ಸಮಯಾಂತರ

ಪುಸ್ತಕ ಸಂಗಾತಿ

ಸಮಯಾಂತರ

ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅವರು- ಸಮಯಾಂತರ

ಕಟ್ಟುವ ಕವಿ, ಕನ್ನಡದ ಕಾವ್ಯದೆಗಳನ್ನು ಮುಟ್ಟಿದ,ನಮ್ಮ ಅಂತರಾಳವನ್ನು ತಟ್ಟುವ,ಕವಿ ಸತೀಶ ಕುಲಕರ್ಣಿ ಅವರ ಆಯ್ದ ಕವಿತೆಗಳ ಸಂಕಲನ ‘ಸಮಯಾಂತರ’ ಮೊಗಸಾಲೆ ಪ್ರಕಾಶನದಲ್ಲಿ ಪ್ರಕಟವಾದ -೨೦೧೩ ಕೃತಿ ಹಲವೂ ಗಟ್ಟಿ ಕವಿತೆಗಳ ಗುಚ್ಛ

“ರಕ್ತಗಾಲಿನ ನಮ್ಮಪಾಲಿನ/ ಹಾಡ ಬರೆಯತೇವ /ನೆಲಕ ಹಾಡ ಬರೆಯತೇವ

ಎನ್ನುತ್ತಲೆ ಸತೀಶರು ನೆಲದ ಜನರ ನಾಡಿ ಮಿಡಿತದಿಂದ ರೂಪುಗೊಂಡು ಕಾವ್ಯ ನೆಲಕೆ ಸಂಕಟವೊದಗಿದಾಗ ಸತೀಶರ ಕಾವ್ಯ ಹೋರಾಟದ ನಾಲಗೆಯ ಮೇಲೆ ಕೆಂಪಾಗಿ ಹೋಗುತ್ತದೆ. ಎದೆ ಗಟ್ಟಿಸಿ ತುಳಿತಕ್ಕೊಳಗಾದವರ ಒಮ್ಮೆಲೆ ಧ್ವನಿಯಾಗಿ ಬಿಡುತ್ತದೆ. ಕಾವ್ಯ ನೆಲದ ಬೇರುಗಳನ್ನು ಹುರಿಯಾಗಿಸಿ ಗಾಂಧಿಯನ್ನೇ ಪ್ರಶ್ನೆ ಮಾಡುತ್ತದೆ

‘ಬೇರು ಸತ್ತಿಲ್ಲ

ಮತ್ತೊಮ್ಮೆ ಈ

ನೆಲದ ಮಾತಾಗಬಹುದೇ

ಹೇಳು ಗಾಂಧಿ ಗಿಡ…?

ನೆಲದ ಮಾತಾಗಬಹುದೇ ಹೇಳು ಗಾಂಧಿ ಎನ್ನುವ ಕವಿ ಅಸಹಾಯಕತೆಯಲ್ಲಿ ಗಾಂಧಿ ಗಿಡ ಪ್ರಶ್ನಿಸುವುದು ಪ್ರಸ್ತುತ ವ್ಯವಸ್ಥೆಯ ವ್ಯಂಗವಾಗಿ ಮತ್ತೆ ಭೂತಕಾಲದ ಆದರ್ಶ ಗಳು ಈ ಸಂಕಟದ ಕಾಲದಲ್ಲೂ ಗಾಂಧಿ ಬೇಕಾಗಿತ್ತು ಎನ್ನುವ ಕವಿಯ ತಹತಹಿಕೆ ಓದುಗನ ಹಳಹಳಿಕೆಯಾಗಿ ಬಿಡುತ್ತದೆ

ಮೌನ ಚಿಗಿಯುವುದು ಅಷ್ಟೇ ಸುಲಭವಲ್ಲ ಅದು ಅಪಾರ ಮಾತುಗಳನ್ನು ಹುದುಗಿಸಿಕೊಂಡು ಅನಂತ ಕಾಲ ಸಮಾದಿ ಸ್ಥಿತಿಯಲ್ಲಿದ್ದಾಗ ಮೌನ ಹುಟ್ಟಬಲ್ಲದು ಆ ಮೌನ ಕಾವ್ಯವಾಗಬಲ್ಲದು

ಅಡಿಗರ ಕವಿತೆಯಂತೆ ‘ ಹುತ್ತಗಟ್ಟದ ಚಿತ್ತ ಮತ್ತೆ ಕೆತ್ತಿತೇನೊ ಅಂತ ಆ ಪುರುಷೋತ್ತಮನ’

