ಪರಂಪರೆ

ಕವಿತೆ

ಪರಂಪರೆ

ಮಮತಾ ಶಂಕರ್

Brown Crown Illustration

ಅವರು ತಲೆಯ ಮೇಲಿನ ಕಿರೀಟವನ್ನು
ಎಂದೂ ತೆಗಿದಿಟ್ಟು ಭಾರದ ಹೊರೆಯನ್ನು
ಇಳಿಸಲಿಚ್ಛಿಸಲಿಲ್ಲ

ತಮ್ಮ ರಾಜ ಪೋಷಾಕುಗಳ ಕಳಚಿ
ಶ್ರೀಸಾಮಾನ್ಯರ ದಿರಿಸು ಧರಿಸುವುದನ್ನು
ಎಂದೂ ಆಗಗೊಡಲಿಲ್ಲ

ಸುಡುವ ಮುಳ್ಳಿನ ಸುಮ್ಮಾನದ ಸಿಂಹಾಸನದಿಂದ
ಕೆಳಗಿಳಿದು ನೆಲದಾಯಿಯ ಸ್ಪರ್ಶಸುಖ
ಎಂದೂ ಬಯಸಲಿಲ್ಲ

ಕೇವಲ ಆರು ಮೂರಡಿಯ ಒಡೆಯರಾಗದೆ
ಒಂದೊಂದೇ ಹೆಜ್ಜೆ ಆಕ್ರಮಿಸುತ್ತಾ
ಭುವಿಯ ಬಯಸಿ ಹೋದರು
ಹೆಣ್ಣು ಹೊನ್ನು ಮಣ್ಣ ಬಯಕೆಯಿಂದ
ವೀರರಾಗಬಯಸಿ ಗೆದ್ದೆವೆಂದು ಕುಣಿದರು

ಅಂಥವರಿಂದು ತೀರಿಕೊಂಡರು
ಮೈಯನ್ನು ಮುಚ್ಚಿದ್ದು ಒಂದು
ತೆಳು ಶುಭ್ರ ಬಿಳಿಬಟ್ಟೆ, ಒಂದಿಷ್ಟು ಹಿಡಿಮಣ್ಣು

’ಅವನು’ ಎಂಬುವನು ಸತ್ತಾಗ
ಅವನ ಸಂಬಂಧಿಸಿದ ಎಲ್ಲವೂ
ಮಣ್ಣುಪಾಲೇ ಎಂಬಂತೆ
ಈಗ ಅವರ ಹೆಂಡತಿಯರೆಲ್ಲಾ
ಅವನ ಸಂಕೇತಗಳೆಂದು ಬಿಂಬಿಸಿ ನಂಬಿಸಲಾದ
ಹೂ ಬಳೆ ಕುಂಕುಮಗಳನ್ನು ಕೂಡ ತೆಗೆದಿಟ್ಟು
ಹಾಕಬಾರದು ಪರಂಪರೆಗನುಗುಣವಾಗಿ
ಎಂದು ನಿರಾಕರಿಸುತ್ತಿದ್ದಾರೆ

****************************************

6 thoughts on “ಪರಂಪರೆ

  1. ಮಮತಾ ಬಹಳ ಮಾರ್ಮಿಕ ಕವನ . ನಿಮ್ಮ ಕವನಗಳು ವಿಶಿಷ್ಟ. ನನಗೆ ಬಹಳ ಇಷ್ಟ.

    1. ಧನ್ಯವಾದಗಳು ತಮ್ಮ ಮೆಚ್ಚುಗೆಗೆ….(ತಮ್ಮ ಹೆಸರು ತಿಳಿಯಲಿಲ್ಲ)

  2. ನಿನ್ನ ಕವನ ತನ್ನ ಗಾಂಭೀರ್ಯದಿಂದ ಗಮನ ಸೆಳೆಯುತ್ತದೆ. ಚೆನ್ನಾಗಿದೆ ಬರವಣಿಗೆಯ ಕೃಷಿ ಮುಂದುವರಿಯಲಿ.ಶುಭಾಶಯಗಳು

    1. ಧನ್ಯವಾದಗಳು ಕರುಣಾ ನಿನ್ನ ಪ್ರೀತಿಯ ಪ್ರತಿಕ್ರಿಯೆಗೆ

  3. ಮಾರ್ಮಿಕವಾದ ಕವನ….
    ರಾಜಪೊಷಾಕಿನಲ್ಲಿ ಮೇರೆದವರು…
    ತೆಳು ಶುಭ್ರವಾದ ಬಿಳಿಬಟ್ಟೆ…..
    ಹೃದಯ ಸ್ಪರ್ಶಿ ಸಾಲುಗಳು ಓದುಗನ ಮನಮುಟ್ಟುತ್ತವೆ.
    ಓಳ್ಳೊಳ್ಳೆಯ ಕವನಗಳು ನಮ್ಮ ಲೇಖನಿಯಿಂದ ರಚಿತವಾಗಲಿ

Leave a Reply

Back To Top