ಅಮ್ಮು
ಶೀಲಾ ಭಂಡಾರ್ಕರ್
“ಮಾಯಿ ಕಳಿಸ್ತೀರಿ ಅಲ್ವಾ? ನಾನಿದ್ದೇನಲ್ಲಾ! ಹೆದರಬೇಡಿ.”
“ಅವಳಿನ್ನೂ ಚಿಕ್ಕವಳಲ್ವಾ? ತಲೆ ಬಾಚಲು, ಜಡೆ ಹಾಕಲು ಬರುವುದಿಲ್ವಲ್ಲಾ? ಮೂರು ದಿನ ಅಂದ್ರೆ ಕಷ್ಟ ಆಗ್ತದೆ ಅಮ್ಮು”
” ಜಡೆ ಹಾಕಿಕೊಡ್ತೇನೆ, ಅವಳನ್ನು ಚಂದ ಮಾಡಿ ನೋಡಿಕೊಳ್ತೇನೆ. ಆಯ್ತಾ. ಕಳಿಸಿ ಆಯ್ತಾ. ಇದೇ ಊರಲ್ವಾ, ಏನೂ ಆಗುದಿಲ್ಲ.”
ಅಂದಾಗ ಅಮ್ಮ ಹೂಂ ಅನ್ನದೇ ವಿಧಿ ಇರಲಿಲ್ಲ.
ಹೂಂ ಅನ್ನುವ ಶಬ್ದ ಇನ್ನೂ ಬಾಯಿಯಿಂದ ಹೊರ ಬರುವುದರೊಳಗೆ ಅಮ್ಮುಓಡಿಹೋಗಿ ಆಗಿತ್ತು.
ಆ ಕೂಡಲೇ ಬಸ್ ಸ್ಟ್ಯಾಂಡಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯಶೋದಾ ಟೀಚರಿಗೆ ವಿಷಯ ಮುಟ್ಟಿಸಿ ಮತ್ತೆ ಓಡಿ ಬಂದಳು ಅಮ್ಮು.
ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸಣ್ಣ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿ ನಂತರ ಐದನೇ ತರಗತಿಗೆಂದು ಹೈಯರ್ ಪ್ರೈಮರಿಗೆ ಸೇರಿದ ಹೊಸತು. ಅಮ್ಮು ತನ್ನ ಉಮೇದಿಯಲ್ಲೇ ನನ್ನನ್ನು ಬುಲ್‍ಬುಲ್ ಗೆ ಸೇರಿಸಿದಳು.
ನನಗಿಂತ ಎರಡು ತರಗತಿ ಮುಂದಿದ್ದ ಅಮ್ಮು ಬುದ್ಧಿಯಲ್ಲೂ, ಎಲ್ಲಾ ವಿಷಯಗಳಲ್ಲೂ ನನಗಿಂತ ಎಷ್ಟೋ ದೊಡ್ಡವಳಂತೆ ಇದ್ದಳು.
ಯಶೋದಾ ಟೀಚರ್, ಇವಳನ್ನು ಸೇರಿಸಿದರೆ ಈಗ ಅವಳ ಅಳತೆಯ ಯೂನಿಫಾರಂ ಇಲ್ಲ, ಬೆಲ್ಟ್ ಇಲ್ಲ, ಸ್ಕಾರ್ಫ್ ಇಲ್ಲ ಏನೂ ಇಲ್ಲ.. ಈಗ ಇವಳನ್ನು ಸೇರಿಸುವುದು ಹೇಗೆ ಎಂದರೂ ಕೇಳದೆ ಹೇಗೋ ನನ್ನ ಅಳತೆಯ ಯೂನಿಫಾರಮನ್ನು ಸಂಪಾದಿಸಿದಳು.
ಕೆಲವೇ ದಿನಗಳಲ್ಲಿ ನಮ್ಮೂರಲ್ಲೇ ಸ್ವಲ್ಪ ದೂರದಲ್ಲಿದ್ದ ಶಾರದಾ ಹೈಸ್ಕೂಲಲ್ಲಿ ಬುಲ್‌ಬುಲ್ ಕ್ಯಾಂಪ್ ಇತ್ತು.
