ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

ಪುಸ್ತಕ ಸಂಗಾತಿ

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

2021 ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಪಡೆದ ಕೃತಿ  ಮುದ್ರೆ.ಕೊಡಗಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ತೀವ್ರ ಬೆಳವಣಿಗೆ ಕಾಣುತ್ತಿದ್ದು ಕಾದಂಬರಿಗಳು ಕೂಡಾ ಹೊರಹೊಮ್ಮುತ್ತಿರುವುದು ಖುಷಿಕೊಡುತ್ತಿದೆ.  ಈ ಪ್ರಯತ್ನ ಮಹಿಳೆಯರಲ್ಲಿ  ಕಡಿಮೆ ಸಂಖ್ಯೆಯಲ್ಲಿ ಎಂದು ಅನಿಸುವಷ್ಟರಲ್ಲೇ ಶ್ರೀಮತಿ ಜಲಕಾಳಪ್ಪನವರು ಮುದ್ರೆಯನ್ನು ಮುಂದಿಟ್ಟಿದ್ದಾರೆ.

ಕಾದಂಬರಿಯು ಪ್ರಾರಂಭದಿಂದಲೇ ಗ್ರಾಮೀಣ ಬದುಕಾದ ಕಾಡಹಣ್ಣು, ಹೊಳೆ,ಏಡಿ, ಮೀನು, ಜಲಪಾತ  , ಬಡತನ , ಹಳ್ಳಿಯಡುಗೆ,ಹೀಗೆ ಆ ಇಡೀ ಹಳ್ಳಿಯನ್ನೇ ಕಣ್ಣ ಮುಂದೆ ತಂದಿಡುತ್ತದೆ.ಕಾದಂಬರಿಕಾರರು ಕೊಡಗಿನ ಕೆಲವು ಊರು ಅದರಲ್ಲೂ ವಿಶೇಷವಾಗಿ  ತನ್ನೂರು ಸೋಮವಾರಪೇಟೆಯನ್ನು ಕತೆಯಲ್ಲಿ ಬಳಸಿಕೊಂಡಿದ್ದು ಮತ್ತಷ್ಟು ಖುಷಿ.ಸಮಾಜದಲ್ಲಿ  ನಡೆಯುತ್ತಿರುವ ವಾಸ್ತವ ಸ್ಥಿತಿ,  ವ್ಯವಹಾರವೇ ಆಗಿರುವ

ಕಥಾ ವಸ್ತು ನಿಜಕ್ಕೂ ಕಾದಂಬರಿಯ ಮೌಲ್ಯ ಹೆಚ್ಚಿಸಿದೆ.

ಗ್ರಾಮೀಣ ಹೆಣ್ಣು ಮಗಳ ಮೇಲೆ  ನಡೆಯುವ  ದೌರ್ಜನ್ಯ ಒಂದೆಡೆಯಾದರೆ, ಬಳಸಿಕೊಂಡರೂ ಮತ್ತೆ ಬದುಕು ಕೊಡುವ ಮೂಲಕ ಅವಳ ಬಾಳು ಸುಖಾಂತ್ಯವಾಗಿದ್ದು ಕಾದಂಬರಿ ಕೊಟ್ಟ  ಸಮಾಧಾನ.

ಅದೆಷ್ಟೋ ವರ್ಷಗಳ ಬಳಿಕ ತವರೂರಿಗೆ ಮರಳುವ ಕಥಾನಾಯಕಿಯು ಬದುಕಿನಲ್ಲಿ ಅನುಭವಿಸಿದ  ಕಹಿನೆನಪು  ಅವಳ ಸುತ್ತ ಗಿರಕಿ ಹೊಡೆದು  ವರ್ತಮಾನವನ್ನು ತಲ್ಲಣಗೊಳಿಸುತ್ತಾ  ಕಥೆಯುದ್ದಕ್ಕೂ ಸಾಗಿ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತದೆ.

