ರೊಟ್ಟಿ ತೊಳೆದ ನೀರು

ಕಥೆ

ರೊಟ್ಟಿ ತೊಳೆದ ನೀರು

ಶಾಂತಿವಾಸು

Indian Family Painting by Prakash Bandekar

ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು ಖಾತ್ರಿ ಮಾಡಿಕೊಂಡು ಬಾಗಿಲೆಳೆದುಕೊಂಡು ಹೊರಗೆ ನಡೆದರು. ರಸ್ತೆಯ ತಿರುವಿಗೆ ಬರುತ್ತಿದ್ದಂತೆ ಪ್ರತಿದಿನ ಅಡ್ಡ ಸಿಗುತ್ತಿದ್ದ ಚಂದ್ರಪ್ಪ ಕೂಡ ಇಂದು ಕಾಣಿಸಲಿಲ್ಲ.

     ನಿಂತಲ್ಲಿಯೇ ನಿಂತು ಚಂದ್ರಪ್ಪನ ಮೊಬೈಲಿಗೆ ಫೋನ್ ಮಾಡಿದರು. ಚಂದ್ರಪ್ಪ ಫೋನ್ ತೆಗೆದದ್ದೇ ತಡ “ಎಲ್ಲಪ್ಪ? ಇವತ್ತು ಇನ್ನೂ ಬಂದೇ ಇಲ್ವಾ? ಬರ್ತಿಯೋ ಇಲ್ವೊ”? ಕೇಳಿದರು. ಆ ಕಡೆಯಿಂದ ಚಂದ್ರಪ್ಪ ಛೇಡಿಸುವ ದನಿಯಲ್ಲಿ “ಅಲ್ಲ ಶೆಟ್ರೇ, ಲೇಟಾಗಿ ಬಂದವರು ನೀವು. ನನ್ನನ್ನೇ ಬಂದಿಲ್ವಾ ಅಂತ ಕೇಳ್ತೀರಾ? ನಾನು ಆಗಲೇ ವಾಕಿಂಗ್ ಮುಗಿಸಿ, ಕಾಫಿ ಕುಡೀತಿದ್ದೀನಿ. ಬಿಸಿ ಬಿಸಿ ಇಡ್ಲಿ ಇಳಿಸ್ತಿದ್ದಾರೆ ಬನ್ನಿ. ತಿಂದು ಮನೆಗೆ ಹೋಗೋಣ” ಎನ್ನಲು, ಶೆಟ್ಟರು “ಇಲ್ಲ ನಾನು ಮನೆಗೆ ಹೋಗ್ತೀನಿ ಚಂದ್ರಪ್ಪ” ಎಂದು ಹೇಳಿ ಫೋನಿಟ್ಟ ಶೆಟ್ಟರಿಗೆ ವಾಕಿಂಗ್ ಹೋಗುವ ಮನಸ್ಸಿರಲಿಲ್ಲ. ಹೆಂಡತಿಯ ಕುರಿತು ಭಯವಾಗತೊಡಗಿತು. ಮೊಬೈಲಿನಲ್ಲಿ ಸಮಯ ಏಳೂವರೆ ತೋರಿಸುತ್ತಿತ್ತು. ವಾಪಸ್ ಮನೆಗೆ ಬಂದವರು ನೇರವಾಗಿ ರೂಮಿಗೆ ಹೋದರು.

    ಅಪರೂಪಕ್ಕೆ ಇನ್ನೂ ಮಲಗಿದ್ದ ಲಲಿತಮ್ಮನನ್ನು ಎಬ್ಬಿಸಲು ಮನಸ್ಸು ಬರಲಿಲ್ಲ. ಆದರೆ ಏಕೆ ಎದ್ದಿಲ್ಲವೆಂದು ತಿಳಿಯುವ ತನಕ ನೆಮ್ಮದಿಯೂ ಇಲ್ಲ ಅವರಿಗೆ. ಮೆಲುವಾಗಿ “ಲಲಿತ ನಿದ್ದೆ ಮಾಡ್ತಿದ್ದೀಯಾ ಇನ್ನೂ”? ಎಂದರು. ಕಣ್ಣುಬಿಟ್ಟ ಲಲಿತಮ್ಮ “ಟೈಮೆಷ್ಟು? ಆಗ್ಲೇ ವಾಕಿಂಗ್ ಹೋಗಿ ಬಂದು ಬಿಟ್ರಾ”? ಕೇಳಿದರು. “ನಾನು ಎದ್ದಾಗ್ಲೇ ಏಳಾಗಿತ್ತು ಅನ್ನಿಸುತ್ತೆ. ಚಳಿ ನೋಡು. ಮಲಗಿಬಿಟ್ಟಿದ್ದೀನಿ. ನಾನು ವಾಕಿಂಗ್ ಹೋಗ್ಲೇ ಇಲ್ಲ. ಅಷ್ಟು ದೂರ ಹೋಗಿದ್ದವನು, ನೀನ್ಯಾಕೋ ಎದ್ದಿಲ್ವಲ್ಲ ಅಂತ ವಾಪಸ್ ಬಂದೆ. ಕಾಫಿ ಕೊಡು” ಎಂದರು. “ಕೊಡ್ತೀನಿ ಇರಿ” ಎನ್ನುತ್ತಾ ಎದ್ದು ಹೋದ ಲಲಿತಮ್ಮನ ಕುಗ್ಗಿದ ಬೆನ್ನನ್ನೇ ನೋಡುತ್ತಾ ಕುಳಿತ ಪಾಂಡುರಂಗಯ್ಯ ಶೆಟ್ಟರು, ‘ಇವಳಿಗೇನಾದರೂ ಆದರೆ, ನನ್ನ ಗತಿ ಏನಪ್ಪಾ ದೇವರೇ’? ಎಂದು ಎದೆಯ ಮೇಲೆ ಕೈ ಇಟ್ಟುಕೊಂಡರು. ಒಂದು ತಿಂಗಳಿನಿಂದಲೂ ಲಲಿತಮ್ಮನಲ್ಲಿ ಈ ತರಹದ ಒಂದೊಂದೇ ಬದಲಾವಣೆಯನ್ನು ಗಮನಿಸುತ್ತ ಬಂದಿದ್ದ ಶೆಟ್ಟರು ‘ಆದಷ್ಟು ಬೇಗ ಮನೆಯ ವಿಷಯ ಇತ್ಯರ್ಥ ಮಾಡಿಬಿಡಬೇಕು. ಎಲ್ಲವೂ ಹೋದರೂ ಪರವಾಗಿಲ್ಲ. ಕೊನೆಗೆ ಇವಳೊಬ್ಬಳನ್ನು ಮಾತ್ರ ಉಳಿಸಿಕೊಳ್ಳಬೇಕು’ ಎಂದು ತೀರ್ಮಾನಿಸಿದರು.

     ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆರು ಹಾಗೂ ಮೂರುವರೆ ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ, ಹೊಳೆನರಸೀಪುರದಲ್ಲಿದ್ದ ಜಮೀನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ಕೈಲಿ ಹಿಡಿದು ಬೆಂಗಳೂರಿಗೆ ಬಂದು ಸಂಸಾರ ಹೂಡಿದ್ದ ಪಾಂಡುರಂಗಯ್ಯ ಶೆಟ್ಟರು ಹಾಗೂ ಲಲಿತಮ್ಮ ಬಹಳ ಕಷ್ಟ ಜೀವಿಗಳು. ಎರಡು ಬಾಗಿಲುಗಳ ದಿನಸಿ ಅಂಗಡಿ ತೆರೆದು ಅದಕ್ಕಂಟಿದಂತಿದ್ದ ಮನೆಯನ್ನು ಬಾಡಿಗೆಗೆ ಪಡೆದು, ಗಂಡ ಹೆಂಡತಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರು. ಅಪರಿಚಿತ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಸಂಸಾರವು ನೆಲೆ ಕಂಡುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಒಂದೊಂದು ಪೈಸೆಗೂ ಲೆಕ್ಕ ಹಾಕಿ ಖರ್ಚು ಮಾಡುತ್ತಾ ಬೆಂಗಳೂರಿಗೆ ಬಂದು ಹದಿನೈದು ವರ್ಷಗಳ ನಂತರ ಬಾಡಿಗೆಗೆ ಪಡೆದಿದ್ದ ಕಟ್ಟಡವನ್ನೇ ಸ್ವಂತಕ್ಕೆ ಕೊಂಡುಕೊಂಡರು.

    ನಂತರ ಹಳೆಯ ಕಟ್ಟಡವನ್ನು ಕೆಡವಿ ಕೆಳಗೆ ಬಾಡಿಗೆಗೆ ಒಂದು ಮನೆ, ತಮಗೆ ಎರಡು ಬಾಗಿಲಿನ ಅಂಗಡಿ, ಅದರ ಮೇಲೆ ತಮ್ಮ ವಾಸಕ್ಕೆ ಅನುಕೂಲವಾದ ಮೂರು ಬೆಡ್ ರೂಮಿನ ಮನೆ, ಮತ್ತೂ ಮೇಲೆ ಬಾಡಿಗೆಗೆ ಎರಡು ಮನೆ ಕಟ್ಟಿಕೊಂಡರು. ಜೀವನ ಮೊದಲಿನಷ್ಟು ತ್ರಾಸ ಇಲ್ಲದಿದ್ದರೂ ಸುಮ್ಮನಿದ್ದು ಅಭ್ಯಾಸವಿರದ ದಂಪತಿಗಳು, ಮಕ್ಕಳು ಮೊಮ್ಮಕ್ಕಳಿಗೆಂದು ದುಡಿಯುತ್ತಾ ಅಂಗಡಿಯ ವ್ಯಾಪಾರವನ್ನು ಮಾತ್ರ ನಿಲ್ಲಿಸಲಿಲ್ಲ.