ಬೆಲ್ಟ್, ಸ್ಕಾರ್ಫ್ ಇಲ್ಲದವರು ಬರುವುದು ಬೇಡ ಎಂದರೂ, ನನಗೋಸ್ಕರ ಅಮ್ಮು ಅವರತ್ರ ವಾದ ಮಾಡಿ ಹೇಗೋ ಟೀಚರನ್ನು ಒಪ್ಪಿಸಿದಳು.
ಕೊನೆಗೆ ಉಪಾಯ ಇಲ್ಲದೆ ಟೀಚರ್ ಅವಳ ಮನೆಯಲ್ಲಿ ಕಳಿಸುತ್ತಾರಾ ಕೇಳಿ ಬಾ ಎಂದಿದ್ದಕ್ಕೆ, ನನ್ನ ಅಮ್ಮನನ್ನೂ ಒಪ್ಪಿಸಿ ಅಂತೂ ನಾನೂ ನನ್ನ ಜೀವಮಾನದಲ್ಲಿ ಬುಲ್‌ಬುಲ್ ಕ್ಯಾಂಪಿನಲ್ಲಿ ಭಾಗವಹಿಸುವಂತೆ ಮಾಡಿದಳು ಅಮ್ಮು.
ಹಿಂದಿನ ದಿನವೇ ಕ್ಯಾಂಪಿಗೆ ಹೋಗುವ ತಯಾರಿ ನಡೆದಿತ್ತು. ಒಂದು ಚೀಲದಲ್ಲಿ, ಟವೆಲು, ಸೋಪು, ಬ್ರಷ್, ಪೇಸ್ಟ್ ಜೊತೆಗೆ ಎರಡು ಬೆಡ್ ಶೀಟ್‍ಗಳು ಒಂದು ಹಾಸಲು, ಇನ್ನೊಂದು ಹೊದೆಯಲು. ಒಂದು ಊಟದ ತಟ್ಟೆ, ಒಂದು ಲೋಟ. ತಿಂಡಿ, ಊಟ ಎರಡಕ್ಕೂ ಒಂದೇ ತಟ್ಟೆ ಸಾಕು ಅಂದಳು ಅಮ್ಮು.
ಅಂತೂ ಮಾರನೆಯ ಬೆಳಿಗ್ಗೆ ನಾವು ಶಾಲೆಯ ಹತ್ತಿರ ಸೇರಿ ಅಲ್ಲಿಂದ ಕ್ಯಾಂಪಿಗೆ ಹೋದೆವು.
ಅಲ್ಲಿ ಸಭಾ ಕಾರ್ಯಕ್ರಮ, ಮಾರ್ಚ್ ಫಾಸ್ಟ್ ಎಲ್ಲಾ ನಡೆಯುವಾಗ ನಾನೆಲ್ಲೋ ಅಮ್ಮು ಎಲ್ಲೋ. ಆದರೂ ಎಲ್ಲಿದ್ದರೂ ಒಂದು ಕಣ್ಣು ನನ್ನ ಮೇಲೆಯೇ ಇಟ್ಟಿರುತಿದ್ದಳು.
ಆಗ ನನಗೆ ಮಾತು ಕಡಿಮೆ, ಧೈರ್ಯವೂ ಕಡಿಮೆ, ಶಕ್ತಿಯೂ ಕಡಿಮೆ ಎನ್ನುವ ಹಾಗೆ, ಬಲವೇ ಇಲ್ಲದಂತೆ ಮಾರ್ಚ್ ಫಾಸ್ಟಲ್ಲಿ ನಡೆಯುತಿದ್ದಾಗ, ಯಾರೋ ಬೇರೆ ಶಾಲೆಯ ಟೀಚರು, ಬೆಲ್ಟ್ ಇಲ್ಲ, ಸ್ಕಾರ್ಫ್ ಇಲ್ಲ, ಶೂ ಇಲ್ಲ , ಹೋಗಲಿ ಎಂದರೆ ಸೊಂಟಕ್ಕೆ ಬಲವೂ ಇಲ್ಲ ಎಂದು ನನ್ನ ಕಡೆ ಕೈ ತೋರಿಸಿ ಹೇಳಿದಾಗ, ಫಳಕ್ಕನೆ ಗಂಗಾ ಭಾಗೀರಥಿ ಇಳಿಯಲು ಶುರುವಾಯ್ತು. ಮೊದಲ ದಿನವೇ ನನಗೆ ಬೇಜಾರಾಗಿ ಮುಖ ಸಣ್ಣದು ಮಾಡಿ ಇದ್ದಿದ್ದು ಅಮ್ಮುನ ಕಣ್ಣಿಗೆ ಬಿದ್ದ ಕೂಡಲೇ ಹತ್ತಿರ ಬಂದು, “ಯಾರು ಏನು ಬೇಕಾದರೂ ಅನ್ನಲಿ, ನೀನು ಖುಷಿಯಿಂದ ಇರು ಗೊತ್ತಾಯ್ತಾ.” ಅಂದಳು.
