ಪುಸ್ತಕ ಸಂಗಾತಿ
ಜೇನು ಮಲೆಯ ಹೆಣ್ಣು-
ಕವನ ಗುಚ್ಛ
ನೂತನ ದೋಶೆಟ್ಟಿಯವರಿಂದ ಒಂದು ಸಹೃದಯ ವಿಮರ್ಶೆ
ಲೇಖಕಿ ಹೆಚ್ ಆರ್ ಸುಜಾತಾ ಅವರ ಅಭಿವ್ಯಕ್ತಿ ಕಾವ್ಯಮಾರ್ಗದಲ್ಲಿ ಬಹಳ ಸುಂದರ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮರಸು ಹೊಸಳ್ಳಿ ಯುವರಾದ ಅವರ ಕವಿತೆಗಳಲ್ಲಿ ಮಲೆನಾಡಿನ ಪ್ರಕೃತಿಯ, ಸಾಮಾಜಿಕ ಜೀವನದ ದಟ್ಟ ಪರಿಸರವಿರುತ್ತದೆ. ಇವರ ಜೇನು ಮಲೆಯ ಹೆಣ್ಣು ಕವನಗುಚ್ಛ ಈ ಎಲ್ಲವನ್ನೂ ಮೈಳೈಸಿಕೊಂಡ ಪುಷ್ಕಳವಾದ ಕಾವ್ಯ ವಿಹಾರವೇ ಸರಿ.
2020 ರ ಕೊರೊನಾ ದಿಗ್ಬಂಧನದ ಸಮಯದಲ್ಲಿ ಬಿಡುಗಡೆಯಾದ ಇವರ ಈ ಕೃತಿಗೆ ದೊರೆತ ಸ್ವಾಗತ ಹಾಗೂ ಪ್ರತಿಕ್ರಿಯೆ ಸಧ್ಯದಲ್ಲಿ ಬಿಡುಗಡೆಯಾದ ಯಾವುದೇ ಕೃತಿಗೆ ದೊರೆತಿರಲಾರದು. ನಾಡಿನ ಹಿರಿ ಕಿರಿಯ ಅನೇಕ ಲೇಖಕರ ಪ್ರಶಂಸೆಗೆ ಇದು ಪಾತ್ರವಾಗಿದೆ.
‘ ನಿಚ್ಚಂ ಪೊಸತು’ ಆಯ್ದ ಸಂಗಂ ಕವಿತೆಗಳನ್ನು ಕನ್ನಡದಲ್ಲಿ ಓದುವಾಗ ಭಾಷೆ ಕೋಶಗಳನ್ನು ಮೀರಿದ ಕಾಲಮಾನಗಳನ್ನು ಮೀರಿದ ಅನುಭವವಾಯಿತು ಎಂದು ಕವಿಯೇ ಹೇಳಿದ್ದಾರೆ. ಅಂಥ ದಿವ್ಯತೆ ಇಲ್ಲಿನ ಶಬ್ದಗಳಲ್ಲಿ ಸೆರೆಯಾಗಿದೆ.
ಬಹಳ ಭಿನ್ನ ಕಾವ್ಯ ಅಭಿವ್ಯಕ್ತಿ ಹೊಂದಿರುವ ಹಿರಿಯರಾದ ಲಲಿತಾ ಸಿದ್ಧಬಸವಯ್ಯನವರು ಮುನ್ನುಡಿಯಲ್ಲಿ ಈ ಜೇನುಗವನಗಳನ್ನು ಓದಿದ ಯಾರಿಗಾದರೂ ಇನ್ನೊಮ್ಮೆ ಪ್ರೇಮಿಸೋಣ ಎನಿಸದಿದ್ದರೆ ಕೇಳಿದ್ದು ಕೊಟ್ಟೇನು ಎಂದು ಪಂಥವನ್ನೇ ಕಟ್ಟುತ್ತಾರೆ. ಅಲ್ಲದೇ ಮೊದಲ ಸಲ ಪ್ರೇಮಿಗಳಾಗುತ್ತಿರುವವರು ಇದನ್ನು ‘ ಗೈಡ್’ ಆಗಿ ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ! ಖ್ಯಾತ ಕವಿ ಇನ್ನೊಬ್ಬ ಕವಿಯ ಕವಿತೆಗಳನ್ನು ಇಷ್ಟೊಂದು ಓಲೈಸಿದ್ದು ಅಪರೂಪವೇ. ಅದಕ್ಕೆಲ್ಲ ಈ ಕವಿತೆಗಳೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.
