ಆ ಕಾಲವೊಂದಿತ್ತು..

ಲಹರಿ

ಆ ಕಾಲವೊಂದಿತ್ತು..

ದೇವಯಾನಿ

          ಅಳೆದು ಸುರಿದೂ ಯೋಚಿಸಿ ತೀಡಿದ ಕೈಬರಹದ ಕಥೆ, ಕವಿತೆ ,ಪ್ರಬಂಧ ,ಹನಿಗವನಗಳ ಅಚ್ಚುಕಟ್ಟಾಗಿ ಕಂದು ಕವರ್ ನಲ್ಲಿರಿಸಿ ಪೋಸ್ಟ್ ಆಫೀಸಿಗೆ ಹೋಗಿ ತೂಕಹಾಕಿಸಿ  ನಾಜೂಕಾಗಿ ಗಮ್  ಹಚ್ಚಿದ  ಸ್ಟಾಂಪು ಅಂಟಿಸಿ ಪೋಸ್ಟ ಬಾಕ್ಸ್ ನೊಳಗೆ ಕೈ ಇಳಿಬಿಟ್ಟು ಎಲ್ಲಿ ಆ ಕವರಿಗೆ ಪೆಟ್ಟಾಗುತ್ತದೋ ಎಂದು ಹಗುರಾಗಿ ಕೈ ಬಿಟ್ಟು ಮನೆಯತ್ತ ಬಂದರೆ ಅದೆಷ್ಟು ನಿರಾಳ!! ಏನೋ ಸಾಧನೆ ಮಾಡಿದ ಹೆಮ್ಮೆ ..ಮಾಸಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರಕಟವಾದ ಬರಹದಡಿಯಲ್ಲಿ ಹೆಸರು ನೋಡಿಯೇ ಪುಳಕಗೊಳ್ಳುತ್ತಿದ್ದ ಕಾಲ!!

          ಯಾವ ಪತ್ರಿಕಾ ಸಂಪಾದಕ , ಉಪಸಂಪಾದಕನನ್ನೂ ಸಂಪರ್ಕಿಸುವ ಗೋಜಿಗೆ ಹೋಗದೆ ನನ್ನ ಬರಹ ಚೆನ್ನಾಗಿದ್ದರೆ ಪ್ರಕಟವಾಗೇ ಆಗುತ್ತದೆ ಎಂಬ ನಂಬಿಕೆಯೊಡನೆ  ಮೂರು ತಿಂಗಳವರೆಗೆ ಕಾಯುತ್ತಿದ್ದುದು , ನಿಜ ಹೆಸರಿಲ್ಲದೆ ಬೇರೆ ಹೆಸರಿನಲ್ಲಿ ಬರೆಯುತ್ತಿದ್ದರೂ ಅದು ನಾನೇ ಎಂದು ಅದೆಷ್ಟು ಖುಷಿಯಾಗುತ್ತಿತ್ತು..ಇದು ನನಗಷ್ಟೇ ಅಲ್ಲ ..ಆ ಕಾಲ ಘಟ್ಟದಲ್ಲಿ ಈ ಮೈಲು, ಇಂಟರ್ನೆಟ್, ಮೊಬೈಲು ಇವ್ಯಾವುದೂ ಇಲ್ಲದ ಜಮಾನಾದಲ್ಲಿ ಬರವಣಿಗೆ ಶುರು ಹಚ್ಚಿಕೊಂಡವರಿಗೆಲ್ಲರಿಗೂ ಇದೇ ಅನುಭವವಾಗಿರುತ್ತದೆ!

ಒಂದು ಹನಿಹವನಕ್ಕೆ ಕಸ್ತೂರಿಯಲ್ಲಿ 10 ರೂ ಗೌರವ ಸಂಭಾವನೆ ಮನಿಆರ್ಡರ್ ಮೂಲಕ ಬರುತ್ತಿತ್ತು!! ಒಂದು ಕಥೆ ಮಯೂರದಲ್ಲೋ  ತುಷಾರದಲ್ಲೋ ಪ್ರಕಟವಾದರೆ 250 ರಿಂದ 500 ರೂ ..