      ಹೆಚ್ಚು ಓದದೆ ತಂದೆಯೊಂದಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ದೊಡ್ಡಮಗ ಕೇಶವನಿಗೆ ಆರು ವರ್ಷದ ಕೆಳಗೆ ತಮ್ಮದೇ ಊರು ಹೊಳೆನರಸೀಪುರದ ರಥಬೀದಿಯ ರಾಮಪ್ಪ ಶೆಟ್ಟಿಯ ಮಗಳು ಕವಿತಾಳೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಅವರಿಗೆ ಒಬ್ಬ ಮಗ ವಿಶ್ವಾಸ್ ಐದು ವರ್ಷದವನು. ಎರಡನೆಯ ಮಗ ಕೃಷ್ಣ (ಕಿಟ್ಟಿ) ಬಿ.ಕಾಂ ಓದಿ ಲೆಕ್ಕಪರಿಶೋಧಕರ ಬಳಿ ಕೆಲಸಕ್ಕೆ ಸೇರಿದವನು ಕೊನೆಗೆ ಅದೇ ಕಂಪನಿಯಲ್ಲಿ ಮ್ಯಾನೇಜರಾಗಿ ಬಡ್ತಿ ಪಡೆದು ಮುಂಬೈ ಸೇರಿದ್ದ. ಈಗ ಎರಡು ವರ್ಷಗಳ ಹಿಂದೆ ಅವನಿಗೂ ಮೈಸೂರಿನ ಕೃಷ್ಣಯ್ಯ ಶೆಟ್ಟಿಯವರ ಮಗಳು ಪಂಕಜಳಿಗೂ ಮದುವೆ ಮಾಡಿಸಿ ನೆಮ್ಮದಿಯ ನಿಟ್ಟುಸಿರೆಳೆದಿದ್ದರು ಪಾಂಡುರಂಗಯ್ಯ ಹಾಗೂ ಲಲಿತಮ್ಮ ದಂಪತಿಗಳು.

     ಇಷ್ಟೇ ಆಗಿದ್ದರೆ ಇವರ ಸಂಸಾರದ ಹಣೆಬರಹವನ್ನು ಮತ್ತೆ ಆಸಕ್ತಿವಹಿಸಿ ಓದಲಾಗುವುದಿಲ್ಲವೆಂದೇ ದೇವರು ಶೆಟ್ಟರಿಗೆ ಒಂದೊಂದೇ ಕಾಯಿಲೆಯನ್ನು ಸೇರಿಸುತ್ತಾ ಸಾಗಿದ್ದ. ಸಕ್ಕರೆ ಕಾಯಿಲೆಯೊಂದಿಗೆ ರಕ್ತದೊತ್ತಡ ಬೇರೆ ಸೇರಿಕೊಂಡು ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ತಿನ್ನಬಹುದು ಎಂದು ಏನನ್ನೂ ತಿನ್ನದೆ ಬರೀ ನೋಡಿ ನೋಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಶೆಟ್ಟರ ನಾಲಿಗೆ ಚಪಲಕ್ಕೆ ಶಾಶ್ವತವಾಗಿ ಬೀಗ ಹಾಕಿತ್ತು. ಮದುವೆಗೆ ಮೊದಲು ರಜೆ ಸಿಕ್ಕಾಗೆಲ್ಲಾ ಮುಂಬೈನಿಂದ ಬರುತ್ತಿದ್ದ ಕಿಟ್ಟಿ ಮದುವೆಯಾದ ಮೊದಲ ವರ್ಷ ಒಂದೆರಡು ಸಲ ಬಂದಿದ್ದನಷ್ಟೇ, ನಂತರ ಬರುವುದು ಬೇಡ, ಕೊನೇ ಪಕ್ಷ ಫೋನ್ ಮಾಡುವುದನ್ನೂ ಬಿಟ್ಟುಬಿಟ್ಟಿದ್ದ. ಇವರಾಗೇ ಫೋನ್ ಮಾಡಿದರೂ ಒಂದೆರಡೇ ಮಾತಿನಲ್ಲಿ ಎಲ್ಲವನ್ನೂ ಕೇಳಿ ಮುಗಿಸುತ್ತಿದ್ದನಷ್ಟೇ ಹೊರತೂ ತಾನಾಗಿ ಏನನ್ನೂ ಹೇಳುತ್ತಿರಲಿಲ್ಲ.

     ಬರಲಾರೆನೆಂದು ನೇರವಾಗಿ ಹೇಳದೆ, ಬಿಡುವಿಲ್ಲವೆಂದು ಮೊದಲೇ ಹೇಳಿಬಿಡುತ್ತಿದ್ದವನನ್ನು ಇವರುಗಳು ಕೂಡ “ಬಾ” ಎಂದು ಕರೆಯುವುದನ್ನು ಬಿಟ್ಟುಬಿಟ್ಟರು. ತಾವೇ ಹೋಗಿ ಮಗನ ಮನೆಯಲ್ಲಿದ್ದು ಬರಬಹುದೆಂಬ ಹೆಂಡತಿಯ ಸಲಹೆ ಶೆಟ್ಟರಿಗೆ ರುಚಿಸಲಿಲ್ಲ. “ಮನೆಬಿಟ್ಟು ನಾನೆಲ್ಲೂ ಬರುವುದಿಲ್ಲ. ಕೇಶವ ಒಬ್ಬ ಅಂಗಡೀನ ಹೇಗೆ ನೋಡಿಕೊಳ್ಳುತ್ತಾನೆ? ಅವನಿಗೆ ಕಷ್ಟವಾಗುತ್ತೆ. ನಾವು ರೈಲ್ವೇ ಸ್ಟೇಷನ್ನಿನಲ್ಲಿರೋ ವೈಟಿಂಗ್ ರೂಮ್ ತರ. ಈ ಜಾಗ ಬಿಟ್ಟು ಕದಲಲ್ಲ. ಇರೋ ಕಡೆನೇ ಪರ್ಮನೆಂಟು. ಅವರೆಲ್ಲ ರೈಲಿನ ಹಾಗೆ ಬರೋರು ಬರಲಿ ಹೋಗೋರು ಹೋಗಲಿ ನಾನು ಮಾತ್ರ ಎಲ್ಲೂ ಕದಲಲ್ಲ” ಎಂದು ನಗೆಚಟಾಕಿ ಜೊತೆಗೆ ಲಲಿತಮ್ಮನ ಬೇಡಿಕೆಯನ್ನು ಅಲ್ಲಿಯೇ ತುಂಡರಿಸುತ್ತಿದ್ದರು. ‘ಬೇಕಿದ್ದರೆ ನೀನು ಹೋಗಿ ಬಾ’ ಎಂದು ಬಾಯಿ ಮಾತಿಗೂ ಹೇಳುತ್ತಿರಲಿಲ್ಲ ಪುಣ್ಯಾತ್ಮ. ಖರ್ಚು ಎಂಬ ನೆಪ ಒಂದು ಕಡೆಯಾದರೆ, ಮನೆಯನ್ನು ಸೊಸೆಯ ಮೇಲೆ ಬಿಟ್ಟು ಹೋಗುವಷ್ಟು ನಂಬಿಕೆ  ಶೆಟ್ಟರಿಗೆ ಇರಲಿಲ್ಲ. ಇಷ್ಟಕ್ಕೂ ಇವರು ಯಾರನ್ನೂ ಮುಂಬೈಗೆ ಬಂದು ಒಂದೆರಡು ದಿನವಾದರೂ ಇರಿ ಎಂದು ಕಿಟ್ಟಿಯೋ ಅಥವಾ ಪಂಕಜಳೋ ಕರೆದೂ ಕೂಡ ಇರಲಿಲ್ಲ.

ಅದನ್ನು ಗಮನಿಸುತ್ತಿದ್ದ ಹಿರಿಸೊಸೆ ಕವಿತಾ, ಇನ್ನು ಈ ವಯಸ್ಸಾದ ಎರಡೂ ಬಳ್ಳಿಗಳು ನಮ್ಮ ಕಾಲಿಗೆ ಸುತ್ತಿಕೊಂಡಿವೆ ಎನ್ನುವಂತೆ “ಇವರಿಬ್ಬರಿಂದ ನನಗೆ ಯಾವಾಗ ಮುಕ್ತಿಯೋ” ಎನ್ನುತ್ತಾ ಮೊದಲು ಗೊಣಗಲು ಆರಂಭಿಸಿ ನಂತರದ ದಿನಗಳಲ್ಲಿ ಅವರಿವರಿಗೆ ಫೋನಿನಲ್ಲೂ, ಮನೆಗೆ ಬಂದವರೊಡನೆಯೂ ಹೇಳಿಕೊಂಡು ಗೋಣಗುತ್ತಾ ಓಡಾಡುತ್ತಿದ್ದುದು ಆಗಾಗ ಕಿವಿಯ ಮೇಲೆ ಬೀಳುತ್ತಲೇ ಇತ್ತು. ಇವರಿಬ್ಬರೂ ಆಡುವ ಮಾತುಮಾತಿಗೂ ಕಿರಿಕಿರಿಯಾಗುತ್ತಿದ್ದವಳು, ಹಲವಕ್ಕೆ ಕಿವುಡಾಗಿದ್ದಳು. ಈ ನಡುವೆ ಆಗಾಗ ತಲೆತಿರುಗಿ ಬಿದ್ದು, ಸುಮ್ಮನೆ ಮಲಗಿ ಮೆಲ್ಲಮೆಲ್ಲನೆ ಹಾಸಿಗೆ ಹಿಡಿಯುವ ಹಂತದಲ್ಲಿದ್ದ ಲಲಿತಮ್ಮನ ಆರೋಗ್ಯದ ಏರುಪೇರಿನ ವಿಷಯದಲ್ಲಿ ಕುರುಡಿಯೂ ಸಹಾ ಆಗಿದ್ದಳು.