ಪಶ್ಚಿಮ ಘಟ್ಟದ ಜೇನು ಮಲೆಯಿಂದ, ಕಾವೇರಿ ತೀರದ ಬಯಲನ್ನು ದಾಟಿ ಕಡಲನ್ನು ತಲುಪುವ ಉದ್ದದ ಮಾರ್ಗದ ಗುಂಟ ಕವಿತೆಯ ಸಂಚಲನವಿದೆ. ಈ ಹರಿವಿಗೆ ಮನವೊಡ್ಡಿ ಈಸಿಬಿಡುವುದನ್ನು ಇಲ್ಲಿಯ ಕವಿತೆಗಳು, ಅವುಗಳ ನವಿರು, ನಾಜೂಕು ಭಾವ ಕಲಿಸುತ್ತವೆ. ಬಹುತೇಕ ಮೂರು ಸಾಲಿನ ನಾಲ್ಕು ನೂರು ಕವಿತೆಗಳು ಏಳು ಅಧ್ಯಾಯಗಳಲ್ಲಿ ಹರಡಿಕೊಂಡಿವೆ.
ಕವಿತೆ ತೆರೆದುಕೊಳ್ಳುವ ಮುದ್ದುಗರೆವ ನೆನಪ ಹಾದಿಯಲ್ಲಿ ,
ಕಣ್ಣ ಹನಿಯಲ್ಲ ! ಇದು ಕಡಲು…
ಕಣ್ಣಗೊಂಬೆಯ ಒಲವಂತೆ ನಿಂತವನು,….
ಕಣ್ಣಲ್ಲೆ ನಗೆಯ ಮುಕ್ಕಳಿಸುವವನು ಮುಂತಾಗಿ ಪ್ರೇಮಿಯನ್ನು ಕಣ್ಗೊಂಬೆಯಂತೆ ಕಾಣುತ್ತಲೇ ಸುತ್ತಲ ದಟ್ಟ ಪರಿಸರದ ಸೊಬಗನ್ನು ಮನ ತುಂಬಿಸುತ್ತ ಅನನ್ಯ ಅನುಭವಕ್ಕೆ ಪ್ರವೇಶಿಕೆ ನೀಡುತ್ತಾರೆ. ಬರುವಿಕೆಯ ಸಂಭ್ರಮವನ್ನು ಮೈಮನಗಳು ಅನುಭವಿಸುವುದನ್ನು ಶಬ್ದಗಳೇ ಭಾವಗಳಾಗಿ, ಭಾವಗಳೇ ಶಬ್ದಗಳಾಗಿ ಸೆರೆ ಹಿಡಿಯುತ್ತವೆ.
ನಲ್ಲ ಹಾದು ಬರುವ ಹಾದಿಯಲಿ ರಸಿಕ ಸರಸವೇ ತುಂಬಿದೆ. ಅವಳ ಮಧುರ ನೋವಿನ ನಿವೇದನೆಗೆ ಹಕ್ಕಿ, ಪಕ್ಷಿ, ಪರಿಸರವನ್ನೇ ರೂಪಕವಾಗಿಸಿ ಕಾಲವೇ ಈ ಘಳಿಗೆಯನ್ನು ಕಾಯ್ದಿಡುವಂತೆ ಹಾರೈಸಿದ್ದಾರೆ.ಒಂದಿಡೀ ಬದುಕೇ ಒಳಕುಂತು ಬೆಂಬಲಿಸುವಂತೆ ತೀವ್ರವಾಗಿ ಈ ಕವಿ ಮನ ಮಿಡಿದಿದೆ. ಚಡಪಡಿಕೆ ಎಲ್ಲೂ ಅಂಕೆ ಮೀರಿಲ್ಲ; ಭಾವ ಸೋತಿಲ್ಲ. ಆದರೂ ಪ್ರೀತಿ ಸೂರೆಯಾಗಿದೆ!