ಸಂಜೆಯಲ್ಲೂ ಏನೋ ಕಾರ್ಯಕ್ರಮಗಳು ಇದ್ದವು. ರಾತ್ರಿ ಊಟದ ಸಮಯ ಆಗುತಿದ್ದಂತೆ ಎಂದೂ ಮನೆ ಬಿಟ್ಟು ಹೊರಗೆ ಹೋಗದಿದ್ದ ನನಗೆ ಮನೆ, ಅಪ್ಪ- ಅಮ್ಮ, ತಮ್ಮ, ತಂಗಿ ಎಲ್ಲರೂ ನೆನಪಾಗತೊಡಗಿದರು. ಎಲ್ಲಾ ಬಿಟ್ಟು ಮನೆಗೆ ಹೋಗಬೇಕು ಅನಿಸುತ್ತಿತ್ತು.
“ಅಮ್ಮೂ..” ಅಂದರೆ, “ನಾನಿದ್ದೇನಲ್ಲ, ನೋಡು, ನಿನ್ನ ಹತ್ರವೇ ಇರ್ತೇನೆ. ಎದ್ದು ಎಲ್ಲೂ ಹೋಗ್ಬೇಡ. ಇವತ್ತು ಶುರು ಅಲ್ವಾ ಹಾಗೇ ಆಗ್ತದೆ. ನಾಳೆಯಿಂದ ಅಭ್ಯಾಸ ಆಗಿ ಮನೆಗೆ ಹೋಗುವುದೇ ಬೇಡ ಅನಿಸುತ್ತದೆ ನೋಡು ಬೇಕಾದ್ರೆ” ಅಂದಳು.
ಅಮ್ಮೂ.. ಅನುರಾಧಾ ಅವಳ ಹೆಸರು. ದೇವಸ್ಥಾನದ ಸುತ್ತ ವಠಾರದಲ್ಲಿದ್ದ ಒಟ್ಟು ಎಂಟು ಮನೆಗಳಲ್ಲಿ ನಾವು ಬಾಡಿಗೆಗೆ ಬಂದಾಗ ಆ ದೇವಸ್ಥಾನದ ಅರ್ಚಕರು ರಾಮಚಂದ್ರ ಭಟ್ಟರ ಮಗಳು ಅನುರಾಧಾ. ಎಲ್ಲರೂ ಅವಳನ್ನು ಅಮ್ಮೂ ಎಂದೇ ಕರೆಯುತಿದ್ದಿದ್ದು. ಅವಳು ನನ್ನನ್ನು ಏನೆಂದು ಕರೆಯುತಿದ್ದಳೋ ನೆನಪಿಲ್ಲ. ನಾನು ಅವಳನ್ನು ಅಮ್ಮು ಎಂದೇ ಕರೆಯುತಿದ್ದೆ.
ನೋಡಲು ತುಂಬಾ ಸುಂದರವಾಗಿದ್ದಳು. ತನಗಿಂತ ಚಿಕ್ಕವರ ಮೇಲೆ ತುಂಬಾ ಕಾಳಜಿ ವಹಿಸುತಿದ್ದಳು.
ರಾತ್ರಿ ಮಲಗುವಾಗ ದಿಂಬು ಇಲ್ಲವೆಂದು ಅವಳ ತೋಳಿನ ಮೇಲೆ ನನಗೆ ತಲೆ ಇಟ್ಟು ಮಲಗು ಎಂದಳು. ಹೇಗೋ ಮಲಗಿ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ ಬಂದ ಕೂಡಲೇ ನನ್ನ ತಲೆ ಬಾಚಿ ಎರಡು ಜಡೆ ಹೆಣೆದಳು. ನನಗಿಂತ ಮೊದಲೇ ಎದ್ದು ಎಲ್ಲಾ ಮುಗಿಸಿ ತಯಾರಾಗಿದ್ದಳು ಅವಳು.