 ಈ ಮಧ್ಯೆ ಕವಿತಾ ಮತ್ತೊಂದು ಮಗುವಿಗೆ ಬಸುರಾಗಿ ಮೂರು ತಿಂಗಳಿಗೆ ಗರ್ಭಪಾತವಾಗಿತ್ತು. ಅವಳು ತಾಯಿಗೆ ಫೋನಿನಲ್ಲಿ “ಇರೋ ಒಂದು ಮಗೂಗೇ ಸೆಕ್ಯೂರಿಟಿ ಇಲ್ಲ. ಈ ಅವತಾರದಲ್ಲಿ ಇನ್ನೂ ಒಂದು ಮಗು ಬೇರೆ ಯಾಕೆ ಬೇಕಿತ್ತು? ಅದು ಹೋಗಿದ್ದೇ ಒಳ್ಳೆದಾಯ್ತು. ಬಿಡಮ್ಮ” ಎನ್ನುವುದನ್ನು ಕೇಳಿಸಿಕೊಂಡ ಲಲಿತಮ್ಮನಿಗೆ ಮಗುವನ್ನು ತಾನೇ ತೆಗೆಸಿದ್ದಾಳೆ ಎಂಬ ಅನುಮಾನ ಬಲವಾಗತೊಡಗಿತು. ಗಂಡನಿಗೆ ಹೇಳಿದರೆ “ಮಗು ಹೊರೋದು, ಹೆರೋದು, ಸಾಕೋದು ಎಲ್ಲಾ ಅವಳೇ ಅಲ್ವಾ? ಇನ್ನೊಂದು ಮಗು ಬೇಕೋ ಬೇಡವೋ ಎಲ್ಲ ಅವಳೇ ತೀರ್ಮಾನ ಮಾಡಿರ್ತಾಳೆ ಬಿಡು” ಎಂದು ಉದಾಸೀನವಾಗಿ ಹೇಳಿಬಿಟ್ಟರು ಶೆಟ್ಟರು. ಆದರೆ ಲಲಿತಮ್ಮನಿಗೆ ಸಂಕಟವಾಗಿ “ಸೆಕ್ಯೂರಿಟಿ ಇಲ್ಲ ಅಂದ್ರೆ ಏನರ್ಥ”? ಎಂದು ಮತ್ತೆ ಗಂಡನನ್ನು ಕೇಳಿದಳು. “ಆ ಮಗು ಹುಟ್ಟಿ, ಬೆಳೆದು, ಓದಿ ಕೊನೆಗೆ ಫಾರಿನ್ನಿಗೆ ಹೋಗೋವರೆಗೂ ನಾವು ಸಂಪಾದಿಸಿದ ಹಣ ಅವಳಿಗೆ ಅವಳ ಮಕ್ಕಳಿಗೆ ಸೆಕ್ಯೂರಿಟಿಯಾಗಿ ಬೇಕು ಅಂತ ಅರ್ಥ” ಎಂದು ಆ ಮಾತಿಗೆ ಅಲ್ಲಿಯೇ ಪೂರ್ಣ ವಿರಾಮವನ್ನಿಟ್ಟಿದ್ದರು. ಆದರೆ ನಂತರದ ಸಮಸ್ಯೆಗಳು ಹಲವಾರು ಅಲ್ಪವಿರಾಮಗಳನ್ನು ದಾಟುತ್ತಿದ್ದವಾಗಲಿ, ತಾನು ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಹಿರಿಯರು ಪೂರ್ಣವಿರಾಮ ಹಾಕಲಿ ಎಂದು ಸೊಸೆ, ಶುರುಮಾಡಿದ ಸೊಸೆಯೇ ನಿಲ್ಲಿಸಲಿ ಎಂದು ಶೆಟ್ಟರು ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು.

ಇವರಿಬ್ಬರು ಸೃಷ್ಟಿಸಿದ ಹಬೆಗೆ ಲಲಿತಮ್ಮನಿಗೆ ಪ್ರಾಣಸಂಕಟವಾಗುತ್ತಿತ್ತು. ಗಂಡಸರಿಲ್ಲದ ಸಮಯದಲ್ಲಿ ಸೊಸೆಯ ವರಸೆ ಬೇರೆಯೇ ಆಗಿರುತ್ತಿತ್ತು. ಸುಮ್ಮನೆ ಗಂಟೆಗಟ್ಟಲೆ ಟಿವಿ ನೋಡುತ್ತಾ ಕುಳಿತಿದ್ದು, ಇನ್ನೇನು ಊಟದ ಹೊತ್ತಾಯಿತು ಎನ್ನುವಾಗ ಎದ್ದು ಅವಸರದಲ್ಲಿ ಅಡುಗೆ ಮಾಡಲು ತೊಡಗಿ ಪಾತ್ರೆಗಳು ಉರುಳುರುಳಿ ಬಿದ್ದು, ಬೆಚ್ಚಿ ಬೀಳುವಂತಾಗುತ್ತಿತ್ತು. ಪಾತ್ರೆಗಳನ್ನು ಆಗಿಂದಾಗ್ಗೆ

ತೊಳೆಯದೆ, ರಾಶಿ ಹಾಕಿ ಅದರತ್ತ ಗಮನಿಸದೆ ಓಡಾಡುತ್ತಾ ರಾತ್ರಿ ಮಲಗುವ ಸಮಯಕ್ಕೆ ತೊಳೆಯುವ ಅವಳ ಕ್ರಮ ಎಲ್ಲರ ಹುಬ್ಬನ್ನೂ ಗಂಟಾಗಿಸುತ್ತಿತ್ತು. ಜೊತೆಗೆ ತಾನು ಮಾಡುತ್ತಿದ್ದ ಕುಚೇಷ್ಟೆಗಳಿಗೆ ತಾನೇ ಸಿಡಿಮಿಡಿಯಾಗುತ್ತಿದ್ದಳು. ಮೊದಲೆಲ್ಲಾ ಹೀಗಿರದೆ, ಇತ್ತೀಚೆಗೆ ಬದಲಾದ ಅವಳ ನಡವಳಿಕೆಗೆ ಎಲ್ಲರೂ ಅವರವರಿಗೆ ತೋಚಿದ ಕಾರಣಗಳನ್ನು ಕಂಡುಕೊಳ್ಳುವಂತೆ ಮಾಡಿತ್ತಾಗಲೀ ಪರಿಹಾರ ಶೂನ್ಯವಾಗಿತ್ತು.

     ಒಮ್ಮೆ ವಾಕಿಂಗ್ ಮುಗಿಸಿ ಬಂದು ಲಲಿತಮ್ಮ ನೀಡಿದ ಕಾಫಿ ಕುಡಿದು ಸ್ನಾನಕ್ಕೆ ಹೊರಡಲು ನಿಂತ ಶೆಟ್ಟರನ್ನು ಕವಿತಾ “ಮಾವ ಜಮೀನು ಮಾರಿ, ಹತ್ತು ಸಾವಿರ ಕೈಯಲ್ಲಿ ಹಿಡಿದು ಬಂದು ಬೆಂಗಳೂರಲ್ಲಿ ಬದುಕು ಶುರು ಮಾಡಿದೆವು ಅಂತ ಯಾವಾಗಲೂ ಹೇಳ್ತೀರಲ್ಲ? ನಿಮ್ಮ ತಂದೆ ಇದ್ದಾಗಲೇ ತಾನೇ ಜಮೀನು ಮಾರಿ ನೀವೆಲ್ಲಾ ಹಂಚಿಕೊಂಡಿದ್ದು” ಎಂದು ರಾಗವಾಗಿ ಕೇಳಲು, ಶೆಟ್ಟರು ಸಿಟ್ಟಿನಿಂದ “ನಾನು ಸ್ಕೂಲಿಗೆ ಹೋಗದೆ ಆರು ವರ್ಷದ ಮಗುವಾಗಿದ್ದಾಗಿಂದ ನಮ್ಮಪ್ಪ ಶುರುಮಾಡಿದ ಹೋಟೆಲಿನಲ್ಲಿ ಲೋಟ ತೊಳೆದಿದ್ದೀನಿ ಅದನ್ನು ನಿನಗೆ ಯಾರೂ ಹೇಳಲಿಲ್ಲವೇ?” ಎಂದು ಕೇಳುತ್ತಲೇ ಅಲ್ಲಿ ನಿಲ್ಲದೆ ಸ್ನಾನಕ್ಕೆ ಹೊರಟುಬಿಟ್ಟರು. ‘ಗಂಡ ಕೇಶವನ ತಲೆ ತಿಂದು ಏನೂ ಉಪಯೋಗವಾಗದೇ, ಕೊನೆಗೆ ನೇರವಾಗಿ ನನ್ನ ಬಳಿ ಆಸ್ತಿಯ ಬಗ್ಗೆ ಮಾತನಾಡುವ ಹಂತಕ್ಕೆ ಬಂದಿದ್ದಾಳೆ’ ಎಂದು ಅವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. “ಪಾಪ ನಮ್ಮ ಕೇಶವ ಹೆಂಡತಿಯ ಮಾತು ಕೇಳಲಾಗದೆ, ನಮ್ಮನ್ನೂ ಎದುರು ಹಾಕಿಕೊಳ್ಳಲಾಗಿದೆ, ಒಳಗೊಳಗೆ ಎಷ್ಟು ಹೆಣಗಾಡುತ್ತಿದ್ದಾನೋ” ಎಂದು ಹೆಂಡತಿಯ ಬಳಿ ಹೇಳಿಯೂ ಇದ್ದರು. ಆದರೆ ಏನನ್ನೂ ಮಾಡಲು ತೋಚದೆ ಅವಳು ಕೇಳಿದ ನೇರ ಪ್ರಶ್ನೆಗಳಿಗೆ ಚಾಟಿಯೇಟಿನ ಉತ್ತರ ನೀಡಿ, ನಂತರದ ಇರಿಸುಮುರಿಸನ್ನು ತಾವೇ ಅನುಭವಿಸುತ್ತಿದ್ದರು.

