ಶಿವರಾತ್ರಿ ವಿಶೇಷ ಲೇಖನ
ಕರುಣ ಬಂದರ ಕಾಯೋ..
ಯಾಕೊಳ್ಳಿ.ಯ.ಮಾ


ಶಿವ ಶಿವನೆಂದರೆ ಸಿಡಿಲೆಲ್ಲ ಬಯಲಾಗಿ
ಕಷ್ಟ ಬಂದೆರಗಿ ಕಡೆಗಾಗಿ ನನ ಮನವೆ
ಶಿವ ಶಿವ ನೆಂಬುದ ಮರಿಬ್ಯಾಡ
ಎನ್ನುತ್ತಾರೆ ನಮ್ಮ ಜನಪದರು ಅವರದು ಸರಳ ಮಾರ್ಗ.ಸರಳ ಜೀವನ ಆದರೆ ಉದಾತ್ತ ಚಿಂತನ ಎನ್ನುವದಕ್ಕೆ ಅವರು ಬದುಕನ್ನು ಮೀರಿದ ಬೇರೆ ಸಾಕ್ಷಿ ಬೇಕಿಲ್ಲ. .ಬರುವ ಕಷ್ಟಗಳನ್ನು ಶಿವನೊಗೊಪ್ಪಸಿ ನಿಶ್ಚಿಂತವಾಗಿ ಬದುಕಬೇಕೆಂಬುವ ಸರಳ ದಾರಿ ಅದು. ಕೊಡುವವನೂ ಕೊಳ್ಳುವವನೂ ಶಿವನೇ ಎಂಬ ಅರ್ಪಣಾಮನೋಭಾವ ನಮ್ಮದಾದಾಗ ಅಂತಹ ನಿರ್ಲಿಪ್ತ ಸ್ಥಿತಿ ದೊರಕಬಹುದು.ಕಷ್ಟ ಬರಲಿ,ಸುಖ ಬರಲಿ ಎಲ್ಲವೂ ಶಿವನದೇ ನಮ್ಮದೇನಿದೆ? ಬಂದದ್ದನ್ಮು ಅನುಭವಿಸುತ್ತಾ ಸಾಗೋಣ ಎಂದು ನಂಬಿದವರು. “ಉರಿ ಬರಲಿ ಸಿರಿಬರಲಿ…ಹಾಲಲ್ಲದ್ದು ನೀರಲ್ಲದ್ದು ನಿಮ್ಮ ದರ್ಮ’ ಎನ್ನುವ ಬಸವಣ್ಣನವರು ಹೇಳುವ
ಕಾಯದ ಕಷ್ಟಕ್ಕಂಜಿ ಕಾಯಯ್ಯಾ ಎನ್ನೆನು
ಜೀವದ ಬಯಕೆಗಂಜಿ ಈಯಯ್ಯಾ ಎನ್ನೆನು
ಬಸವಣ್ಣನವರ.. ನೀನು ಹೇಗೆ ಇಡುತ್ತಿಯೋ ಹಾಗಿರುವೆ ..ಎಂದು ಎಲ್ಲವನ್ನು ತಮ್ಮ ದೈವಕ್ಕೆ ಅರ್ಪಿಸಿದ ದಾರಿಯೂ ನಮ್ಮ ಜನಪದರ ದಾರಿಯಾಗಿತ್ತು.ಇದನ್ನೆ ಶರಣರಂತೆ –
ಕರುಣ ಬಂದರ ಕಾಯೋ ಮರಣ ಬಂದರ ಒಯ್ಯೋ
ಕರುಣಿ ಕಲ್ಯಾಣಿ ಬಸವಣ್ಣ ಕಡೆತನಕ
ಕಾಯೋ ಅಭಿಮಾನ
ಎಂದು ಬೇಡುತ್ತಾರೆ. ಅಭಿಮಾನವೇ ಜೀವ ಧನ ವಾಗಿರುವ ಅವರಿಗೆ ಮಾನ ಕಾಯುವದೂ ಅಭಿಮಾನ ಉಳಿಸಿಕೊಂಡು ಬದುಕುವದೇ ಮುಖ್ಯವಾಗಿತ್ತು
ನಮ್ಮ ಜನಪದರದು ಶಿವನಿಗೊಪ್ಪಿಸಿದ ಬದುಕು. ಅವನು ಮನಸ್ಸು ಬಂದರೆ ಕಾಯುತ್ತಾನೆ..ಅದಕ್ಕೇಕೆ ನಾವು ನಿರಿಕ್ಷಿಸಬೇಕು? ಎಂಬ ನಿರ್ಲಿಪ್ತ ಭಾವ . ಎಲ್ಲವೂ ಶಿವನದೇ ಎನ್ನುವ ಅವರು .
