ಅಮೂರ್ತ

ಮಮತಾ ಶಂಕರ್

Image result for photos of love sculptures

ಅವನೆಂದೂ ನನ್ನೊಂದಿಗೆ ಮಾತಾಡಿ ನನ್ನ ಸುತ್ತ ತಿರುಗಿ
ಪ್ರೇಮಗೀಮ ಎಂದು ಹಾಡಿ ಕುಣಿಯುತ ಕಥೆಯಾಗಲಿಲ್ಲ
ಆದರೆ ಮೌನ ವೀಣೆಯ ಶ್ರುತಿ ಮಾಡಿ
ಪಂಚಮದ ಸುಂದರ ಗೀತೆಯ
ಈ ಬಾಳ ಹಾಡಾಗಿಸಿದ
ಅ ಮೌನಿ ಮಾತಾಡಲಿಲ್ಲ ಎಂದು ಹೇಗೆ ಹೇಳಲಿ?

ನನ್ನನೆಂದೂ ಅವನು ಸ್ಪರ್ಶಿಸಲಿಲ್ಲ
ಆದರೆ ಅವನ ನೋಟಕೆ
ಎಲೆಯುದುರಿಸಿ ನಿಂತ ಬೋಳುಮರ
ವಸಂತನ ಸ್ಪರ್ಶಕೆ ಚಿಗುರಿ ಮೈತುಂಬಾ
ಹಸಿರು ಎಲೆ ಹೂ ಹೊದ್ದುಕೊಂಡಂತೆ
ನನ್ನ ಬಾಳ ಚೈತ್ರವಾದ
ಅವನು ನನ್ನ ಮುಟ್ಟಲಿಲ್ಲ ಎಂದು ಹೇಗೆ ಹೇಳಲಿ?

ನನ್ನ ನಗುವಾದ ನನ್ನ ಮನವಾದ
ನನ್ನ ಉಸಿರಾದ ಎದೆಯ ಬಡಿತವಾದ
ನೋಟದೊಂದು ಕ್ಷಣದಲಿ ಪ್ರೇಮ
ನಿವೇದಿಸದೆ ಪ್ರೇಮಿಯಾದ
ಜೊತೆಗಾರನಾಗದೆ ಜೊತೆಯ ಹೆಜ್ಜೆಯಾದ
ನೆನಪುಗಳ ಅಂಗಳದ ಚಿತ್ತಾರವಾದ
ನೋಡದಿದ್ದರೂ ನೋಟ ಕೂಡಿಸಿದ
ಪ್ರೇಮಿಯಾಗದೆ ಪ್ರೇಮಿಸುವುದ ಕಲಿಸಿದ
ನೀವು ಹೇಳುವಿರಾ ಇದು ಒಲವಲ್ಲವೆಂದು?
ನಂಬದಿರಲಿ ಹೇಗೆ ವ್ಯಕ್ತ ಅವ್ಯಕ್ತಗಳ
ನಡುವೆ ನಿಂತಿದೆ ಒಲವು ತೆಳು ಗೆರೆಯಾಗಿ

ಓ ಕೇಳೆನ್ನ ಒಲವೇ
ನಿನ್ನ ನೆನಪುಗಳಲ್ಲಿ ನಾನು
ಕಾಣುತ್ತೇನೆ ಕಳೆದ ಎಲ್ಲವನು
ಮತ್ತೆ ಬದುಕುವುದೆಂದರೆ
ಇದೇ ಏನು?

******************************************

7 thoughts on “

  1. ಒಲವು ಎನ್ನುವುದು ಪ್ರದರ್ಶನವಾಗಬೇಕಿಲ್ಲ. ಮನಗಳಲ್ಲಿ ಮಿಡಿದರೆ ಸಾಕು. ಸುಂದರ ಕವಿತೆ.

Leave a Reply

Back To Top