      ಜೀವನ ತನ್ನ ಪಾಡಿಗೆ ತಾನು ನಡೆಯಲಿ ಎಂದು ಇದ್ದುಬಿಟ್ಟರೆ, ಅರ್ಧ ಸಮಸ್ಯೆ ಹುಟ್ಟುವುದೇ ಇಲ್ಲ ಅಲ್ಲವೇ? ಆದರೆ ಇರುವುದಕ್ಕಿಂತಲೂ ಬೇರೆಯದನ್ನು ಬಯಸಿ, ಹಲವರ ಮನಸ್ಸನ್ನು ನೋಯಿಸಿ ಪಡೆಯುವುದೇ ಸುಖವೆಂದು ತಿಳಿದು ಅದನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ  ಎಡವಟ್ಟನ್ನೇ ಮಾಡುತ್ತಿರುತ್ತಾರೆ. ಆ ಪೈಕಿಯವಳಾದ ಕವಿತಾ ಒಂದು ಮಧ್ಯಾಹ್ನ ಚೇರಿನ ಮೇಲೆ ಕುಳಿತು ಊಟ ಮಾಡುವ ಶೆಟ್ಟರ ಕಾಲಿನ ಬಳಿ ಬಂದು ಕುಳಿತು ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಳು. ನಿರಾಶೆಯ ದನಿಯಲ್ಲಿ “ಲಲಿತಾ, ಬೆಳಗ್ಗಿಂದ ಇಬ್ಬರೂ ಏನು ಮಾಡ್ತಾ ಇದ್ದೀರಿ? ಬರೀ ಚಟ್ನಿ ರುಬ್ಬಿಟ್ಟು ಬಿಟ್ಟರೆ ಹೇಗೇ ಊಟ ಮಾಡೋದು? ಬಿಪಿ ಶುಗರ್ ಬಂದು ಮೊದಲೇ ಏನೂ ತಿನ್ನೋಕ್ಕಾಗದೆ ನಾಲಿಗೆ ಸತ್ತುಹೋಗಿದೆ. ಅಂತದ್ರಲ್ಲಿ ಮಾಡೋ ಅಡಿಗೆನಾದ್ರೂ ಸ್ವಲ್ಪ ಲಕ್ಷಣವಾಗಿ ಮಾಡ್ಬಾರ್ದಾ? ಈ ಲಕ್ಷಣಕ್ಕೆ ಮನೆಯಲ್ಲಿ ಒಬ್ಬರಿಗಿಬ್ಬರು ಹೆಂಗಸರು ಬೇರೆ” ಎಂದು ಶೆಟ್ಟರು ಕೂಗಾಡುತ್ತಿದ್ದರು.

ಗಂಡನ ಧ್ವನಿ ಕೇಳಿ ರೂಮಿನಿಂದ ಹೊರಬಂದು ಮೌನವಾಗಿ ನಿಂತ ಲಲಿತಮ್ಮನ ಮುಖವೇ ಸೊಸೆ ನಡೆಸುತ್ತಿರುವ ದರ್ಬಾರಿನ ಸಾವಿರ ಸಾವಿರ ಕಥೆ ಹೇಳುತ್ತಿತ್ತು. ಹೆಂಡತಿಯನ್ನು ಎಂದೂ ಆ ಸ್ಥಿತಿಯಲ್ಲಿ ನೋಡದಿದ್ದ ಶೆಟ್ಟರು, ಅನ್ನವನ್ನು ಚಟ್ನಿಯೊಂದಿಗೆ ಸರಿಯಾಗಿ ಕಲೆಸದೆ ಹಾಗೆ ಹಿಡಿತುಂಬ ತೆಗೆದುಕೊಂಡು ಬಾಯಿಗೆ ತುರುಕಿಕೊಂಡರು. ನೆತ್ತಿ ಹತ್ತಿ ಕೆಮ್ಮುತ್ತಿದ್ದ ಗಂಡನ ನೆತ್ತಿಯ ಮೇಲೆ ಮೆದುವಾಗಿ ತಟ್ಟಿದ ಲಲಿತಮ್ಮ “ನಿಧಾನವಾಗಿ ತಿನ್ನಿ. ನಾವು ಸರಿಯಾಗಿ ತಿನ್ನದೇ ಇದ್ರೆ, ನಮಗೇ ಅಲ್ವಾ ಕೆಮ್ಮು ಬರೋದು. ಸರಿಯಾಗಿ ತಿನ್ನದೇ ಇರೋದು ನಮ್ಮದೇ ತಪ್ಪು. ಈಗ ನೆತ್ತಿ ಹತ್ತಿರೋ ಕೆಮ್ಮಿಗೆ ನಾವೇ ನೀರು ಕುಡೀಬೇಕು” ಎಂದು ಮಾರ್ಮಿಕವಾಗಿ ಹೇಳಿ ನೀರು ಕುಡಿಸಿ ಒಳಗೆ ಹೋಗಿಬಿಟ್ಟರು.

ಇಷ್ಟೆಲ್ಲಾ ಅವಾಂತರಗಳೂ ತನ್ನ ಕಣ್ಣೆದುರಿಗೇ ನಡೆದರೂ, ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಚೂರೂ ಮಿಸುಕಾಡದೆ ಸೊಪ್ಪನ್ನು ಬಿಡಿಸುತ್ತಲೇ ಇದ್ದ ಕವಿತಾಳನ್ನು ಕುರಿತು ಶೆಟ್ಟರು “ನಿಮ್ಮತ್ತೆಗೇನೋ ವಯಸ್ಸಾಯ್ತು. ನೀನಾದ್ರೂ ಅಡಿಗೆ ಮಾಡಬಾರದೇನಮ್ಮ? ಸಾಮಾನು, ತರಕಾರೀನ ಬೇರೆಲ್ಲೋ ಹೋಗಿ ತರಬೇಕಾ ನೀವುಗಳು? ಮೆಟ್ಟಿಲು ಇಳಿದರೆ ಅಲ್ಲೇ ಅಂಗಡಿ. ಏನು ಬೇಕೋ ಅದನ್ನು ತಂದು ಲಕ್ಷಣವಾಗಿ ಮಾಡಿ, ನೀವೂ ನೆಮ್ಮದಿಯಾಗಿ ತಿನ್ಕೊಂಡು ಇರಬಾರದಾ”? ಎಂದದ್ದೇ ತಡ, ಎದ್ದು ನಿಂತ ಕವಿತಾ ಮೆಲುಧ್ವನಿಯಲ್ಲಿ ಆರಂಭಿಸಿ “ದಿನಕ್ಕೆರಡು ಮೂರು ತರ ಅಡಿಗೆ ಮಾಡ್ಕೊಂಡು ಅಡಿಗೆ ಮನೆಯಲ್ಲಿ ಬಿದ್ದಿರಬೇಕಾ ಮಾವ? ಒಟ್ನಲ್ಲಿ ನಾನು ಅಡಿಗೆ ಮನೆಯಲ್ಲಿ, ನನ್ನ ಗಂಡ ಅಂಗಡಿಯಲ್ಲಿ ಬೆಳಗ್ಗಿಂದ ರಾತ್ರಿವರೆಗೂ ದುಡಿತಾನೇ ಇರಬೇಕು ಅಲ್ವಾ”? ಎನ್ನುವುದರೊಳಗೆ ಧ್ವನಿ ಎತ್ತರಕ್ಕೆ ಏರಿ ಹೋಗಿತ್ತು.

 ಗಲಾಟೆ ಏನೆಂದು ನೋಡಲು ಬಂದ ಕೇಶವನು “ಏನಾಯ್ತು”? ಎಂದು ಕೇಳಿದ ಪ್ರಶ್ನೆಗೆ ಮಾತು ಬೆಳೆಸಿ ಉಪಯೋಗವಿಲ್ಲವೆಂದರಿತ ಶೆಟ್ಟರು, ಮಲಗದೆ ಹೊರಗೆ ಬಂದು ಬೀದಿಯಲ್ಲಿ ದೃಷ್ಟಿ ನೆಟ್ಟರು. ತಲೆಗೆ ಏನೂ ಹೊಳೆಯುತ್ತಲೇ ಇರಲಿಲ್ಲ. ಇಂದು ಸರಿಹೋಗಬಹುದು, ನಾಳೆ ಸರಿಹೋಗಬಹುದು ಎಂದು ಕಾದದ್ದೇ ಬಂತು. ಆದರೆ ಸಮಸ್ಯೆ ಮಾತ್ರ ಅಲ್ಪವಿರಾಮವನ್ನೇ ಆಶ್ರಯಿಸಿದ್ದಿತು. ಇದರ ಮಧ್ಯೆ ಒಂದು ತಿಂಗಳಿಂದ ಲಲಿತಮ್ಮ ಕೂಡಾ ಯಾಕೋ ಕೈ ನೋವು, ಕಾಲು ನೋವು ಎನ್ನುತ್ತಾ ಓಡಾಡುವುದು, ಆಗಾಗ ಮುದುರಿ ಮಲಗುವುದು ಸಾಮಾನ್ಯವಾಗಿತ್ತು. ಈ ಪರಿಸ್ಥಿತಿಯು ಸಹಜವಾಗಿಯೇ ವೃದ್ಧ ದಂಪತಿಗಳ ಮಾನಸಿಕ ನೆಮ್ಮದಿಯನ್ನು ಕದಡಿತ್ತು.