        ಈಗ ಕುಳಿತಲ್ಲೇ ಸಾವಿರಗಟ್ಟಲೆಯ ವ್ಯವಹಾರಗಳನ್ನು ವಾಲೆಟ್ ಗಳ ಮೂಲಕ ,ಆನ್ ಲೈನ್ ಬ್ಯಾಂಕಿಂಗ್ , ಮೊಬೈಲ್ ಬ್ಯಾಂಕಿಂಗ್ ಗಳ ಮೂಲಕ ಮಾಡುವಾಗ ಯಾಕೋ ಆ ದಿನಗಳೇ ನೆನಪಾಗುತ್ತವೆ.

     ಆಗಿನ್ನು ಈ ಸಾಮಾಜಿಕ ಜಾಲತಾಣಗಳ ಹಾವಳಿ ಇರಲಿಲ್ಲ. ಪತ್ರಿಕೆಗಳು ವಿಳಾಸ ಪ್ರಕಟಿಸಿದರೆ ಬರಹ ಮೆಚ್ಚಿದವರ ಒಂದಷ್ಟು ಪತ್ರಗಳ ಪೋಸ್ಟ್ ಮ್ಯಾನ್ ಹೊತ್ತು ತರುತ್ತಿದ್ದ…ಬರೆಯುತ್ತೇನೆ ಎಂದು ಹೇಳಿಕೊಳ್ಳದಿದ್ದರೂ ಒಳಗೊಳಗೇ ಹೆಮ್ಮೆ!!

                ಪತ್ರಿಕೆಗಳ ಮೂಲಕವೇ ಪರಿಚಯವಾದ ಹೆಸರ ಹೊತ್ತ ವ್ಯಕ್ತಿಗಳು ಎಂದಾದರೂ ಯಾವುದಾದರೂ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಅದೆಷ್ಟು ಅಚ್ಚರಿ, ಸಂತಸ ..!!

      ಆಗ ನಡೆಯುತ್ತಿದ್ದ ಕವಿ ಗೋಷ್ಠಿ ಗಳೂ ಹಾಗೆಯೇ ಇದ್ದವು..ಆರಿಸಿ ಕರೆದ ಹತ್ತು ಅಥವಾ ಹನ್ನೆರಡು ಕನರ ಕಾವ್ಯ ವಾಚನ ..  ಈಗಿನಂತೆ ..ಬರೆದದ್ದೆಲ್ಲಾ ಸಾಹಿತ್ಯ ಎಂದು ಹೊಗಳಿಸಿಕೊಳ್ಳದ ..ಇರುವುದನ್ನು ಉತ್ಪ್ರೇಕ್ಷೆ ಮಾಡುತ್ತಾ ಇಲ್ಲದುದನ್ನ ಆರೋಪಿಸುತ್ತಾ   ಎರಡೆರಡು ಸಾಲು ಬರೆದವರನ್ನು ಮಹಾನ್  ಸಾಹಿತಿಗಳೆಂದು ಅಟ್ಟಕ್ಕೇರಿಸುತ್ತಾ    ಇದ್ದ ಭ್ರಮಾಲೋಕದ ಅರಿವೂ ಇರಲಿಲ್ಲ.. ..

ಒಂದು ಪುಟ ಬರೆಯಲು ಅದೆಷ್ಟು ಹಾಳೆಗಳ ಚಿತ್ತು ಕಾಟು ಮಾಡಿ ಹರಿದೆಸೆದು  ಮನಸ್ಸಿಗೆ ತೃಪ್ತಿಯಾಗುವ ಹಾಗೆ ಪದಪದ ಸೇರಿ ವಾಕ್ಯ ವಾದರಷ್ಟೆ ಪೇಪರಿನ ಮಾರಣ ಹೋಮನಿಲ್ಲುತ್ತಿದ್ದುದು. ಆಗೆಲ್ಲ ಬಫ್ ಶೀಟ್ ಎನ್ನುವ ಕಳಪೆ ಗುಣಮಟ್ಟದ ಕಾಗದ ಬರುತ್ತಿತ್ತು..ನಸುಗೆಂಪು ಬಣ್ಣ ಇರಬಹುದು. ಬರೆಯಲು ಇಷ್ಟವಾಗದಿದ್ದರೂ ಒಳ್ಳೆಯ  ಕಾಗದ ಹಾಳಾಗಬಾರದೆಂದು ಅದರಲ್ಲಿಯೇ ಕಾಡಿದ್ದೆಲ್ಲ ಗೀಚಿ   ಒಂದು ಸಮಾಧಾನಕರ ರೂಪಬಂದ ಮೇಲೆ ಒಳ್ಳೆಯ ಹಾಳೆ ಕೈಗೆತ್ತಿಕೊಳ್ಳುತ್ತಿದ್ದುದು.

