ಗಜ಼ಲ್
ಎ . ಹೇಮಗಂಗಾ


ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ
‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ
ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾ
ಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ
ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆ
ಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ
ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆ
ನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು ಬೇಗ ನಿರ್ಗಮಿಸುವುದು ಬೇಕಿರಲಿಲ್ಲ
ಎದುರಾಗುವ ಪ್ರತೀ ಕಷ್ಟ ,ಸುಖವನು ಅನುಭವಿಸಲೇಬೇಕು ಹೇಮ
ಮಸಣದ ಮನೆ ನೀನೇ ಬಯಸಿ ಇಷ್ಟು ಬೇಗ ಸೇರುವುದು ಬೇಕಿರಲಿಲ್ಲ
*************************
ಮೊನ್ನೆ ಯುವ ಬರಹಗಾರ್ತಿಯೊಬ್ಬರ ಆತ್ಮಹತ್ಯೆ ನನ್ನ ಮನಸ್ಸಿಗೆ ಅಪಾರ ಆಘಾತವನ್ನು ನೀಡಿತು ಮಧುಸೂದನ್ ಅವರೇ……ಆ ನೋವಿನಲ್ಲಿ ಬರೆದ ಗಜಲ್ ಇದು
ಆತ್ಮಹತ್ಯೆ ಯೇ ಎಲ್ಲಕ್ಕೂ ಪರಿಹಾರ ಎಂದು ಏಕೆ ತಿಳಿಯುತ್ತಾರೋ.. ಗಜಲ್ ತುಂಬಾ ಚೆನ್ನಾಗಿದೆ ಮೇಡಂ