ಸಾಲುಗಳೆರಡರ ನಡುವೆ

ಮೌನ ಚಿಗಿತರೆ ಸಾಕು

ಅದು ನನ್ನ ಕವಿತೆ

ಮೌನಕ್ಕಿರುವ ಅನಂತ ಅರ್ಥ ,ಅಪರಿಮಿತ ಸಾಧ್ಯತೆಗಳನ್ನು ಕಾವ್ಯದ ಜೊತೆ ಮಿಳಿತಗೊಳಿಸಿದ್ದಾರೆ

ಸ್ಪರ್ಶ ಬೇಕೆನಗೆ/ ಉಚ್ಛ ಅಸ್ಪೃಶ್ಯನಾಗುವುದು ಬೇಡ/ ಹಾರುವ ನಾನಲ್ಲ /ನೆಲದ ಮೇಲೆ ನಡೆಯುವವ

ಪ್ರತಿಯೊಬ್ಬ ವ್ಯಕ್ತಿಯು ಅನುಭವಿಸುವ ವೇದನೆಯ ತುಮುಲುಗಳ ತಾಕಲಾಟಗಳನ್ನು ಕಾವ್ಯ ಸಮರ್ಥ ವಾಗಿ ಹಿಡಿದು ತನ್ನ ನಿಲುವನ್ನು ನೆಲದ ಜೊತೆ ಕವಿ ಸಮ್ಮೀಳಿಸುತ್ತಾರೆ.

ಕಾಲದ ಕಟ್ಟಳೆಯಲಿ ಎಲ್ಲರೂ ಸಿಕ್ಕಿಕೊಂಡವರೆ ಶಂಕಿತರಂತೆ ಅನುಮಾನಿಸುವ ಗುಮಾನಿ ಎಲ್ಲ ಕಾಲವನ್ನು ಬಿಟ್ಟಿಲ್ಲ ,ಕಾವ್ಯಧಾರೆಯ ಎಲ್ಲರನ್ನೂ ಸಮುದಾಯದ ಚೌಕಟ್ಟಿನಲ್ಲಿ ಬಂಧಿಸಲೂ ನೋಡಿದರು ಆ ಕಾಲಕ್ಕೆ ತಕ್ಕಂತೆ ಎಲ್ಲರೂ ಪ್ರತ್ಯುತ್ತರ ಕೊಡುತ್ತಲೆ ಮುಖಾಮುಖಿ ಯಾಗಿದ್ದಾರೆ ಹಾಗೆಯೆ ಕವಿ ಸತೀಶರನ್ನು ಈ ಸೋಂಕು ಬಿಟ್ಟಿಲ್ಲ

ಕಾವ್ಯ ಕೊಡುವ ಉತ್ತರ ಅದ್ಭುತ

‘ ಹಾರುವ ನಾನಲ್ಲ

 ನೆಲದ ಮೇಲೆ ನಡೆಯುವವ’

ಎನ್ನುವ ಕವಿ ನೆಲದ ಜೊತೆ ತನ್ನತನವನ್ನು ತನ್ನ ಮೂಲವನ್ನು ಗುರುತಿಸಿಕೊಳ್ಳುತ್ತಾರೆ

ಈ ಪರಿಯ ಕಾವ್ಯ ಕನ್ನಡ ಸಾಂಸ್ಕೃತಿಕ ಲೋಕ ಅನುಭವಿಸುತ್ತಲೆ ಬಂದಿದೆ

ಎನ್ಕೆ ಹನಮಂತಯ್ಯ ಅವರ ‘ನಾನು ಗೋವು ತಿಂದು ಗೋವಿನಂತಾದೆ’

ಬಿ ಫೀರಬಾಷಾ ಅವರ ‘ ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ’ ಎನ್ನುವಲ್ಲಿ

ಹೆಬಸೂರ ರಂಜಾನ್ ಅವರ ‘ ಅಮ್ಮಾ/ನಿನ್ನ ಎದೆಯಾಳದಲಿ/ನಾನೊಂದು ಗನ್ನು ಬಾಂಬು

ಎನ್ನುವ ಸಾಲುಗಳು ಎಲ್ಲ ಸಮುದಾಯಗಳ ಅಸ್ಮಿತೆಯನ್ನು ಪರೀಕ್ಷಿಸುತ್ತವೆ

ಕವಿ ಸತೀಶರ ಕಾವ್ಯ ಮಂಜುಗಡ್ಡೆಯು ತನ್ನನ್ನು ಕಳೆದುಕೊಳ್ಳುತ್ತಾ ತನ್ನ ಹೊರಮೈ ನ್ನು ತೊಳೆದುಕೊಳ್ಳುತ್ತಾ ಕರಗುವುದಲ್ಲಾ ಆ ರೀತಿ ತನ್ನ ಶಂಕೆಯನ್ನು ನೆಲದ ಜೊತೆ ತಾದಾತ್ಮ್ಯ ಗೊಳಿಸಿ ಅನುಸಂಧಾನಿಸುವ ಪರಿ ಅನನ್ಯ

ಹಾದಿ ಹೆಣವಾದ/ ಬೀದಿ ದೀಪಗಳ ದೊರೆಯೇ…..