              ಪತ್ರಿಕೆಗೆ ಕಳಿಸುವ ಮುನ್ನ ಒಂದೆರಡು ಕಾಫಿ ಜೆರಾಕ್ಸ್ ಮಾಡಿಸಿ ಜತನದಿಂದ ಎತ್ತಿರಿಸುವ ಸಂಭ್ರಮ!

ಎಲ್ಲಿ ಕಳೆದುಹೋದವೋ ಆ ದಿನಗಳು .ಅಬ್ಬರ ಆರ್ಭಟವಿಲ್ಲದ , ಬರೆವುದಕಿಂತ ಹಿರಿಯರು ಬರೆದಿದ್ದನ್ನು ಓದಲು ಸಿಕ್ಕಿದರೇ ಕೋಟಿ ಸಿಕ್ಕಂತೆ ಸಂಭ್ರಮಿಸುತ್ತಾ  ಹಸಿವಾದವನು ಎಲೆಯಲ್ಲಿ ಅನ್ನ  ಬಿದ್ದೊಡನೆ ಗಬಗಬನೆ ತಿನ್ನುವಂತೆ  ಈಗಿನವರ ಭಾಷೆಯಲ್ಲಿ ಹೇಳುವಂತೆ  ಒಂದೇ ಸಿಟಿಂಗ್ ನಲ್ಲಿ  ಓದುತ್ತಾ ಇಷ್ಟವಾದುದನ್ನ ಮತ್ತೆ ಮತ್ತೆ ಓದುತ್ತಾ ಆ ಪಾತ್ರಗಳು ಅತ್ತಾಗ , ನೋವುಂಡಾಗ , ಸತ್ತಾಗ ಅದು ನಮ್ಮದೇ ನೋವೇನೋ ಎಂಬಂತೆ ಕಣ್ಣೀರು ಸುರಿಸಿ, ಕಣ್ಣು ಕೆಂಪಾಗಿಸಿ, ಮುಖ ಊದಿಸಿ 

ಪುಸ್ತಕ ಮಡಚಿಡುವ ಹೊತ್ತಿಗೆ ಆ ಓದು ಸಂಪೂರ್ಣವಾಗಿ ಆವರಿಸಿಬಿಡುತ್ತಿತ್ತು..

       ಸ್ಕೂಲು,  ಕಾಲೇಜು , ಪಬ್ಲಿಕ್ ಲೈಬ್ರರಿಗಳಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ ತಂದ ಪುಸ್ತಕಗಳೇ ನಮ್ಮ ಪಾಲಿಗೆ   ಮನರಂಜನೆ, ಪಾಠ ಎಲ್ಲವೂ ಆಗಿದ್ದವು.

               ಅದೆಷ್ಟೋ ಪಾತ್ರಗಳ ಹೋರಾಟ , ಹಾರಾಟ ಅಂತ್ಯ ಎಲ್ಲದರಿಂದ ನಾವುಗಳೂ ಒಂದಷ್ಟು ಕಲಿಯುತ್ತಿದ್ದೆವು.  ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಹಿರಿಯರ ನುಡಿ ಕಲಿಸದಿದ್ದುದನ್ನ ಕಥೆ ,ಕಾದಂಬರಿಗಳ ಪಾತ್ರಗಳು ಕಲಿಸಿದ್ದು ಸುಳ್ಳಲ್ಲ..

       ಒಂದು ಗಂಡು  ಒಂದು ಹೆಣ್ಣನ್ನು ಹೇಗೆಲ್ಲ ಗೌರವಿಸಬಹುದು, ಹೇಗೆಲ್ಲಾ ಶೋಷಿಸಬಹುದು, ಹೆಣ್ಣು ಹೆಣ್ಣಿಗೆ ಶತ್ರುವಾಗಿ ಹೇಗೆ ಕಾಡಬಹುದು  ಇದೆಲ್ಲವನ್ನೂ ತಿಳಿಸಿದ್ದೇ ಪುಸ್ತಕಗಳು ಎಂದರೆ ಅದರಲ್ಲಿ ಉತ್ಪ್ರೇಕ್ಷೆ ಏನಿಲ್ಲ..