ಮಲೆಯ ದಾಟಿಸಿ ಕಳುಹಲು ಬಂದಾಗ.. ಅಗಲಿಕೆಯಲ್ಲಿ ಇರುವ ಆಶಯ ಆಶಾಭಾವ..ಬೇರನ್ನಿಡಿದು ಹಬ್ಬಿ ಸಾಗೋಣ, ನಾವಿದ್ದೇವೆ ಒಂದಿಗೆ! ಇಂದೂ..ಮುಂದೂ..ಎಂದೂ.. ಎನ್ನುವಲ್ಲಿ ಕೈ ಹೆಣೆದು ನಿಂತು ಸೋಜಿಗ ಹುಟ್ಟಿಸುತ್ತದೆ. ಪ್ರೀತಿಯ ಅಗಲಿಕೆ ಹೀಗೂ ಇರಬಹುದಲ್ಲ!
ಎರಡನೇ ಭಾಗದಲ್ಲಿ ನೆನೆವ ಮನಗಳ ನಡುವೆ ಮಿಂಚಿನ ಸಂಚಾರವಾಗುತ್ತದೆ. ವೇಗದ ಜಾಣ ಬೇಟೆಗಾರ ಮಿಂಚುಳ್ಳಿಯ ಮಧ್ಯಸ್ಥಿಕೆ ಪ್ರೇಮಿಗಳ ನಡುವೆ. ಇದು ಕಾವ್ಯದಲ್ಲಿ ಮೊದಲ ಬಾರಿ ಸಂಭವಿಸಿರಬಹುದೇನೊ. ಆ ಮಿಂಚುಳ್ಳಿಯನ್ನು ಇನ್ನಿಲ್ಲದಂತೆ ರಮಿಸುವ, ಲಲ್ಲೆಗರೆವ ಪರಿಯೇ ಒಂದು ಸೊಗಸು.
ಕಾವೇರಿಯ ಕೈ ಹಿಡಿದು ತರುವಾಸೆಯಲ್ಲಿ ಅವನ ಪರಿತಾಪವು ಸುಡುಸುಡು ಕೆಂಡದಂತಿರದೆ ಕಣ್ಣಲ್ಲೇ ದೀಪ ಹಚ್ಚಿ ಕಾಯುವಂತೆ ಇದೆ. ಹೊಯ್ದಾಡುವ ಬಿಸಿಯುಸಿರ ಗೋಜಿಲ್ಲದ ಗಾಳಿಗೆ ಗಂಧ ತೀಡಿದಂಥ ಈ ನಿವೇದನೆ- ವೇದನೆ ಕವಿಯ ಅಪಾರ ಸಹನೆಯನ್ನು ಕಟ್ಟೆಯೊಡೆಯದಂತೆ ಕಟ್ಟಿ ನಿಲ್ಲಿಸಿದೆ. ಮಿಂಚುಳ್ಳಿಯ ತವರಲ್ಲಿ ಬೆಳ್ಳಿಮಿಂಚಿನ ದಿಬ್ಬಣ.. ಮಿಂಚುಳ್ಳಿ ಜೇನುಮಲೆಯ ಹೆಣ್ಣಿನ ಎಲ್ಲ ಒಳಾಸೆಗಳಿಗೆ, ಒತ್ತಾಸೆಗಳಿಗೆ ಧ್ವನಿಯಾಗಿ ನಿಂತಿದೆ. ತಾನಿನ್ನೂ ಕಾಣದ, ಕನಸ ಬಯಸುವ ಬಾಳನ್ನು ಮಿಂಚುಳ್ಳಿಯ ಮೂಲಕ ಬಹಳ ಕಲಾತ್ಮಕವಾಗಿ ಹೇಳಲಾಗಿದೆ.