ಕಂಬ ನೆಟ್ಟವನು ನೀನು/ ಸಾವು ತಂತಿಯ ಬಿಗಿದು /ನಿತ್ಯ ನಾಗರ ಹಾವಿನೊಡನಾಡಿದವ

ಲೈನ್ ಮನ್ ಮಡಿವಾಳ ಭೀಮಪ್ಪನಿಗೆ  ಎನ್ನುವ ಕವಿತೆಯಲ್ಲಿ ತನ್ನ ಕಾಯಕದ  ಜೊತೆಗಾರನ ಸಾವಿನ ದುರಂತ, ಜೀವ ಕಾರುಣ್ಯದ ಪ್ರೀತಿ ದುಗುಡ ಕಾವ್ಯದುದ್ದಕ್ಕು

ಕರುಳು ಮಿಡಿಯುವ ವಿದ್ರಾವಕ ನೀನು ಬೆಳಕು ಕೊಟ್ಟು ಕತ್ತಲೆಯನ್ನು ನೀ ಸೇರಿದೆ ಎನ್ನುವ ಸಾಲುಗಳು ಓದುಗನನ್ನು ಮಿಡಿಯುತ್ತವೆ

ಕಾವ್ಯ ಅದು ಪ್ರಭುತ್ವದ ಕೈಗೊಂಬೆಯಾಗದೆ ಉಳ್ಳವರ ಅಡಿಯಾಳಾಗದೆ ಒಬ್ಬ ಸಾಮಾನ್ಯನ , ದುಡಿಯುವ ಕಾರ್ಮಿಕನಸಾವು ಹೇಗೆ ಕಾವ್ಯದ ವಸ್ತುವನ್ನು ತಮ್ಮ ಬಂಡಾಯದ ಸಿದ್ಧಾಂತವನ್ನು ಕಾವ್ಯದ ಪಾತಳಿಯಲ್ಲಿ ನೆಲಸಮಗೊಳಿಸಿದ್ದಾರೆ.

ನಗರ ಏಳುತ್ತದೆ,ಬಾಲ ಬಿಚ್ಚುತ್ತದೆ ,ಆಕಳಿಸುತ್ತದೆ,ಮಿರಗುತ್ತದೆ, ಕರಗುತ್ತದೆ ಎನ್ನುವ ಸಾಲುಗಳು ನಾಗರಿಕ ಜಗತ್ತಿನ ಕಿರೀಟವಾಗಿರುವ ನಗರಗಳ ವಾಸ್ತವ ಬದುಕನ್ನು ಅದರ ಭ್ರಮಾತ್ಮಕ ಕಲ್ಪನೆಗಳನ್ನು ಕವಿತೆ ಹುಸಿಗೊಳಿಸುತ್ತದೆ

‘ ನಗರ ಗಾಢ ಗೊರಕೆ ನಿದ್ರೆಯಲ್ಲಿದೆ’ ಎನ್ನುವ ಧ್ವನಿಪೂರ್ಣ ಸಾಲುಗಳು ಅಮಾನವೀಯತೆಯ ಸಾಕ್ಷಿಯ ಪ್ರತೀಕದಂತಿರುವ ನಗರಗಳ ಕರ್ಮಕಾಂಡ ವನ್ನು ಅನಾವರಣಗೊಳಿಸುತ್ತಲೆ ಮಾನವತೆಯ ವಿರೋಧಿ ಪ್ರಜ್ಞೆಯನ್ನು ನಗರ ಒಳಗೊಂಡಿವೆ

” ಮರಣ ಮಹಾಯಾಗದ/ ಮುನ್ನುಡಿಗೆ / ಹುರಿಗೊಂಡ ಒಂದೆ ಒಂದು ಬಾಣ

ಎನ್ನುವ ಕವಿತೆಯ ಸಾಲುಗಳು ಯುದ್ಧ ವಿರೋದಿ ನೆಲೆಯನ್ನು ಕಾವ್ಯ ಸಾದರ ಪಡಿಸುತ್ತದೆ.