          ಪ್ರೇಮಕಥೆಗಳು , ಪತ್ತೇದಾರಿ ಕಥೆಗಳು, ನೀತಿ ಕತೆಗಳು, ಪೌರಾಣಿಕ , ಕಾದಂಬರಿ ,ಐತಿಹಾಸಿಕ ಕಾದಂಬರಿಗಳು..  ಪ್ರೇಮವೈಫಲ್ಯದ ಕಥೆಗಳು,   ಅಬ್ಬಬ್ಬಾ ..ಸಿಕ್ಕದ್ದೆಲ್ಲಾ ಓದಿದ್ದೂ ಓದಿದ್ದೇ …

ಸಮಾಜದ ರೀತಿ-ನೀತಿಗಳು,

ಒಳಿತು – ಕೆಡುಕು,  ಅಪಾಯದ ಮುನ್ಸೂಚನೆಗಳು, ಗಂಡಿನ ನೋಟ ಮಾತ್ರದಿಂದ ಇವನು ಎದುರಿಗಿರುವ ಹೆಣ್ಣನ್ನು ಹೇಗೆ ಕಾಣಬಹುದೆಂದು ನಿಖರವಾಗಿ ಮನಸ್ಸು ಎಚ್ಚರಿಸುವಂತೆ ಚುರುಕಾದದ್ದು   ಕಷ್ಟದ ಪರಿಸ್ಥಿತಿಯಲ್ಲಿ  ಅಸಹಾಯಕತೆಗೆ ಬಲಿಯಾಗದೆ ಬದುಕನೆದುರಿಸಬೇಕೆನ್ನುವ ಛಲ ಎಲ್ಲವೂ  ದೊರೆತದ್ದು ಈ ಪುಸ್ತಕಗಳಿಂದ ಒಂದಷ್ಟಾದರೆ  ಜೀವನಾನುಭವದಿಂದ ಒಂದಷ್ಟು.

       ಪುಸ್ತಕ ಗಳಿಗಿಂತ ಒಳ್ಳೆಯ ಗುರುವಾಗಲಿ ಸ್ನೇಹಿತನಾಗಲಿ ಸಿಗಲು ಸಾಧ್ಯವಿದೆಯೆ?.

             ನಾನು ತೀರಾ ಗಂಭೀರವಾಗಿ ಇಂತಿಂತವರೇ ಎಂದು ಹೆಸರಿಸುವ ಹಾಗೆ ಲೇಖರನ್ನ ಓದಿಲ್ಲದಿದ್ದರೂ ಓದಿದ ಸಾವಿರಾರು ಪುಸ್ತಕಗಳಲ್ಲಿ ಈಗಲೂ ದಶಕಗಳು ಕಳೆದರೂ ಪುಸ್ತಕವನ್ನೂ ,ಲೇಖಕರ ಹೆಸರನ್ನೂ ,ಪುಸ್ತಕದ ತಿರುಳನ್ನೂ ನೆನಪಿನಲ್ಲಿಟ್ಟಿರುವ ಮಟ್ಟಿಗೆ ಓದಿರುವೆ.