ಗಂಡಹೆಂಡಿರ ಕರುಳ ಕರೆವ ಅನಿರ್ವಚನೀಯ ಪ್ರೇಮ ಒಮ್ಮೆಲೇ ಸಾಮಾಜಿಕವಾಗಿದೆ. ಹಳ್ಳಿಯ ದೈನಂದಿನ ಬದುಕು ಬಟ್ಟೆ ಒಣಗಲು ಹರವಿದಂತೆ ಹರಡಿದೆ. ಅಲ್ಲಿ ಕಲ್ಲೇಡಿ, ಸಿಗಡಿ, ಹೊದ್ದು, ಕಾಗೆ, ಜೇನುಹುಟ್ಟು, ಕಾಡುಬಾಳೆ, ಕೆಂಜಿರುವೆ, ಕೆಂಜಗ, ಎತ್ತು, ಎಮ್ಮೆ, ಹಾಲೂಡಿಸುವ ತಾಯಂದಿರು, ಹೊಂಗೆ ಹೂ….ಹೀಗೆ ಹಳ್ಳಿಯ ಸೂಕ್ಷ್ಮ ಬದುಕ ಮೆರವಣಿಗೆಯ ನಡುವೆ ಬನದವ್ವನಲ್ಲಿ ತಮ್ಮ ಒಲವ ಪೊರೆಯೆಂದು ಹಾರೈಸುತ್ತಾಳೆ ಹಳ್ಳಿಯ ಹೆಣ್ಣು.
ಜೇನುಮಲೆಯ ಕರೆಗೆ ಜೀಗುಡುವ ಪ್ರೇಮಿಗಳು ಅಗಲಿಕೆಯಲ್ಲಿ ಗಿಡ, ಮೂರು, ಹೂ, ಬಳ್ಳಿ, ನದಿ, ತೊರೆ ಎಲ್ಲವೆಂದರೆ ಸುತ್ತಲ ಜೀವಜಗತ್ತಿನ ಎಲ್ಲದರೊಂದಿಗೂ ಸಂಭಾಷಿಸುತ್ತಾರೆ. ಅಕ್ಕನ ‘ ನನ್ನ ಚೆನ್ನಮಲ್ಲಿಕಾರ್ಜುನನ ನೀವು ಕಂಡಿರೇ? ಗಿಳಿಗಳಿರಾ, ಗೊರವಂಕಗಳಿರಾ…’ ಎಂಬ ಹುಡುಕಾಟವನ್ನು ಇದು ನೆನಪಿಗೆ ತರುತ್ತದೆ. ಅಕ್ಕನ ಹುಡುಕಾಟದಲ್ಲಿ ಪ್ರೇಮಿಯ ಉತ್ಕಟತೆಗಿಂತ ಪವಿತ್ರ ದೈವೀಕತೆಯಿದೆ. ಅಂಥ ಮೇರು ಪ್ರೇಮ ಇಲ್ಲಿಯೂ ಒಡಮೂಡಿದೆ.
ಅಂತೆಯೇ ಮುಂದಿನ ಭಾಗದಲ್ಲಿ ಬರುವ ಉಪ್ಪಾರ ಗಂಡು- ಹೆಣ್ಣೊಲವು. ಇಲ್ಲಿ ಮಲೆನಾಡ ಈ ಕವಿ ಕಡಲ ತೀರದ ಬದುಕ ಬಯಲಾಗಿಸಿದ್ದಾರೆ.
ಒಂದು ಚಣವಷ್ಟೇ. ಮತ್ತೆ ಪಶ್ಚಿಮ ಘಟ್ಟ ಸಾಲು ಸೆಳೆಯುತ್ತದೆ. ಕೋಗಿಲೆಯ ಕುಕಿಲ, ಮಾವು, ಬೇವು, ಹೊಂಗೆಯ ಮಡಿಲಿಗೆ ಕವಿ ಮರಳುತ್ತಾರೆ. ಒಲವೆಂಬುದು ಒಂಭತ್ತು ಸುತ್ತಿನ ಕೋಟೆ! ಹತ್ತೊಂಭತ್ತು ದಾರಂದದಲಿ ನೇದ ಮಧುರ ನೋವು! ಹಾಯಬೇಕಿದನು… ಎನ್ನುತ್ತಲೇ ಜೀವಜೀವದ ಗುಟ್ಟನ್ನೊಡೆಯಬೇಕು ಎನ್ನುತ್ತಾರೆ. ನೋವು ಅರಿವು, ಒಲವ ಸೆಳೆವು ಎರಡೂ ಇದ್ದರಷ್ಷೇ ಪ್ರೇಮ ಸಾರ್ಥಕ ಅಲ್ಲವೇ?