ಬೆಳಗ್ಗಿನ ತಿಂಡಿಗೆಂದು ಸಾಲಲ್ಲಿ ನಿಂತಿದ್ದಾಗ “ನಿನಗೆ ಇಷ್ಟ ಆಗ್ತದೋ ಇಲ್ವೊ ತಿಂಡಿ, ನನಗಾದ್ರೆ ಅಭ್ಯಾಸ ಇದೆ. ನೀನು ಇದೇ ಮೊದಲು ಅಲ್ವಾ ಬರೋದು” ಅನ್ನುವಾಗ ಎಷ್ಟು ದೊಡ್ಡ ಹುಡುಗಿ ಇವಳು ಅನಿಸಿತ್ತು.
ಬೇಯಿಸಿದ ಹೆಸರು ಕಾಳಿನ ಉಸ್ಲಿ ನನಗೇನೋ ಬಹಳ ರುಚಿ ಅನಿಸಿತು. ಜೊತೆಗೆ ರಾಗಿ ಮಾಲ್ಟ್ ಮತ್ತು ಬಿಸ್ಕೆಟ್. ನಾನು ಆಸೆಯಿಂದ ತಿನ್ನುವುದನ್ನು ನೋಡಿ ಅಮ್ಮುಗೆ ಖುಷಿಯೋ ಖುಷಿ.
ನನಗೂ ಒಂದು ರೀತಿ ಕ್ಯಾಂಪ್ ಚೆನ್ನಾಗಿದೆ ಅನಿಸಲು ಶುರುವಾಯ್ತು. ಆವತ್ತಿನ ಕಾರ್ಯಕ್ರಮಗಳು ಏನೇನು ಇದ್ದವೋ ನೆನಪಿಲ್ಲ. ನಮ್ಮ ಅಮ್ಮು ಹಾಡು, ನೃತ್ಯ ಎಂದು ಎಲ್ಲದರಲ್ಲೂ ಎಲ್ಲರೂ ಗುರುತಿಸುವಂತಿದ್ದಳು.
ಮತ್ತೆ ರಾತ್ರಿಯಾಯ್ತು, ಮನೆಯ ನೆನಪೇನೂ ಆಗಲಿಲ್ಲ. ಬೆಳಗಾಯ್ತು, ಇವತ್ತು ಸಂಜೆ ಆರು ಗಂಟೆಗೆ ಮುಗೀತದೆ, ಮನೆಗೆ ಹೋಗುವುದು. ಮದ್ಯಾಹ್ನ ಊಟ ಆದ ಕೂಡಲೇ ನಮ್ಮ ನಮ್ಮ ವಸ್ತುಗಳನ್ನು ಚೀಲಕ್ಕೆ ಹಾಕಿ ಇಡಬೇಕು ಎಂದು ಬೆಳಿಗ್ಗೆಯೇ ಅಮ್ಮು ಹೇಳಿದ್ದಳು.
ಮದ್ಯಾಹ್ನ ಊಟ ಆಗಿ ಚೀಲಗಳಿಗೆ ನಮ್ಮ ನಮ್ಮ ವಸ್ತುಗಳನ್ನು ಸೇರಿಸುವುದರೊಳಗೆ ನಮ್ಮ ಯಶೋದಾ ಟೀಚರ್ ಬಂದು ಅನುರಾಧಾ ಅನುರಾಧಾ ಎಂದು ಕರೆದರು. ಕೂಡಲೇ ಎದ್ದು ಹೋದ ಅಮ್ಮು ಹತ್ತು ನಿಮಿಷಗಳಲ್ಲೇ ತಿರುಗಿ ಬಂದು. “ನೋಡು, ಎಲ್ಲೂ ಹೋಗ್ಬೇಡ. ಯಾರ ಹತ್ರವೂ ಮಾತಾಡ್ಬೇಡ. ನಾನಿಲ್ಲೇ ಇದ್ದೇನೆ. ನೀನು ಕಾರ್ಯಕ್ರಮ ನೋಡಲು ಎದುರಿಗೆ ಕೂತ್ಕೊ. ನಂಗೆ ಸ್ವಲ್ಪ ಕೆಲಸ ಇದೆ.” ಎಂದು ಹೋದಳು.
