ಕವಿತೆ
ನೆನಪಿನ ಅಲೆ….
ಅಕ್ಷತಾ ಜಗದೀಶ
ನೆನಪಿನ ಅಲೆಗಳ ಮೇಲೆ
ಸಾಗಿದೆ ದೂರ ಬಾಳಿನ ನೌಕೆ
ದೀವಟಿಗೆ ಇಲ್ಲದ ಪಯಣ
ಮಿನುಗು ತಾರೆಯ ಕಂಡು
ಹಣತೆ ಎಂಬ ಭ್ರಮೆಯಲಿ
ನಾಳೆಯ ಕನಸುಗಳ ಬೆನ್ನಟ್ಟಿ
ಬಿಸಿಲು ಕುದುರೆ ಏರಿದೆ ಬದುಕು
ಸಾಗುತಲಿದೆ ಏನು ಅರಿಯದೆ
ಬದುಕಿನ ಅರ್ಥ ಗ್ರಹಿಸಲು
ಸಾರ್ಥಕತೆಯ ಭಾವ ಹೊಂದಲು…
ನಿನ್ನೆ ನಾಳೆಗಳ ನಡುವೆ ಸಿಲುಕಿ
ವಾಸ್ತವದ ಬೆಳಕ ಹುಡುಕಲು
ಅಗೋಚರದಂತಿಹ ಗುರಿಯನು
ಅರ್ಥಪೂರ್ಣವಾಗಿಸುವ ಹಂಬಲದಿ
ಸಾಗಿದೆ ದೂರ ಬಾಳಿನ ನೌಕೆ
ನೆನಪಿನ ಅಲೆಗಳ ಮೇಲೆ……
*********************************