ಕವಿತೆ
ಗರ್ಭಧಾರಣೆ
ಸರಿತಾ ಮಧು
ನವಮಾಸಗಳ ಸಂತಸಕೆ
ಅಂತಿಮ ಕ್ಷಣಗಳ
ಸಂಕಟವ ಅರ್ಪಿಸಿ
ಪುಟ್ಟ ಕಂದನ ಆಗಮನದ
ಅಳುವ ನಿನಾದಕೆ
ಮೈಮನವೆಲ್ಲ ಪುಳಕ
ದಿಗಿಲುಗೊಂಡ ಮನಕೆ
ಹರ್ಷದ ಉದ್ಗಾರ
ಗರ್ಭದೊಳಗೆ ಬಚ್ಚಿಟ್ಟ
ಕನಸಿನ ಕೂಸ
ಕರದಲ್ಲಿ ಹಿಡಿದ ಸಂತಸ
ಜಗದ ಇನ್ನಾವ ಖುಷಿಯೂ
ಕಿರಿದಾಗಿರಬೇಕು
ಆ ಅಳುವ ಮಗುವ, ಅರಳುವ
ನಗುವ ಕಂಡು
ಇತ್ತಿತ್ತಲಾಗಿ ನಾ ಬರೆವ ಸಾಲುಗಳೂ ಹೀಗೆ
ನಾನೇ ಬಚ್ಚಿಟ್ಟ ಕನವರಿಕೆಗಳು
ಅದೆಷ್ಟು ಮಾಸಗಳು ಹುದುಗಿದ್ದ
ಭಾವಗಳೋ ಏನೋ ನಾ ಅರಿಯೇ
ಪ್ರಸವ ವೇದನೆಯ ಸಹಿಸಿದ ಮಮತೆಯ ಮಾತೆಯ
ಸಂತಸದ ಕುಡಿಗಳು
ಮಡಿಲ ತುಂಬಿ ಹರುಷ
ತರುವ ನನ್ನೊಲವ
ನುಡಿಗಳು
****************************