ಕಾರ್ಯಕ್ರಮ ಶುರುವಾಗಲು ಇನ್ನೂ ತುಂಬಾ ಹೊತ್ತು ಇತ್ತು. ನಮ್ಮ ಇಬ್ಬರ ಚೀಲಗಳನ್ನೂ ಜೊತೆಯಲ್ಲಿಟ್ಟಕೊಂಡು ಒಬ್ಬಳೇ ಕೂತೆ.
ವೇದಿಕೆ ತಯಾರಾಯ್ತು, ಕಾರ್ಯಕ್ರಮ ಶುರುವಾಯ್ತು. ಸಮಾರೋಪ ಸಮಾರಂಭ.
ಭಾಷಣಕ್ಕೆ ಮೊದಲೇ ಯಾರೋ ಹೇಳಿದರು. “ಈ ಕಾರ್ಯಕ್ರಮದ ಕೊನೆಯಲ್ಲಿ ನಿಮಗೆಲ್ಲರಿಗೂ ಖುಷಿಕೊಡುವ ಸಂಗತಿ ಒಂದಿದೆ. ಎಲ್ಲರೂ ತಾಳ್ಮೆಯಿಂದ ಕಾಯಿರಿ.”
ಏನಿರಬಹುದು? ಹತ್ತಿರದಲ್ಲಿ ಅಮ್ಮು ಇದ್ದಿದ್ದರೆ ಅವಳನ್ನಾದರೂ ಕೇಳಿ ತಿಳಿದುಕೊಳ್ಳಬಹುದಿತ್ತು. ಏನು ಕೆಲಸ ಇದೆಯೋ ಪಾಪ ಅವಳಿಗೆ. ಆದರೂ ಅಮ್ಮನಿಂದ ದೂರವಾದ್ದಕ್ಕಿಂತ ಹೆಚ್ಚಿನ ದುಃಖ ಅಮ್ಮು ಹತ್ತಿರ ಇಲ್ಲವೆಂದು ಆಗಿತ್ತು.
ಭಾಷಣಗಳನ್ನು ಕೇಳುವ ವಯಸ್ಸೂ ನನ್ನದಿರಲಿಲ್ಲ. ಯಾರು ಏನು ಮಾತನಾಡಿದರು ಎಂಬುದು ಒಂದೂ ಅರ್ಥವಾಗದೇ ತಲೆಯ ಮೇಲಿನಿಂದ ಹಾರಿಹೋಗುತ್ತಾ ಇತ್ತು.
ಕೊನೆಯಲ್ಲಿ “ಈಗ ನೀವೆಲ್ಲಾ ಕಾಯುತ್ತಿದ್ದ ಸಮಯ ಹತ್ತಿರ ಬರುತ್ತಿದೆ. ಯಾವುದೋ ರಾಜ್ಯದ ರಾಜಕುಮಾರಿ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನೀವೆಲ್ಲಾ ಶಾಂತರಾಗಿ ಕೂತು ಗಲಾಟೆ ಮಾಡದೆ ಶಿಸ್ತಿನಿಂದ ಕೂತುಕೊಳ್ಳಿ. ರಾಜಕುಮಾರಿಯವರು ನಿಮಗೆಲ್ಲರಿಗೂ, ಪ್ರತಿಯೊಬ್ಬರಿಗೂ ಒಂದೊಂದು ಉಡುಗೊರೆ ಕೊಡಲಿದ್ದಾರೆ” ಎಂದು ಹೇಳಿದಾಗ. ಈಗಲಾದರೂ ಅಮ್ಮು ಬರಬಾರದೇ? ಅವಳಿಗೆ ಉಡುಗೊರೆ ತಪ್ಪಿ ಹೋಗುತ್ತದಲ್ಲಾ ಏನು ಮಾಡೋದು? ಛೆ! ನನ್ನ ಚಡಪಡಿಕೆ ಯಾರಿಗೂ ತಿಳಿಯುತ್ತಿರಲಿಲ್ಲ.