ಪಾಂಡುರಂಗಯ್ಯ ಶೆಟ್ಟರು ವಾಕಿಂಗ್ ಹೋಗದೆ ವಾಪಸ್ ಬಂದದ್ದನ್ನು ಕಿಟಕಿಯಿಂದ ನೋಡಿದ್ದ ಕೇಶವ, ರೂಮಿನಿಂದ ಹೊರಗೆ ಬಂದು ತಂದೆಯನ್ನು “ಯಾಕಪ್ಪ ವಾಪಸ್ಸು ಬಂದೆ? ವಾಕಿಂಗ್ ಹೋಗ್ಲಿಲ್ವಾ? ಚಳಿ ಜಾಸ್ತಿ ಇದೆಯಾ”? ಎಂದು ಪ್ರಶ್ನಿಸಿದ. “ಇಲ್ಲ ಕಣೋ, ನಾನು ನಿಮ್ಮಮ್ಮನ್ನ ಕರ್ಕೊಂಡು ಮೇಲುಕೋಟೆಗೆ ವೈರಮುಡಿ ಉತ್ಸವಕ್ಕೆ ಹೋಗೋಣ ಅಂದ್ಕೊಂಡಿದ್ದೀನಿ. ಅಲ್ಲೇ ಒಂದು ವಾರ ಇರೋಣ ಅಂತ ಅನ್ನಿಸ್ತಿದೆ” ಎಂದ ತಂದೆಯ ಮುಖವನ್ನು ಗಮನಿಸಿದ ಕೇಶವ “ಕಿಟ್ಟಿ ಮನೆಗೆ ಹೋಗೋಣ ಅಂತ ಅಮ್ಮ ಹತ್ತು ಸಲ ಹೇಳಿದ್ರೂ ಒಪ್ಕೋಳ್ತಿರಲಿಲ್ಲ ನೀನು. ಈಗ ಮಾತ್ರ ಏನಪ್ಪಾ ವಿಶೇಷ”? ಎಂದ. “ದೇವಸ್ಥಾನಗಳಿಗೆ ಹೋಗುವುದು ಬೇರೆ. ಮನೆಗಳಿಗೆ ಹೋಗುವುದು ಬೇರೆ. ಮಕ್ಕಳಿಗೆ ನಾವು ವೈಟಿಂಗ್ ರೂಮು. ನಮಗೆಲ್ಲ ದೇವಸ್ಥಾನಗಳು ವೇಟಿಂಗ್ ರೂಮು” ಎಂದು  ಎಂದಿನಂತೆ ನಗದೆ ಎಲ್ಲೋ ನೋಡುತ್ತಾ ಕುಳಿತವರಿಗೆ ಲಲಿತಮ್ಮ ಕಾಫಿ ತಂದು ಕೊಟ್ಟರು.

ಮೂರು ದಿನ ಬಿಟ್ಟು ದಂಪತಿಗಳು ಮೇಲುಕೋಟೆಗೆ ಹೊರಟರು. ವಾರ ಕಳೆದ ನಂತರ ಫೋನ್ ಮಾಡಿ “ಇನ್ನೂ ಒಂದೆರಡು ದಿನಗಳಾಗಬಹುದು ಕೇಶವ” ಎಂದು ತಿಳಿಸಿ ಕೊನೆಗೆ ಹನ್ನೆರಡು ದಿನಗಳ ಪ್ರವಾಸ ಮುಗಿಸಿ ವಾಪಸ್ ಬಂದರು. ವಾಪಸ್ ಬಂದ ಇಬ್ಬರು ಮುಖದಲ್ಲಿ ಏನೋ ನಿರಾಳತೆ ಇದ್ದುದನ್ನು ಗಮನಿಸಿ ‘ವಯಸ್ಸಾದ ತನ್ನ ತಂದೆ ತಾಯಿಗಳು ನೆಮ್ಮದಿಯಿಂದ ಇದ್ದರೆ ಸಾಕು’ ಎಂದುಕೊಂಡ ಕೇಶವ, ತನ್ನ ತಂದೆತಾಯಿಯರು ಊರಿನಲ್ಲಿಲ್ಲದ ಹನ್ನೆರಡೂ ದಿನಗಳು ತನ್ನ ಹೆಂಡತಿ ನೀಡಿದ ಉಪಚಾರವನ್ನು ತಾಳೆ ಹಾಕುತ್ತಿದ್ದ. ವಿಧವಿಧವಾದ ಅಡಿಗೆ, ವೈಯಾರದ ನಡಿಗೆ? ಏನುಂಟು ಏನಿಲ್ಲ ದಿನಗಳನ್ನು ಕ್ಷಣಗಳನ್ನಾಗಿಸಿದ್ದಳು ಮಡದಿ. ಆದರೇನು? ಯಾವುದಕ್ಕೂ ಅಂತ್ಯವಿದೆಯಲ್ಲ? ಒಂದೇ ರೈಲಿಗೆ ಹಿಂದೆ ಮುಂದೆ

      ಮೇಲುಕೋಟೆಯಿಂದ ವಾಪಸ್ ಬಂದ ಮಾರನೇ ಬೆಳಗ್ಗೆ ಹತ್ತು ಘಂಟೆಗೆ ಅಂಗಡಿ ತೆರೆಯಲು ತಯಾರಾದ ಕೇಶವನನ್ನು ಹತ್ತಿರ ಕರೆದ ಶೆಟ್ಟರು “ಕೇಶು, ನಾನು ನನ್ನ ಜೀವನವನ್ನು ಹೊಸದಾಗಿ ಶುರು ಮಾಡಬೇಕು ಅಂತ ತೀರ್ಮಾನ ಮಾಡಿದೀನಪ್ಪ. ಅಂದ್ರೆ ಈಗಿರೋ ಅಂಗಡಿ ಮಧ್ಯೆ ಗೋಡೆ ಕಟ್ಟಿ ಒಂದು ಅಂಗಡೀನಲ್ಲಿ ನಾನು ಬರೀ ಅಕ್ಕಿ, ಬೇಳೆ, ರಾಗಿ, ಗೋಧಿಯನ್ನು ಮಾತ್ರ ಹೋಲ್ಸೇಲಿನಲ್ಲಿ ಮಾರೋಣ ಅಂತಿದ್ದೀನಿ. ಸಹಾಯಕ್ಕೆ ಒಬ್ಬ ಹುಡುಗನ್ನ ಗೊತ್ತು ಮಾಡಿದ್ದೀನಿ. ನೀನು ಈಗಿರೋ ದಿನಸಿ ಎಲ್ಲಾ ತೆಗೆದು ಇನ್ನೊಂದು ಅಂಗಡಿಗೆ ಹಾಕ್ಕೊಂಡು ವ್ಯಾಪಾರ ಮಾಡು” ಎಂದರು.

    ತಂದೆಯ ಈ ತರಹದ ತೀರ್ಮಾನವನ್ನು ನಿರೀಕ್ಷಿಸದೆ “ಯಾಕಪ್ಪಾ ಏನಾಯ್ತು? ಒಂದೇ ಮನೆಯಲ್ಲಿದ್ದು ಬೇರೆಬೇರೆ ಅಂಗಡಿಯಲ್ಲಿ ವ್ಯಾಪಾರ ಅಂದ್ರೆ ನೋಡಿದವರು ಏನಂತಾರೆ”? ಎಂದು ಅವಲತ್ತುಕೊಂಡ ಕೇಶವನಿಗೆ ಏನೂ ಹೇಳದೆ ಎದ್ದು ಹೋದ ಶೆಟ್ಟರು, ಚಂದ್ರಪ್ಪನಿಗೆ ಫೋನ್ ಮಾಡಿ ಸಂಜೆಯೊಳಗೆ ಮೇಸ್ತ್ರಿಯೊಡನೆ ಬರುವಂತೆ ಹೇಳಿದರು. ಸಂಜೆ ಬಂದ ಮೇಸ್ತ್ರಿಗೆ ಮುಂಗಡ ನೀಡಿ ಕಳಿಸಿದವರು, ಮಗನಿಗೆ ಕುಳಿತುಕೊಳ್ಳುವಂತೆ ತಮ್ಮ ಎದುರಿನ ಛೇರನ್ನು ತೋರಿಸಿ “ಈ ನಡುವೆ ನಿಮ್ಮಮ್ಮನಿಗೆ ಹೆಚ್ಚು ಕೆಲಸ ಮಾಡೋಕೆ ಆಗ್ತಿಲ್ಲ ಕೇಶವ. ಅದಕ್ಕೆ ನಾವು ಕೆಳಗಿರೋ ಡಬಲ್ ಬೆಡ್ ರೂಮ್ ಮನೆಗೆ ಹೋಗ್ತೀವಿ. ನೀನು ಮೇಲಿರೋ ಡಬಲ್ ರೂಮ್ ಮನೆಗೆ ಹೋಗ್ತಿಯಾ? ಅಥವಾ ಇದೆ ಮೂರು ಬೆಡ್ ರೂಮ್ ಮನೆಯಲ್ಲೇ ಇರ್ತೀಯಾ? ಒಟ್ನಲ್ಲಿ ಎಷ್ಟು ಬಾಡಿಗೆ ಕಟ್ಟೋಕ್ಕೆ ಸಾಧ್ಯ ಅಂತ ಯೋಚನೆ ಮಾಡಿ ಹೇಳು. ಆಯ್ತಾ”? ಎಂದು ಹೇಳಿ ಅವನ ಉತ್ತರವನ್ನು ನಿರೀಕ್ಷಿಸುವಂತೆ ಸುಮ್ಮನೆ ಕುಳಿತರು.