         ಓದು  ಎನ್ನುವುದು ಸದಾ ಬರಹಕ್ಕೆ ಪ್ರೇರಣೆಯಾಗಬೇಕು. ಒಮ್ಮೆ ಕವಿಗಳೂ, ಶಿಕ್ಷಕರೂ ಎಂದು ಸದಾ ಹೆಸರಿನ ಮುಂದೆ  ಹಾಕಿಕೊಳ್ಳುತ್ತಿದ್ದ , ಆಗಾಗ ಚುಟುಕುಗಳನ್ನು ಕನ್ನಡಮ್ಮನ ಬಗ್ಗೆ ಒಂದೆರಡು ಕವನ ಎನ್ನಬಹುದಾದ ಸಾಲುಗಳನ್ನೂ ಬರೆದಿದ್ದ ಪರಿಚಿತ ವ್ಯಕ್ತಿಯೊಬ್ಬ ” ಮೇಡಂ , ನಾನು ರಾಷ್ಟ್ರ ಮಟ್ಟದ ಕವಿ ಗೋಷ್ಠಿಗೆ ಆಯ್ಕೆ ಆಗಿದೀನಿ..ನೀವೇ ಹೇಳಿ ಯಾರಿಗೆ ಸಿಗುತ್ತೆ ಈ ಭಾಗ್ಯ ” ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ಇಪ್ಪತ್ತು ವರ್ಷಗಳಿಂದ ಆಗಾಗ ಪತ್ರಿಕೆಗಳಲ್ಲಿ ಕಥೆ ಕವನ. ಎಂದು ಕಾಣಿಸಿಕೊಳ್ಳುತ್ತಿದ್ದ ನಾನು ಆವಾಕ್ಕಾಗಿದ್ದೆ.ಮುಂದಿನ ಕಾರ್ಯಕ್ರಮಗಳಲ್ಲೂ ಅಷ್ಟೆ ಆತ ಬಂದರೆ ಕವಿ ಎಂದೇ ಪರಿಚಯ ..ನಾನು ನನ್ನಂತಹ ಬೆಪ್ಪುಗಳು ಬಂದರೆ ಒಳ್ಳೆಯ ಶಿಕ್ಷಕಿ , ಸಂಪನ್ಮೂಲ ವ್ಯಕ್ತಿ ಅಂತ ಪರಿಚಯವೇ ಹೊರತು ಅಪ್ಪಿ ತಪ್ಪಿಯೂ ಬರಹಗಾರ್ತಿ ,ಕಥೆಗಾರ್ತಿ, ಕವಯಿತ್ರಿ..ಸಾಹಿತಿ..ಇತ್ಯಾದಿ ಹೆಸರುಗಳು ನನ್ನ ಹೆಸರಿನೊಂದಿಗೆ ಎಂದೂ ಕೇಳಿಬಾರದ್ದು  ನನಗೇನೂ ಸೋಜಿಗದ ಸಂಗತಿಯಾಗಿರಲಿಲ್ಲ ಬಿಡಿ..ಇನ್ಮು ಕೆಲವರು ಸಾಹಿತಿಗಳೂ ,ಚಿಂತಕರೂ ..ಎಂಬ ಫಲಕಹೊತ್ತೇ ಓಡಾಡುತ್ತಿದ್ದುದ ನೋಡುವಾಗಲಂತೂ ಇನ್ನೂ ನಗೆ!!

    ಅಪಹಾಸ್ಯದ ನಗೆಯಲ್ಲ…ನನ್ನ ಹೆಸರಿನಮುಂದೆ ಹೀಗೇ ಹಾಕಬೇಕುಎನ್ನುವ ಅವರ ಧೋರಣೆಗೆ.

ಒಮ್ಮೆ ಇಂತಹುದೇ ಮಹಾಶಯರೊಬ್ಬರನ್ನ ಕೇಳಿದ್ದೆ

” ನೀವು ಬರೀತೀರಲ್ಲ ಸರ್, ..ಸರಿ ಆದರೆ ಯಾರ ಯಾರನ್ನ ಓದಿದೀರಿ? ಯಾರ ಬರಹ ನಿಮಗೆ ಇಷ್ಟ ಆಗುತ್ತೆ”

             ನಾನು ನಿರೀಕ್ಷೆ ಮಾಡಿದ್ದ ನಮ್ಮ ಹಿರಿಯ ಸಾಹಿತಿಗಳ ಯಾವುದಾದರೂ ಹೆಸರು ಅವರ ಬಾಯಿಂದ ಬಂದಿದ್ದರೆ ಜನ್ಮ ಪಾವನವಾಗಿಬಿಡುತ್ತಿತ್ತು..

” ಮೇಡಂ , ನಾನು ಹಾಗೆಲ್ಲಾ ಯಾರನ್ನೂ ಓದಲ್ಲ…ನನ್ನಷ್ಟಕ್ಕೆ ನಾನು ಬರೀತೀನಿ…”

    ಬಹುಶಃ ಇದಕ್ಕೇ ಇರಬೇಕು” ಕುರಿತೋದದೆಯುಂ….ಎಂದದ್ದು ಹಿರಿಯರು.