ಸತೀಶರ ಕಾವ್ಯದ ವಸ್ತುಗಳು ದೇವಲೋಕದ ವಸ್ತುಗಳಾಗದೆ ಸದ್ಯದ ನಿತ್ಯ  ದುಡಿಯುವ ಜನರ ಜೊತೆಯಾದ ವಸ್ತುಗಳೆ ಕಾವ್ಯದ ನಿಲುವಾಗಿದೆ.ಅಲ್ಲಿ ಮಡಿವಾಳ ಭೀಮಪ್ಪ, ಅವರ ಗುರುಗಳು, ಚಪ್ಪಲಿಗಳು,ನಂಬದ ದೇವರುಗಳು, ಜನಪರ ಕಾವ್ಯದ ಬಗ್ಗೆ, ನಗರಗಳ ಬಗ್ಗೆ, ಬದುಕಿನ ಭವಣೆಗಳ ಬಗ್ಗೆ, ಮನಸುಗಳನು ಕಟ್ಟುವ, ಭಯೋತ್ಪಾದನೆಯಿಂದ ನಲುಗಿ ನೆಲೆ ಕಳೆದುಕೊಂಡ  ಮುಗ್ದ ಕಂದಮ್ಮಗಳ ನೋವು, ಯುದ್ಧ, ಶಾಂತಿ ಎಲ್ಲವೂ ವಸ್ತುಗಳಾಗಿ ನೆಲೆಗೊಂಡಿವೆ, ಕವಿತೆಯಲ್ಲವೂ ಒತ್ತರಿಸಿಕೊಂಡು ಬಂದ  ಕವಿತೆಗಳಾಗಿರದೆ ಅವೆಲ್ಲವೂ ಸಹಜತೆಯಿಂದ ಹೋರಾಟದ ಹಾದಿಯಲ್ಲಿ ಪಡಿಮೂಡಿದ್ದು.

ಸತೀಶರ ಕಾವ್ಯ  ನಾಲ್ಕು ಗೋಡೆಯ ಮಧ್ಯ ಹುಟ್ಟಿದ ಚಮತ್ಕಾರಿ ಶಬ್ದಗಳಲ್ಲ ಅವು ಕರುಳಿನಿಂದ  ಹಾದಿ ಬೀದಿಗಳಲ್ಲಿ ಕಾವ್ಯ ತನ್ನ ಅಂತರಂಗ ತಾವಾಗಲೆ ತೆರೆದುಕೊಂಡು ಹಾಡಾಗಿದ್ದು, ಅವು ಅತ್ತವರ ಕರುಳಿನ ಭಾಷೆ ಕಾವ್ಯದಲ್ಲಿ ಹೃದ್ಯಗೊಂಡಿದೆ

ಇಷ್ಟು ಬಾರ ಹೊತ್ತು/ ಇಷ್ಟು ದೂರ ತಂದ / ಈ ಚಪ್ಪಲಿಗಳಿಗೆ ನನ್ನ ವಂದನೆಗಳು

ಅನನ್ಯ ವಸ್ತು ಒಳಗೊಂಡ ಕಾವ್ಯ ‘ ಚಪ್ಪಲಿಗಳು ಪರಾಣ ಕಾಲದಿಂದ ಅಧುನಿಕ ಕಾಲದವರೆಗೂ ಚರ್ಚಿತವಾದ ವಸ್ತು ಅದು ಭರತ, ಬಸವಣ್ಣನಿಂದಿಡಿದು ತೀರಾ ಇತ್ತೀಚಿನ ತನಕವು ಸುದ್ದಿಯಲ್ಲಿದೆ

ಚಪ್ಪಲಿಯು ನಿಷ್ಕಾಮ ಸೇವೆಯನ್ನು ಹೇಳುತ್ತಲೆ ದೈವತ್ವದ ಸ್ಥಾನದ ಎತ್ತರಕೆ ಹೋಗುತ್ತವೆ, ಬಸವಣ್ಣ  ಚನ್ನನ ಚಪ್ಪಲಿಯನ್ನು ತಲೆಯ ಮೇಲೆ ಹೊತ್ತಂತೆ  ಸತೀಶರು ಕಾವ್ಯದಲ್ಲಿ ಚಪ್ಪಲಿಗಳು  ಎದೆಯ ಮೇಲೆರಿದೆ ಕಾವ್ಯದಲ್ಲಿ ಬರುವ ಸಾಲುಗಳು ಮೌನದ ಸಂಗಾತಿಗಳೆ, ನನ್ನ ಕಾಲು ಮರಿಗಳೆ, ಬಡಮೋಚಿಯ ಜೋಡಿ ಮಕ್ಕಳೆ, ಅರಿವಿನಾ ದೇವರುಗಳೆ, ಮರಿ ಪಾರಿವಾಳಗಳೆ, ಓ ಮೌನ ತಪಸ್ವಿಗಳೆ,ಎಂದು ಚಪ್ಪಲಿಗಳನ್ನು ಸಂಬೋದಿಸುವ ರೀತಿ ಪರಿ ಅನನ್ಯ

ಕವಿ ಸತೀಶರು ಬದುಕಿನ ಅರ್ಧ ಭಾಗವನ್ನು ಬೀದಿಯ ಬಯಲಲ್ಲೆ  ಕಳೆದವರು ಬಂಡಾಯವನ್ನು ಉಸಿರಾಗಿಸಿಕೊಂಡು ಮನುಷ್ಯ ಪರ ನಿಲುವನ್ನಿಟ್ಟುಕೊಂಡವರು  ಸಿದ್ದಲಿಂಗಯ್ಯನವರ

ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರನಂತೆ, ಚಂಪಾ ಅವರ ಪ್ರೀತಿಯಿಲ್ಲದೆ ನಾನು ದ್ವೇಷವನ್ನು ಕೂಡಾ ಮಾಡಲಾರೆ ಎನ್ನುವಂತೆ ತಣ್ಣನೆಯ ಕಾವನ್ನು ಕಾವ್ಯಕ್ಕೆ ಸ್ಪರ್ಶಿಸಿದವರು ತನ್ನದೆ  ತನ್ನದೆ ಪರಂಪರಾಗತ ಸಮೂಹವನ್ನು ಎದುರಿಸಿಕೊಂಡು ಬಸವಣ್ಣ ಹೇಳಿದಂತೆ ” ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ” ಎನ್ನುವ ನಿಲುವನ್ನೆ  ಕವಿ ‘ ಹಾರುವವ ನಾನಲ್ಲ ನೆಲದ ಮೇಲೆ ನಡೆಯುವವ ‘ ಎನ್ನುವ ನಿಲುವು ‘ ಗೋವಿಂದ ಭಟ್ಟರು ಶರೀಫನಿಗೆ ತೊಡಿಸಿದ ಜನಿವಾರವನ್ನು ಸಾರ್ವತ್ರಿಕಗೊಳಿಸುವುದು ಸತೀಶರು ‘ ಹೆಗಲೇರಿ ಬೆನ್ನಿಳಿದು ಸೊಂಟ/ ಸುತ್ತಿದ ಜನಿವಾರ ನನಗೆ/ಸಾವು/ ಹೆಡಮುರಗಿಯ ಹಾವು ಎಂದು ನಿರಾಕರಿಸುವುದು , ಬಸವಣ್ಣ ‘ ಅಕ್ಕನಿಗಿಲ್ಲದ ಜನಿವಾರ ನನಗೇಕೆ’ ಎಂದು ಪ್ರಶ್ನಿಸುವುದು ಎಲ್ಲವೂ ಸಾರ್ವತ್ರಿಕ ಗೊಳಿಸುವುದು, ನಿರಾಕರಿಸುವುದು, ಪ್ರಶ್ನಿಸುವುದು ಒಳಗೊಂಡು ಮಂತ್ರಕ್ಕಿಂತಲೂ ಸ್ಪರ್ಶಶಕ್ತಿಯ ಮಹತಿಯನ್ನು ಕಾವ್ಯದಲ್ಲಿ ದಾಖಲಿಸುತ್ತಾರೆ ಸಂಶಯದ ಮಂಡಲದಲ್ಲಿ, ಸುಳಿಗಳಲಿ ನಾನು ಹರಿವ ಹೊಳೆ ಎನ್ನುವುದು ಕೆಂಡ ಕುಂಡಗಳ ಸಂಗ ದ ಆತಂಕದ ಗಡಿಗಳನು ನೀವೇದಿಸುತ್ತಾರೆ

ತಮ್ಮ ಕಾವ್ಯದ ನಿಲುವನ್ನು ದಾಖಲಿಸುತ್ತಾ ತಮ್ಮ ಬಂಡಾಯ ಕವಿತೆಯಲ್ಲಿ ” ದಮನಕ್ಕೆ ಉತ್ತರ ದಿಕ್ಕಾರ/ಬಂಡಾಯ ದಬ್ಬಾಳಿಕೆಗೆ ಉತ್ತರ ಎನ್ನುತ್ತಾರೆ

ಸಾದತ್ ಹಸನ್ ಮಾಂಟೋ  ಕವಿತೆಯಲ್ಲಿ ಹೋರಾಟದ ಹುಕಿಗೆ  ಸಂಗಾತಿಯಾಗಿ ಕಾಲ ಕಾಲಕ್ಕೆ ಗೋಳಗೊಮ್ಮಟದ ನಿಲ್ಲದ ಮಾರ್ದನಿ ಮಂಟೋ

ನಿತ್ಯ ಕೈದಿ,ಕಾಲಾತೀತ ಬಂದಿ / ನಮ್ಮಾತ್ಮಗಳ ಬೆಂಕಿಯಾಗಿದ್ದಾನೆ ಮಂಟೊ ಹೋರಾಟದ  ಕಾವಿಗೆ ಕಿಡಿಯಾದ ಮಂಟೋನನ್ನು ತಮ್ಮ ಕಾವ್ಯದಲ್ಲಿ ಪ್ರತಿಫಲನಗೊಳ್ಳುತ್ತಾನೆ