ಕೇಶವ “ಯಾಕಪ್ಪಾ ಹೀಗೆ ಮಾಡ್ತೀರ? ನಾನು ಅಂಗಡೀನ ಬೇರೆ ಮಾಡೋದೇ ಬೇಡ ಅಂತಿದ್ದೆ. ಅಂತದ್ರಲ್ಲಿ ಮನೇನೂ ಬೇರೆ ಮಾಡ್ತಿದ್ದೀರಿ. ಅದೂ ಇಷ್ಟೆಲ್ಲಾ ಇದ್ದು ನೀವು ಅಷ್ಟು ಚಿಕ್ಕ ಮನೆಗೆ ಯಾಕೆ ಹೋಗ್ಬೇಕು? ಎಲ್ಲರೂ ಒಟ್ಟಿಗೇ ಇರೋಣ” ಎಂದು ಮಗನು ತಮ್ಮ ತೀರ್ಮಾನವನ್ನು ತೆಗೆದುಹಾಕಿ ಮಾತನಾಡಿದ್ದನ್ನು, ಶೆಟ್ಟರು ತಲೆ ಅಡ್ಡಡ್ಡ ಆಡಿಸುತ್ತಲೇ ನಿರಾಕರಿಸಿ ನುಡಿದರು. “ಆಗಲೇ ಹೇಳಿದ್ನಲ್ಲ ಕೇಶು, ನಾನು ಮತ್ತೆ ಹೊಸ ಜೀವನ ಶುರು ಮಾಡಬೇಕು. ಇಷ್ಟು ವರ್ಷ ನಿಮ್ಮಮ್ಮ ಹಗಲು ರಾತ್ರಿ ಅಂಗಡೀಲ್ಲಿ, ಮನೇಲ್ಲಿ ದುಡಿದು ಕಷ್ಟಪಟ್ಟಿದ್ದಾಳೆ. ಈಗ ಅವಳಿಗೂ ವಯಸ್ಸಾಗಿದೆ. ಅವಳು ಯಾವತ್ತೂ ತನ್ನ ಸೆಕ್ಯುರಿಟಿ ಬಗ್ಗೆ ಯೋಚನೇನೇ ಮಾಡಿಲ್ಲ ನೋಡು. ನಾನೋ ನೀವೋ ನೋಡಿಕೊಳ್ಳುತ್ತೇವೆ ಅಂತಾನೇ ಇಷ್ಟು ವರ್ಷ ನಂಬಿ ಬದುಕಿಬಿಟ್ಲು. ಆ ನಂಬಿಕೆಯನ್ನು ನಾನು ಉಳಿಸಿಕೊಳ್ಳಬೇಕಲ್ಲ”? ಎಂದು ಪ್ರಶ್ನೆ ಕೇಳಿ ಅವನ ಮುಖವನ್ನೇ ಸ್ವಲ್ಪ ಹೊತ್ತು ನೋಡುತ್ತಾ ಕುಳಿತರು.

ಮಗನತ್ತ ಹಾಯಿಸಿದ ತಮ್ಮ ದೃಷ್ಟಿಯನ್ನು ಶೂನ್ಯದತ್ತ ನೆಟ್ಟು ತಾವೇ ಮಾತು ಮುಂದುವರೆಸಿ “ನಾನು ಅವಳನ್ನು ಇನ್ನು ಮುಂದಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕೆ ಹೇಳ್ತಿದ್ದೀನಿ ಅಷ್ಟೇ. ಬೇಜಾರು ಮಾಡ್ಕೋಬೇಡ. ನೀನು ಇದೇ ಬಿಲ್ಡಿಂಗ್ನಲ್ಲೇ ಇರ್ತಿಯಲ್ಲ. ಏನೋ ಒಂದು ಅಂದ್ರೆ ಒಂದು ಕೂಗು ಹಾಕಿದರೆ  ಓಡೋಡಿ ಬರ್ತೀಯ ಅಷ್ಟೇ. ನಿನ್ನ ಬಿಟ್ಟಿರೋ ಶಕ್ತಿ ನಮಗೂ ಇಲ್ಲಪ್ಪ. ಏನು ಮಹಾ ಅಂಗಡಿ ಒಂದು ಬೇರೆಬೇರೆ ಅಷ್ಟೇ. ನಾನು ಬೆಂಗಳೂರಿಗೆ ಬಂದಾಗ ಯಾವ ಸ್ಥಿತಿಯಲ್ಲಿದ್ನೋ ನೀನೀಗ ಅದೇ ಸ್ಥಿತಿಯಲ್ಲಿದ್ದೀಯಾ. ನೀನು ಇಷ್ಟು ವರ್ಷ ಅಂಗಡಿಯಲ್ಲಿ ದುಡಿದಿದ್ದೀಯ ಅಂತಾನೆ ನಿನಗೂ ಅನ್ಯಾಯ ಆಗಬಾರ್ದು ಅನ್ನೋ ಉದ್ದೇಶಕ್ಕೆ ಅಡ್ವಾನ್ಸ್, ಬಾಡಿಗೆ ಇಲ್ಲದೆ ಅಂಗಡಿನ ಬಿಟ್ಟುಕೊಡ್ತಾ ಇದ್ದೀನಿ. ಬಂಡವಾಳ ಹಾಕಿ, ಬೇಕಾದಷ್ಟು ದಿನಸಿನೂ ತುಂಬಿಸಿ ಕೊಡ್ತೀನಿ. ಆಯ್ತಾ”? ಎಂದು ಪ್ರೀತಿಯಿಂದ ನುಡಿದರು.

ಬೇರೇನೂ ಮಾತನಾಡಲು ಉಳಿದಿಲ್ಲವೆಂದುಕೊಂಡ ಕೇಶವನಿಗೆ ಇನ್ನೂ ಹೇಳುವುದಿದೆ ಎಂಬಂತೆ ಗಂಟಲನ್ನು ಸರಿಪಡಿಸಿಕೊಂಡ ಶೆಟ್ಟರು ಅಲ್ಲೇ ಕುಳಿತಿದ್ದ ಹೆಂಡತಿಯೆಡೆಗೆ ಒಮ್ಮೆ ಕಣ್ಣು ಹಾಯಿಸಿ, ಕೈಲಿದ್ದ ನೀರಿನ ಲೋಟವನ್ನು ಟೀಪಾಯಿಯ ಮೇಲಿಟ್ಟು, ಮಾತು ಮುಂದುವರೆಸಿದರು “ಮೇಲುಕೋಟೆಗೆ ಹೋದಾಗ ಅಲ್ಲೇ ಇರೋ ನನ್ನ ಮಾವನ ಮಗ ಲಕ್ಷ್ಮೀಶ ಶೆಟ್ಟೀನ ಭೇಟಿಯಾಗಿದ್ದೆವು. ಅವನೊಂದಿಗೆ ಮಾತನಾಡಿ ನಾವಿಬ್ಬರೂ ಇರೋತನಕ ಆಸ್ತಿ ಯಾರಿಗೂ ಸೇರೋಹಾಗಿಲ್ಲ, ಒಬ್ಬರು ತೀರಿಕೊಂಡ ನಂತರ ಉಳಿದವರನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರಿಗೆ ಆಸ್ತಿ ಅಂತ ವಿಲ್ ಮಾಡಿಸಿ ಬಂದಿದ್ದೀವಿ. ನಾನೂ ಕೈಲಾದಷ್ಟು ದಿನ ದುಡಿತೀನಿ. ಕೈಲಾಗಲ್ಲ ಅನ್ನೋ ಕಾಲಕ್ಕೆ ಈಗಿನಿಂದ ಕೂಡಿಡೋ ಹಣ ಮತ್ತು ನಂತರ ಬರೋ ಬಾಡಿಗೆಗಳು ನಮ್ಮಿಬ್ಬರ ಜೀವನದ ಸೆಕ್ಯುರಿಟಿಗೆ ಬೇಕು. ಅದಿರಲಿ ಒಂದು ವಾರ ಯೋಚನೆ ಮಾಡಿ ಯಾವ ಮನೆಗೆ ಹೋಗ್ತೀಯ ಅಂತ ನೀನೇ ಹೇಳು” ಎಂದು ಖಚಿತವಾಗಿ ನುಡಿದ ಶೆಟ್ಟರು ತೀರ್ಮಾನವನ್ನು ಅವನಿಗೇ ಬಿಟ್ಟರು.

ಕೆಲವರು ಏನೋ ಒಂದನ್ನು ಶುರುಮಾಡಿ ತಾವೇ ಶುರು ಮಾಡಿದ ತಪ್ಪಿನಿಂದ ಹೀಗಾಗುತ್ತಿದೆ ಎನ್ನುವುದನ್ನು ಮರೆತುಹೋಗುತ್ತಾರೆ. ಬದಲಿಗೆ ಇವರಿಂದ ನೋವುಂಡವರು ಏನೇ ಮಾಡಿದರೂ ಅದರಲ್ಲಿ ತಪ್ಪನ್ನೇ ಹುಡುಕುತ್ತಾ ಹುಡುಕುತ್ತಾ ತಮ್ಮಿಂದಾದ ಪ್ರಮಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅದರ ಅರಿವಿಲ್ಲದವರು ಬಲಿಪಶುಗಳಾಗುತ್ತಾರೆ. ಈಗಲೂ ಹಾಗೇ ಆಯಿತು. ಕವಿತಳ ದುರಾಶೆಗೆ ಕೇಶವನ ತಲೆದಂಡ.

