ವಿಪ್ರಲಂಭೆಯ ಸ್ವಗತ

ಕವಿತೆ

ವಿಪ್ರಲಂಭೆಯ ಸ್ವಗತ

ಬಿ.ಶ್ರೀನಿವಾಸ

ಪಯಣದ ದಾರಿಯ ನೀರವ ಮೌನ
ಅರ್ಥವಾದರೂ ಸಾಕಿತ್ತು

ದಾರಿಯಲಿ ಕಂಡವರು ಹಲವರು
ಅವರೊಬ್ಬರಲಿ ಕಂಡಿದ್ದರೂ ನನ್ನ ಬಿಂಬ
ನಾನು ಹೀಗೆ ಎಚ್ಚರದಪ್ಪಿ ಮಲಗಿ ಕಳೆದುಕೊಳ್ಳುತ್ತಿರಲಿಲ್ಲ

ಲೋಕಕೆ ಒಬ್ಬ ಬುದ್ಧ ಇದ್ದ
ಮತ್ತೆ ಹುಟ್ಟಿ ಬಂದಾರು
ಹತ್ತು ಹಲವು ಬುದ್ಧರು
ವಿಪ್ರಲಂಭೆ ಯಶೋಧರೆಗೆ ಒಬ್ಬನೇ ಒಬ್ಬ ಸಿದ್ಧಾರ್ಥ
ದಕ್ಕದೇ ಹೋದ
ನಿಟ್ಟುಸಿರು
ಹಾಗೇ ಉಳಿಯಿತು
ಚರಿತ್ರೆಯಲಿ

ಮರದ ಕೆಳಗೆ ಕುಳಿತಾಗ
ಸಣ್ಣ ಕೊಂಬೆಯ ಚಿಗುರು
ತಾಕಿದ್ದರೂ ಸಾಕಿತ್ತು
ಎದೆಗೆ ಸಿದ್ಧಾರ್ಥ ದಕ್ಕುತ್ತಿದ್ದ

ಚರಿತ್ರೆಯ ಪುಟದ ಮೂಲೆಯೊಂದರಲಿ ಕುಳಿತ
ನನ್ನದು..
ಸಾವಿತ್ರಿದು
ಕಸ್ತೂರ ಬಾ
ರಮಾ ಬಾಯಿದೂ ಇದೇ ಕಥೆ ವ್ಯಥೆ

ಚರಿತ್ರೆಯಲೂ ಇರದ
ವರ್ತಮಾನಕೂ ಸೇರದ
ಇಂದು…
ಮತ್ತು
ನಾಳೆಗಳ…
ನಡುವೆ ಸಿಕ್ಕ ಜೀವಗಳು ನಾವು.

******************************************************

One thought on “ವಿಪ್ರಲಂಭೆಯ ಸ್ವಗತ

Leave a Reply

Back To Top