ಬ್ಯಾಂಡ್ ಶಬ್ದದೊಂದಿಗೆ ರಾಜಕುಮಾರಿಯ ಆಗಮನ. ಅಬ್ಬಾ ಎಷ್ಟು ಚಂದ! ಸಿನೆಮಾದಲ್ಲಿ ನೋಡಿದ, ಚಂದಮಾಮದಲ್ಲಿನ ಚಿತ್ರಗಳಲ್ಲಿದ್ದಂತೆಯೇ ಝಗಝಗನೆ ಹೊಳೆಯುವ ಒಡವೆ, ಕಿರೀಟ, ಸುಂದರ ಬಟ್ಟೆಗಳನ್ನು ಧರಿಸಿ ಬಂದ ರಾಜಕುಮಾರಿಯನ್ನೊಮ್ಮೆ ಸರಿಯಾಗಿ ದಿಟ್ಟಿಸಿ ನೋಡಿದರೆ “ನನ್ನ ಅಮ್ಮು”.
ದೇವರೇ!! ಇವಳು ನಿಜವಾಗಲೂ ರಾಜಕುಮಾರಿಯೇ. ಈ ಲೋಕದವಳಲ್ಲ. ಅದು ಹೇಗೆ ನನ್ನ ಜೊತೆಯಾದಳೋ.. ನನ್ನ ಜೊತೆಯಲ್ಲೇ ಇದ್ದ, ನನಗೆ ತಲೆಬಾಚಿ ಜಡೆ ಹೆಣೆದ, ನನಗೆ ತಿಂಡಿ ಇಷ್ಟ ಆಗುತ್ತದೋ ಇಲ್ಲವೊ ಎಂದು ಕಾಳಜಿ ವಹಿಸಿದ ಅಮ್ಮು ಇವಳೇನಾ? ಇದ್ದಕ್ಕಿದ್ದಂತೆ ನಾನು ಅವಳಿಂದ ಎಷ್ಟೋ ದೂರ ಹೋದ ಹಾಗೆ ಅನಿಸಿತು.
ನನ್ನ ಮನಸ್ಸಿನಲ್ಲಾಗುವ ಯಾವುದೇ ವಿಚಾರಗಳು ಅಮ್ಮುಗೆ ತಿಳಿಯದೆ ಅವಳ ಪಾಡಿಗೆ ಅವಳು ರಾಜಕುಮಾರಿಯಾಗಿ ನಗುಮೊಗದಿಂದ ವೇದಿಕೆಯ ಮೇಲೆ ಎಲ್ಲರ ಕಣ್ಣು ಕುಕ್ಕುವಷ್ಟು ಸುಂದರವಾಗಿ ಕೂತಿದ್ದಳು.
ಈಗ ಸಮಯ ಬಂತು ರಾಜಕುಮಾರಿಯಿಂದ ಎಲ್ಲರಿಗೂ ಉಡುಗೊರೆಯ ವಿತರಣೆ. ದೊಡ್ಡದೊಂದು ಚೀಲವನ್ನು ಯಾರೋ ತಂದು ಅವಳ ಕೈಗೆ ಕೊಟ್ಟರು. ಅವಳು ಅದರ ಬಾಯಿ ತೆರೆದು ಹಿಡಿದುಕೊಂಡಿದ್ದಳು. ಒಬ್ಬೊಬ್ಬರಾಗಿ ಮಕ್ಕಳು ಸ್ಟೇಜ್ ಹತ್ತಿ ಚೀಲದೊಳಗೆ ಕೈ ಹಾಕಿ ಏನು ಸಿಗುತ್ತದೋ ಅದನ್ನು ತೆಗೆದುಕೊಂಡು ಇಳಿಯಬೇಕು.
ಎಲ್ಲರೂ ಸಹಜವಾಗಿ ಹೋಗಿ ಕೈಗೆ ಸಿಕ್ಕಿದ್ದನ್ನು ತಂದು ಅದನ್ನು ನೋಡುವುದರಲ್ಲಿ ಮಗ್ನರಾಗಿದ್ದರು. ನನಗೋ ನನ್ನ ಅಮ್ಮು ಎಂಬ ಸಲುಗೆ ಹೋಗಿ ಅವಳ್ಯಾರೋ ರಾಜಕುಮಾರಿ ಎನ್ನುವ ಆಶ್ಚರ್ಯವೂ ಸೇರಿ ಅತ್ಯಂತ ಗೊಂದಲಕ್ಕೊಳಗಾಗಿ ನಿಂತಿದ್ದೆ.