ಈ ಬೀದಿಯವರು ಕವಿತೆಯಲ್ಲಿ ಬೀದಿಯವರ ಪರ ನಿಲುವು

,ಒಡಲಾಳ ಕಿಚ್ಚಿನ ಕವಿತೆ  ೧೯೮೦ ರ ದಶಕದಲ್ಲಿ ಬಂದ ಸಂಕಲನ ಕವಿತೆಯಲ್ಲಿ

ಬೆವರು ಸುರಿಯುವವರ ಸಂಗಡ/ ಬದುಕು ಸುಲಿಯುವವರು ಇದ್ದಾರೆ

ಎನ್ನುವಲ್ಲಿ ಕವಿ ಬೆವರಿಗೆ ಪ್ರತಿಯಾಗಿ ರಕ್ತ ಬೇಡುವವರು ,ಕಿತ್ತು ತಿನ್ನುವವರ ನಡುವೆ  ಕೂತು ತಿನ್ನುವವರು, ಉರಿ ಹಚ್ಚಿ ಸುಟ್ಟು ಹಾಕುವವರ ಮಧ್ಯ ಹೊಸ ಚಿಗುರುವ ದನಿ ಎತ್ತುವವರು ಇದ್ದಾರೆ ಒಡಲಾಳ ಕಿಚ್ಚಿನ ಸಂಕಟ, ತಳಮಳ ತುಮುಲದ ಒಳಬೇಗುದಿಯನ್ನು ದೇವನೂರು ಮಹಾದೇವ ‘ಅವರ ಒಡಲಾಳ’ ಕತೆ ಆ ಕಿಚ್ಚಿನಲ್ಲಿ ಕುಸುಮ ಬಾಲೆ ಇಣುಕಿದಂತೆ ಹಾದು ಹೋಯಿತು

ಪ್ರಸ್ತುತ ಪ್ರಭುತ್ವ ಪ್ರೇರಿತ ದಮನದಲ್ಲಿ ಅಂದು ಬರೆದ ಕವಿತೆಯು’ ವರ್ತಮಾನದ ಒತ್ತಡದಲ್ಲಿ ‘ ಕವಿತೆ ಮುಖಾ ಮುಖಿ ಯಾಗಿ ನಿಲ್ಲುತ್ತದೆ.

“ವರ್ತಮಾನದ ಒತ್ತಡದಲ್ಲಿ ಚಹರೆಗಳು/ಭೂತವನ್ನು ತಿನ್ನುತ್ತವೆ , ಭವಿಷ್ಯವನ್ನು ಕೊಲ್ಲುತ್ತವೆ

ಪ್ರಸ್ತುತ ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ಹತ್ಯಾಚಾರದ ಹಂತಗಳು ಕವಿತೆಯಲ್ಲಿ  ವಾಸ್ತವ ಭಾರತದ  ನ್ಯಾಯ ಪದ್ದತಿಯ ಒಳನೋಟವನ್ನು ಸೂಕ್ಷ್ಮ ವಾಗಿ ಅನಾವರಣಗೊಳಿಸುತ್ತದೆ, ” ಅತ್ಯಾಚಾರವಾಗಿಲ್ಲ/ ತೀರ್ಪು ಬಂದಿತ್ತು ಒಂದು ದಿನ/ ಅವಳು ಹೆರಿಗೆ ನೋವಿಗೆ ನರಳುತಿದ್ದಳು

ಎನ್ನುವ ಕೊನೆಯ ಸಾಲು ಮನಕಲಕುತ್ತದೆ.

ಸತೀಶರ ಕವಿತೆ ಕಾಲುದಾರಿ ಬದಿಯ ಬೇಲಿ ಮೇಲಿನ ಹೂವಂತೆ , ನಾಳೆ ಈ ನೆಲದಲ್ಲಿ ಅರಳುವ ಸಾಲು ಸಾಲು ಗುಲಾಬಿ, ಸುಟ್ಟ ಮನಸ್ಸಿನ ಕ್ರಾಂತಿ ಪತ್ರ, ಪುಟ್ಟ ಮಗನ ಹರಿದ ಹವಾಯಿ ಚಪ್ಪಲಿ ಅವರ  ಕಾವ್ಯವನ್ನು ಅವರೆ ಹೇಳುವಂತೆ ಪಿಂಡ ಪುರಾಣದಲ್ಲಿ,ಕಾಗೆ ಸಾಲುಗಳಲ್ಲಿ, ಜನಿವಾರದ ಬಂಧದಲ್ಲಿ, ಶ್ರಾದ್ಧ ಕರ್ಮದ ಕಾಂಡಗಳಲ್ಲಿ ನನ್ನ ಹುಡಕಬೇಡಿ ಎನ್ನುತ್ತಾರೆ ಕಾವ್ಯದ ಅಂತಿಮ ಉತ್ತರ ” ನಾನು ಬೂದಿಯಾಗಿರುವೆ/ ಈ ನೆಲದ ಮಣ್ಣಾಗಿರುವೆ

ಎನ್ನುವ ಉತ್ತರ ತಾರ್ಕಿಕತೆಗೆ ತಂದು ನಿಲ್ಲಿಸುತ್ತದೆ.

