ಗಜಲ್
ಟಿ.ಪಿ.ಉಮೇಶ್
ಒಲುಮೆಯೆಂಬುದು ಬೀಸಿ ಬರುವ ತಂಗಾಳಿಯಲ್ಲ ನಿಗಿನಿಗಿ ಸೂರ್ಯನಿಗು ಮಿಗಿಲು।
ಹೂವಿನ ಬಣ್ಣ ಮಕರಂದ ಸುಗಂಧವಲ್ಲ ಮೆಟ್ಟಿದ ಹಾವಿನ ಸಂಗಕೂ ಮಿಗಿಲು।।
ಮಂಜಿನ ತೇರಿನಲ್ಲಿ ಬರುವ ಹಿತವಾದ ಪ್ರಕಾಶ ತುಂಬಿಕೊಂಡ ಹೂಜಿಯಲ್ಲ ಒಲವು।
ಮರುಭೂಮಿಯ ಕಡು ಧಗೆಯ ಸುಡು ಮರಳಿನ ತಾಪಕು ಮಿಗಿಲು।।
ಪೂರ್ಣ ಚಂದ್ರನ ಕಾಂತಿಯ ಚಿರ ಶಾಂತಿಯರಮನೆಯ ಹೊಳಪಲ್ಲ ಒಲವು।
ಬೆಳಕ ನುಂಗಿದ ಕಾಳರಾತ್ರಿಗಳ ದಿಗಿಲುಗೊಂಡ ಸ್ಮಶಾನ ಮೌನಕು ಮಿಗಿಲು।।
ಮಿಂಚು ಹುಳುಗಳ ಝೇಂಕಾರದ ಕಾರಂಜಿ ನೃತ್ಯ ಉದ್ಯಾನವನವಲ್ಲ ಒಲವು।
ಕಾಡು ಕುಟುಕು ಕೆಂಡ ಚೇಳುಗಳ ಉರಿ ನಂಜಿನ ಭೀಕರತೆಗೂ ಮಿಗಿಲು।।
ಉಷೆಯ ನಶೆಯಲಿ ಪ್ರೇಮಿ ಉಮೇಶನೊಬ್ಬನು ತೇಲಿ ಹೋದಂತಲ್ಲ ಒಲವು।
ಘಳಿಗೆ ಘಳಿಗೆಗೂ ಬಲವಾಗುವ ಬಯಲ ಸಾವ ಮೋಹಕು ಮಿಗಿಲು।।
**********************
Very nice lines