        ನಿಜ ಇಂದು ಬರಹಗಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಯಾವ ಪತ್ರಿಕೆಗಳ ಮುಲಾಜಿಗೂ  ಕಾಯದೆ  ಫೇಸ್ ಬುಕ್ , ವಾಟ್ಸಾಪ್ ಗ್ರೂಪ್ ,ಬ್ಲಾಗ್ , ಆನ ಲೈನ್ ಮ್ಯಾಗಜೀನ್ ನಲ್ಲಿ ಬರೆವವರ ಸಂಖ್ಯೆ ಅಸಂಖ್ಯ.

           ಫೇಸ್ ಬುಕ್ ವಾಟ್ಸಾಪ್ ಗ್ರೂಪಿನಲಿ ಬರುವ ಕವಿತೆಗಳಲ್ಲಿ ನಿಜವಾಗಿ ಅದೆಷ್ಟು ನಿಜವಾದ ಕವಿತೆಗಳಿರುತ್ತವೋ ದೇವರೇ ಬಲ್ಲ..ಆಹಾ, ಸೂಪರ್ , ಚಂದದ ಸಾಲುಗಳು , ಅದ್ಭುತವಾಗಿ ಬರೀತೀರಿ…ಎಂಬ ಕಮೆಂಟುಗಳಲ್ಲಿಎಷ್ಟು ಹುರುಳಿರುತ್ತವೋ ..ಅದನ್ನ ಓದಿದ ಕವಿ/ಕವಯಿತ್ರಿಅದೆಷ್ಟು ನೆಲದಿಂದ ಮೇಲೆ ಹಾರಿ…

         ನಿಜಕ್ಕೂ ಇಂತಹುದೊಂದು ಬೆಳವಣಿಗೆ ಅಪಾಯಕಾರಿ..ನನ್ನ ಪುಸ್ತಕದ ಬಗ್ಗೆ ಒಂದಷ್ಟು ಬರೆಯಿರಿ ಎಂದು ಕೇಳುವುದೂ ..ನನ್ನ ಪುಸ್ತಕದ ಕೈಯಲ್ಲಿ ಹಿಡಿದು ಸೆಲ್ಫೀ ತೆಗೆದುಕೊಂಡು ಫೇಸ್ ಬುಕ್ ಲಿ ಹಾಕಲಿ ..ಹಾಡಿಹೊಗಳಲಿಎಂದು ನಿರೀಕ್ಷಿಸುವುದೂ  ನಿಜಕ್ಕೂ  ಆಘಾತಕಾರಿ ಸಂಗತಿ..ಬೆಳೆದದ್ದೆಲ್ಲಾ ಬೆಳೆಯೇ ಇರುವುದಿಲ್ಲ ಕಳೆಯೂ ಇರುತ್ತದೆ  ಎಂಬುದನ್ನು ಬರೆವವನೂ / ಕುರುಡಾಗಿ ಹೊಗಳಿ ಅಟ್ಟಕ್ಕೇರಿಸಿ ಭ್ರಮಾಲೋಕ ಸೃಷ್ಟಿಸುವವನೂ ಅರಿತುಕೊಳ್ಳಬೇಕಿದೆ.

ಇಲ್ಲದಿದ್ದರೆ ಸಾಹಿತ್ಯದ ಕೊಲೆಯಷ್ಟೇ ಅಲ್ಲ ಪ್ರತಿಭೆಗಳ ಕೊಲೆಯೂ ಆಗುತ್ತದೆ.

        ನಾ ಬರೆದದ್ದು ನಿಜಕ್ಕೂ ನನಗೆ ತೃಪ್ತಿಯಿದೆಯೆ? ಎಂದು ಕೇಳಿಕೊಳ್ಳಲಾರದ ಮನಸ್ಥಿತಿಗೆ ಒಬ್ಬ ಬರಹಗಾರ ಎಂದೂ ಬರಬಾರದು..