ಕಳೆದ ಎರಡು ,ಮೂರು ವರ್ಷಗಳಿಂದ ಕೊಡಗು ಮಹಾಮಳೆಯಿಂದ ತತ್ತರಿಸಿ ಎದುರಿಸಿದ  ಜೀವಭಯವನ್ನೂ,ಕರಾಳ ದಿನಗಳನ್ನೂ ಕಾದಂಬರಿಯೊಳಗೆ ಹಿಡಿದಿಟ್ಟಿರುವುದು ನಿಜಕ್ಕೂ ವರ್ತಮಾನಕ್ಕೆ ಹಿಡಿದ ಕನ್ನಡಿ.

ಸಂದರ್ಭಕ್ಕೆ ಹೊಂದಿಕೊಳ್ಳುವಂತೆ   ಕಾದಂಬರಿಯಲ್ಲಿ  ಕೊಡಗಿನ ಜಲ ಪ್ರಳಯವನ್ನು ಉಲ್ಲೇಖಿಸಿದ ಜಾಣ್ಮೆ ಮೆಚ್ಚುವಂತದ್ದು.

ಸ್ಥಳೀಯವಾಗಿ ಎದುರಿಸಬೇಕಾಗುವ ಪ್ರಕೃತಿ ವಿಕೋಪದ ಪರಿಣಾಮಗಳ

 ಆತಂಕ ನಮ್ಮೊಳಗೂ ತುಂಬಿ ನಿಲ್ಲುವಂತೆ ಮಾಡುತ್ತದೆ.

ಕಾದಂಬರಿಯನ್ನು  ಓದುತ್ತಾ ಅಂತ್ಯ ಘಟ್ಟಕ್ಕೆ ತಲುಪುವಾಗ ಸಂಬಂಧಗಳನ್ನು ಬೆಸುಗೆ ಮಾಡಿದನ್ನು ಗಮನಿಸಿದರೆ ಹಿರಿಯ ಕಥೆಗಾರ್ಥಿಯರಾದ ತ್ರಿವೇಣಿ, ಸಾಯಿಸುತೆ, ರಾಧಾದೇವಿ, ಉಷಾನವರತ್ನರಾವ್ ಮೊದಲಾದವರು ನೆನಪಾಗುತ್ತಾರೆ

ಒಟ್ಟಾರೆ ಕಾದಂಬರಿ ಓದಿಸಿಕೊಂಡು ಹೋಗುವಂತಹದಾಗಿದ್ದು ಈ ಕಾದಂಬರಿಗಾರ್ತಿಯ  ನಿರಂತರ ಓದು ಮತ್ತು ಅಧ್ಯಯನದಿಂದ ಇವರ ಭಾಷೆ  ಮತ್ತಷ್ಟು ಗಟ್ಟಿತನ ಕಾಣಲಿ, ಹೀಗೆ ಪಕ್ವವಾಗುವ ಭಾಷೆಯಿಂದ ಮತ್ತಷ್ಟು ಕಾದಂಬರಿ ಬರೆಯುವಂತಾಗಲಿ. ಆ ಮೂಲಕ ಕೊಡಗಿನವರೆಂಬ ಹೆಮ್ಮೆಯ ಕೀರ್ತಿ ಒಲಿದು ಬರಲಿ.   ಮುದ್ರೆ ಎಂಬ ಚೆಂದದ ಕಾದಂಬರಿ ನೀಡಿದ ಜಲಕಾಳಪ್ಪನವರಿಗೆ ಅಭಿನಂದನೆಗಳು.

ಸುನೀತ ಕುಶಾಲನಗರ

2 thoughts on “ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

  1. ಅಭಿನಂದನೆ ಗಳು ಜಲ ಮೇಡಂ ರವರಿಗೆ.ಚೆಂದದ ವಿಶ್ಲೇಷಣೆ

    1. ಅಭಿನಂದನೆಗಳು ಜಲಾ ಮೇಡಂ,ನಿಮ್ಮಲೇಖನಿಯಿಂದ ಇನ್ನಷ್ಟು ಕಾದಂಬರಿಗಳು ಬೆಳಕು ಕಾಣಲಿ

Leave a Reply

Back To Top