ಕವಿತೆ
ಕ್ರಾಂತಿಯ ಕಹಳೆ
ಸುಜಾತಾ ರವೀಶ್
ಹೆಣ್ಣೆಂದೇಕೆ ಬೀಳುಗಳೆವಿರಿ ಎಂದರು
ಅಂದಿನ ಕಾಲದಲ್ಲೇ ಸಂಚಿ ಹೊನ್ನಮ್ಮ
ಇಪ್ಪತ್ತೊಂದನೇ ಶತಮಾನವೇ ಬಂದರೂ
ಗಂಡು ಮಕ್ಕಳ ವ್ಯಾಮೋಹ ತಗ್ಗಿಲ್ಲವಮ್ಮ
ವಿಜ್ಞಾನದ ಪ್ರಗತಿಯ ಉಪಯೋಗಿಸುವರು
ಹೆಣ್ಣು ಭ್ರೂಣ ಪತ್ತೆಗಾಗಿ ಕ್ರೂರ ಹತ್ಯೆಗಾಗಿ
ಮನೆ ಬೆಳಗುವ ತಾಯಿ ತಂಗಿ ಹೆಂಡತಿ ಮಗಳು
ವನಿತೆಯ ವಾತ್ಸಲ್ಯದ ಪ್ರತಿರೂಪವೆಂದೇ ಮರೆವರು
ಕಾಲವಷ್ಟೇ ಮುಂದುವರೆದಿದೆ ಆದರೂ
ಶೋಷಣೆಯ ನಾನಾರೂಪ ನಡೆದಿದೆ ಅವ್ಯಾಹತ
ಭಾವನಾತ್ಮಕ ಸಾಮಾಜಿಕ ಆಂತರಿಕ ಬಾಹ್ಯ
ಎಲ್ಲ ಕಡೆಗಳಿಂದಲೂ ನಿತ್ಯ ನಿರಂತರ ದಹ್ಯ
ಇದೀಗ ಬಂದಿದೆ ಅವಶ್ಯಕತೆ ಬದಲಾವಣೆಯ
ಮೂಕೆತ್ತುಗಳಂತೆ ಸಹಿಸಿಕೊಳ್ಳಲು ಇಲ್ಲ ಸಮಯ ಕಂಬನಿಯ ಸುರಿಸೆವು ಕಾಲ್ಹಿಡಿದು ಬೇಡೆವು
ಆದರೆಂದೂ ನಮ್ಮ ಕಾಲೊರಸು ಮಾಡೆ ಬಿಡೆವು
ಬನ್ನಿ ಭಗಿನಿಯರೇ ಈಗಲಾದರೂ ಒಂದಾಗೋಣ
ಪ್ರೀತಿ ತ್ಯಾಗದ ಹೆಸರಿನ ಬಲಿದಾನ ನಿಲ್ಲಿಸೋಣ
ಸಮಾನ ಹಕ್ಕು ಅವಕಾಶಕ್ಕಾಗಿ ಹೋರಾಡೋಣ
ಗೋಸುಂಬೆಗಳ ಸುಳ್ಳು ಮುಖವಾಡ ಕಳಚೋಣ
ಮೊಳಗಬೇಕಾಗಿದೆ ತ್ವರಿತದಲಿ ಕ್ರಾಂತಿಯ ಕಹಳೆ
ಕಂಡು ಕೊಳ್ಳಬೇಕಾಗಿದೆ ಅಸ್ತಿತ್ವವ ಪ್ರತಿ ಮಹಿಳೆ
ಪಡೆಯಬೇಕಾಗಿದೆ ಸ್ವಾತಂತ್ರ್ಯದ ಹೊಸ ಅಸ್ಮಿತೆ ನಡೆಯಬೇಕಾಗಿದೆ ಕ್ರಾಂತಿ ನವಪಥ ಹಿಡಿಯುತೆ
***************************
ಸಂಪಾದಕರಿಗೆ ಪ್ರಕಟಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು
ಸುಜಾತಾ ರವೀಶ್