ಇದುವರೆಗೂ ತಂಗಾಳಿಯಂತಿದ್ದ ಪ್ರೇಮವೀಗ ತಾಗಿದರೆ ಹೊತ್ತುವ ಬೆಂಕಿಯಾಗಿದೆ.ಪ್ರಕೃತಿಯ ಬದಲಾವಣೆಗಳಾದ ಹಲಸಿನ ಘಮಲು, ಸಂಪಿಗೆ ಅಮಲು , ಕಾಟು ಮಾವಿನ ಸೋನೆ ಮೊದಲಾದವು ಜೇನುಮಲೆಯ ಹುಡುಗಿಯ ಮೈಯಲ್ಲಿ ಹತ್ತು ಬಣ್ಣದ ನವಿಲುಗಣ್ಣ ನೋಟದಿಂದ ಮತ್ತೇರಿಸಿವೆ. ಅದು ವಿರಹದ ಮತ್ತು. ಮೊದಲ ಬಾರಿಗೆ ಸುಡುತ್ತಿದೆ ಅವಳನ್ನು. ಎಲ್ಲಿಯವರೆಗೆ ಕಾದಾಳು? ಅವನು ತನ್ನೆಡೆಗೆ ಬರುತಿಹನೆಂದು ಭ್ರಮಿಸುತ್ತಾಳೆ.
ಮುಂದಿನ ಭಾಗ ಕಳ್ಳಬೇಟದಲ್ಲಡಗಿದ ಏಕಾಂತ. ಯಾರಿಗೂ ಕಾಣದಂತೆ ಬಂದು ಮರೆಯಾಗುವ ಅವನ ಸಂಗವೀಗ ಅವಳಿಗೆ ಹಗಲುಗನಸು..ಇರುಳ ಧೇನ! ಪ್ರೇಮ ಬೇಟವೀಗ ಅವಳಲ್ಲಿ ಅನುಮಾನ ಹುಟ್ಟಿಸಿದೆ. ಅವಳ ಕೋಪ, ತಾಪಗಳು ಆ ಮಾಯಾ ಬೇಟೆಗಾರನ ಪ್ರತಾಪವನ್ನು ಹಗುರವಾಗಿ ಧಿಕ್ಕರಿಸುತ್ತವೆ. ತನ್ನಂಥ ಎಷ್ಟು ಮುಗುದೆಯರ ಮನಸು ಹೀಗೆ ಹರಿದವೋ, ಎಷ್ಟು ಪ್ರಾಣ ತೊರೆದವೋ ಎಂದು ಪ್ರಲಾಪಿಸುತ್ತ ಕೊನೆಗೆ ಕಾಲವೇ ತನ್ನ ನಾಶಕ್ಕೆ ಹೊಂಚು ಹಾಕಿ ಕೂತಿದೆ ಎಂದು ನಂಜಾಗುತ್ತಾಳೆ! ಮೊದಲ ಮೂರು ಭಾಗಗಳಿಗಿಂತ ಬಹಳ ವಿಪರೀತ ಹಾಗೂ ವ್ಯತಿರಿಕ್ತ ಭಾವಗಳನ್ನು ಇಲ್ಲಿ ಕಂಡಾಗ ಈ ತ್ವರಿತ ಬದಲಾವಣೆ ಮೇಲ್ನೋಟಕ್ಕೆ ಅಸಹಜವೆನ್ನಿಸಿದರೂ ಕಾಯಿಸಿಕೊಳ್ಳಲಾರದ ಪ್ರೇಮ ಹೀಗೆ ಪ್ರಲಾಪಿಸುವುದು ಸಹಜವೇ ಎನ್ನುತ್ತದೆ ಲೋಕ ವ್ಯಾಪಾರ. ಮುಂದೆ ಅವಳ ಪರಿತಾಪ ಮುಂದುವರೆಯುತ್ತದೆ.
ಮುಂದಿನ ಭಾಗದಲ್ಲಿ ಪ್ರಕೃತಿಯ ಒಡಲಾಳದ ಸಿರಿಯ ನಡುವೆ ಸಂಬಂಧಗಳು ಮನುಷ್ಯರೊಂದಿಗೆ ಗಿಡ- ಮರ, ಬಳ್ಳಿ, ಹೂ, ದನಕರು, ಹಾಲು ಹೀಗೆ ಹಳ್ಳಿಯ ಜನಜೀವನ ಬಿಚ್ಚಿಕೊಳ್ಳುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಇದಕ್ಕಿಂತ ಸೊಗಸಾಗಿ ಹಿಂದೆಯೇ ಕವಿ ಹೇಳಿದ್ದಾರೆ ಎಂದು ನನ್ನ ಅನಿಸಿಕೆ.