ಅಲ್ಲಿಂದಲೇ ರಾಜಕುಮಾರಿ ನನ್ನನ್ನು ನೋಡಿ ನಗುತ್ತಾ ಕಣ್ಣಿನಿಂದಲೇ ಕರೆದಳು. ತಕ್ಷಣಕ್ಕೆ ನನಗಾದ ಖುಷಿ, ಸಂಭ್ರಮ, ನನ್ನ ಅಮ್ಮು ನನಗೆ ಸಿಕ್ಕಿದ ಸಂತೋಷ ಹೇಳ ತೀರದು.
ನಾನೂ ವೇದಿಕೆ ಹತ್ತಿ ಚೀಲದೊಳಗೆ ಕೈ ಹಾಕುವಾಗ ಹತ್ತಿರದಿಂದ ಅಮ್ಮುವನ್ನು ನೋಡಿ ಹಿಗ್ಗಿ ಹೋದೆ. ಕೈಗೆ ಸಿಕ್ಕಿದ ಇಷ್ಟುದ್ದದ ರಬ್ಬರ್ ಎಷ್ಟೊ ವರ್ಷಗಳವರೆಗೆ ನನ್ನ ಹತ್ತಿರ ಜೋಪಾನವಾಗಿ ಇಟ್ಟುಕೊಂಡಿದ್ದೆ.
ಕ್ಯಾಂಪ್ ಮುಗಿದು ಎಷ್ಟೋ ದಿನಗಳವರೆಗೆ ಅಮ್ಮು ರಾಜಕುಮಾರಿ ಆಗಿದ್ದು ಮಾತ್ರ ಮರೆಯಲು ಆಗದಷ್ಟು ಸುಂದರ ಅನುಭವವಾಗಿತ್ತು.
ಮುಂದೆ ಮೈಸೂರು ಟ್ರಿಪ್ ಹೋದಾಗಲೂ ಅಮ್ಮು ನನಗೆ ಇದೇ ರೀತಿ ಜೊತೆಯಾಗಿದ್ದಳು.
ನಂತರ ಮುಂದಿನ ವರ್ಷ ನಮ್ಮ ತಂದೆಗೆ ಸಾಲೆತ್ತೂರಿಗೆ ವರ್ಗವಾದಾಗ ಊರು ನೋಡಲೆಂದು ಹೋಗಿದ್ದ ಅಮ್ಮನಿಗೆ ಅಲ್ಲಿಯ ವಾತಾವರಣ ಇಷ್ಟವಾಗಿ ನಾವೆಲ್ಲಾ ಆ ಊರಿಗೆ ಹೋಗುವುದೆಂದಾಯಿತು.
ನಾವು ಹೋಗುತ್ತೇವೆಂದು ಪಾಣೆಮಂಗಳೂರಿನ ಪ್ರತಿಯೊಬ್ಬರಿಗೂ ಒಬ್ಬರಿಂದ ಒಬ್ಬರಿಗೆ ತಿಳಿಯಿತು. ಪ್ರತಿಯೊಬ್ಬರೂ ಬಂದು, ಯಾಕೆ ಊರು ಬಿಟ್ಟು ಹೋಗುತ್ತೀರಿ ಎಂದು ವಿಚಾರಿಸುತಿದ್ದರು.
ಒಂದು ದಿನ ಬೆಳಿಗ್ಗೆಯೇ “ಮಾಯಿ..ಮಾಯೀ” ಎಂದು ಕರೆದದ್ದು ಕೇಳಿಸಿತೆಂದು ಅಮ್ಮ ಹೊರಗೆ ಬಂದರೆ, ಅಮ್ಮು..” ನೀವು ಹೋಗುವುದು ನಿಜವಾ?”
ಅಮ್ಮ ಅವಳನ್ನು ಒಳಗೆ ಕರೆದರು. ಒಳಗೆ ಬಂದು ತಲೆ ತಗ್ಗಿಸಿ ನಿಂತು. “ನೀವು ಹೋಗಬೇಡಿ. ನೀವು ಹೋದರೆ ನಮಗೆ ಬೇಜಾರಾಗ್ತದೆ. ನಮ್ಮಿಂದ ಏನಾದ್ರೂ ತಪ್ಪಾಗಿದೆಯಾ?” ಇಷ್ಟು ಚಿಕ್ಕ ಹುಡುಗಿ ಏನಾದರೂ ತಪ್ಪಾಯ್ತಾ ಎಂದು ಕೇಳುತಿದ್ದಾಳಲ್ಲಾ ಎಂದು ಅಮ್ಮನಿಗೆ ಕಣ್ಣುಗಳು ತುಂಬಿ ಬಂದವು.
