ಒಲವಿನ ಬೆಳಕ ಹುಳು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Image result for photos of love in arts

೧)
ಒಂದೊಮ್ಮೆ ಎನ್ನೆದೆಯೊಲುಮೆಯ
ಸೀಮೆಯ ಗಣಿಗಳಿಗೆ
ಹೊಳೆವ ಬೆಳ್ಳಿ ಬಂಗಾರದ ಬೆರಗು
ಹರಿಸಿದ ಮಿಂಚು ಹುಳುವೆ
ಯಾವ ದಿಕ್ಕಿನ ಕಡೆ ಹಾರಿ ಹೋದೆ
ಅಂದಿನಿಂದ ಇಂದಿನವರೆಗೂ
ಮತ್ತೊಮ್ಮೆ ಕಾಣದ ಹಾಗೆ…
ಆ ಪ್ರೇಮದ ಗಣಿಯಲ್ಲಿ
ಈಗ ನಿತ್ಯ ನಿರಂತರ ಕತ್ತಲೆ!

ಅಂದು ಅದೆಷ್ಟೆಷ್ಟು ಆಳದಲ್ಲಿ
ಎಂಥೆಂಥಾ ಅಂಕು ಡೊಂಕಲ್ಲಿ
ಆ ಗಣಿ ಅಗೆದರೂ ಬಗೆದರೂ
ಕಣ್ಣು ಕೋರೈಸಿದ್ದ ಪ್ರಖರ ಬೆಳಕು
ಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!
ಜಗವೆಲ್ಲ ಹೃದಯಂಗಮದಂಗಳ…
ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿ
ನಿಂತ ಹಾಗೆ ಮೂಕಮೌನದಲಿ!
ಹಗಲು ಕಂಡ ಒಲವ ಹೊನಲು
ಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿ
ರಾತ್ರಿ ಕನಸಿನಲಿ ಶಶಿರಥದೈಸಿರಿ!

ಯಾರೋ ನಲವಿನಾಗಂತುಕರು
ಎದೆಯಾಳದಲಿ ಥಕಥೈ ಕುಣಿದು
ದಿನವಿಡೀ ಬೆಳಕಿನ ಮುಗುಳುನಗೆ ನಕ್ಕ ಹಾಗೆ…ಒಮ್ಮಿಂದೊಮ್ಮೆಗೆ
ಎಲ್ಲೆಲ್ಲೂ ಕಂಡರಿಯದ ಆನಂದದಿ
ಅಂಗಣದಲೆಲ್ಲ ಹೃದಯದೋಕುಳಿ

೨)
ಓ ಪ್ರಿಯೆ
ಐದನೆ ದಶಕ ಇನ್ನೇನು ಅಸ್ತಮಾನದ
ಹಂತ ತಲುಪಿದೆ
ಇನ್ನೂ ಮಾಸಿಲ್ಲ ಮಸ್ತಕದಿ ನೆನಪು
ಹಳೆಯ ನೆಲಭಾವಿಯ ನೀರ ಸೆಲೆಯ ಹಾಗೆ…

ಎಲ್ಲಿರುವೆ ಮತ್ತು ಹೇಗಿರುವೆ?
ದಶಕಗಳ ಆಚೆಗೂ ಒಂದಾದರೂ
ಅಣು ಮಾತ್ರ ಸುದ್ದಿ ಕೂಡ
ನನ್ನತ್ತ ಹಾರಿಸದೆ…ಹೇಗಿರುವೆ…?
ಒಲವಿನ ಅಮೃತ ತುಳುಕಿಸಿದೆದೆ
ಹೇಗಾಯಿತಿಷ್ಟು ಕಠೋರ ಬಂಡೆ!

ನಿನ್ನ ಬಗೆಯ ಅರಿವೂ ಇರದ
ಅಂಧನ ಥರ ನಾನೀಗ
ಆ ಸ್ಥಿರ ದೂರವಾಣಿಗೂ
ಈ ಮೊಬೈಲ್ ಮಾಣಿಕ್ಯಕ್ಕೂ
ಇರುವಂಥ ಅಗಾಧ ಅಂತರ
ಈಗ ನನಗೂ ನಿನಗೂ…
ಬಲು…ಬಲು ದೂರ!

ಹಾಗಾಗಿ ಈ ನನ್ನೆದೆ ಸ್ಪಂದನದ
ಅನಂತ ಒಲವ ತರಂಗ ಧಾರೆ
ನೀನಿರುವ ದಿಕ್ಕು ಹುಡುಕಿ
ತೂರಿ ಬಂದು ಸೇರಬಹುದೋ
ನಿನ್ನ ನೇರ ವಿಚಾರಿಸಿ ಹಿಂತಿರುಗಿ
ಬರಲೂಬಹುದೋ ಎಂಬಾಸೆ…
ಹಾಗೆಯೇ ಕೇಳು:
ಒಮ್ಮೆ ಕಾಲೇಜಿನ ಕಡೆ ಹೋಗಿದ್ದೆ:
ಕಾಂಪೌಂಡ್ ಸುತ್ತ ಮುತ್ತೆಲ್ಲ
ಒಳ ಹೊರಗಿನ ಗೋಡೆಗಳೂ
ಮರೆತಂತಿಲ್ಲ ಅಂದಿನ ನಮ್ಮ ಕಥೆ…
ಅದೆಂಥ ಹೃದಯ ತಟ್ಟಿದನುಭವ ನಿನಗೆ ಗೊತ್ತೇ…?

೩)
ನನ್ನ ಹಾಗೆ ನೀನೂ ವೈದ್ಯೆ…
ಈಗಷ್ಟೇ ಕೋವಿಡ್ ಕರಿ ಕೋಣ
ಮುಳುಗು ಹಾದಿ ಹಿಡಿದ ಹಾಗಿದೆ…
ನಾನೇನೋ ಇಲ್ಲೇ ಇರುವೆ ಜೀವಂತ
ಹಾಗಯೇ ಈಗಲೂ ವೃತ್ತಿ ನಿರತ…
ನೀನೀಗ ಎಲ್ಲಿರಬಹುದೋ ಏನೋ
ಯಾರ ಕೇಳಲಿ ಕೇಳಿ ತಿಳಿಯಲಿ…
ಆದರೂ ಒಮ್ಮೆ ಪ್ರಶ್ನಿಸಿಬಿಡಲೇ-
ನಿನ್ನನ್ನೇ ನೇರ…?
ನೀ ಬದುಕಿರುವೆಯಾ…?
ಹೇಗೆ…ಈಗಲೂ…?
ಪ್ರಿಯೆ…

************************************

4 thoughts on “

  1. ಕವನಗಳು ಅದ್ಭುತವಾಗಿವೆ. Valentine day special! ಅಭಿನಂದನೆಗಳು

Leave a Reply

Back To Top