ಮುಂದಿನ ಹಾಗೂ ಕೊನೆಯ ಭಾಗದಲ್ಲಿ ಮಲೆನಾಡ ಪುಷ್ಕಳ ಪರಿಸರದಲ್ಲಿ ಸೋಂಪಾಗಿದ್ದ ಬದುಕಲ್ಲಿ ಯುದ್ಧವೆಂಬ ಕಾರ್ಮೋಡ ಆವರಿಸುತ್ತದೆ ಪ್ರೇಮದಲ್ಲಿ ಮೀಯಬೇಕಾದ ಸಂತಸಕ್ಕೆ ಭೀತಿ, ದುಗುಡ ಆವರಿಸುತ್ತದೆ.
ಮಲೆನಾಡಿಗರಲ್ಲದವರಿಗೆ ಕೆಲವು ಪದಗಳು ಹೊಸತಿರಬಹುದು. ಆ ಕಾರಣಕ್ಕೆ ಒಂದೇ ಓದಿಗೆ ಅರ್ಥ ಅಲ್ಲಲ್ಲಿ ನಿಲುಕದಿರಬಹುದು. ಆದರೂ ತೇಜಸ್ವಿ, ಕುವೆಂಪು, ಕಾರಂತರನ್ನು ಓದಿ ಕಾಡಿನ, ಪರಿಸರದ ಅಪಾರ ಪರಿಚಯವಾದವರಿಗೆ ಎರಡನೇ ಓದಿಗೆ ಸುಲಭವಾಗಿ ಇದು ದಕ್ಕುವುದು. ಹಳ್ಳಿಯ ಬದುಕು, ಪರಿಸರ ಹಾಸು ಹೊಕ್ಕಾಗಿರುವ ಈ ಕೃತಿಗೆ ಬಾಯಿಗಿಂತ ಕಿವಿಯ ನಂಟು ಹೆಚ್ಚು ಆಪ್ತವಾಗಬಹುದು ಎನ್ನುವುದು ನನ್ನ ವೈಯುಕ್ತಿಕ ಅನಿಸಿಕೆ. ಇನ್ನೊಬ್ಬರು ಇದನ್ನು ದೊಡ್ಡದಾಗಿ ಓದಿ ಹೇಳಿದರೆ ಇದರ ಸೊಗಸೇ ಬೇರೆ. ಅಂಥ ಕಲ್ಪನಾಲೋಕದಲ್ಲಿ ಇದರ ಸೌಂದರ್ಯ ಇನ್ನೂ ಹೆಚ್ಚುತ್ತದೆ. ಇದು ಜನಪದದ ಗುಣವೇ ಅಲ್ಲವೇ?
ಮರುಮುದ್ರಣದ ಹೊತ್ತಿಗೆ ಶಬ್ದಗಳನ್ನು ಒಡೆದು ಇಡುವುದು, ಸೇರಿಸುವುದರತ್ತ ಹಾಗೂ ಬಾರಿ ಬಾರಿ ಬರುವ ಕೆಲ ಪದಗಳತ್ತ ಒಂದು ನಿಗಾ ಇಡಲು ಅವಕಾಶವಿದೆ. ಆದರೂ ಕವಿತೆಯ ಓಘ, ಭಾವಗಳ ಭಂಡಾರ, ಶಬ್ದಗಳ ಹರಿವಿನ ಕಾರಣದಿಂದ ಮನತುಂಬುವ ಓದಿನ ವಿಹಾರವನ್ನು ಈ ಕೃತಿ ನೀಡುತ್ತದೆ. ಇದಕ್ಕಾಗಿ ಕವಿ ಹೆಚ್ ಆರ್ ಸುಜಾತಾ ಅಭಿನಂದನಾರ್ಹರು.
***************************************************
ನೂತನ ದೋಶೆಟ್ಟಿ
ಚೆನ್ನಾಗಿದೆ… ಸಂಕಲನ ಓದಬೇಕು
ಧನ್ಯವಾದಗಳು
The description of Madam Nutana about this literature inspired me to go through the collection of poems… thank you Nutana mam.
Thank you
Nice