ಅದು ಪುಟ್ಟ ಬೀಜದ ಹೊಟ್ಟೆಯಿಂದ  ಹುಟ್ಟುವ ಹೆಮ್ಮರ,ನನ್ನಂತೆ ನಾನಾಗಿ ಬದುಕಬಲ್ಲ ಸ್ವಾಭಿಮಾನ ದ ಹಾಡಾಗಿದೆ.

ಅವರು ಬದುಕು,ಕಾವ್ಯವನ್ನಷ್ಟೇ ತಮ್ಮ ವೃತ್ತಿಯನ್ನು ಪ್ರೀತಿಸಿದವರು ಕಾವ್ಯದ ಬೆಳಕಿನ ಜೊತೆಗೆ ತಮ್ಮ ವೃತ್ತಿ ಯ ದೀಪದ ಕಂಬವನ್ನು ಹೊತ್ತವರು

ಹೀಗಾಗಿಯೆ ಲೈನ್ಮನ್ ಮಡಿವಾಳಪ್ಪ ನೆನಪಿನ ಪರದೆಯಲಿ ಸರಿದು ಹೋಗುತ್ತಾನೆ,ಆ ನನ್ನ ಕೆ.ಇ.ಬಿ ಕವಿತೆ ವಿದ್ಯುತ್  ಇಲಾಖೆಯ ಚೆಂಬಳಕಿನ ನೆರಳು ಬೆಳಕು ಕತ್ತಲಿನಾಟವನ್ನು ತೆರದಿಡುತ್ತದೆ  ಅಷ್ಟೇ ನೆನಹುನಿಂದ

” ಅನ್ನ ಕೊಟ್ಟ/ ಅರಿವೆ ಕೊಟ್ಟ/ ಮನೆ ಕೊಟ್ಟ ಮೂಕ ತಂದೆ ನನ್ನ ಕೆ.ಇ.ಬಿ ಎನ್ನುವಲ್ಲಿ  ಆ ಬದುಕು ಕೊಟ್ಟ ಇಲಾಖೆಯ ಪ್ರೀತಿ ಅಷ್ಟೆ ಅಕ್ರೋಶವಾಗಿ ” ಊರೂರು ಚೌಕದಲಿ / ಹತ್ತೂರ ಒಡೆಯರ ನಡುವೆ/ ಹರಾಜಿಗೆ ನಿಂತ ಮುದಿ ಗುಲಾಮ ನನ್ನ ಕೆ.ಇ.ಬಿ

ಹೀಗೆ ಜಗಭಗ ಸುಟ್ಟು ಬೂದಿ ಮಾಡಿ ಬಿಡು ಎಂದು ಒಳಗಿಚ್ಚನ್ನು ತೂರಿಬಿಡುತ್ತಾರೆ

ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು ಎನ್ನುವ ಸತ್ತ ಗುರುಗಳನ್ನು ಸ್ಮರಿಸಿದ ಕವಿತೆಯ ಸರಳೀಕರಣ ಆಪ್ತತೆಯ ತೆಕ್ಕೆಯಲ್ಲಿ ತಂದು ಕಣ್ಣೇರಾಗಿಸುತ್ತದೆ.

ಮಹಾಭಾರತದ ಆ ಹಕ್ಕಿ ಅವರ ಚರ್ಚಿತ ಕವಿತೆ “ಯಾವುದು ಗೆಲ್ಲಬೇಕು/ ಯಾವುದು ಸೋಲಬೇಕು/ ಇದು ಕವಿ ಹೃದಯದ ಕದರು

ಕವಿಯಾಗಿ ನಾನೇಕೆ ಪ್ರಶ್ನೆ ಕೇಳಬಾರದು,  ಹಕ್ಕಿ ಯಾಕೆ ಹಾರಿ ಹೋಗಬಾರದು ಯಾಕೆ ಬಾಣದ ಗುರಿ ತಪ್ಪಬಾರದು  ಹೇಳಿ ನೀವೆ ಹೇಳಿ ಎಂದು ಹಕ್ಕಿಯ ಪರವಾಗಿ ವಕಾಲತ್ತು ವಹಿಸಿ ಮಹಾಭಾರತ ದಲ್ಲಿ ನಡೆದ ಘಟನೆಗೆ ವರ್ತಮಾನದಲ್ಲಿ ಕವಿ ಹಕ್ಕಿಯ ಪರವಾಗಿ ನಿಂತು ಕಾವ್ಯದ ಜೀವಪರ ನಿಲುವನ್ನು ತಿಳಿಸುತ್ತಾರೆ