ಸೊಮ್ಮು ಶಿವನದು ಕಾಣೋ ..ಎಂದು ನಂಬುತ್ತಾರೆ.ಯಾವಾಗಲೂ ಶಿವನನ್ನು ಬಿಟ್ಟು ಅವರ ಬದುಕಿಲ್ಲ .ಶಿವನನ್ನು ಕಾಣಲು ಹೊತ್ತು ಗೊತ್ತುಗಳೂ ಅವರಿಗಿಲ್ಲ.
ಕತ್ತಲಾದರೇನ ಹೊತ್ತ ಮುಳಗಿದರೇನ
ನಿತ್ಯ ಬರುವೆನೋ ನಿನ ಗುಡಿಗೆ ಅಪ್ಪಯ್ಯ
ನಿತ್ಯದಲಿ ನಾನು ಬರುವೆನೊ
ಎಂದು ತಮ್ಮ ದುಡಿಮೆ ಮುಗಿದ ಮೇಲೆ ದೇವಾಲಯಕ್ಕೆ ಬರುತ್ತಾರೆ. ಅವರಿಗೆ ದೇವರನ್ನು ನೆನೆಯಲು ವೇಳೆಯಿಲ್ಲ.ತಮ್ಮೊಳಗೆ ಇರುವ ಶಿವನನ್ನು ಹುಡುಕಿಕೊಢು ಹೋಗಲು ಸಮಯಾಸಮಯವೇಕೆ? ಎನ್ನುವ ಜನಪದ ಗರತಿ ದೇವರನ್ನು ನೆನೆಯುವದನ್ನೆ ತಾಯಿಯನ್ನು ನೆನೆಯುವದು ಎಂದು ಭಾವಿಸು ತ್ತಾಳೆ.ಆಕೆಗೆ ತಾಯಿಯೆ ದೇವರ ರೂಪ.” ತಾಯವ್ವನ ನೆನೆಯಾಕ ಯಾಯಾಳೆ ಯಾಹೊತ್ತು ” ಎನ್ನುವ ಆ ತಾಯಿ ತನಗೆ ಸಮಯ ಸಿಕ್ಕಾಗ ನೆನೆಯುತ್ತೇನೆ ಎನ್ನುತ್ತಾಳೆ.
ಶಿವ ಎಲ್ಲಿದ್ದಾನೆ? ಎಲ್ಲೋ ದೂರದಲ್ಲಿ ಕೈಲಾಸ ರಾಮೇಶ್ವರದಲ್ಲಿದ್ದಾನೆಯೆಂದು ನಂಬಿದವರು ನಮ್ಮ ಜನಪದರಲ್ಲ .ಅವರದು ಶರಣರಂತೆಯೇ ತಾವಿರು ವಲ್ಲಿಯೆ ಕೈಲಾಸವನ್ನು ಕಟ್ಟುವ ದೃಷ್ಟಿಕೋನ!
ಆದ್ದರಿಂದಲೇ ನಮ್ಮ ಜನಪದ ಗರತಿ ನಮ್ಮಂತೆ ದೇವರನ್ನು ಹುಡುಕಿಕೊಂಡು ಕೈಲಾಸ ಕಾಶಿ ರಾಮೇಶ್ವರಗಳಿಗೆ ಹೋಗುತ್ತೇನೆನುವದಿಲ್ಲ ಆಕೆಗೆ ಕಾಶಿ ಎಂದರೆ ಅವಳ ಹಡೆದವ್ವನೇ! ಅದಕ್ಕೇ ಆ ತಾಯಿ
ಕಾಶಿಗೆ ಹೋಗಾಕ ಏಸಿಂದು ದಿನ ಬೇಕ
ಕಾಶಿ ಕುಂತಾಳ ಹಡೆದವ್ವ ತಾಸೊತ್ತಿನ
ಹಾದೆ ತವರೂರ
ಎಂದು ಹಾಡುತ್ತಾಳೆ ತಾಯಿಯ ಪದತಲದಲ್ಲಿಯೇ ಕಾಶಿ ರಾಮೇಶ್ವರಗಳಿವೆ ಯೆನ್ನುವ ಜನಪದರ ಚಿಂತನೆಗೂ ನಾವಿರುವಲ್ಲಿಯೇ ಕೈಲಾಸವಿದೆ ಎನ್ನುವ ಶರಣರ ಚಿಂತನೆಗೂ ಭಾವ ಸಂಬಂದವಿದೆ. ಶಿವ ತನ್ನಲ್ಲಿಯೇ ಇದ್ದಾನೆ ಎನ್ನುವದರ ಬಗ್ಗೆ ಅವರಿಗೆ ಏಳ್ಳನಿತೂ ಅಪನಂಬಿಕೆಯಿರಲಿಲ್ಲ.