“ಯಾರು ಹೇಳಿಕೊಟ್ರು ನಿನಗೆ” ಎಂದು ಕೇಳಿದರೆ.. ನಿನ್ನೆ ರಾತ್ರಿ ಅಪ್ಪ ತುಂಬಾ ಬೇಜಾರಾಗಿ ಹೇಳ್ತಾ ಇದ್ರು. “ಯಾಕೆ ಹೋಗ್ತಿದ್ದಾರೆ ಅವರು. ನಮ್ಮಿಂದೇನಾದ್ರೂ ತಪ್ಪಾಗಿದೆಯಾ?
ನನಗೆ ರಾತ್ರಿ ಇಡೀ ನಿದ್ದೆ ಬಂದಿಲ್ಲ. ಅದಕ್ಕೆ ಓಡಿ ಬಂದೆ ತಪ್ಪಾಗಿದ್ದರೆ ಸರಿ ಮಾಡಿದರೆ ಆಯ್ತು. ನೀವು ಇಲ್ಲೇ ಇರುತ್ತೀರಿ ಅಲ್ವಾ ಆಗ.”
ನಾವು ಮತ್ತೆ ಇಲ್ಲಿಗೇ ಬರ್ತೇವೆ ಒಂದೇ ವರ್ಷಕ್ಕೋಸ್ಕರ ಹೋಗುವುದು ಎಂದೆಲ್ಲಾ ಹೇಳಿ ಅಮ್ಮ ಅವಳನ್ನು ಸಮಾಧಾನ ಮಾಡಿದರು.
ಇಡೀ ಊರೇ ನಮ್ಮ ಸಾಮಾನು ಸಾಗಿಸಲು, ನಮ್ಮನ್ನು ಬಿಡಲೆಂದು ನಮ್ಮ ಜೊತೆ ಬಂದಿತ್ತು ಎಂದರೆ ಇವತ್ತಿಗೂ ಆಶ್ಚರ್ಯ.
ಅಮ್ಮು ಆಮೇಲೆ ದೊಡ್ಡವಳಾಗಿ ಮದುವೆ ಆಗಿ ಹೋಗಿದ್ದೊಂದು ಗೊತ್ತು. ಆ ನಂತರ ಅವಳನ್ನು ನೋಡಿಯೇ ಇಲ್ಲ ನಾನು.
ಈಗಲೂ ನನಗೆ ಅಮ್ಮು ನೆನಪಾದಾಗ ಮತ್ತೆ ನಾವಿಬ್ಬರೂ ಚಿಕ್ಕವರಾಗಬೇಕು. ಅವಳ ನಿಸ್ವಾರ್ಥ ಪ್ರೀತಿ, ಕಾಳಜಿಗಳನ್ನು ಮನಸ್ಪೂರ್ತಿಯಾಗಿ ಅನುಭವಿಸಬೇಕು.
ಆ ದಿನಗಳನ್ನು ಮತ್ತೊಮ್ಮೆ ಜೀವಿಸಬೇಕು. ಎಂದೆಲ್ಲಾ ಅನಿಸುವುದಿದೆ.
************************************************************
ಚನ್ನಾಗಿದೆ
ತುಂಬಾ ಆತ್ಮೀಯವಾದ ಲೇಖನ
ಧನ್ಯವಾದಗಳು ಅಕ್ಕಾ.
ಧನ್ಯವಾದಗಳು
ಆತ್ಮೀಯ ಅಮ್ಮು, ತುಂಬಾ ಚೆನ್ನಾಗಿದೆ.
ಧನ್ಯವಾದಗಳು
ಚೆಂದ ನೆನಪಿನ ನಿರೂಪಣೆ
ಲೇಖನ ತುಂಬಾ ಚೆನ್ನಾಗಿ ಬಂದಿದೆ. ನಾನು ಪಾಣೆಮಂಗಳೂರು, ಸಾಲೆತ್ತೂರು, ಶಾರದಾ ಹೈಸ್ಕೂಲ್ ಎಲ್ಲಾ ಕಡೆ ಆ ದಿನ ಹೋದ ನೆನಪುಗಳು ನುಸುಳಿ ಮುದಕೊಟ್ಟಿತು.