ಅವಳು

ಮಹಿಳಾ ದಿನದ ವಿಶೇಷ ಕವಿತೆ

ಅವಳು

ಅನಿತಾ ಪಿ ಪೂಜಾರಿ ತಾಕೊಡೆ

ಬರೀ ಇಂದಿನ ದಿನವಷ್ಟೇ ಅಲ್ಲ
ನಿನ್ನೆ ನಾಳೆಗಳ ಪ್ರತಿ ಬಾಳ್ವೆಯಲೂ
ಬಾಳುವೆದೆಯನು ಪೊರೆಯುವ ಮಿಡಿತದಲೂ
ಮಾತು ಮೌನ ಭಾವ ಬಂಧದೊಳು
ಅವಳದೇ ಹೆಸರು

ಮೆಲು ಹೆಜ್ಜೆಯ ಗೆಜ್ಜೆ ದನಿಯಲಿ
ಒಲವು ಗೆಲುವಿನ ಚೆಲುವಿನೊಸಗೆಯಲಿ
ಲಾಲಿ ಸುವ್ವಾಲಿ ಸೋಬಾನೆ ಹಾಡಿನಲಿ
ಬದುಕಿನ ತೊಟ್ಟಿಲ ತೂಗುತ
ನೋವು ನಲಿವುಗಳ ಸಮನಿಸಲು
ತನ್ನದೇ ಭಾಷ್ಯ ಬರೆಯುವಲ್ಲಿ
ಎಲ್ಲೆಲ್ಲೂ ಅವಳೇ ಅವಳು

ಅವಳು ದೇವರಲ್ಲ
ಜೀವ ಬಳ್ಳಿಯ ಒಂದು ಚೂರಿಗೆ
ಹೊಸ ಉಸಿರನು ಬರೆದು
ಶಕ್ತಿಯ ಸುಧೆಯನು ಹಾಲಲಿ ಹೊಸೆದು
ಮಮತೆಯ ಬಗೆಯನು ಕಲಿಸುತ
ಅಕ್ಕರೆಯ ತಂಪಿಗೆ ಎದೆಗೊಡುವಳು

ಕೆಲವೊಮ್ಮೆ…
ಗಾಳಿ ಬಿರುಗಾಳಿಯಾಗಿ ಗತಿ ಬದಲಿಸಿದಾಗ
ತೆರೆಗಳು ಎಲ್ಲೆ ಮೀರಿ ನಡೆದಾಗ
ರಾಗನುರಾಗದಲಿ ಅಪಸ್ವರಗಳೇ ಅನುರಣಿಸಿ
ಒಳಗಿನ ಸಹನೆಯು ಸಣ್ಣಗೆ ನಲುಗಿದಾಗ
ಕಂಡೀತು ಅವಳಲ್ಲೂ ಒಂದಿಷ್ಟು ಸಣ್ಣತನ

ಆದರೂ….
ಅವಳಲ್ಲಿದೆ ಅದಕ್ಕೂ ಮಿಗಿಲಾದುದು
ಪ್ರಕೃತಿಯಂತೆ ನವೋಲ್ಲಾಸ ಸ್ನೇಹ ಶೃಂಗಾರ
ಸೃಷ್ಟಿ ಚೈತನ್ಯದ ಬೆಳಕಿನ ಬೆರಗು
ಅವಳ ಆಂತರ್ಯವನೊಮ್ಮೆ ಇಣುಕಿ ನೋಡಿದರೆ ಸಾಕು
ಪುಟ ಪುಟಗಳಲಿ ಚಿಗುರೊಡೆದು ನಿಂತ
ಜೀವನ ಪ್ರೀತಿಯ ಸ್ಫೂರ್ತಿಯ ಆಕರಗಳು

ಅವಳಿರುವಲ್ಲೆಲ್ಲಾ ಗಂಧದ ಗಾಳಿ
ಅಲ್ಲಲ್ಲಿ ಪರಿಮಳಿಸುತಲೇ
ನುಣ್ಣಗೆ ತೇಯುತಲೇ ಜೀವ ಸವೆಯುತವೆ
ಅವಳು ಕಂಡ ಕನಸುಗಳು ಇನ್ನೆಲ್ಲೋ
ಮೊಗ್ಗೊಡೆದು ಅರಳುತವೆ

*******************************************

15 thoughts on “ಅವಳು

  1. ಅರ್ಥಪೂರ್ಣವಾದ ಇಂದಿನ ದಿನಕ್ಕೆ ಭಾವಪೂರ್ಣವಾದ ಕಾವ್ಯವಿದು. ಅನಿತಾ ಅವರಿಗೆ ಮಹಿಳಾ ದಿನಾಚರಣೆಯ ಹಾರ್ದಿಕ ಅಭಿನಂದನೆಗಳು.

  2. ಅಭಿನಂದನೆ ಆನಿತಾ. ತುಂಬಾ ಭಾವಪೂರ್ಣ ; ಅಮೂಲ್ಯ!

  3. ತುಂಬಾ ಅರ್ಥಪೂರ್ಣ ಮತ್ತು ಭಾವ ಪೂರ್ಣ ಸಾಲುಗಳು. ನಿಮ್ಮ ಬರವಣಿಗೆಯನ್ನು ಬಹಳಷ್ಟು ಇಷ್ಟಪಡುವೆ. ಉತ್ತಮ ಕವಿತೆ ರಚಿಸಿ, ಓದಿಗೆ ನೀಡಿದ್ದಕ್ಕಾಗಿ ವಂದನೆಗಳು.

  4. Very much meaningful, a few stanza makes urs eyswet, and bcom thoughtfull to know depth of AVALU

  5. Tumbane Bhava purna kavya nima kavya odi namagu nima hage kavitri aaga beku emba hambala. Nimage abhinandane

  6. ನಾನು ಊರಿನಲ್ಲಿದ್ದುದರಿಂದ ಕೂಡಲೆ ಪ್ರತಿಕ್ರಿಯೆಯನ್ನು ಬರೆಯಲಾಗಲಿಲ್ಲ. ಮಹಿಳಾ ದಿನಾಚರಣೆಯ ಸಲುವಾಗಿ ಬರೆದ ಈ ಕವನದಲ್ಲಿ ಮಹಿಳೆಯ ಪಾತ್ರ ನಮ್ಮ ದೈನಂದಿನ ಬದುಕಿನಲ್ಲಿ ಎಷ್ಟು ಮಹತ್ತರವಾದದ್ದು ಎಂಬುದನ್ನು ಸಾರಿ ಹೇಳಲಾಗಿದೆ. ಅನಿತಾ ಅವರಿಗೆ ಅಭಿನಂದನೆಗಳು ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ ಅವರಿಗೆ ಶುಭಾಶಯಗಳನ್ನು ತಡವಾಗಿ ಸಲ್ಲಿಸುತ್ತಿದ್ದೇನೆ.

Leave a Reply

Back To Top