ಪುಟ್ಟ ಹುಡುಗಿಯ ಪತ್ರ

ಮತ್ತೆ ಪ್ರೀತಿ, ಮನುಷ್ಯತ್ವವನ್ನು ಸಾಬೀತುಪಡಿಸುವ ಕಾವ್ಯ “ಅಂಕಲ್ ಮೈ ಖುಶ್ ಹ್ಞೂಂ, ಮುಜೆ ಕೋಯಿ ಪರೆಶಾನಿ ನಹಿ ಹೈ ಆಪ್ ಫಿಕರ್ ಮತ್ಕರೊ” ಎನ್ನುವ ಪಂಜಾಬಿ ಹುಡುಗಿ ಹೇಳುವ ಕಾವ್ಯದ  ಸಾಲು ಹೊಸ ಲೋಕಕ್ಕೆ

ಭರವಸೆಯ ಸಾಲುಗಳಾಗಿವೆ

ಬರುವ ಕಾವ್ಯ ಮಾರ್ಗಿಗಳಿಗೆ ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅನ್ನುವ ಕಾವ್ಯದ ಸಾಲು ಬರುವವರಿಗೆ ಹೆಗಲಿಗೆ  ದಾಟಿಸುವಿಕೆ ಕ್ರಿಯೆ ನಡೆದಿದೆ

“ಮೂವತ್ತು ವರ್ಷಗಳ ನಂತರ /ನಿನ್ನೆ ನನ್ನಪ್ಪ ಕನಸಿನಲ್ಲಿ ಬಂದಿದ್ದ

ಎನ್ನುವ ಸಾಲು ವ್ಯಯಕ್ತಿಕ ನೆಲೆಯಲ್ಲಿ ಕವಿತೆ ಸಾಗಿದರು ಸಾಗಿದಂತೆ ಅದು ಬಯಲನ್ನು ಆವರಿಸಿಕೊಂಡು ಇತಿಹಾಸವನ್ನು ವರ್ತಮಾನಕ್ಕೆ ಕೊಂಡಿಯನ್ನು ಜೋಡಿಸುತ್ತದೆ

ಒಟ್ಟಿನಲ್ಲಿ ಸತೀಶ ಕುಲಕರ್ಣಿ ಅವರ “ಸಮಯಾಂತರ” ದ ಜೊತೆ ಕಳೆದ ಗಳಿಗೆಗಳು ನೆಲದ ನೆರಳು ಚಾಚಿಕೊಂಡು ಒಡಲಾಳ ಕಿಚ್ಚು ವಿಷಾದ ಯೋಗದಲ್ಲಿ ಗಾಂಧಿಗಿಡ,ಬೆಂಕಿ ಬೇರು,ಕಂಪನಿ ಸವಾಲ್ ಕಾವ್ಯದ ಜೊತೆ ಒಂದಿಷ್ಟು ಹೊತ್ತು ಅದರ ಮುಂದೆ ಮುಖಾಮುಖಿ ಯಾಗಿದ್ದೆ  ಮತ್ತು ಅನುಸಂಧಾನವಾಗುವ ಭಾಗ್ಯ ನನ್ನದಾಗಿತ್ತು ತಿಳಿದಷ್ಟು, ತೋಚಿದಷ್ಟು, ನಿಲುಕಿದಷ್ಟು,ಕಲಕಿದಷ್ಟು,ಅರಿತಷ್ಟು,ಬೊಗಸೆ ಹಿಡಿದಷ್ಟು , ಹಾರಿ ಹೋದ ಚಿಟ್ಟೆಯ ಹಿಂದೆ ಓಡಿದಂತೆ ನನಗೆ ದಕ್ಕಿದಷ್ಟು ಹಿಡಿದಿಟ್ಟಿದ್ದೇನೆ

“ಸದ್ಯ ಗೆಳಯಾ ಹೋಗಿ ಬರುವೆ/ ನಾಳೆ ಬೆಳಗು ನಗುವಾಗ ನಾನಿರುವುದಿಲ್ಲ ಗೆಳೆಯ

*********************************

ಹೆಬಸೂರು ರಂಜಾನ್

2 thoughts on “ಸಮಯಾಂತರ

  1. ಹಿರಿಯಕವಿ ಸತೀಶ ಕುಲಕರ್ಣಿಯವರ ಕಾವ್ಯವನ್ನು ಓದಲು ಒಳ್ಳೆಯ ಪ್ರವೇಶಿಕೆ ಒದಗಿಸಿದ್ದಿರಿ ಸರ್ ಅಭಿನಂದನೆ

Leave a Reply

Back To Top