                ನಾವೆಲ್ಲ ಹೈಸ್ಕೂಲಿನ ದಿನಗಳಿಂದಲೂ ಯಾವುದೇ ಸ್ಪರ್ಧೆಯಲ್ಲಿ ಪುಸ್ತಕಗಳನ್ನೇ ಬಹುಮಾನವಾಗಿ ,ನೆನಪಿನ ಕಾಣಿಕೆಯಾಗಿ ಒಡೆದು ಸಂಭ್ರಮಿಸಿದವರು.ಈಗ ಇದಷ್ಟು ಪ್ರಚಲಿತವಾಗಿಲ್ಲ , ಹಾರ ,ತುರಾಯಿ , ಶಾಲು , ಸಂಘಟಕರ ಫೋಟೋ ಹೊತ್ತ ಮೆಮೆಂಟೋ…ಗಳೇ ಮೆರೆವ ಕಾಲವಿದು.

          ಬೆರಳೆಣಿಕೆಯ ಕವಿಗೋಷ್ಠಿಗಳಿಗಿದ್ದ ಮಹತ್ವ ಮೂರಂಕೆ ಮೀರುವ ಕವಿಗಳಿಗಿರುವ ಕವಿಗೋಷ್ಠಿಗೆ ಹೇಗೆ ಸಿಕ್ಕೀತು..

           ಅಲ್ಲೊಂದು ಇಲ್ಲೊಂದು  ತೂಕದ ಪ್ರಶಸ್ತಿಗಳಗಿದ್ದ ಗೌರವ ಈಗ ಹಾದಿ ಬೀದಿಗೊಂದರಂತೆ ಇರುವ  ಸಂಘ ಸಂಘಟನೆಗಳು ಕೊಡುವ  ಮಾಡುವ  ಪ್ರಶಸ್ತಿಗಳಿಗಿದೆಯೆ?

             ಹಾಗಾದರೆ ಕನ್ನಡದ ಸೇವೆ? ಸಾಹಿತ್ಯ ಸೇವೆ? ನಾವು ಮಾಡುವುದು ಬೇಡವೆ ಎಂಬ ಪ್ರಶ್ನೆ ಏಳುತ್ತದೆ.

     ಖಂಡಿತಾ ಇದು ನಮ್ಮೆಲ್ಲರ ಆದ್ಯ ಕರ್ತವ್ಯ . ಆದರೆ ಬರೆವ ಮುನ್ನ ಹಿರಿಯರನ್ನ ಒಂದಷ್ಟು ಓದಬೇಕಿದೆ… ಅರಿಯಬೇಕಿದೆ…ಅರಗಿಸಿಕೊಳ್ಳಬೇಕಿದೆ.. ಇದರ ನಂತರ ಬರೆಯಬೇಕಿದೆ…

    ಇಲ್ಲದಿದ್ದರೆ ಕಾಲಕ್ಕೂ ಮುನ್ನ ರಾಸಾಯನಿಕಗಳ ಮೂಲಕ ಮಾಗಿಸಿದ ಮಾವಿನ ಹಣ್ಣಿನಂತೆ ಬರಹ ರುಚಿಗೆಡುತ್ತದೆ. ಸಾಹಿತ್ಯದ ಸ್ವಾಸ್ಥ್ಯ ಹದಗೆಡುತ್ತದೆ.

ಬರೆಯಬೇಕು , ಬರೆದುದನು ಸಂಭ್ರಮಿಸಬೇಕು ನಿಜ .ಆದರೆ ಬರವಣಿಗೆ ಮಾಗುವವರೆಗೂ ತಾಳ್ಮೆಯಿಂದ ಕಾಯಬೇಕು…     

*******************************

5 thoughts on “ಆ ಕಾಲವೊಂದಿತ್ತು..

  1. ನಮ್ಮೆಲ್ಲರ ಆತ್ಮಾವಲೋಕನ ನಾವೇ ಮಾಡಿಕೊಳ್ಳಬೇಕಾದ‌ ಬರಹ
    ಅಭಿನಂದನೆ ಮೆಡಂ

  2. ಸಕಾಲಿಕ ಮತ್ತು ಅನೇಕರನು ಆತ್ಮವಿಮರ್ಶೆಗೆ ತೊಡಗಿಸುವ ಲೇಖನ… ಆ ಕಾಲ ಲೇಖಕರನು ಬೆಳೆಸಿತು.
    ಈ ಕಾಲ‌ ಲೇಖಕರನು ತಯಾರಿಸುತ್ತಿದೆ.

Leave a Reply

Back To Top