ್ತು ಮೇಲೆ ತರಬೇಕು.

            ಜಟ್ಟಣ್ಣ ಕಲ್ಲು ತೆಗೆದ ಗಣಿಯೂ ತುಂಬಾ ಆಳವಾಗಿತ್ತು. ದಂಡೆಯ ಮೇಲೆ ನಿಂತು ನೋಡಿದರೆ ತಳದಲ್ಲಿ ನಿಂತವರು ಚಿಕ್ಕ ಲಿಲ್ಲಿಪುಟ್ ಥರ ಕಾಣಿಸುತ್ತಿದ್ದರು. ಒಂದು ಬದಿಯ ಗೋಡೆಯನ್ನೇ ಆಧಾರವಾಗಿಟ್ಟುಕೊಂಡು ಕೆಳಗೆ ಇಳಿಯುವಾಗ ಕೊಂಚ ಎಚ್ಚರ ತಪ್ಪಿದರೂ ಕೆಳಗೆ ಬೀಳಬಹುದಾದ ಸ್ಥಿತಿಯಲ್ಲಿ ನಮ್ಮ ಜಾತಿಯ ಮುದಿಯವಯಸ್ಸಿನವರೂ ಲೀಲಾಜಾಲವಾಗಿ ಹತ್ತಿಳಿಯುವ ಸಾಹಸ ಮಾಡುವುದನ್ನು ನೋಡುವಾಗಲೇ ನನಗೆ ತಲೆ ಸುತ್ತಿ ಬಂದ ಅನುಭವವಾಯಿತು. ನನ್ನದೇ ವಯಸ್ಸಿನ ಗೆಳೆಯ ಕೃಷ್ಣ ಸುಲಭವಾಗಿ ಗಣಿಯಲ್ಲಿಳಿದು ಬಂದ. ನನಗೆ ಇದೊಂದು ದೊಡ್ಡ ಸಾಹಸವೇ ಆಗಿ ತೋರಿತು. ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡಂತೆ ಕೃಷ್ಣನ ಕೈ ಹಿಡಿದುಕೊಂಡೆ ಒಮ್ಮೆ ಮಾತ್ರ ಹೇಗೋ ಗಣಿಯಲ್ಲಿಳಿದು ಬಂದೆ. ಪಾತಾಳಕೆ ಹೋಗಿ ಗೆದ್ದು ಬಂದಂತೆನಿಸಿತು…!

**********************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

5 thoughts on “

  1. ಗುರೂಜಿ,
    ಎಲ್ಲವನ್ನೂ ಬಲ್ಲವರಂತೆ ಎಲ್ಲದರಲ್ಲೂ ಅನುಭವಿ ಜೀವನ ನಿಮ್ಮದು. ನಿಮ್ಮ ಮುಂದಿನ ಸಂಚಿಕೆ …….

  2. ನಿಮ್ಮ ಆತ್ಮಕಥೆಯ ವೃತ್ತಾಂತ ಬಹಳ ಚೆನ್ನಾಗಿದೆ. ಊರು ಬಿಟ್ಟ ನಂತರ ಓದಲು ಸಾಧ್ಯವಾಗಲಿಲ್ಲ. ಪುಸ್ತಕ ರೂಪದಲ್ಲಿ ಇದು ಶೀಘ್ರವೇ ಲಭ್ಯವಾಗಲಿ ಎಂದು ಹಾರೈಸುವೆ.
    ರಾಮಚಂದ್ರ ಉ ಮಹಾಲೆ

    1. ನಿಮ್ಮ ವಾಟ್ಸಪ್ ನಂಬರ್ಹೇಹೇಳಿ …..ಮೆಸೇಜ್ ಮಾಡುವೆ

  3. ಈ ಸಂಚಿಕೆಯಲ್ಲಿ ಗಣಿ ಜಟ್ಟಯ್ಯ ಆವರಿಸಿರುವ ಮಧುರ ಕ್ಷಣಗಳನ್ನು ಆಸ್ವಾದಿಸಿದೆವು.

  4. ಸರ,
    ನಿಮ್ಮ ಅನುಭವಗಳು ಸ್ಮರಣಿಯವಾಗಿ ಕಂಡುಬರುತ್ತದೆ. ನಿಮ್ಮ ನೆನಪಿನ ಅದ್ಭುತ ಅನುಭವ ನೀಡುತ್ತದೆ.
    – ಕಮಲಾಕರ ಬೋರಕರ

Leave a Reply

Back To Top