ಕಲ್ಲು ಕಾಷ್ಟದೊಳಿರುವ ಮುಳ್ಳುಮೊನೆ
ಯಲ್ಲಿರುವಎಲ್ಲೆಲ್ಲಿಯೂ ಇರುವ ಆ ಶಿವನು
ತನ್ನಲ್ಲಿ ಇರನೇ ಸರ್ವಜ್ಞ
ಎನ್ನುವ ಸರ್ವಜ್ಞನ ಪ್ರಶ್ನೆ ಅವರದೂ ಕೂಡ ಆಗಿತ್ತು.
ಜನಪದರ ಬದುಕು ಮತ್ತು ಭಕ್ತಿ ಬೇರೆ ಬೇರೆ ಯಾಗಿರಲಿಲ್ಲ. ಅವರ ಬದುಕು ದುಡಿಮೆ(ಕಾಯಕ) ಮತ್ತು ಶೃದ್ದೆ( ನಂಬಿಕೆ)ಯನ್ನು ಆಧರಿಸಿತ್ತು.ಶೃದ್ಧೆಯಿಂದ ದುಡಿದು ಬಂದುದನ್ನು ಶಿವನಿಗರ್ಪಿಸಿ ತಾನೂ ತಿಂದು ನೆಮ್ಮದಿಯ ಬಾಳನ್ನು ಅವರು ಸಾಕ್ಷೀಕರಿಸಿದರು ಅನ್ಯರದನ್ನು ಬಯಸದೆ ,ತನ್ನದು ಎಷ್ಟು ಇದೆಯೋ ಅಷ್ಟರಲ್ಲಿಯೇ ಬದುಕಿದರು.” ಕಂಬಳಿ ಉಂಬಳಿ ಆಸ್ತಿ ಉಳಿದದ್ದೆಲ್ಲ ಜಾಸ್ತಿ” -ಎಂಬ ಸರಳ ಸಿದ್ದಾಂತ ಅವರದಾಗಿತ್ತು.
ನೆನಪಿಸಬೇಡವೆಂದರೂ ನಮ್ಮ ಆಡಂಬರದ ಅತಿಯಾಶೆಯ ಎಲ್ಕವೂ ನನ್ನದೇ,ಎಲ್ಲವೂ ನನಗೇ ಇರಲಿ ಎನ್ನುವ ನಮ್ಮ ಜೀವನ ನೆನಪಾಗುತ್ತದೆ.ದೊರಕಿರುವ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಕಿಸಿ ಬಂದ ಪಫಲವನ್ನುಮಾತ್ರ ಸ್ವೀಕರಿಸಿಬದುಕುತ್ತೇನೆ ಇನ್ನೊಂದಕ್ಕೆ ಎಳಸಲಾರೆ ಎನ್ನುವ ಜನ ಎಲ್ಲ ರಂಗದಲ್ಲಿಯೂ ಅಪರೂಪವಾಗುತ್ತಿದ್ದಾರೆ.ನಾನೆನು ಕಮ್ಮಿ? ನೀನೇನು ಕಮ್ಮಿ ಎಂದು ಸ್ಪರ್ದೆಗೆ ಬಿದ್ದವರಂತೆ ಬದುಕುತ್ತಿರುವಾಗ..ಕರುಣ ಬಂದರ ಕಾಯೋ ಎಂದು ಯಾರನ್ನುಕೇಳಬೇಕು? ಹಾಗೆ ನಂಬಿ ಬದುಕಿದವರು ಎಷ್ಟು ಜನ ಎಂದು ಕೇಳುವಂತಾಗಿದೆ
***************************.
ಜನಪದರ ದೃಷ್ಟಿಯಿಂದ ಅವಲೋಕಿಸಿ ಬರೆದ ಯಾಕೊಳ್ಳಿಯವರ ಲೇಖನ ತುಂಬಾ ಚೆನ್ನಾಗಿದೆ.
ಚೆನ್ನಾಗಿದೆ ಸರ್…..
chennagide sir