ತಂದೆಯ ಈ ಪರಿ ಕಠಿಣತೆಯನ್ನು ನಿರೀಕ್ಷಿಸಿರದಿದ್ದ ಕೇಶವ ತಾಯಿಯನ್ನು ಕರೆದು “ಅಮ್ಮ, ಅಪ್ಪ ಹೇಳೋದನ್ನ ಕೇಳಿಸಿಕೊಂಡ್ಯಾ”? ಎಂದು ಕೇಳಿದ ಮಗನಿಗೆ ಲಲಿತಮ್ಮ “ನಿಮ್ಮಪ್ಪ ವಿಲ್ ಮಾಡಿಸಿದಾಗ ನಾನು ಜೊತೆಗೆ ಇದ್ದೆ ಕಣೋ” ಎಂದರು. ಆಶ್ಚರ್ಯಭರಿತ ಮುಖಮಾಡಿದ ಕೇಶವ “ಹಾಗಾದರೆ ನೀವಿಬ್ರೂ ಸೇರಿ ತೀರ್ಮಾನ ಮಾಡಿದ್ದೀರಿ ಅಂತ ಆಯ್ತು. ಅಲ್ಲಪ್ಪ, ಹಗಲೂ ರಾತ್ರಿ ಕತ್ತೆ ತರ ದುಡ್ಕೊಂಡು ಹಿರಿಮಗ ನಾನೊಬ್ಬ ಇದ್ದೀನಿ, ನನ್ನ ಒಂದು ಮಾತು ಕೇಳಬೇಕು ಅಂತ ಅನ್ನಿಸಲೇ ಇಲ್ಲವಾ ನಿಮಗೆ”? ಪ್ರಶ್ನಿಸಿದ ಕೇಶವನ ಮುಖ ಹಿಂದಿಗಿಂತಲೂ ಗಡುಸಾಯಿತು.

ಶೆಟ್ಟರು ಮಾತ್ರ ಧ್ವನಿಯಲ್ಲಿ ಯಾವುದೇ ಏರುಪೇರನ್ನು ತೋರದೆ “ಇದು ನಾನು ಸಂಪಾದಿಸಿರುವ ಆಸ್ತಿ. ನೀನು ಬೇಕಾದರೆ ಸುಧಾರಿಸಿಕೊಳ್ಳುವ ತನಕ ಒಂದು ವರ್ಷ ಮನೆ ಬಾಡಿಗೆ ಕೊಡದೆ ಇದ್ದುಕೋ. ಅದು ಬಿಟ್ಟರೆ ನಾನು ಇನ್ನೇನು ಮಾಡೋಕ್ಕೂ ರೆಡಿಯಿಲ್ಲ ಅಂಗಡಿಯಲ್ಲಿ ನೀನೆಷ್ಟು ದುಡಿದಿದ್ದೀಯೋ ನಾನು ಅದಕ್ಕಿಂತ ಹೆಚ್ಚಾಗಿ ದುಡಿದಿದ್ದೇನೆ. ಅಂತದ್ರಲ್ಲಿ ನಿನ್ನನ್ನು ಕೇಳಿ ಮಾಡುವ ಯಾವ ಇರಾದೆಯೂ ನನಗಿಲ್ಲ” ಎಂದುಬಿಟ್ಟರು. ಇಷ್ಟೆಲ್ಲ ಮಾತುಗಳನ್ನು ರೂಮಿನ ಬಾಗಿಲ ಬಳಿ ನಿಂತು ಕೇಳಿಸಿಕೊಳ್ಳುತ್ತಿದ್ದ ಕವಿತಾ ನಡುವೆ ಬಾಯಿ ಹಾಕಿ “ಬೇರೆ ಮನೆಯಲ್ಲಿದ್ದರೂ ನಿಮ್ಮನ್ನು ನಾವೇ ತಾನೇ ನೋಡ್ಕೊಬೇಕು” ಎನ್ನುತ್ತಾ ಗಂಡನನ್ನು ಕೆಕ್ಕರಿಸಿ ನೋಡಿ “ಇಷ್ಟು ವರ್ಷ ಕತ್ತೆ ಹಾಗೆ ದುಡಿದಿದ್ದಕ್ಕೆ ನಿಮಗೆ ಇಷ್ಟು ಸಾಲದು. ಇನ್ನೂ ಆಗಬೇಕಾದ್ದೇ ಬಿಡಿ. ನಾನು ಹೇಳಿದಾಗಲೇ ಕೇಳಿದ್ರೆ ನಾವು ಹೇಗೋ ಇರಬಹುದಿತ್ತು. ಎಲ್ಲಾ ಸೇರಿ ಮೋಸ ಮಾಡಿಬಿಟ್ಟರು ನಮಗೆ. ಈಗ ಹೊಸದಾಗಿ ಪ್ರಾರಂಭಮಾಡಿ ನಾವು ಹೇಗೆ ಜೀವನ ಸಾಗಿಸಬೇಕು? ನಿಮ್ಮನ್ನು ನಂಬಿ ಮದ್ವೆ ಆಗಿದ್ದಕ್ಕೆ ನನಗೆ ಸಿಕ್ಕ ಬಹುಮಾನ ಇದು” ಎನ್ನುತ್ತಾ ಅಳತೊಡಗಿದಳು. ಸುಮ್ಮನೆ ನಿಂತು ನೋಡುತ್ತಿದ್ದ ಲಲಿತಮ್ಮನಿಗೆ ಈಗ ತಡೆಯಲಾಯಿತು. ಎಂದೂ ದನಿ ಎತ್ತರಿಸದಿದ್ದವರು “ಹಾಗಾದರೆ ಆಸ್ತೀನ ಈಗಲೇ ನಿಮ್ಮ ಹೆಸರಿಗೆ ಮಾಡಿಬಿಡಬೇಕು ಅಂತ ನಿನ್ನ ಮಾತಿನ ಅರ್ಥನಾ”?  ಕೇಳಿದವರಿಗೆ ಕವಿತಾ “ಇಷ್ಟು ವರ್ಷ ಬರದೇ, ನೋಡದೇ ಇರುವ ನಿಮ್ಮ ಎರಡನೇ ಮಗ-ಸೊಸೆ ಮುಂದೊಂದು ದಿನ ಬಂದು ಕುತ್ಕೊಂಡು ಅಧಿಕಾರ ಚಲಾಯಿಸಲ್ಲ ಅನ್ನೋ ಗ್ಯಾರೆಂಟಿ ಏನು”? ಕೇಳಿದ ಕವಿತಾ “ನಿಮ್ಮನ್ನು ನಾವೇ ತಾನೇ ನೋಡಿಕೊಳ್ತಿರೋದು ಮುಂದೆ ಕೂಡಾ ನೋಡಿಕೊಳ್ಳೋದು”? ಎನ್ನುತ್ತಾ ವ್ಯಗ್ರಳಾಗತೊಡಗಿದವಳ ಹೊಸರೂಪವನ್ನು ನೋಡುತ್ತಿದ್ದ ಕೇಶವ ಅವಳಿಂದ ದೃಷ್ಟಿಯನ್ನು ಕಿತ್ತು ಆಶ್ಚರ್ಯವೆನಿಸುವಂತೆ ತಂದೆಯನ್ನು ನೋಡಿದ. ಸಿಟ್ಟಿನಲ್ಲಿದ್ದ ಶೆಟ್ಟರು “ಅವಳ ಮನಸಲ್ಲಿ ಏನಿದೆ ಅಂತ ಈಗಲಾದರೂ ಗೊತ್ತಾಯ್ತಾ ನಿನಗೆ? ಒಂದು ತಿಂಗಳ ಹಿಂದೆ ಕಿಟ್ಟಿಗೆ ನಾನೇ ಫೋನ್ ಮಾಡಿ, ಮನೆ ಕಡೆ ಯಾಕೆ ಬರಲ್ಲ ಅಂತ ಕೇಳಿ ಬೈದೆ. ಅದಕ್ಕೆ ಅವನು, ನಾನು ಇರೋದೇ ನೆನಪಿಲ್ಲದ ಹಾಗೆ ಆಸ್ತಿ ಎಲ್ಲಾ ಕೇಶು ಹೆಸರಿಗೆ ಮಾಡಿದ್ದೀಯಲ್ಲ? ನನಗೆ ನಿನಗೆ ಇನ್ಯಾವ ಸಂಬಂಧ ಉಳ್ಕೊಂಡಿದೆ? ಅಂತ ತುಂಬ ಕೋಪದಿಂತ ಮಾತಾಡ್ದ. ನಿನಗೆ ಈ ವಿಷಯ ಯಾರು ಹೇಳಿದ್ದು ಅಂತ ನಾನು ಕೇಳಿದ್ದಕ್ಕೆ ಕವಿತಾನೇ ಹೇಳಿದ್ದು ಅಂತ ಹೇಳಿದ” ಎಂದು ಮುಂದುವರೆಸಿ “ಅವರು ಇಲ್ಲಿ ಬರಲ್ಲ ತಂಗೋದಿಲ್ಲ ಅನ್ನು ಸಿಟ್ಟಿಗೆ ಹೀಗೆ ಮಾಡಿದೀನಿ ಅಂತ ಅಂತ ಆಗಲೇ ಒಂದು ವರ್ಷದ ಹಿಂದೆನೇ ಹೇಳಿದ್ಲಂತೆ. ಅದನ್ನೇ ನಂಬಿಕೊಂಡು ಅವರು ಸಿಟ್ಟುಮಾಡಿಕೊಂಡು ಅವರ ಪಾಡಿಗೆ ಅವರು ಇದ್ದು ಬಿಟ್ಟಿದ್ದಾರೆ. ಇಷ್ಟಕ್ಕೂ ಅವರಿಗೆ ಈ ಕಡೆ ಬರುವ ಅಗತ್ಯ ಇರಲಿಲ್ಲ ಮತ್ತು ಇಷ್ಟರ ಮಧ್ಯೆ ಮುಂಬೈನಿಂದ ಮನೆ ಕಡೆ ಬಂದಿಲ್ವಲ್ಲ ಅನ್ನೋ ಗಿಲ್ಟ್ ಬೇರೆ. ಅವರು ನಮ್ಮ ಹತ್ತಿರ ಮಾತನಾಡದೆ ಇರುವ ಹಾಗೆ ಮಾಡಿಬಿಟ್ಟಿದೆ” ಎಂದವರು “ಲಲಿತ ನೀರು ಕೊಡು” ಎಂದು ಮತ್ತೆ ತರಿಸಿ ಕುಡಿದರು. ದುಃಖದಿಂದ “ಕೇಶು, ನಿನ್ನ ಹೆಂಡತಿ ಒಂದು ವರ್ಷದ ಹಿಂದೆಯೇ ಶುರುಮಾಡಿದ ಸಮಸ್ಯೆ ಇದು. ಬಹುಶಃ ತಾನು ಶುರು ಮಾಡಿದ ಸಮಸ್ಯೆಯಿಂದ ಇದೆಲ್ಲಾ ಆಗ್ತಿರೋದು ಅಂತ ಅವಳೇ ಮರೆತುಹೋಗಿ, ನಾವೇನೋ ತಪ್ಪು ಮಾಡಿರೋ ಹಾಗೆ ನಮ್ಮ ಜೀವನವನ್ನು ಪ್ರತಿದಿನ ನರಕ ಮಾಡಿಬಿಟ್ಟಿದ್ದಾಳೆ. ಯಾರು ಏನು ಹೇಳಿದ್ರೂ ನಮಗೆ ಎರಡೂ ಮಕ್ಕಳೂ ಒಂದೇ. ಇಷ್ಟಕ್ಕೂ ಅವನು ಆಸ್ತಿ ಸಂಪಾದಿಸಲೂ ಇಲ್ಲ, ಕೊಡಿ ಅಂತ ಕೇಳ್ತಾನೂ ಇಲ್ಲ. ಅವನು ಕೇಳ್ತಿರೋದೆಲ್ಲಾ ನಾನೇನೂ ತಪ್ಪು ಮಾಡದೇ ನನ್ನನ್ನ ಯಾಕೆ ದೂರ ಮಾಡಿದ್ರಿ ಅಂತ ಅಷ್ಟೇ” ಎಂದು ಹೇಳಿ ಮೌನವದನರಾದರು.

ಇಷ್ಟೂ ಹೊತ್ತು ಮಿಡುಕಾಡುತ್ತಿದ್ದ ಕವಿತಾ, ತಾನು ಮಾಡಿದ ಅವಾಂತರ ಹೊರಬರುತ್ತಿದ್ದಂತೆ ಮುಖವನ್ನು ಕೆಳಗೆ ಮಾಡಿ ನಿಂತಳು. ಮುಂದಾಗುವ ಕಾಳಗಕ್ಕೆ ಸಿದ್ಧವಾಗುವ ಹಂತದಲ್ಲಿದ್ದಂತೆ ಕಂಡ ಹೆಂಡತಿಯನ್ನು ಬಿಟ್ಟು ಸುಮ್ಮನೇ ಎದ್ದು ಒಳಗೆ ಹೋಗಿಬಿಟ್ಟ ಕೇಶವ. ರಾತ್ರಿ ಎಲ್ಲಾ ಮಿಡುಕಾಡಿದ ಕೇಶವ ಊಟವನ್ನೂ ಮಾಡಲಿಲ್ಲ. ನಿದ್ದೆಯನ್ನೂ ಮಾಡಲಿಲ್ಲ. ಬೆಳಗ್ಗೆದ್ದು ತಾಯಿಗೆ ತಿಂಡಿ ಕೊಡಲು ಕೂಗಿ ಹೇಳಿ, ತಿಂದ ನಂತರ ಹೆಂಡತಿಯನ್ನು ಕರೆದು “ಹೋಗ್ಲಿ ಬಿಡು ಕವಿತಾ, ಆಗಿದ್ದು ಆಗಿಹೋಯಿತು. ಈಗ ಇನ್ನೇನೂ ಮಾಡೋಕಾಗಲ್ಲ. ಅಪ್ಪ ಹೇಗೂ ಅಂಗಡಿಗೆ ಅಡ್ವಾನ್ಸ್ ಬೇಡ ಬಾಡಿಗೆನೂ ಬೇಡ ಅಂದಿದ್ದಾರಲ್ಲ. ಮೇಲಿರೋ ಸಿಂಗಲ್ ಬೆಡ್ರೂಮಿನ ಮನೆಗೆ ಹೋಗೋಣ. ಬಾಡಿಗೆ ಕಟ್ಟಿದರೆ ಆಯ್ತು. ಅವರ ಆಸ್ತಿ ಅವರು ಏನಾದರೂ ಮಾಡಿಕೊಳ್ಳಲಿ ಇಷ್ಟಕ್ಕೂ ಕೊಳ್ಳೆ ಆಗಿರೋದೇನು? ಅವರು ಇರುವ ತನಕ ಚೆನ್ನಾಗಿ ನೋಡಿಕೊಂಡರೆ ಆಸ್ತಿ ನಮಗೆ ಬರುತ್ತಲ್ಲ. ಈಗ ನಮ್ಮ ಅರ್ಜೆಂಟ್ ಸೆಕ್ಯುರಿಟಿಗೆ ಹೇಗಿದ್ದರೂ ನಿಮ್ಮಪ್ಪನ ಆಸ್ತಿ ಇದೆಯಲ್ಲ? ಅದರಲ್ಲೂ ಈಗ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಸಮಪಾಲಿದೆ. ಇಲ್ಲಿ ನಮ್ಮಪ್ಪ ಎರಡು ಮಕ್ಕಳಲ್ಲಿ ಯಾರು ನೋಡಿಕೊಂಡರೆ ಅವರಿಗೆ ಆಸ್ತಿ ಎಂದು ಬರೆದಿದ್ದಾರೆ ಯಾಕೆಂದರೆ ಅದು ಸ್ವಯಾರ್ಜಿತ ಸೋ ಪಿತ್ರಾರ್ಜಿತ ಆಸ್ತಿ ಇರುವ ನಿಮ್ಮ ಅಪ್ಪನ ಮನೆ ಆಸ್ತಿ ಬರುತ್ತೋ ಇಲ್ವೋ ಅನ್ನೋ ಅನುಮಾನ ನನಗೆ. ಮೊದಲು ನಿಮ್ಮ ಮನೆಗೆ ಹೋಗಿ  ಪರಿಹಾರ ಮಾಡಿಕೊಳ್ಳೋಣ ಬಾ” ಎನ್ನುತ್ತಾ ಖುರ್ಚಿ ಬಿಟ್ಟೆದ್ದ. ಎಂದೂ ಬಾಯಿ ಬಿಟ್ಟು ಮಾತನಾಡಿದವನು ಇಷ್ಟು ಮಾತನಾಡಿದ್ದನ್ನು ಕೇಳಿ ತಂದೆ-ತಾಯಿ ಹೆಂಡತಿ ಎಲ್ಲರಿಗೂ ಆಶ್ಚರ್ಯ ಉಂಟಾಗಿ, ಇದ್ದಕ್ಕಿದ್ದಂತೆ ಒಬ್ಬೊಬ್ಬರ ಮನದಲ್ಲಿ ಒಂದೊಂದು ತರಹದ ಮಂಥನ ಶುರುವಾಗಿ ಬಿಟ್ಟಿತು. ತಂದೆ-ತಾಯಿಯರಿಗೆ ಮಗನ ಮಾತಿನ ಮೂಲಕ ತಮ್ಮ ನಾಳೆಯ ಬಗ್ಗೆ ನೆಮ್ಮದಿಯ ನೆಲೆ ಸಿಕ್ಕರೆ ಹೆಂಡತಿಗೆ ನಾಳೆಯಿಂದ ತನ್ನ ಹೊಸ ಜೀವನ ಹೇಗಿರಬಹುದೆಂಬ ಪ್ರಶ್ನೆ ತಲೆಯೆತ್ತಿತು. ಕೇಶವ ಹೆಂಡತಿಯನ್ನು “ನನ್ನ ಕರ್ಮ ಹೇಗಿದೆ ನೋಡು. ನೀನು ಸೃಷ್ಟಿಸಿಕೊಂಡ ನಾಳೆಗಳನ್ನು ನಿನ್ನೊಂದಿಗೆ ಸೇರಿ ನಾನು ಅನುಭವಿಸಬೇಕು ಬಾ” ಎಂದು ಒಳ ಹೋದರೆ, ಮಾಡಿದ ತಪ್ಪಿಗೆ ಕ್ಷಮೆ ಕೇಳಲು ಕವಿತಾ ಅವನ ಹಿಂದೆಯೇ ಕೋಣೆಗೆ ಹೋದಳು.

*********************************

One thought on “ರೊಟ್ಟಿ ತೊಳೆದ ನೀರು

  1. ಕಥೆ ಬಹಳ ಚೆನ್ನಾಗಿದೆ. ಈ ಕಾಲದಲ್ಲಿ ಎಲ್ಲರು ಅವರವರ ಸೆಕ್ಯೂರಿಟಿಯನ್ನು ತಾವೇ ಅರಿತು ಸ್ರುಷ್ಟಿಸಿಕೊಳ್ಳಬೇಕು.
    ಹೊಸ ಹೊಸ ತಿರುವುಗಳೊಂದಿಗೆ ಕಥೆ ಆಸಕ್ತಿ ಯನ್ನು ಉಳಿಸಿಕೊಳ್ಳುತ್ತದೆ.

Leave a Reply

Back To Top